Telegram Join My Telegram WhatsApp Join My WhatsApp

ಮನಸ್ಸಿನ ನೆಮ್ಮದಿಯೇ ನಿಜವಾದ ಸಂಪತ್ತು

ಜೀವನದಲ್ಲಿ ಯಶಸ್ಸು ಪಡೆಯಲು ಹಾಗೂ ನೆಮ್ಮದಿಯಾಗಿರಲು ಕೇವಲ ಒಳ್ಳೆಯ ಉದ್ದೇಶಗಳಿದ್ದರೆ ಸಾಲುವುದಿಲ್ಲ. ಉತ್ತಮ ಅಭ್ಯಾಸಗಳು, ಆರೋಗ್ಯಕರ ವಾತಾವರಣ, ಸಮಯೋಚಿತ ನಿರ್ಧಾರಗಳು ಹಾಗೂ ಮನಸ್ಸಿಗೆ ಶಾಂತಿ ನೀಡುವ ಜನರೊಂದಿಗೆ ಬದುಕುವ ವಿವೇಕವೂ ಅಷ್ಟೇ ಮುಖ್ಯವಾಗಿದೆ. ಸರಳವಾಗಿ ಬದುಕುವುದು ದುರ್ಬಲತೆಯಲ್ಲ; ಅದು ನಮ್ಮ ಜೀವನವನ್ನು ನಾವು ಪ್ರಬುದ್ಧತೆಯಿಂದ ನಿಯಂತ್ರಿಸುತ್ತಿದ್ದೇವೆ ಎನ್ನುವ ಸಂಕೇತವಾಗಿದೆ.

ಮನಸ್ಸಿನ ನೆಮ್ಮದಿಯೇ ನಿಜವಾದ ಸಂಪತ್ತು

ಇಂದಿನ ಸಮಾಜದ ಹಲವರು ಕೇವಲ ಹಣ, ಆಸ್ತಿ ಮತ್ತು ಭೌತಿಕ ಸಂಪತ್ತಿನ ಗಳಿಕೆಯೇ ನಿಜವಾದ ಯಶಸ್ಸು ಎಂದು ನಂಬುತ್ತಾರೆ. ಆದರೆ ಇದು ತಪ್ಪು ಕಲ್ಪನೆಯಾಗಿದೆ. ಕೇವಲ ಸಂಪತ್ತನ್ನು ಗಳಿಸುವ ಮಾನವನ ದುರಾಸೆಯು; ಸಾವಿರಾರು ಜನರ ಜೀವನವನ್ನು ನೋವು, ಆಯಾಸ, ಆತಂಕ ಮತ್ತು ಅತೃಪ್ತಿಯಿಂದ ತುಂಬಿಸಿದೆ. ಜೀವನದ ನಿಜವಾದ ಸಂತೋಷವು ಹಣದಲ್ಲಿಲ್ಲ, ಮನಸ್ಸಿನ ನೆಮ್ಮದಿಯಲ್ಲಿದೆ ಎಂಬ ಸತ್ಯ ಕೆಲವರಿಗೆ ಕೊನೆಯ ಉಸಿರಿನವರೆಗೂ ಅರಿವಾಗುವುದೇ ಇಲ್ಲ. ಪರಿಣಾಮವಾಗಿ, ಅವರು ತಮ್ಮ ಅಮೂಲ್ಯವಾದ ಜೀವನವನ್ನು ಕೇವಲ ಹಣ ಸಂಪಾದನೆ, ಅನಗತ್ಯ ಸ್ಪರ್ಧೆ ಮತ್ತು ಅರ್ಥವಿಲ್ಲದ ಚಿಂತನೆಗಳಲ್ಲೇ ಕಳೆಯುತ್ತಾರೆ.

