ವ್ಯಕ್ತಿಯೆಂಬ ಪುಸ್ತಕ : ಜೀವನ ಬದಲಾಯಿಸುವ ಪುಸ್ತಕಗಳು ಮತ್ತು ವ್ಯಕ್ತಿಗಳ ಪ್ರಭಾವ
ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಉಳ್ಳವರು ನಿಜಕ್ಕೂ ಅದೃಷ್ಟವಂತರೇ ಸರಿ. ಅವರು ಕೇವಲ ಪುಸ್ತಕವನ್ನು ಓದದೇ ತಾವು ಓದುತ್ತಿರುವ ಯುಗದಲ್ಲಿ ಬದುಕಿರುವಂತೆ; ಪುಸ್ತಕದಲ್ಲಿ ಬರುವ ಘಟನೆಗಳೊಡನೆ ಜೀವಿಸುತ್ತಾರೆ. ಕೆಲವರಿಗೆ ಪುಸ್ತಕಗಳೇ ಗೆಳೆಯರು, ಮತ್ತೆ ಕೆಲವರಿಗೆ ವ್ಯಕ್ತಿಯೆಂಬ ಪುಸ್ತಕವೇ ಗೆಳೆಯರು.
ಪುಸ್ತಕಗಳು ಮತ್ತು ವ್ಯಕ್ತಿಗಳು: ಜೀವನದ ನಿಜವಾದ ಗೆಳೆಯರು
ಕೆಲವು ಪುಸ್ತಕಗಳನ್ನ ಓದುವಾಗ ನಗುವ, ಅಳುವ, ಮುಂತಾದ ಭಾವಗಳು ಓದುವವರೊಡನೆ ಜರುಗಿ ಬಿಡುತ್ತವೆ. ಪುಸ್ತಕಗಳು ಜಗತ್ತಿನ ಮಿತ್ರರು. ಪುಸ್ತಕದಂತಹ ನಿಜವಾದ ಗೆಳೆಯನಿಲ್ಲ. “ನೋವುಂಟು ಮಾಡದೆ, ತಪ್ಪನ್ನೇಳದೆ, ಜಗತ್ತನ್ನು ತಿದ್ದುವ ಏಕೈಕ ಗೆಳೆಯನೆಂದರೆ ಪುಸ್ತಕಗಳು ಮಾತ್ರ.” ಪುಸ್ತಕಗಳು ಎಲ್ಲರಿಗೂ, ಎಲ್ಲ ಸಮಯದ ಮಿತ್ರನಂತೆ. ಬಯಸಿದಾಗಲೆಲ್ಲಾ ನೀವು ಪುಸ್ತಕದೊಡನೆ ಜೀವಿಸಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕದಂತೆ. ಪುಸ್ತಕಗಳು ಮತ್ತು ವ್ಯಕ್ತಿಗಳು ನಮ್ಮ ಜೀವನ, ಚಿಂತನೆ ಹಾಗೂ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬ ಚಿಂತನಾತ್ಮಕ ಲೇಖನ.
ಮಕ್ಕಳ ಯಶಸ್ಸನ್ನ ತಂದೆ ತಾಯಿಯರು ಬಯಸುತ್ತಾರೆ. ಆಪ್ತ ಮಿತ್ರನೊಬ್ಬ ನಿಮ್ಮ ಯಶಸ್ಸನ್ನು ಕಂಡು ಕುಷಿ ಪಡುತ್ತಾನೆ. ತಂದೆ ತಾಯಿ ಹಾಗೂ ಆಪ್ತಮಿತ್ರ ಮೂವರೂ ಒಡಗೂಡಿದರೆ ನಮಗೆ ದೊರೆತ ಒಂದೊಳ್ಳೆ ಪುಸ್ತಕದಂತೆ ಎನ್ನಬಹುದು. ಪುಸ್ತಕಗಳು ಎಂದಿಗೂ ನೋಯಿಸದ, ಸದಾ ನಮ್ಮ ಏಳಿಗೆಯನ್ನ ಬಯಸುವ ತಾಯಿಯಂತೆ. ಪುಸ್ತಕಗಳು ಒಳ್ಳೆಯ ವ್ಯಕ್ತಿತ್ವದ ಪ್ರತಿಬಿಂಬದಂತೆ.
