Telegram Join My Telegram WhatsApp Join My WhatsApp

ಬದುಕಿನ ನಿಜವಾದ ಆಶೀರ್ವಾದಗಳು. ನಿಮ್ಮ ಬಳಿ ಇವುಗಳಿದ್ದರೆ ನೀವು ಅದೃಷ್ಟವಂತರು


“ಹೆಚ್ಚಿನ ಜನರು ತಮಗೆ ಜೀವನದಲ್ಲಿ ದೊರೆತಿರುವ ಅವಕಾಶವನ್ನು ಗಮನಿಸುವುದಕ್ಕಿಂತ, ಇಲ್ಲದಿರುವ ವಸ್ತುಗಳ ಬಗ್ಗೆಯೇ ಹೆಚ್ಚು ಚಿಂತಿಸುತ್ತಾರೆ. ಪರಿಣಾಮವಾಗಿ, ಅವರ ಬದುಕಿನಲ್ಲಿ ಎಲ್ಲವು ಇದ್ದರೂ, ಏನೂ ಇಲ್ಲದವರಂತೆ ತಮ್ಮ ಸಂತಸ, ನೆಮ್ಮದಿ ಕಳೆದುಕೊಂಡು ಬಾಳುತ್ತಾರೆ. ” ಅವರು ನಿರಂತರ ಕೊರಗುತ್ತಲೇ, ಬೇಡವಾದುದನ್ನ ಚಿಂತಿಸುತ್ತಲೇ, ಇತರರನ್ನ ಶಪಿಸುತ್ತಲೇ ತಮ್ಮ ಜೀವನವನ್ನು ಕಳೆಯುತ್ತಾರೆ. ತಮ್ಮ ಕೊನೆಯ ಉಸಿರಿನವರೆಗೂ; ಬದುಕು ಅವರಿಗೆ ನೀಡಿದ ಕೊಡುಗೆಗಳನ್ನು, ಅವಕಾಶಗಳನ್ನು, ಉಪಕಾರವನ್ನು ನೆನೆಯುವುದೇ ಇಲ್ಲ. ಇರಲಿ, ನೆಮ್ಮದಿಯಾಗಿರಲು ಬದುಕು ನಮಗೆ ನೀಡಿದ ಆಶೀರ್ವಾದಗಳ ಬಗ್ಗೆ ಆಲೋಚಿಸೋಣ. ಇವು ನಿಮ್ಮ ಬಳಿಯಿದ್ದರೆ ನೀವು ಖಂಡಿತವಾಗಿಯೂ ಅದೃಷ್ಟವಂತರು, ಮರೆಯದಿರಿ.

ಬದುಕಿನ ನಿಜವಾದ ಆಶೀರ್ವಾದಗಳು.
ನಿಮ್ಮ ಬಳಿ ಇವುಗಳಿದ್ದರೆ ನೀವು ಅದೃಷ್ಟವಂತರು

ಕೆಲವರು ತಮಗೆ ದೊರೆತ ಆಶೀರ್ವಾದದ ಬಗ್ಗೆ ಚಿಂತಿಸುವುದೇ ಇಲ್ಲ

ಸೃಷ್ಟಿಯಲ್ಲಿ ತನಗೆ ಸಿಕ್ಕ ಅವಕಾಶವನ್ನು (ಆಶೀರ್ವಾದವನ್ನು) ಮರೆತುಬಿಡುವ ಏಕೈಕ ಜೀವಿಯೆಂದರೆ ಮಾನವ ಮಾತ್ರವೇ ಎನ್ನಬಹುದು. ದೇವರು ನಮಗೆ ಎಲ್ಲವನ್ನೂ ನೀಡಿದ್ದಾನೆ, ನಮ್ಮ ಬದುಕನ್ನ ಸುಂದರಗೊಳಿಸಲು ಅವನ ಸೃಷ್ಠಿಯಲ್ಲಿ, ಅಪಾರವಾದ ಅವಕಾಶಗಳು, ಕೊಡುಗೆಗಳು ತುಂಬಿಹೋಗಿವೆ. ಜೀವನವು ಎಷ್ಟೊಂದು ಸುಂದರವೆಂದರೆ ಇಲ್ಲಿರುವ ಎಲ್ಲವನ್ನೂ ನೋಡಿ ಆನಂದಿಸಲು, ಎಲ್ಲರೊಡನೆ ಬೆರೆತು ನೆಮ್ಮದಿಯಿಂದಿರಲು ನಾವಿಲ್ಲಿಗೆ ಬಂದಿದ್ದೇವೆ. ಸ್ವರ್ಗವು ಎಲ್ಲೋ ದೂರದಲ್ಲಿಲ್ಲ; ಅದು ನಮ್ಮ ಬದುಕಿನಲ್ಲೇ, ನಮ್ಮ ಆಲೋಚನೆಗಳಲ್ಲಿ ಮತ್ತು ನಮ್ಮ ಸಂಬಂಧಗಳಲ್ಲಿ ಅಡಗಿದೆ. ನಮಗೆ ಬೇಕಾದ ಸ್ವರ್ಗವನ್ನು ನಾವು ನಿರ್ಮಿಸಬೇಕಷ್ಟೇ. ನಮ್ಮ ಪ್ರೀತಿಪಾತ್ರರಿಗಾಗಿ, ಮುಂದಿನ ಪೀಳಿಗೆಗಾಗಿ ಇದನ್ನ ನೀಡಲೇ ಬೇಕಾಗಿದೆ.