ಯಶಸ್ಸಿನ ಹೆಮ್ಮೆಯಲ್ಲಿ ಬದುಕಿದ ಅನೇಕರು, ತಮ್ಮ ಜೀವನದ ಅಂತಿಮ ಕ್ಷಣದಲ್ಲಿ ಪ್ರೀತಿಸುವ ಸಂಬಂಧಗಳಿಲ್ಲದೆ, ಏಕಾಂಗಿತನ ಮತ್ತು ಪಶ್ಚಾತ್ತಾಪದೊಂದಿಗೆ ಬದುಕಿನ ಅಂತ್ಯವನ್ನು ಎದುರಿಸುತ್ತಾರೆ. ಹಣವು ಸೌಕರ್ಯಗಳನ್ನು ಕೊಡಬಹುದು; ಆದರೆ ಪ್ರೀತಿ, ನೆಮ್ಮದಿ, ಆರೋಗ್ಯ ಮತ್ತು ಆತ್ಮೀಯತೆಯನ್ನು ನೀಡಲು ಸಾಧ್ಯವೇ ಇಲ್ಲ. ನಿಮ್ಮ ಒಳ್ಳೆಯತನವನ್ನು ಎಂದಿಗೂ ಕಳೆದುಕೊಳ್ಳಬೇಡಿ. ನಿಮ್ಮ ಸಮಯ, ನಂಬಿಕೆ, ಪ್ರೀತಿ ಮತ್ತು ದಯೆಯನ್ನು ಯಾರಿಗೆ ಮೀಸಲಿಡಬೇಕು ಎಂಬುದನ್ನು ವಿವೇಕದಿಂದ ನಿರ್ಧರಿಸಿ. ಪ್ರತಿಯೊಬ್ಬರೂ ನಿಮ್ಮ ಹೃದಯಕ್ಕೆ ಅರ್ಹರಲ್ಲ. ಸರಿಯಾದ ವ್ಯಕ್ತಿಗಳಿಗೆ ತೋರಿದ ನಂಬಿಕೆಯು ನಮ್ಮ ಜೀವನವನ್ನು ಸುಂದರಗೊಳಿಸುತ್ತದೆ.

ಸದಾ ಸಕಾರಾತ್ಮಕ ಚಿಂತನೆಯೊಂದಿಗೆ ಬದುಕುವವರು, ಇತರರ ಒಳಿತನ್ನೇ ಬಯಸುವವರು, ಮೂರ್ಖರಲ್ಲ. ಅವರ ಹೃದಯವು ನಿಷ್ಕಲ್ಮಷವಾಗಿರುವುದರಿಂದ, ತಮ್ಮಂತೆಯೇ ಎಲ್ಲರಲ್ಲೂ ಒಳ್ಳೆಯತನ ಮತ್ತು ಮಾನವೀಯತೆ ಇದೆ ಎಂದು ಅವರು ನಂಬುತ್ತಾರೆ. ತಮ್ಮ ಸ್ವಾರ್ಥಕ್ಕಿಂತ ಇತರರ ಶ್ರೇಯಸ್ಸಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ಪ್ರಪಂಚದಲ್ಲಿರುವ ಸೌಕರ್ಯಗಳು, ಸಂಪತ್ತು ಮತ್ತು ಅವಕಾಶಗಳು ಕೇವಲ ಕೆಲವರಿಗೆ ಮಾತ್ರವಲ್ಲ; ಎಲ್ಲರಿಗೂ ಸೇರಬೇಕಾದ್ದು, ನಮ್ಮಂತೆ ಎಲ್ಲರ ಬದುಕೂ ಸುಂದರವಾಗಲಿ ಎಂದು ಅವರು ಭಾವಿಸುತ್ತಾರೆ. ಆದ್ದರಿಂದ ತಮ್ಮ ಬಳಿ ಇರುವುದನ್ನು ಹಂಚಿಕೊಳ್ಳಲು, ಕಷ್ಟದಲ್ಲಿರುವವರಿಗೆ ನೆರವಾಗಲು ಮತ್ತು ಇತರರ ಸಂತೋಷದಲ್ಲಿಯೇ ತಮ್ಮ ಸಂತೋಷವನ್ನು ಕಾಣಲು ಪ್ರಯತ್ನಿಸುತ್ತಾರೆ.