ವ್ಯಕ್ತಿತ್ವ ರೂಪಿಸುವಲ್ಲಿ ಪುಸ್ತಕಗಳ ಪಾತ್ರ
ವ್ಯಕ್ತಿಯೊಬ್ಬನ ನಡತೆ ಸಮಾಜದಲ್ಲಿ ಹೇಗಿರಬೇಕು ಎಂಬುದನ್ನ ಪುಸ್ತಕಗಳು ಸೂಚಿಸುತ್ತವೆ. ಎಲ್ಲರಿಗೂ ಗೆಳೆಯರಿರುತ್ತಾರೆ. ಆದರೆ ಎಲ್ಲರೂ ಪುಸ್ತಕದ ಗೆಳೆಯರಾಗಿರುವುದೆಲ್ಲ ಎನ್ನುವುದೇ ನೋವಿನ ಸಂಗತಿ. ಮಾನವನ ಚಿಂತನೆಗಳು ಮಾತುಗಳಾದವು, ಮಾತುಗಳು ಬರಹವಾದವು. ಆ ಬರಹಗಳೇ ಪುಸ್ತಕಗಳಾದವು ಎಂದು ಹೇಳಬಹುದು. ಪುಸ್ತಕಗಳು ಚಿಂತನೆಗಳಂತೆಯೇ ಪುರಾತನವಾದುವು, ಪರಿಣಾಮ ಬೀರುವಂತಹುದು, ಪ್ರೇರೇಪಣೆಗೊಳಿಸುವಂತಹುದು, ನಮ್ಮ ವ್ಯಕ್ತಿತ್ವವನ್ನೇ ಬದಲಾಯಿಸುವಂತಹುದು.
ಎಲ್ಲ ಪುಸ್ತಕಗಳ ಭಾವವು ಒಂದೇ ಆಗಿದೆ
ನಿಮಗೆ ಗೊತ್ತೇ? ಪುಸ್ತಕಗಳನ್ನ ಓದುವ ಹವ್ಯಾಸವಿರುವ ಎಲ್ಲಾ ವ್ಯಕ್ತಿಗಳದ್ದೂ ಒಂದೇ ಸಮಾನಂತರದ ಚಿಂತನೆ ಆಗಿರುತ್ತದೆ. ವ್ಯಕ್ತಿಗಳು ಓದುವ ಪುಸ್ತಕದ ವಿಷಯವು ಬೇರೆಬೇರೆ ಆಗಿರಬಹುದು; ಉದಾಹರಣೆಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ರಾಜಕೀಯಕ್ಕೆ ಸಂಬಂಧಿಸಿದ್ದೋ, ಇತ್ಯಾದಿ ಇರಬಹುದು. ಆದರೆ “ಓದುಗನನ್ನು ಓದಿಸಿಕೊಂಡು ಹೋಗುವ ಎಲ್ಲಾ ಪುಸ್ತಕಗಳ ಭಾವವು ಒಂದೇ.”ಹಾಗೆಂದು ಎಲ್ಲಾ ಪುಸ್ತಕಗಳು ಓದಲು ಯೋಗ್ಯವಿರುವುದಿಲ್ಲ. ಕೆಲವು ಪುಸ್ತಕಗಳು ನಾವು ಆಲೋಚಿಸುವಂತೆ, ಮತ್ತೆ ಕೆಲವು ಪ್ರಚೋದಿಸುವಂತೆ, ಮತ್ತೆ ಕೆಲವು ಪ್ರಶ್ನಿಸುವಂತೆ, ಮತ್ತೆ ಕೆಲವು ಕೆರಳುವಂತೆ ಮಾಡಿ ಬಿಡುತ್ತವೆ. ಪ್ರತಿಯೊಂದು ಪುಸ್ತಕಗಳಿಗೂ ತನ್ನದೇ ಆದ ಭಾವವಿದೆ. ಹಾಗೆಯೇ ನಾವಾಡುವ ಮಾತು, ಬರೆವಣಿಗೆಯೂ ಕೂಡ ತನ್ನದೇ ಆದ ಭಾವವನ್ನ ಹೊಂದಿದೆ.