ನಾವು ಹುಟ್ಟುವ ಕ್ಷಣದಿಂದಲೇ ಸೃಷ್ಟಿಯು ನಮ್ಮೆಲ್ಲ ಅವಶ್ಯಕತೆಗಳನ್ನೂ ಪೂರೈಸಲು ಅಣಿಯಾಗಿದೆ. ಬದುಕಿನಿಂದ ನಾವು ಪಡೆದ ಅನುಕೂಲಗಳಿಗೆ ನಾ̧ವು ಸೃಷ್ಟಿಗೆ ವಂದನೆಗಳನ್ನ ಹೇಳೋಣ. ಬದುಕು ನಮಗೆ ನೀಡಿರುವ ಆಶೀರ್ವಾದಗಳನ್ನು ಆಗಾಗ ನೆನೆಯೋಣ. ಕೃತಜ್ಞತೆಯ ಮನೋಭಾವವೇ ನೆಮ್ಮದಿ ಮತ್ತು ಸಂತೋಷದ ಮೂಲ ಎಂಬುದನ್ನು ಮರೆಯದಿರೋಣ.

ನಿಮ್ಮ ತಾಯಿ-ತಂದೆಯರು ನಿಮ್ಮೊಂದಿಗಿದ್ದಾರೆ

ತಂದೆ-ತಾಯಿಯರಿಂದಲೇ ನಮಗೆ ಈ ಜೀವನ ದೊರೆತಿದೆ. ಮಕ್ಕಳ ಯಶಸ್ಸನ್ನು ನಿರಂತರವಾಗಿ ಬಯಸುವುದು, ಅವರ ತಪ್ಪುಗಳನ್ನು ಕ್ಷಮಿಸುವುದು ಹಾಗೂ ಅವರ ಏಳಿಗೆಯ ಬಗ್ಗೆ ಸದಾ ಚಿಂತಿಸುವುದು ಪ್ರತಿಯೊಬ್ಬ ಪೋಷಕರ ಸಹಜ ಗುಣವಾಗಿದೆ. ಬದುಕಿನಲ್ಲಿ ನಾವು ಯಶಸ್ಸು ಗಳಿಸಿದಾಗ, ನಮ್ಮ ಸಾಧನೆಯನ್ನು ಕಂಡು ಹೆಮ್ಮೆಪಡುವ ತಂದೆ-ತಾಯಿಯರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಂತಹ ಪ್ರೀತಿ ಮತ್ತು ಕಾಳಜಿಯಿಂದ ನಮ್ಮನ್ನು ಆಶೀರ್ವದಿಸುವ ಪೋಷಕರು ನಿಮ್ಮೊಂದಿಗಿದ್ದರೆ, ನೀವು ನಿಜವಾಗಿಯೂ ಅದೃಷ್ಟವಂತರು.

ಬದುಕಿನಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ, ಅದನ್ನು ನೋಡಿ ಸಂತೋಷಪಡುವ ತಂದೆ-ತಾಯಿಯರೇ ಇಲ್ಲದಿದ್ದರೆ ಆ ಯಶಸ್ಸಿನ ಸಾರ್ಥಕತೆ ಕಡಿಮೆಯಾಗುತ್ತದೆ. ನಿಮ್ಮ ಸಾಧನೆಗಳನ್ನು ಗುರುತಿಸಲು, ನಿಮ್ಮ ಏಳಿಗೆಯನ್ನು ಕಣ್ತುಂಬಿಕೊಳ್ಳಲು ತಂದೆ-ತಾಯಿಯರು ನಿಮ್ಮೊಂದಿಗಿದ್ದರೆ, ಅದು ಬದುಕಿನ ದೊಡ್ಡ ಆಶೀರ್ವಾದಗಳಲ್ಲಿ ಒಂದಾಗಿದೆ. ದೇವರು ಅವರ ರೂಪದಲ್ಲಿ ನಿಮ್ಮೊಂದಿಗೆ ಇದ್ದು, ನಿಮ್ಮನ್ನು ಆಶೀರ್ವದಿಸುತ್ತಿದ್ದಾನೆ ಎಂದು ಭಾವಿಸಬಹುದು.

ಕೆಲವರಿಗೆ ಯಶಸ್ಸು ಮತ್ತು ಅವಕಾಶಗಳು ಬದುಕಿನ ಕೊನೆಯ ಹಂತದಲ್ಲಿ ದೊರೆಯುತ್ತವೆ. ಆದರೆ ದುರದೃಷ್ಟವಶಾತ್, ಆ ಸಂತೋಷವನ್ನು ಹಂಚಿಕೊಳ್ಳಲು ಆ ಸಮಯದಲ್ಲಿ ಅವರ ಪೋಷಕರು ಜೊತೆಯಲ್ಲಿರುವುದಿಲ್ಲ. ತಂದೆ-ತಾಯಿಯರು ಬದುಕಿರುವಾಗಲೇ ಯಶಸ್ಸನ್ನು ಗಳಿಸಿ, ಅವರ ಯೋಗಕ್ಷೇಮವನ್ನು ಪ್ರೀತಿಯಿಂದ ನೋಡಿಕೊಳ್ಳುವವರು ನಿಜವಾದ ಜೀವನದ ಸಂಪತ್ತನ್ನು ಪಡೆದವರೇ ಆಗಿದ್ದಾರೆ.

ನೀವು ಆರೋಗ್ಯದಿಂದ ಇದ್ದೀರ

ಇಂದಿನ ಯುಗದಲ್ಲಿ ಆರೋಗ್ಯವೇ ನಿಜವಾದ ಭಾಗ್ಯ ಎನ್ನಬಹುದು. ಜಗತ್ತಿನಲ್ಲಿ ಅನೇಕರು ವಿವಿಧ ರೀತಿಯ ಅನಾರೋಗ್ಯಗಳಿಂದ ಬಳಲುತ್ತಿದ್ದಾರೆ. ತಮ್ಮ ಆರೋಗ್ಯವನ್ನು ಮರಳಿ ಪಡೆಯಲು ಅವರು ಅಪಾರ ಹಣ, ಸಮಯ ಮತ್ತು ಶ್ರಮವನ್ನು ವ್ಯಯಿಸುತ್ತಿದ್ದಾರೆ. ಆರೋಗ್ಯ ಇಲ್ಲದಿದ್ದರೆ, ಜೀವನದಲ್ಲಿ ಇರುವ ಅನೇಕ ಸೌಲಭ್ಯಗಳು ಮತ್ತು ಸಂತೋಷಗಳನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.

ಕೆಲವರು ತಮಗೆ ಇಷ್ಟವಾದ ಆಹಾರವನ್ನು ಸೇವಿಸಲಾರರು, ಮತ್ತೂ ಕೆಲವರು ಅನಾರೋಗ್ಯದ ಕಾರಣ ಸ್ವತಂತ್ರವಾಗಿ ಓಡಾಡಲು ಅಥವಾ ಇತರರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಕೆಲವರು ಗುಣಪಡಿಸಲಾಗದ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದರೆ, ಇನ್ನೂ ಕೆಲವರು ಚಿಕಿತ್ಸೆಗೆ ಅಗತ್ಯವಾದ ಹಣದ ಕೊರತೆಯಿಂದ ಪರಿತಪಿಸುತ್ತಿದ್ದಾರೆ.