ಆದರೆ ಇಂದಿನ ಜಗತ್ತಿನ ಕಹಿ ಸತ್ಯವೆಂದರೆ, ಇಂತಹ ಒಳ್ಳೆಯ ಮನಸ್ಸಿನವರ ನಿಸ್ವಾರ್ಥತೆಯನ್ನು ಎಲ್ಲರೂ ಅರ್ಥಮಾಡಿಕೊಳ್ಳುವುದಿಲ್ಲ. ಕೆಲವರು ಅವರ ದಯೆ, ನಂಬಿಕೆ ಮತ್ತು ಸಹಾಯ ಮಾಡುವ ಗುಣವನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಒಳ್ಳೆಯತನವನ್ನು ಎಂದಿಗೂ ಕಳೆದುಕೊಳ್ಳಬಾರದು, ಆದರೆ ಆ ಒಳ್ಳೆಯತನಕ್ಕೆ ಯಾರು ನಿಜವಾಗಿಯೂ ಅರ್ಹರು ಎಂಬುದನ್ನು ಅರಿತುಕೊಳ್ಳುವ ವಿವೇಕವನ್ನು ಬೆಳೆಸಿಕೊಳ್ಳಬೇಕು.

ನಾವು ಒಳ್ಳೆಯವರಾಗಿರುವಂತೆ, ಇತರರು ನಮ್ಮ ಒಳ್ಳೆಯತನವನ್ನು ಗುರುತಿಸಬೇಕು ಎಂದು ನಿರೀಕ್ಷಿಸುವುದು ತಪ್ಪು. ಹೆಚ್ಚಿನ ಜನರು ನಮ್ಮ ಒಳ್ಳೆಯ ಗುಣಗಳಿಂದ ಗುರುತಿಸದೇ, ಅವರ ಮನಸ್ಥಿತಿ, ಮತ್ತು ಅಗತ್ಯಗಳಿಗೆ ಅನುಗುಣವಾಗಿ ಅಳೆಯುತ್ತಾರೆ; ಮತ್ತೆ ಕಲವರು ತಮ್ಮ ಉದ್ದೇಶಗಳಿಗೆ ಅನುಕೂಲವಾಗಲೆಂದು ನಮ್ಮ ಗೆಳೆಯರಾಗುತ್ತಾರೆ. ಕೆಲವರು ತಮ್ಮ ಅನುಕೂಲಕ್ಕೆ ಅನುವಾಗಲೆಂದು ದೊಡ್ಡ ಬಳಗವನ್ನು ಸೃಷ್ಟಿಸಿಕೊಂಡಿರಬಹುದು. ಕೆಲವು ಸಂಬಂಧಗಳು ಕೇವಲ ಸ್ವಾರ್ಥದ ಅಡಿಪಾಯದ ಮೇಲೆ ನಿಂತಿರುತ್ತವೆ. ಅಂತಹ ವ್ಯಕ್ತಿಗಳನ್ನ ಮೊದಲೇ ಗ್ರಹಿಸಿ ಅಂತರ ಕಾಪಾಡಿಕೊಳ್ಳುವುದರಿಂದ ನಮ್ಮ ಮನಸ್ಸಿನ ನೆಮ್ಮದಿ ನಿಶ್ಚಿಂತವಾಗಿರುತ್ತದೆ.