ಕೆಲವೊಂದು ಪುಸ್ತಕಗಳ ಮೊದಲನೆಯ ಪುಟವನ್ನು ಓದುತ್ತಿರುವಂತೆ ಪಕ್ಕಕ್ಕೆ ಸರಿಸಿ ಬಿಡೋಣ ಅನ್ನಿಸುತ್ತದೆ. ಮತ್ತೆ ಕೆಲವು ಪುಸ್ತಕಗಳ ಒಂದೊಂದು ಪುಟವೂ, ಶಬ್ದವು ಜೀವತುಂಬಿ ಬಂದಂತೆ; ಓದುಗನಿಗೆ ಉತ್ಸಾಹವನ್ನು, ಸಂತಸವನ್ನು, ಆಶ್ಚರ್ಯವನ್ನು, ಬದುಕಿಗೆ ಭರವಸೆಯನ್ನು ನೀಡಿ ಬಿಡುತ್ತವೆ. ಕೆಲವೊಂದು ಪುಸ್ತಕಗಳು ನಮ್ಮನ್ನ ನಿರಂತರ ಕಾಡುತ್ತಿರುತ್ತವೆ. ಏಕೆಂದರೆ ಆ ಪುಸ್ತಕಗಳು ಕೇವಲ ತಮ್ಮ ಬಗ್ಗೆ ಬರೆದುಕೊಂಡಿರದೆ ಓದುಗನನ್ನ ಓದಿಸಿಕೊಂಡು ಹೋಗುತ್ತವೆ. ಅವನು, ಹಾಗೆ ಕೈಗೆ ಸಿಕ್ಕಿದ ಯಾವುದಾದರೂ ಪುಟವನ್ನ ತಿರುಚಿ ಒಂದೆರಡು ಪುಟಗಳನ್ನ, ಘಟನೆಗಳನ್ನ ಓದಿ ತನಗೆ ತಾನೇ ಸ್ಪೂರ್ತಿ ಹಾಗೂ ಪ್ರೇರಣೆಯನ್ನು ಪಡೆಯುತ್ತಾನೆ.
ಓದುವ ಹವ್ಯಾಸವಿರುವ ಯಾವೊಂದು ವ್ಯಕ್ತಿಯು ಅಷ್ಟೊಂದು ಸುಲಭವಾಗಿ ನಿರುತ್ಸಾಹಿಯಾಗಲಾರ. ಏಕೆಂದರೆ ಬದುಕಿನ ಉತ್ಸಾಹವನ್ನು ಅವನು ಓದುತ್ತಿರುವ ಪುಸ್ತಕಗಳು ನಿರಂತರವಾಗಿ ನೀಡುತ್ತಲೇ ಇರುತ್ತವೆ. ನನ್ನ ಮಾತನ್ನು ನಂಬುವುದಿಲ್ಲವೆಂದರೆ, ಕೆಲದಿನಗಳ ಮಟ್ಟಿಗೆ ಓದುವ ಹವ್ಯಾಸವನ್ನು ರೂಡಿಸಿಕೊಂಡು ನಿಮ್ಮನ್ನೇ ನೀವು ಅವಲೋಕಿಸುವುದು ಒಳಿತು. ಈ ಅಭ್ಯಾಸದಲ್ಲಿ ತೊಡಗಿಕೊಂಡ ನಂತರ ನಮಗೆ ಅರಿವಿಲ್ಲದೆಯೇ ನಮ್ಮ ಜೀವನ ಶೈಲಿ, ಚಿಂತನೆಗಳು ಬದಲಾಗುತ್ತದೆ ಎನ್ನುವುದು ನನ್ನ ದೃಢ, ಅಚಲ ನಂಬಿಕೆ.