ಕೆಲವರಿಗೆ ಹಣದ ಕೊರತೆಯಿಲ್ಲ; ಅವರು ಬೇಕಾದ ಎಲ್ಲವನ್ನೂ ಖರೀದಿಸಬಲ್ಲರು. ಆದರೆ ಅದನ್ನು ಅನುಭವಿಸಲು ಬೇಕಾದ ಆರೋಗ್ಯ ಅವರ ಬಳಿ ಇರುವುದಿಲ್ಲ. ಮತ್ತೊಂದೆಡೆ, ಕೆಲವರಿಗೆ ಆರೋಗ್ಯವನ್ನು ಮರಳಿ ಪಡೆಯುವ ಅವಕಾಶವಿದ್ದರೂ, ಅದಕ್ಕಾಗಿ ಅಗತ್ಯವಾದ ಆರ್ಥಿಕ ಸಾಮರ್ಥ್ಯ ಇರುವುದಿಲ್ಲ.

ಆದ್ದರಿಂದ, ನೀವು ಆರೋಗ್ಯವಂತರಾಗಿದ್ದರೆ, ಸ್ವತಂತ್ರವಾಗಿ ಓಡಾಡಲು, ಕೆಲಸ ಮಾಡಲು ಮತ್ತು ಜೀವನವನ್ನು ಆಸ್ವಾದಿಸಲು ಸಾಧ್ಯವಾಗುತ್ತಿದ್ದರೆ, ಅದು ಬದುಕು ನಿಮಗೆ ನೀಡಿರುವ ಅತ್ಯಮೂಲ್ಯ ಆಶೀರ್ವಾದಗಳಲ್ಲಿ ಒಂದಾಗಿದೆ. ನಿಜಕ್ಕೂ ಆರೋಗ್ಯವು ಬದುಕು ನಮಗೆ ನೀಡಿದ ಅತಿದೊಡ್ಡ ಉಡುಗೊರೆ.

ನಿಮ್ಮ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಯೊಬ್ಬ ನಿಮ್ಮೊಂದಿಗಿದ್ದಾನೆ

ಬದುಕಿನಲ್ಲಿ ಪ್ರತಿಯೊಬ್ಬರಿಗೂ ಅನೇಕ ಆಶೀರ್ವಾದಗಳು ದೊರೆಯುತ್ತವೆ. ಆದರೆ ಯಾವುದೋ ಒಂದು ಕೊರತೆ ಮಾತ್ರ ಎಲ್ಲರ ಜೀವನದಲ್ಲೂ ಇರುತ್ತದೆ. ಕೆಲವರು ಸಂಪತ್ತು, ಯಶಸ್ಸು ಮತ್ತು ಸೌಲಭ್ಯಗಳನ್ನು ಗಳಿಸಿದ್ದರೂ, ತಮ್ಮ ಸಂತೋಷವನ್ನು ಹಂಚಿಕೊಳ್ಳಲು ಅಥವಾ ತಮ್ಮ ಸಾಧನೆಯನ್ನು ಕಂಡು ಖುಷಿಪಡುವ ಆತ್ಮೀಯ ವ್ಯಕ್ತಿಗಳನ್ನು ಹೊಂದಿರುವುದಿಲ್ಲ. ಎಲ್ಲವೂ ಇದ್ದರೂ, ಕೆಲವರು ಏಕಾಂತದ ಬದುಕನ್ನು ನಡೆಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಾರೆ.

ಆದರೆ ನಿಮ್ಮ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವ, ನಿಮ್ಮ ನೋವಿಗೆ ಸ್ಪಂದಿಸುವ, ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ನಿಲ್ಲುವ ವ್ಯಕ್ತಿಯೊಬ್ಬ ನಿಮ್ಮ ಜೀವನದಲ್ಲಿದ್ದರೆ, ಅದು ದೊಡ್ಡ ಆಶೀರ್ವಾದವೇ ಸರಿ. ಆ ವ್ಯಕ್ತಿ ನಿಮ್ಮ ಸಂಬಂಧಿಕರಾಗಿರಬಹುದು, ಸ್ನೇಹಿತರಾಗಿರಬಹುದು ಅಥವಾ ನಿಮ್ಮ ಜೀವನದಲ್ಲಿ ವಿಶೇಷ ಸ್ಥಾನ ಪಡೆದ ಮತ್ತಾರಾದರೂ ಆಗಿರಬಹುದು.