ಮಾನವೀಯತೆಯೇ ಬದುಕಿನ ಮೌಲ್ಯʼ ಎಂದು ಭಾವಿಸುವವರ ಸ್ನೇಹವಲಯವು ಗಟ್ಟಿಯಾಗಿರುತ್ತದೆ. ಆ ಬಳಗದ ಪ್ರತಿಯೊಂದು ಸಂಬಂಧವೂ ವಿಶ್ವಾಸ, ಪ್ರಾಮಾಣಿಕತೆ ಮತ್ತು ಪರಸ್ಪರ ಗೌರವದ ಮೇಲೆ ಕಟ್ಟಲ್ಪಟ್ಟಿರುತ್ತದೆ. ಸಂಬಂಧಗಳ ಗುಣಮಟ್ಟದಲ್ಲಿಯೇ ಬದುಕಿನ ನಿಜವಾದ ಶ್ರೀಮಂತಿಕೆ ಅಡಗಿದೆ. ಸ್ವಾರ್ಥವಿಲ್ಲದ ಮನಸ್ಸುಳ್ಳವರು, ತಾವು ಪಡೆದುದರಲ್ಲಿಯೇ ತೃಪ್ತಿಯನ್ನು ಕಾಣತ್ತಾರೆ.

ಇತರರ ಶ್ರೇಯಸ್ಸನ್ನು ಬಯಸುವುದು ಹಾಗೂ ಸಹಾಯ ಮಾಡುವುದು ಶ್ರೇಷ್ಠ ಗುಣವಾಗಿದೆ. ಆದರೆ ನಮ್ಮ ದಯೆ, ಕರುಣೆ ಮತ್ತು ನಂಬಿಕೆಗೆ ಯಾರು ನಿಜವಾಗಿಯೂ ಅರ್ಹರು ಎಂಬುದನ್ನು ತಿಳಿದು ಗೆಳೆತನ ಮಾಡುವುದು ಪರಿಪಕ್ವತೆಯ ಲಕ್ಷಣವಾಗಿದೆ. ಕರುಣೆ, ಸಹನೆ ಮತ್ತು ದಯೆ ಎಂದಿಗೂ ದೌರ್ಬಲ್ಯದ ಸಂಕೇತಗಳಲ್ಲ; ಅವು ಉನ್ನತ ವ್ಯಕ್ತಿತ್ವದ ಪ್ರತಿಬಿಂಬಗಳಾಗಿವೆ.

ದುರಾಸೆ ಮತ್ತು ಸ್ವಾರ್ಥದಿಂದ ಬದುಕುವವರು ನಮ್ಮ ಒಳ್ಳೆಯತನವನ್ನು ತಮ್ಮ ಲಾಭಕ್ಕಾಗಿ ದುರುಪಯೋಗ ಮಾಡದಂತೆ ಎಚ್ಚರ ವಹಿಸಬೇಕು. ನಾವು ಒಳ್ಳೆಯತನವನ್ನು ಕಳೆದುಕೊಳ್ಳದೆ, ಜಾಗರೂಕತೆ ಮತ್ತು ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳುವುದೇ ಜೀವನದ ನಿಜವಾದ ಜಾಣ್ಮೆಯಾಗಿದೆ. ಒಳ್ಳೆಯವರಾಗಿ ಬದುಕಿ; ಆದರೆ ನಿಮ್ಮ ಒಳ್ಳೆಯತನವನ್ನು ಕಾಪಾಡಿಕೊಳ್ಳುವಷ್ಟು ಜಾಣ್ಮೆಯನ್ನೂ ಹೊಂದಿರಿ. ಏಕೆಂದರೆ ದಯೆಯ ಜೊತೆಗೆ ವಿವೇಕವೂ ಇದ್ದಾಗ ಮಾತ್ರ ಜೀವನ ಸಮತೋಲನದಿಂದ ಸಾಗುತ್ತದೆ.

