ತಂಜಾವೂರು : ಬೃಹದೇಶ್ವರ ದೇವಾಲಯ
ರೇಷ್ಮೆ–ಸಂಗೀತ ಪರಂಪರೆಯವರೆಗೆ ಒಂದು ಸಾಂಸ್ಕೃತಿಕ ಪ್ರಯಾಣ
ತಮಿಳುನಾಡು ರಾಜ್ಯವು “ದೇವಾಲಯಗಳ ನಾಡು” ಎಂದು ಪ್ರಸಿದ್ಧಿಯಾಗಿದ್ದು, ತನ್ನ ಆಧ್ಯಾತ್ಮಿಕ ಪರಂಪರೆ, ದ್ರಾವಿಡ ಶೈಲಿಯ ವಾಸ್ತುಶಿಲ್ಪ ಮತ್ತು ಸಾವಿರಾರು ಪುರಾತನ ದೇವಾಲಯಗಳಿಂದ ವಿಶಿಷ್ಟವಾಗಿದೆ. ತಂಜಾವೂರಿನ ಬೃಹದೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು; ತಂಜಾವೂರು ಐತಿಹಾಸಿಕ ಮತ್ತು ಸಾಂಸ್ಕೃತಿಕ ನಗರವೆಂದು ಪ್ರಸಿದ್ಧವಾಗಿದೆ. ಇಲ್ಲಿ ಪರಶಿವನನ್ನು ಮಹಾಲಿಂಗದ ರೂಪದಲ್ಲಿ ಆರಾಧಿಸಲಾಗುತ್ತದೆ. ಈ ದೇವಾಲಯವನ್ನು ರಾಜರಾಜ ಚೋಳರು ನಿರ್ಮಿಸಿದ್ದು, ಈ ಭವ್ಯ ಮಹಾ ಶಿವಲಿಂಗವು ಸುಮಾರು 8.7 ಮೀಟರ್ ಎತ್ತರವಾಗಿದೆ. ದೇವಸ್ಥಾನದ ಆವರಣದಲ್ಲಿ ನಂದಿ, ಅಮ್ಮನ್ (ಪಾರ್ವತಿ), ಗಣೇಶ, ಸುಬ್ರಹ್ಮಣ್ಯ ಹಾಗೂ ದಕ್ಷಿಣಾಮೂರ್ತಿ ಮುಂತಾದ ದೇವತೆಗಳ ಸನ್ನಿಧಾನಗಳಿವೆ.
ಬೃಹದೇಶ್ವರ ದೇವಸ್ಥಾನವು ತಮಿಳುನಾಡಿನ ತಂಜಾವೂರಿನಲ್ಲಿದ್ದು, ಕಾವೇರಿ ನದಿಯ ದಕ್ಷಿಣ ತೀರದಲ್ಲಿ ಇದನ್ನ ನಿರ್ಮಿಸಲಾಗಿದೆ. ಈ ದೇವಸ್ಥಾನವು ಪ್ರಸಿದ್ಧ ಹಿಂದೂ ದೇವಾಲಯವಾಗಿದ್ದು ಇದನ್ನು ಕ್ರಿ.ಶ. 1003ರಿಂದ 1010ರ ಅವಧಿಯಲ್ಲಿ ಚೋಳ ಚಕ್ರವರ್ತಿ ರಾಜರಾಜ (ಪ್ರಥಮ) ಅವರಿಂದ ಈ ನಿರ್ಮಿಸಲಾಯಿತು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ.
ಈ ದೇವಾಲಯವನ್ನು ದ್ರಾವಿಡ ವಾಸ್ತುಶಿಲ್ಪದ ಶಿಖರವೆಂದು ಪರಿಗಣಿಸಲಾಗುತ್ತದೆ. ಇದರ ಮುಖ್ಯ ಗೋಪುರ (ವಿಮಾನ) ಎತ್ತರವು ಸುಮಾರು 216 ಅಡಿ (66 ಮೀ) ಇದೆ. ಹಾಗೂ ಈ ಗೋಪುರದ ಮೇಲ್ಭಾಗದಲ್ಲಿ ಒಂದೇ ಕಲ್ಲಿನಿಂದ ತಯಾರಿಸಲಾದ ಸುಮಾರು 80 ಟನ್ ತೂಕದ ಕುಂಭದಿಂದ (ಕ್ಯಾಪ್‌ಸ್ಟೋನ್) ಅಲಂಕರಿಸಲಾಗಿದೆ. ಈ ದೇವಾಲಯವು ಶ್ರೇಷ್ಟ ಶಿಲ್ಪಕಲೆಯ ಕಾರಣದಿಂದ ಸುಪ್ರಸಿದ್ಧವಾಗಿದೆ.
ಮಂದಿರದ ಪ್ರವೇಶದ್ವಾರದಲ್ಲಿರುವ ಏಕಶಿಲಾ ನಂದಿಯ ಪ್ರತಿಮೆಯು ಸುಮಾರು 16 ಅಡಿ (4.9 ಮೀ) ಉದ್ದ ಮತ್ತು 13 ಅಡಿ (4 ಮೀ) ಎತ್ತರ ಹೊಂದಿದೆ. ಈ ದೇವಾಲಯವನ್ನು ಸುಮಾರು 130,000 ಟನ್ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದ್ದು, ಯಾವುದೇ ಸಿಮೆಂಟ್ ಬಳಕೆ ಮಾಡದೇ ಇಂಟರ್‌ಲಾಕಿಂಗ್ ವ್ಯವಸ್ತೆಯ ವಿಧಾನದಿಂದ ನಿರ್ಮಿಸಲಾಗಿದೆ.