ಪುಸ್ತಕಗಳು ನಮ್ಮ ಜೀವನದಲ್ಲಿ ಹೇಗೆ? ಯಾವ ರೀತಿ ಪರಿಣಾಮವನ್ನು ಬೀರುತ್ತವೆಯೋ ಅದೇ ರೀತಿಯಲ್ಲಿ ವ್ಯಕ್ತಿಗಳು ನಮ್ಮೊಡನೆ ಪ್ರಭಾವವನ್ನು ಬೀರುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ಪುಸ್ತಕವಿದ್ದಂತೆ. ವ್ಯಕ್ತಿಗಳೊಡನೆ ದಿನನಿತ್ಯ ನಡೆಯುವ ಘಟನೆಗಳು, ಪುಸ್ತಕದಲ್ಲಿ ಓದುತ್ತಾ ಹೋಗುವ ಒಂದರ ನಂತರ ಬರುವ ಮತ್ತೊಂದು ಪುಟಗಳಂತೆ. ಪುಸ್ತಕದ ಯಾವುದೋ ಒಂದು ಘಟನೆಯನ್ನು ಆಗಾಗ ಓದಿ ಮೆಲುಕು ಹಾಕುವಂತೆ ವ್ಯಕ್ತಿಗಳೊಡನೆ ಘಟಿಸುವ ಘಟನೆಗಳನ್ನ ನಾವು ಮೆಲುಕು ಹಾಕುತ್ತೇವೆ. ಆಗಿದ್ದ ಮೇಲೆ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ಪುಸ್ತಕವಿದ್ದಂತೆ. ಅಲ್ಲವೇನು?
ಕೆಲವು ವ್ಯಕ್ತಿಗಳ ಜೀವಿತಾವಧಿ ಚಿಕ್ಕದಿದ್ದರೂ, ಅವರು ಬದುಕಿನ ನಂತರ ಇತರರ ಮೇಲೆ ಬೀರುವ ಪ್ರಮಾಣ ಅಗಾಧವಾದದ್ದು. ನಮ್ಮೆಲ್ಲರ ಜೀವಿತವೂ ಒಂದೊಂದು ಪುಸ್ತಕದಂತೆ. ಕೆಲವು ವ್ಯಕ್ತಿಗಳು ಕೇವಲ ತಮ್ಮ ಮನೆಯವರಿಗೆ, ಮತ್ತೆ ಕೆಲವರು ಸಮಾಜದ ಎಲ್ಲರಿಗೂ ಪ್ರೀತಿ ಪಾತ್ರರಾದಂತೆ; ಕೆಲವು ಪುಸ್ತಕಗಳು ಯಾರೋ ಒಬ್ಬರಿಗೆ ಇಷ್ಟವಾಗುವಂತೆ, ಮತ್ತೆ ಕೆಲವು ಎಲ್ಲರಿಗೂ ಇಷ್ಟವಾಗುವಂತೆ ಕಂಡು ಬರುತ್ತವೆ. ಕೆಲವೊಂದು ಪುಸ್ತಕಗಳು ದೇಶ ಭಾಷೆಯನ್ನ ಮೀರಿ ಪ್ರಕಟವಾಗುತ್ತವೆ, ತರ್ಜುಮೆಗೊಳ್ಳುತ್ತವೆ, ಭಾಷಾಂತರಗೊಂಡು ವಿಶ್ವದೆಲ್ಲೆಡೆ ಹಲವು ಭಾಷೆಗಳಲ್ಲಿ ಮಾರಾಟವಾಗುತ್ತವೆ. ಹಾಗೆಯೇ ಕೆಲವೊಮ್ಮೆ ಭೂಮಿಯ ಯಾವುದೋ ಒಂದು ಭಾಗದ ವ್ಯಕ್ತಿಯೊಬ್ಬ ಜಗತ್ತಿನೆಲ್ಲೆಡೆ ಇದ್ದಕ್ಕಿದ್ದಂತೆಯೇ ಆಪ್ತನಾಗಿಬಿಡುತ್ತಾನೆ. ಜಗತ್ತು ಅವನನ್ನ ಕೊಂಡಾಡುತ್ತದೆ, ಅವನನ್ನ ಇಷ್ಟಪಡಲಾರಂಭಿಸುತ್ತದೆ. ಅವನಂತೆಯೇ ಜೀವಿಸಲಾರಂಭಿಸುತ್ತದೆ.