ನಮ್ಮನ್ನು ಅರ್ಥಮಾಡಿಕೊಳ್ಳುವವರಿಗೆ ಹೆಚ್ಚು ವಿವರಣೆ ನೀಡುವ ಅಗತ್ಯವಿರುವುದಿಲ್ಲ. ನಮ್ಮನ್ನು ಅರ್ಥಮಾಡಿಕೊಳ್ಳಲು ಇಚ್ಛಿಸದವರು, ಎಷ್ಟು ವಿವರಿಸಿದರೂ ಅರ್ಥ ಮಾಡಿಕೊಳ್ಳುವುದಿಲ್ಲ. ಈ ಸತ್ಯವನ್ನು ಅರಿತಷ್ಟೂ ನಮ್ಮ ಚಿಂತೆಗಳು ಕಡಿಮೆಯಾಗುತ್ತವೆ. ನಮ್ಮವರು, ನಮ್ಮವರಲ್ಲದವರು ಎನ್ನುವ  ವ್ಯತ್ಯಾಸ ಅರಿವಾಯಿತೆಂದರೆ ನಾವು ಬದುಕಿನಲ್ಲಿ ಗೆದ್ದೇವೆಂದೆ ಅರ್ಥ. ಆಗ ನಾವು ಸುಲಭವಾಗಿ ಮೋಸ ಹೋಗಲಾರೆವು. ಅನಾವಶ್ಯಕವಾಗಿ ಸಂಕಟಕ್ಕೆ ಈಡಾಗಲಾರೆವು.

ಪ್ರತಿಯೊಬ್ಬರ ನಗುವಿನ ಹಿಂದೆ ನಿಷ್ಕಪಟ ಮನಸ್ಸೇ ಇರುತ್ತದೆ ಎಂದು ಭಾವಿಸಬಾರದು. ಹಾಗೆಯೇ ಪ್ರತಿಯೊಬ್ಬರೂ ಎಲ್ಲ ಸಂದರ್ಭದಲ್ಲೂ ಎಲ್ಲರೊಂದಿಗೆ ಪ್ರಾಮಾಣಿಕರಾಗಿರುತ್ತಾರೆ ಎನ್ನುವುದೂ ಸತ್ಯವಲ್ಲ. ಕೆಲವರ ನಿಷ್ಠೆ ಮತ್ತು ಪ್ರಾಮಾಣಿಕತೆಯು ಅವರ ಅಗತ್ಯಗಳು, ಅನುಕೂಲಗಳು ಹಾಗೂ ನಿರ್ದಿಷ್ಟ ಸಂದರ್ಭಗಳವರೆಗೆ ಮಾತ್ರ ಸೀಮಿತವಾಗಿರಬಹುದು. ಪರಿಸ್ಥಿತಿ ಬದಲಾದಂತೆ ಅವರ ವರ್ತನೆಯೂ ಬದಲಾಗಬಹುದು. ಕೆಲವರ ಗೆಳೆತನವು ಸ್ವಾರ್ಥದಿಂದ ಕೂಡಿರಲೂಬಹುದು.ಹೊಸ ಗೆಳೆಯರನ್ನ ಸಂಪಾದಿಸುವಾಗ ಎಚ್ಚರವಹಿಸಿ, ನಿರ್ಧರಿಸಿ.

ನಿಮ್ಮ ಜೀವನದ ಎಲ್ಲ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೊದಲು, ಅವರ ಉದ್ದೇಶ ಮತ್ತು ಮನಸ್ಥಿತಿಯನ್ನು ಅರಿತುಕೊಳ್ಳಲು ಪ್ರಯತ್ನಿಸಿ. ನಿಮ್ಮೊಂದಿಗೆ ಆತ್ಮೀಯವಾಗಿ ವರ್ತಿಸುವ ಪ್ರತಿಯೊಬ್ಬರೂ ನಿಮ್ಮ ಒಳಿತನ್ನೇ ಬಯಸುತ್ತಾರೆ ಎಂದು ನಂಬುವುದು ಜಾಣತನವಲ್ಲ. ಕೆಲವರು ನಿಮ್ಮ ವಿಶ್ವಾಸವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ.