ಜೀವನದ ಕಠಿಣ ಕ್ಷಣಗಳಲ್ಲಿ ನಮ್ಮನ್ನು ಅರ್ಥಮಾಡಿಕೊಳ್ಳುವ ಮತ್ತು ಬೆಂಬಲಿಸುವ ವ್ಯಕ್ತಿಯೊಬ್ಬರ ಉಪಸ್ಥಿತಿ ಯಾವುದೇ ಸಂಪತ್ತಿಗಿಂತ ಕಡಿಮೆ ಅಲ್ಲ. ಏಕೆಂದರೆ ಎಲ್ಲರಿಗೂ ಅಂತಹ ವ್ಯಕ್ತಿಗಳು ದೊರೆಯುವುದಿಲ್ಲ. ಆದ್ದರಿಂದ, ನಿಮ್ಮ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಯೊಬ್ಬ ನಿಮ್ಮೊಂದಿಗಿದ್ದರೆ, ನೀವು ನಿಜವಾಗಿಯೂ ಅದೃಷ್ಟವಂತರು.

ಬದುಕಿನ ನಿಜವಾದ ಆಶೀರ್ವಾದಗಳು iiii

ನೀವು ಇತರರ ಮೇಲೆ ಅವಲಂಬಿತರಾಗಿಲ್ಲ

ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಬಲ್ಲಿರಿ, ಜೀವನ ನಡೆಸಲು ಇತರರ ಮೇಲೆ ಅವಲಂಬಿತರಾಗಿಲ್ಲವೆಂದರೆ, ಬದುಕಿನಲ್ಲಿ ನೀವು ಗೆದ್ದಿದ್ದೀರೆಂದು ಅರ್ಥ. ನಿಮ್ಮ ದೇಹವು ನೋವಿಲ್ಲದೆ ಸಹಜವಾಗಿ ಕಾರ್ಯನಿರ್ವಹಿಸುತ್ತಿದೆ. ನೀವು ಬೇಕಾದಾಗ, ಬೇಕಾದ ಸ್ಥಳಕ್ಕೆ ಸ್ವತಂತ್ರವಾಗಿ ಹೋಗಬಲ್ಲಿರಿ. ನಿಮಗೆ ಇಷ್ಟವಾದುದನ್ನು ಸೇವಿಸಬಲ್ಲಿರಿ. ಇಂತಹ ಸಾಮರ್ಥ್ಯವೇ ಬದುಕಿನ ದೊಡ್ಡ ಆಶೀರ್ವಾದಗಳಲ್ಲಿ ಒಂದಾಗಿದೆ.

ಯಾವುದೇ ವಿಷಯದಲ್ಲೂ ಇತರರ ಸಹಾಯಕ್ಕಾಗಿ ಕಾಯುವ ಅಥವಾ ಬೇಡುವ ಪರಿಸ್ಥಿತಿ ನಿಮ್ಮ ಬದುಕಿನಲ್ಲಿ ಇಲ್ಲವೆಂದರೆ, ಬದುಕು ನಿಮ್ಮನ್ನು ಮತ್ತೊಮ್ಮೆ ಆಶೀರ್ವದಿಸಿದೆ ಎಂದು ತಿಳಿಯಿರಿ. ಸ್ವಾವಲಂಬನೆಯು ಕೇವಲ ಒಂದು ಸಾಮರ್ಥ್ಯವಲ್ಲ; ಅದು ಆತ್ಮಗೌರವ ಮತ್ತು ಆತ್ಮವಿಶ್ವಾಸದ ಸಂಕೇತವೂ ಹೌದು.

ಜೀವನವು ಎಲ್ಲ ಅನುಕೂಲಗಳನ್ನು ನೀಡದೇ ಇರಬಹುದು. ಆದರೆ ಇತರರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುವಂತಹ ನೋವಿನ ಹಾಗೂ ಅನಾನುಕೂಲದ ಪರಿಸ್ಥಿತಿಯನ್ನು ಯಾರಿಗೂ ನೀಡದಿರಲಿ ಎಂದು ಹಾರೈಸೋಣ. ಏಕೆಂದರೆ ಸ್ವತಂತ್ರವಾಗಿ ಬದುಕುವ ಸಾಮರ್ಥ್ಯವು ಜೀವನದ ಅತ್ಯಮೂಲ್ಯ ವರಗಳಲ್ಲಿ ಒಂದಾಗಿದೆ.