ವಿಶ್ವಪ್ರಸಿದ್ಧ ಪುಸ್ತಕಗಳು ಮತ್ತು ವಿಶ್ವವಿಖ್ಯಾತ ವ್ಯಕ್ತಿಗಳು
ಕೆಲವು ಪುಸ್ತಕಗಳು ಅತೀ ಚಿಕ್ಕವು, ಮತ್ತೆ ಕೆಲವು ದೊಡ್ಡವು, ಮತ್ತೆ ಕೆಲವೂ ಅತೀ ದೊಡ್ಡವು. ಅಂತೆಯೇ ಕೆಲವು ಪುಸ್ತಕಗಳು ಹೆಚ್ಚಿನ ಓದುಗರನ್ನು ತಲುಪಿದರೆ ಮತ್ತೆ ಕೆಲವು ಎಲ್ಲೋ ಕೆಲವರನ್ನ ತಲುಪುತ್ತವೆ. “ಪುಸ್ತಕವೆಂದರೆ ಬರೆದುಕೊಳ್ಳುವುದು; ವ್ಯಕ್ತಿಯೆಂದರೆ ಬದುಕಿ ತೋರಿಸುವುದು” ಎರಡೂ ಒಂದು ರೀತಿಯ ಪುಸ್ತಕಗಳೇ! ಪುಸ್ತಕವನ್ನು ಓದಿದ ನಂತರ ಅದರ ಸಾರವನ್ನು ವ್ಯಕ್ತಿಯೊಬ್ಬ ಅರಿಯುವಂತೆ, ಉತ್ತಮ, ಸದಾಚಾರ ತುಂಬಿದ ವ್ಯಕ್ತಿಗಳನ್ನ ಇತರರು ನೋಡಿದಾಗ ಅವರಿಂದ ಆಕರ್ಷಿತರಾಗುತ್ತಾರೆ. ಅಂತಹ ಉತ್ತಮ ವ್ಯಕ್ತಿಗಳಲ್ಲಿರುವ ಗುಣವನ್ನು ಕಂಡು ಮೆಚ್ಚುವದಷ್ಟೇ ಅಲ್ಲ, ತಾವು ಅವರಂತೆ ಬಾಳಬೇಕೆಂದು ಪ್ರಯತ್ನ ಪಡುತ್ತಾರೆ. ವ್ಯಕ್ತಿಯ ನಡೆಯನ್ನ ಅವಲೋಕಿಸಿ ಇತರರು ಸ್ಪೂರ್ತಿಗೊಳ್ಳುತ್ತಾರೆ, ಇಲ್ಲವೇ ಸ್ಪೂರ್ತಿ ಕಳೆದುಕೊಳ್ಳುತ್ತಾರೆ. ಉತ್ತಮ ಪುಸ್ತಕಗಳು ಸ್ಪೂರ್ತಿ ತುಂಬುವಂತೆ ಉತ್ತಮ ವ್ಯಕ್ತಿಗಳು ಸ್ಪೂರ್ತಿ ತುಂಬುತ್ತಾರೆ, ಕೆಟ್ಟ ಪುಸ್ತಕಗಳು ನೆಮ್ಮದಿಯನ್ನ ಹಾಳು ಮಾಡುವಂತೆ ಕೆಟ್ಟ ವ್ಯಕ್ತಿಗಳು ನೆಮ್ಮದಿ ಹಾಳುಮಾಡುತ್ತಾರೆ. ಕೆಟ್ಟ ಪುಸ್ತಕಗಳು ನಮ್ಮ ಮನಸ್ಸನ್ನು ಕಲ್ಮಶಗೊಳಿಸಿದಂತೆ; ದುಷ್ಟ ವ್ಯಕ್ತಿಗಳು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸಿ ಹಾಳು ಮಾಡುತ್ತಾರೆ.