ಜೀವನದಲ್ಲಿ ಒಳ್ಳೆಯವರಾಗಿರುವುದು ಮುಖ್ಯ. ಆದರೆ ಎಲ್ಲರನ್ನೂ ಒಂದೇ ರೀತಿಯಲ್ಲಿ ನಂಬುವುದು ವಿವೇಕವಲ್ಲ. ಕೆಲವೊಮ್ಮೆ ನಮ್ಮ ಮನಸ್ಸಿನ ಶಾಂತಿ, ಆತ್ಮಗೌರವ ಮತ್ತು ಭವಿಷ್ಯವನ್ನು ಕಾಪಾಡಿಕೊಳ್ಳಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೊರನೋಟಕ್ಕೆ ಅದು ಕಠೋರವಾಗಿ ಕಂಡರೂ, ಅದು ನಮ್ಮ ಒಳಿತಿಗಾಗಿ ಅಗತ್ಯವಾಗಿರಬಹುದು.

ನಮ್ಮ ಸುತ್ತಲಿನವರು ಸಾಮಾನ್ಯ ವಿವೇಕವೂ ಇಲ್ಲದವರಾಗಿದ್ದರೆ ಬದುಕು ಒಂದು ಭಾರವಾದ ಹೊಣೆಗಾರಿಕೆಯಂತೆ ಭಾಸವಾಗುತ್ತದೆ. ʼನಮ್ಮಂತೆಯೇ ಎಲ್ಲರುʼ ಎಂದು ಚಿಂತಿಸುವುದೇ ವಿವೇಕʼ. ಕೆಲವರಲ್ಲಿ ವಿವೇಕದ ಕೊರತೆ ಅಪಾರವಾಗಿರುತ್ತದೆ. ಅಂತವರಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು. ನೀವು ಏಕಾಂತದಲ್ಲಿದ್ದಾಗ ಅನುಭವಿಸುವ ನೋವಿಗಿಂತ ಅವಿವೇಕಿಗಳೊಡನೆ ಇದ್ದಾಗ ಉಂಟಾಗುವ ನೋವೇ ಅಧಿಕವಾಗಿರುತ್ತದೆ. ನಿಮ್ಮ ಗೆಳೆಯರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎನ್ನುವುದಕ್ಕಿಂತ ಎಂತಹ ಸ್ನೇಹಿತರು ನಿಮ್ಮ ಜೊತೆಯಲ್ಲಿದ್ದಾರೆ ಎಂದು ಯೋಚಿಸಿ.

ನೀವು ಯಾವಾಗಲೂ ಕೆಲಸದಲ್ಲೇ ನಿರತರಾಗಿದ್ದರೆ, ಜೀವನದ ಯಾವುದೋ ಅತ್ಯಂತ ಮುಖ್ಯವಾದ ವಿಷಯವನ್ನು ಕಳೆದುಕೊಂಡಿದ್ದೀರೆಂದೇ ಎಂದರ್ಥ. ಬದುಕು ಕೇವಲ ದುಡಿಯುವುದು, ಮೋಜು ಮಾಡುವುದು ಮಾತ್ರವಲ್ಲ. ಯಾರು ನಿಮಗಾಗಿ ತಮ್ಮ ಸರ್ವಸ್ವವನ್ನೂ ತೊರೆದು ನಿಮ್ಮೊಡನೆ ಬಾಳಲು ಬಂದಿರುವರೋ, ಯಾರು ನಿಮ್ಮ ಯಶಸ್ಸಿಗೆ ತಮ್ಮ ಜೀವಿತವನ್ನೇ ಧಾರೆ ಎರೆದಿರುವರೋ ಅವರ ಭಾವನೆಗಳನ್ನು ಗುರುತಿಸಿ, ಅವರಿಗೆ ಜೊತೆಯಾಗಿ ನಿಲ್ಲಿ, ಬೆಂಗಾವಲಾಗಿರಿ. ಪರಸ್ಪರ ವಿಶ್ವಾಸವೇ ನೀವು ಮತ್ತೊಬ್ಬರಿಗೆ ನೀಡುವ ಅತಿ ದೊಡ್ಡ ಕಾಣಿಕೆಯಾಗಿದೆ. ಪ್ರೀತಿಪಾತ್ರರನ್ನ ದೂರಮಾಡಿಕೊಂಡು ಸಾಧಿಸಿದ ಯಾವೊಂದು ಯಶಸ್ಸೂ ದೊಡ್ಡ ಸಾಧನೆಯಾಗಲಾರದು.