ನೀವು ಸುರಕ್ಷಿತರೆನ್ನುವ ಭಾವನೆ ನಿಮಗಿದೆ

ನೀವು ವಾಸಿಸುವ ಸ್ಥಳದಲ್ಲಿ ಗಲಾಟೆಗಳಿಲ್ಲ, ಹಿಂಸಾಚಾರವಿಲ್ಲ, ನಿರಂತರ ಭಯದ ವಾತಾವರಣವಿಲ್ಲ ಎಂದರೆ ನೀವು ಅದೃಷ್ಟವಂತರು. ನಿಮ್ಮ ವಾಸಸ್ಥಾನ ಯುದ್ಧಭೂಮಿಯಲ್ಲ. ನಿಮಗೆ ಶುದ್ಧ ಕುಡಿಯುವ ನೀರು ಲಭ್ಯವಿದೆ, ಉಸಿರಾಡಲು ಶುದ್ಧ ಗಾಳಿಯಿದೆ. ಬೇಕಾದಾಗ ವಿಶ್ರಾಂತಿ ಪಡೆಯುವ ಅವಕಾಶವಿದೆ. ನಿಮ್ಮ ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಲು ಸಾಧ್ಯವಾಗುತ್ತಿದೆ. ಇವೆಲ್ಲವೂ ಬದುಕು ನಮಗೆ ನೀಡಿರುವ ಅಮೂಲ್ಯ ಆಶೀರ್ವಾದಗಳೇ ಆಗಿವೆ.

ಅನಾವಶ್ಯಕ ಭಯಗಳು ಮತ್ತು ಚಿಂತೆಗಳು ನಿಮ್ಮನ್ನು ಕಾಡುತ್ತಿಲ್ಲವೆಂದರೆ, ನಿಮ್ಮ ಮನಸ್ಸಿನಲ್ಲಿ ಸುರಕ್ಷತೆಯ ಭಾವನೆ ನೆಲೆಸಿದೆ ಎಂದರ್ಥ. ಜೀವನದಲ್ಲಿ ನಾವು ಬಯಸಿದ ಎಲ್ಲವೂ ಸಿಕ್ಕಿರದಿರಬಹುದು. ಆದರೆ ನೆಮ್ಮದಿಯಿಂದ ಬದುಕುವ ಅವಕಾಶ ದೊರೆತಿರುವುದೇ ದೊಡ್ಡ ವರವಾಗಿದೆ.

ಜಗತ್ತಿನ ಅನೇಕ ಜನರು ಯುದ್ಧ, ಹಿಂಸಾಚಾರ, ಬಡತನ ಮತ್ತು ಅಸುರಕ್ಷತೆಯ ನಡುವೆ ಬದುಕುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ನೀವು ಸುರಕ್ಷಿತ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದರೆ, ಅದು ದೇವರ ಕೃಪೆ ಮತ್ತು ಬದುಕಿನ ಆಶೀರ್ವಾದವೆಂದು ಭಾವಿಸಬಹುದು.

ಸುರಕ್ಷತೆ ಎಂಬುದು ಕೇವಲ ದೈಹಿಕ ರಕ್ಷಣೆಯಲ್ಲ; ಅದು ಮನಸ್ಸಿಗೆ ದೊರೆಯುವ ನೆಮ್ಮದಿ ಮತ್ತು ವಿಶ್ವಾಸವೂ ಹೌದು. ಆದ್ದರಿಂದ, ಸುರಕ್ಷಿತ ಜೀವನವನ್ನು ಕೃತಜ್ಞತೆಯಿಂದ ಸ್ವೀಕರಿಸಿ, ಅದರ ಮೌಲ್ಯವನ್ನು ಅರಿಯೋಣ.

ನಿಮ್ಮ ಜೀವನ ಶಾಂತಿ, ನೆಮ್ಮದಿಯಿಂದ ಕೂಡಿದೆ

ನಿಮಗೆ ಪ್ರತಿದಿನವೂ ಉಣ್ಣಲು ಶುದ್ಧ ಆಹಾರ ಲಭ್ಯವಾಗುತ್ತಿದೆ. ನೀವು ಬಾಡಿಗೆಯ ಮನೆಯಲ್ಲಿರಬಹುದು ಅಥವಾ ಸ್ವಂತ ಮನೆಯಲ್ಲಿರಬಹುದು; ಆದರೆ ನಿಮಗೆ ನೆಮ್ಮದಿಯಾಗಿ ಮಲಗಲು ಒಂದು ಸ್ಥಳವಿದೆ. ಸಾಧ್ಯವಾದರೆ ನಿಮ್ಮ ಆಹಾರವನ್ನು ಮತ್ತು ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳಬಲ್ಲಿರಿ. ಹಂಚಿಕೊಳ್ಳಲು ಏನೂ ಇಲ್ಲದಿದ್ದರೂ, ಪ್ರೀತಿಯಿಂದ ಮಾತನಾಡಿ ಇತರರ ಮನಸ್ಸಿಗೆ ನೆಮ್ಮದಿ ನೀಡಬಲ್ಲಿರಿ. ನಿಮ್ಮ ಕೈಲಾದ ಸಹಾಯವನ್ನು ಅಗತ್ಯವಿರುವವರಿಗೆ ಮಾಡಬಲ್ಲಿರಿ.