ಉತ್ತಮ ವ್ಯಕ್ತಿ ಹಾಗೂ ಉತ್ತಮ ಪುಸ್ತಕದ ಸಾಮ್ಯತೆ
ಕೆಲವೊಂದು ಪುಸ್ತಕಗಳು ಅತಿ ಹೆಚ್ಚು ಪ್ರಸಿದ್ಧವಾದವು, ಅತೀ ಹೆಚ್ಚು ಭಾಷಾಂತರಗೊಂಡಿರುವಂತಹದು, ಹಾಗೂ ಅತಿ ಹೆಚ್ಚು ಮಾರಾಟವಾದಂತಹುದು. ಹಾಗೆಯೇ ಕೆಲವೊಂದು ವ್ಯಕ್ತಿಗಳು ದೇಶ-ಭಾಷೆಯ ಭೇದವಿಲ್ಲದೆ ವಿಶ್ವ ವಿಖ್ಯಾತರಾಗುತ್ತಾರೆ. ಜಗತ್ತು ಅವರನ್ನು ತಿಳಿಯದಿದ್ದರೂ ಇಷ್ಟಪಡಲಾರಂಭಿಸುತ್ತದೆ. ಅವರಂತೆಯೇ, ಇತರರು ಬದುಕಲು, ಯೋಚಿಸಲು ಪ್ರಯತ್ನಿಸುತ್ತಾರೆ, ಅನುಸರಿಸುತ್ತಾರೆ. ಈ ರೀತಿ ಪುಸ್ತಕಗಳೂ ಕೆಲವೊಮ್ಮೆ ಜೀವಂತ ವ್ಯಕ್ತಿಗಳನ್ನ ಹೋಲುತ್ತದೆ. ಹೀಗೆ ವ್ಯಕ್ತಿಗಳೇ ಕೆಲವೊಮ್ಮೆ ಪುಸ್ತಕಗಳಾಗುತ್ತಾರೆ, ಕೆಲವೊಮ್ಮೆ ಪುಸ್ತಕಗಳೇ ಕಣ್ಣಿಗೆ ಕಾಣದ ಆದರೆ ಆಗಿ ಹೋದ ವ್ಯಕ್ತಿಗಳಂತೆ ಪ್ರತಿಬಿಂಬಿಸುತ್ತವೆ.
ಕೆಲವೊಂದು ವ್ಯಕ್ತಿಗಳು ಅತ್ಯಂತ ಕ್ರಿಯಾಶೀಲರು. ಅವರ ಹತ್ತಿರ ಸುಳಿಯುತ್ತಿದ್ದಂತೆಯೇ ನಮಗೆ ಅರಿವಿಲ್ಲದಂತೆ ನಾವು ಬದಲಾಗುತ್ತೇವೆ, ಸ್ಪೂರ್ತಿಯನ್ನ, ಸಂತಸವನ್ನ ಕಾಣಲಾರಂಭಿಸುತ್ತೇವೆ. ಆ ವ್ಯಕ್ತಿಯ ಸನಿಹದಲ್ಲಿಯೇ ಇರಬೇಕೆಂದು ಬಯಸುತ್ತೇವೆ. ಅವರು ಎಷ್ಟೊಂದು ಕ್ರಿಯಾಶೀಲರೆಂದರೆ ಅವರು ಏನೊಂದನ್ನೂ ವ್ಯರ್ಥ ಮಾಡಲಾರರು, ಯಾರನ್ನು ಘಾಸಿಗೊಳಿಸಲಾರರು. ಅವರ ಬದುಕು ಸಾವಿರಾರು ಜನರಿಗೆ ಸ್ಪೂರ್ತಿಯಂತೆ, ಅವರ ಜೀವನವು ಯಾವುದೋ ಪೂರ್ವನಿಯೋಜಿತ ಉದ್ದೇಶಕ್ಕೆ, ಸಮಾಜದ ಒಳಿತಿಗೆ ಆಗುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ. ಹಾಗೆಯೇ ಕೆಲವೊಂದು ಪುಸ್ತಕಗಳು ಓದುತ್ತಿದ್ದಂತೆಯೇ ಬದಲಾವಣೆ ನಮ್ಮನ್ನ ಆವರಿಸಿಕೊಳ್ಳುತ್ತದೆ.