ಕೆಲವೊಮ್ಮೆ ಏನನ್ನೂ ಯೋಚಿಸದೆ, ಆತುರದಲ್ಲಿ ಪ್ರತಿಕ್ರಿಯಿಸುವುದರಿಂದ ಕೆಲವೊಂದು ಸಮಸ್ಯೆಗಳು ದೊಡ್ಡದಾಗುತ್ತವೆ. ಎಲ್ಲದಕ್ಕೂ ಪ್ರತಿಕ್ರಿಯಿಸುವ ನಿಮ್ಮ ಅಭ್ಯಾಸವನ್ನು ಅವಲೋಕಿಸಿ, ಸಾಧ್ಯವಾದಷ್ಟೂ ಪ್ರತಿಕ್ರಿಯಿಸುವುದನ್ನ ಕಡಿಮೆ ಮಾಡಿ. ಇದರಿಂದ ನಿಮ್ಮ ಮನಸ್ಸಿನ ನೆಮ್ಮದಿ ಹಾಗು ನಿಮ್ಮೊಡನಿರುವ ವ್ಯಕ್ತಿಗಳ ಬದುಕು ಸುಂದರವಾಗುತ್ತದೆ. ಕೆಲವೊಂದು ಸಮಸ್ಯೆಗಳು ಕೇವಲ ನಿರ್ಲಕ್ಷದಿಂದಲೇ ಮಾಯವಾಗಿಬಿಡುತ್ತವೆ.

ನಿಮ್ಮ ದೇಹದ ಅಗತ್ಯತೆಗಳನ್ನು ಅರಿಯಿರಿ. ದಣಿವಾದಾಗ ಸೂಕ್ತ ವಿಶ್ರಾಂತಿ ಪಡೆಯಿರಿ. ಮನಸ್ಸು ಕೆಲವೊಮ್ಮೆ ಇಲ್ಲದ ಭಯಗಳನ್ನೂ ಆಹ್ವಾನಿಸುತ್ತದೆ. ನಿಮ್ಮ ದೇಹಕ್ಕೆ ಬೇಕೆನಿಸಿದ ಆಹಾರವನ್ನು ನೀಡಿ. ಶಾಂತಿ, ನೆಮ್ಮದಿ, ಸಂತಸದಿಂದ ಪ್ರೀತಿ ಪಾತ್ರರಾದವರೊಡನೆ ಬದುಕುವುದೇ, ಜೀವನದ ಮೂಲ ಉದ್ದೇಶವಾಗಿದೆ.