ಹಾಗಿದ್ದರೆ ನಿಮ್ಮ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಿವೆ ಎಂದು ಹೇಳಬಹುದು. ನೀವು ಎಲ್ಲಿದ್ದರೂ, ಹೇಗಿದ್ದರೂ ಅನಗತ್ಯ ಚಿಂತೆಗಳಿಂದ ದೂರವಾಗಿದ್ದೀರಿ. ಇತರರಿಂದ ನಿಮಗಾದ ಅನಾನುಕೂಲಗಳನ್ನು ನೆನೆಯುವುದಕ್ಕಿಂತ, ಅವರ ಒಳಿತನ್ನೇ ಬಯಸುವ ಮನಸ್ಸು ನಿಮ್ಮದಾಗಿದೆ. ಅಂತಹ ಮನಸ್ಸು ಹೊಂದಿರುವವರು ಭಗವಂತನ ಸಾನಿಧ್ಯಕ್ಕೆ ಹತ್ತಿರವಾಗಿರುತ್ತಾರೆ. ಶಾಂತಿ ನಿಮ್ಮ ಹೃದಯದಲ್ಲಿ ಮನೆಮಾಡಿದೆ ಎಂಬುದನ್ನು ಮರೆಯದಿರಿ.

ಸಹಾನುಭೂತಿ ಇರುವವರು, ಇತರರು ಮಾಡಿದ ಸಣ್ಣ ಸಹಾಯವನ್ನೂ ದೊಡ್ಡ ಉಪಕಾರವೆಂದು ಭಾವಿಸುತ್ತಾರೆ. ಅದನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಅವರಿಗೆ ತಮ್ಮ ಸಮಸ್ಯೆಗಳಿಗಿಂತ, ಇತರರಿಗಾಗಿ ತಾವು ಮಾಡಬೇಕಾದ ಕರ್ತವ್ಯದ ಬಗ್ಗೆಯೇ ಹೆಚ್ಚು ಕಾಳಜಿ ಇರುತ್ತದೆ. ಅವರು ಮಾಡುವ ಸಹಾಯವನ್ನು ಕರ್ತವ್ಯವೆಂದು ಭಾವಿಸುತ್ತಾರೆಯೇ ಹೊರತು, ಪ್ರತಿಫಲದ ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ.

ಹೊರಗಿನಿಂದ ನೋಡಿದಾಗ ದೊಡ್ಡ ಸೌಲಭ್ಯಗಳು ಅಥವಾ ವೈಭವಗಳು ನಿಮ್ಮ ಬಳಿ ಇಲ್ಲದಿರಬಹುದು. ಆದರೆ ನಿಮ್ಮ ಮನಸ್ಸು ಶಾಂತಿಯಿಂದ ಕೂಡಿದ್ದರೆ, ನಿಮ್ಮ ಬದುಕಿನಲ್ಲಿ ಭಗವಂತನ ಕೃಪೆ ನೆಲೆಸಿದೆ ಎಂದರ್ಥ. ಜೀವನದಲ್ಲಿ ದೊರೆತಿರುವ ಈ ನೆಮ್ಮದಿ ಮತ್ತು ಶಾಂತಿ ಎಂದೆಂದಿಗೂ ನಿಮ್ಮೊಂದಿಗಿರಲಿ.