ಉತ್ತಮವಾಗಿ ಬದುಕುತ್ತಿರುವ ವ್ಯಕ್ತಿಗಳೆಲ್ಲರೂ ಪುಸ್ತಕವನ್ನು ಬರೆಯಬೇಕೆಂದೇನೋ ಇಲ್ಲ ಅಥವಾ ಅವರು ಬರೆದ ಪುಸ್ತಕಗಳೆಲ್ಲಾ ಅವರಂತೆಯೇ ಪ್ರಸಿದ್ಧವಾದವು ಏನೋ, ನನಗೆ ತಿಳಿದಿಲ್ಲ. ಆದರೆ ನಾನು ಹೇಳುತ್ತಿರುವುದು “ಉತ್ತಮ ವ್ಯಕ್ತಿ ಒಂದು ಉತ್ತಮ ಪುಸ್ತಕವಿದ್ದಂತೆ” ಎಂದು. ಪುಸ್ತಕವು ಓದಿದಾಗ ಮಾತ್ರ ಅರಿಯುವಂಥದ್ದು ಹಾಗೆಯೇ ವ್ಯಕ್ತಿಯೊಬ್ಬನ ಗುಣ, ನಡುವಳಿಕೆಗಳನ್ನ ನಾವು ಅವಲೋಕಿಸಿದಾಗ ಅವನು ಒಂದು ಉತ್ತಮ ಪುಸ್ತಕದಂತೆಯೇ ಕಂಡು ಬರುತ್ತಾನೆ.
ಪುಸ್ತಕಗಳನ್ನ ಓದುವ ಅಭ್ಯಾಸವಿಲ್ಲದವರು ಅಥವಾ ಓದಲು ಬಾರದವರು ತಾವು ಅಂತಹ ಯಾವ ಉತ್ತಮ ಪುಸ್ತಕವನ್ನು ಓದಿಲ್ಲವಲ್ಲ ಎಂದು ಬೇಸರಿಸಿಕೊಳ್ಳುವುದು ಬೇಡ. ಇತರರಿಗೆ ಮಾದರಿಯಾಗಬಲ್ಲ ಗೆಳೆಯನೊಬ್ಬ ನಿಮ್ಮೊಡನಿದ್ದರೆ ಅವನೇ ನೀವು ಓದಿರುವ, ಓದುತ್ತಿರುವ ಪುಸ್ತಕವಿದ್ದಂತೆ. ಉತ್ತಮ ಪುಸ್ತಕವೆಂದರೆ ಯಾವುದು? ಅಥವಾ ಉತ್ತಮ ವ್ಯಕ್ತಿ ಎಂದರೆ ಯಾರು?
ಯಾರು ತನ್ನ ಸ್ವಾರ್ಥ ಚಿಂತನೆಯನ್ನೇ ಮರೆತು, ಇತರರಿಗಾಗಿ ಬಾಳುತ್ತಾನೋ ಅವನೇ ಉತ್ತಮ ವ್ಯಕ್ತಿ. ಒಬ್ಬ ಉತ್ತಮ ವ್ಯಕ್ತಿ ನೂರಾರು ಉತ್ತಮ ಪುಸ್ತಕಗಳಿಗೆ ಸಮನಾಗಿ ಬಾಳಬಹುದು. ನಮಗೆ ಬೇಕಾದ ಪುಸ್ತಕವನ್ನು ನಾವು ಓದುವಂತೆ, ನಮ್ಮ ವ್ಯಕ್ತಿತ್ವಕ್ಕೆ ಸನಿಹವಾದ ವ್ಯಕ್ತಿಯೇ ನಮ್ಮ ಮಿತ್ರರಾಗಿರುತ್ತಾರೆ ಅದಕ್ಕೇ “ನೀನು ಯಾರು ಎಂಬುದನ್ನು ನಿನ್ನ ಮಿತ್ರರನ್ನು ನೋಡಿ ತಿಳಿಯಬಹುದು” ಎಂದು ಹೇಳಿರಬಹುದೇನೊ?
IAF ನೇಮಕಾತಿ 2026 | ಭಾರತೀಯ ವಾಯುಪಡೆಯಲ್ಲಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೃಹದೇಶ್ವರ ದೇವಾಲಯ ತಂಜಾವೂರು : ಸಾವಿರ ವರ್ಷದ ಇತಿಹಾಸ ಮತ್ತು ರಹಸ್ಯಗಳು : ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ |
ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ಪಡೆಯಲು ಪಕ್ಕದಲ್ಲಿ ಕಾಣುವ ವಾಟ್ಸಪ್ ಗ್ರೂಪ್ ಅಥವಾ ನಮ್ಮ ಚಾನೆಲ್ಲಿಗೆ ಜಾಯಿನ್ ಅಗಿರಿ |