ಬದುಕಿನಲ್ಲಿ ಶಿಸ್ತು ರೂಡಿಯಾಗಬೇಕೆಂದರೆ ಗೊಂದಲಮಯ ದಿನಚರಿಯಿಂದ ಹೊರ ಬರಲೇಬೇಕು. ಶಿಸ್ತು ಬದುಕಿನ ಅನೇಕ ವಿಷಯಗಳನ್ನ ಕಲಿಸುತ್ತದೆ. ಯಶಸ್ವೀ ವ್ಯಕ್ತಿಗಳೆಲ್ಲರೂ ಶಿಸ್ತಿನ ಸಿಪಾಯಿಗಳು ಹಾಗೂ ಬದುಕನ್ನ ಶ್ರೇಷ್ಟವೆಂದು ಭಾವಿಸಿದವರು. ನಿರ್ಲಕ್ಷ, ಅಸಡ್ಡೆ, ಸೋಮಾರಿತನ ನಮ್ಮ ಜೀವನದಿಂದ ದೂರವಾದಂತೆಲ್ಲ ನಾವು ಶಿಸ್ತಿನ ಸಿಪಾಯಿಗಳಾಗುತ್ತೇವೆ. ನಮಗರಿಯದೇ ಇತರರು ನಮ್ಮನ್ನು ಗಮನಿಸುತ್ತಾರೆ. ಶಿಸ್ತು ಎಲ್ಲರಿಂದಲೂ ಪ್ರಶಂಸಿಸಲ್ಪಡುವ ಅತಿದೊಡ್ಡ ಶಕ್ತಿಯಾಗಿದೆ. ನಿಮ್ಮ ದೈನಂದಿನ ಅಭ್ಯಾಸಗಳು ಬದಲಾಗದಿದ್ದರೆ, ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ.

ನಮ್ಮಲ್ಲಿರುವ ಶಕ್ತಿ, ಸಮಯ ಮತ್ತು ಮನಸ್ಸನ್ನು ಹೀರಿಕೊಳ್ಳುವ ವ್ಯಕ್ತಿಗಳು ಅಥವಾ ಕೆಟ್ಟ ಅಭ್ಯಾಸಗಳಿಂದ ಸಾಧ್ಯವಾದಷ್ಟೂ ದೂರವಿರಿ. ಮೋಜಿಗಾಗಿ ಆರಂಭವಾದ ದುರಭ್ಯಾಸವು ನಮ್ಮ ಜೀವಿತವನ್ನೆ ಕೊನೆಗಾಣಿಸಬಹುದು. ತಪ್ಪು ನಿರ್ಧಾರಕ್ಕಿಂತಲೂ, ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡುವುದು ಕೆಲವೊಮ್ಮೆ ಹೆಚ್ಚಿನ ನಷ್ಟವನ್ನು ಉಂಟು ಮಾಡಬಲ್ಲದು.

ನಿಮ್ಮ ಬಗ್ಗೆ, ನಿಮ್ಮವರೊಡನೆ, ನೀವು ನಿರಂತರವಾಗಿ ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತಲಿದ್ದರೆ ನೀವು ತಪ್ಪು ಜನರ ನಡುವೆ ಇದ್ದೀರಿ ಎಂಬುದರ ಸೂಚನೆಯಾಗಿದೆ. ಅಂತಹ ವ್ಯಕ್ತಿಗಳಿಂದ ದೂರವಾದಂತೆಲ್ಲ ನಿಮ್ಮ ಬದುಕು ಸಹನೀಯವಾಗುವುದು. ಇಷ್ಟಪಡುವವರು ನಿಮ್ಮನ್ನು ಪ್ರಶ್ನಿಸುವುದಿಲ್ಲ, ಸಮರ್ಥಿಸಿಕೊಳ್ಳುತ್ತಾರೆ. ಸರಳ ಜೀವನವೆಂದರೆ ಚಿಕ್ಕ ಜೀವನವಲ್ಲ. ಅದು ನಿಮ್ಮ ನಿಯಂತ್ರಣದಲ್ಲಿರುವ, ಶಾಂತಿ ಮತ್ತು ನೆಮ್ಮದಿ ತುಂಬಿರುವ ಸಂತಸದ ಜೀವನ.

ನಿಮ್ಮ ಸಂಬಂಧ ನಿಜವಾದ ಪ್ರೀತಿಯದೇ ? ತಿಳಿಯುವ ಕೆಲವು ಲಕ್ಷಣಗಳು : ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ
ಬದುಕಿನ ನಿಜವಾದ ಆಶೀರ್ವಾದಗಳು. ನಿಮ್ಮ ಬಳಿ ಇವುಗಳಿದ್ದರೆ ನೀವು ಅದೃಷ್ಟವಂತರು : ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Comment