ಕೃತಜ್ಞತೆಯೇ ನೆಮ್ಮದಿಯ ದಾರಿ

ನಿಮ್ಮನ್ನು ಪ್ರೀತಿಸುವ, ನಿಮ್ಮ ಬಗ್ಗೆ ಕಾಳಜಿವಹಿಸುವ ಜನರು ನಿಮ್ಮ ಸುತ್ತಲಿದ್ದರೆ, ದಣಿದಾಗ ವಿಶ್ರಾಂತಿ ಪಡೆಯುವ ಅವಕಾಶ ನಿಮ್ಮದಾಗಿದ್ದರೆ, ನೀವು ಈಗಾಗಲೇ ಬದುಕಿನ ಅಮೂಲ್ಯ ಆಶೀರ್ವಾದಗಳನ್ನು ಪಡೆದಿದ್ದೀರಿ ಎಂದು ಭಾವಿಸಿ. ನಿಮ್ಮ ಸಾಂಗತ್ಯವು ಇತರರಿಗೆ ಖುಷಿ ಮತ್ತು ನೆಮ್ಮದಿಯನ್ನು ನೀಡುವಂತಿದ್ದರೆ, ಅದು ದೇವರ ಕೃಪೆಯ ಸಂಕೇತವೇ ಸರಿ.

ಇಂದು ನಿಮ್ಮ ಜೀವನದಲ್ಲಿ ಕೆಲವು ಕೊರತೆಗಳಿರಬಹುದು. ಕೆಲವು ಕನಸುಗಳು ಇನ್ನೂ ನನಸಾಗದೇ ಇರಬಹುದು. ಆದರೆ ಬದುಕು ನಿಮಗೆ ಮತ್ತೊಂದು ಹೊಸ ದಿನವನ್ನು, ಮತ್ತೊಂದು ಹೊಸ ಅವಕಾಶವನ್ನು ನೀಡುತ್ತಿದೆ ಎಂಬುದನ್ನು ಮರೆಯಬೇಡಿ. ಪ್ರತಿಯೊಂದು ಹೊಸ ದಿನವೂ ಹೊಸ ನಿರೀಕ್ಷೆ ಮತ್ತು ಹೊಸ ಸಾಧ್ಯತೆಗಳನ್ನು ಹೊತ್ತು ತರುತ್ತದೆ.

ಇತರರು ನಿಮ್ಮಂತೆಯೇ ಬದುಕಲು ಬಯಸುತ್ತಾರೆಂದರೆ, ನಿಮ್ಮಲ್ಲಿರುವ ಆಶೀರ್ವಾದಗಳ ಮೌಲ್ಯವನ್ನು ಅರಿತುಕೊಳ್ಳಿ. ನೀವು ನೆಮ್ಮದಿ, ಸಂತೋಷ ಮತ್ತು ಪ್ರೀತಿಯಿಂದ ಕೂಡಿದ ಜೀವನವನ್ನು ಅನುಭವಿಸುತ್ತಿದ್ದರೆ, ನಿಜವಾಗಿಯೂ ಅದೃಷ್ಟವಂತರಾಗಿದ್ದೀರಿ. ಆದ್ದರಿಂದ, ಇಲ್ಲದಿರುವುದರ ಬಗ್ಗೆ ಬೇಸರಪಡುವುದಕ್ಕಿಂತ, ಇರುವುದರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸೋಣ. ಏಕೆಂದರೆ ಕೃತಜ್ಞತೆಯ ಮನೋಭಾವವೇ ಸಂತೋಷ ಮತ್ತು ನೆಮ್ಮದಿಯ ಬದುಕಿಗೆ ದಾರಿ ತೋರಿಸುತ್ತದೆ.

“ನಮ್ಮ ಬಳಿ ಇಲ್ಲದಿರುವುದರ ಬಗ್ಗೆ ಬೇಸರಪಡುವುದಕ್ಕಿಂತ, ಈಗಾಗಲೇ ದೊರೆತಿರುವ ಆಶೀರ್ವಾದಗಳನ್ನು ನೆನೆಯುವ ಅಭ್ಯಾಸ ಬೆಳೆಸಿಕೊಳ್ಳೋಣ. ಕೃತಜ್ಞತೆಯ ಮನೋಭಾವವೇ ನೆಮ್ಮದಿಯ ಬದುಕಿನ ಅಡಿಪಾಯ. ಪ್ರತಿಯೊಂದು ಹೊಸ ದಿನವೂ ದೇವರು ನೀಡಿರುವ ಅಮೂಲ್ಯ ಅವಕಾಶ; ಅದನ್ನು ಸಂತೋಷದಿಂದ, ಸಾರ್ಥಕತೆಯಿಂದ ಬದುಕೋಣ.”

ವ್ಯಕ್ತಿಯೆಂಬ ಪುಸ್ತಕ : ಜೀವನ ಬದಲಾಯಿಸುವ ಪುಸ್ತಕಗಳು ಮತ್ತು ವ್ಯಕ್ತಿಗಳ ಪ್ರಭಾವ : ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Comment