ಈ ದೇವಾಲಯದ ಮುಂಭಾಗದ ಅಂಗಣವು 40 ಏಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿದೆ. ಮುಖ್ಯ ದೇವಾಲಯವು ಒಳಗಿನ ಚೌಕದಲ್ಲಿ ಪ್ರಧಾನ ಸ್ಥಾನ ಹೊಂದಿದೆ. ಈ ದೇವಸ್ಥಾನವು ಇಂದಿಗೂ ಪೂಜೆಗೆ ಬಳಸಲಾಗುತ್ತಿದ್ದು, ಪ್ರಮುಖ ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿದೆ. ಈ ದೇವಾಲಯವನ್ನು ʼದಕ್ಷಿಣದ ಮೇರು ಪರ್ವತʼ ಎಂದು ಕರೆಯುತ್ತಾರೆ. ಭವ್ಯವಾದ ಇತಿಹಾಸವುಳ್ಳ, ಈ ದೇವಾಲಯವು ತಮಿಳುನಾಡಿನ ಅತ್ಯಂತ ಹೆಚ್ಚು ಭೇಟಿ ನೀಡಲಾಗುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಭವ್ಯವಾದ ಇತಿಹಾಸವನ್ನ ಒಂದು ಮಾತಿನಲ್ಲಿ, ಒಂದೆರಡು ವಾಕ್ಯದಲ್ಲಿ, ಒಂದು ವಿವರಣೆಯಿಂದ ಹೇಳಲು ಸಾಧ್ಯವಿಲ್ಲ. ಈ ಮಹಾಕಾವ್ಯಮಯ ದೇವಾಲಯವನ್ನು ಸಂಪೂರ್ಣವಾಗಿ ಸುಮಾರು 1,30,000 ಟನ್‌ಗಳ ಗ್ರಾನೈಟ್ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಆಶ್ಚರ್ಯದ ಸಂಗತಿ ಏನೆಂದರೆ, ಈ ಪ್ರದೇಶದ 100 ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ಗ್ರಾನೈಟ್ ಗಣಿಗಳು ಇಲ್ಲ. ಹಾಗಾದರೆ ಇಷ್ಟೊಂದು ಭಾರವಾದ ಕಲ್ಲುಗಳನ್ನು 11ನೇ ಶತಮಾನದಲ್ಲೇ ಹೇಗೆ ಸಾಗಿಸಿ ಇಲ್ಲಿ ತಲುಪಿಸಿದರು ಎಂಬುದು ಇಂದಿಗೂ ಇತಿಹಾಸದ ಒಂದು ಮಹತ್ವದ ರಹಸ್ಯವಾಗಿಯೇ ಉಳಿದಿದೆ.
ಈ ವಿಷಯವನ್ನು ವಿಶ್ಲೇಷಿಸಿದಾಗ, ಆ ಕಾಲದ ಜನರ ತಾಂತ್ರಿಕ ಜ್ಞಾನ, ಯೋಜನಾ ಸಾಮರ್ಥ್ಯ ಮತ್ತು ಸಂಘಟನಾ ಕೌಶಲ್ಯ ಎಷ್ಟು ಉನ್ನತ ಮಟ್ಟದಲ್ಲಿತ್ತೆಂಬುದು ಸ್ಪಷ್ಟವಾಗುತ್ತದೆ. ಯಂತ್ರೋಪಕರಣಗಳೇ ಇಲ್ಲದ ಆ ಕಾಲದಲ್ಲಿ, ಅವರು ಮರದ ರೋಲರ್‌ಗಳು, ರಥಗಳು, ಪ್ರಾಣಿಗಳ ಸಹಾಯ ಮತ್ತು ಮಾನವ ಶ್ರಮವನ್ನು ಬಳಸಿಕೊಂಡು ಕಲ್ಲುಗಳನ್ನು ಸಾಗಿಸಿದ್ದರೆಂಬ ಊಹೆಗಳಿವೆ. ಜೊತೆಗೆ, ನದಿಗಳ ಮಾರ್ಗವನ್ನೂ ಬಳಸಿಕೊಂಡಿರಬಹುದು ಎಂಬ ಅಭಿಪ್ರಾಯವೂ ಇದೆ. ಈ ಎಲ್ಲವನ್ನು ಗಮನಿಸಿದರೆ, ಇದು ಕೇವಲ ದೇವಾಲಯವಲ್ಲ, ಆ ಕಾಲದ ಇಂಜಿನಿಯರಿಂಗ್ ಮತ್ತು ಮಾನವ ಸಾಮರ್ಥ್ಯದ ಅದ್ಭುತ ಸಾಕ್ಷಿಯಾಗಿದೆ. ಈ ದೇವಸ್ಥಾನದ ಗೋಪುರದ ವಿನ್ಯಾಸ ಮತ್ತು ಎತ್ತರದ ಕಾರಣದಿಂದ ಮಧ್ಯಾಹ್ನದ ಸಮಯದಲ್ಲಿ ಅದರ ನೆರಳು ಸ್ಪಷ್ಟವಾಗಿ ಕಾಣಿಸುವುದಿಲ್ಲ ಎಂದು ಜನರು ನಂಬುತ್ತಾರೆ. ಇದು ದೇವಸ್ಥಾನದ ವಿಶೇಷತೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ಇದಲ್ಲದೆ ತಂಜಾವೂರು ಚಿತ್ರಕಲೆಗೆ ಪ್ರಸಿದ್ಧಿಯಾಗಿದೆ. ತಂಜಾವೂರು ಚಿತ್ರಕಲೆಯು (Tanjore painting) ಹಳೆಯ ಸಾಂಪ್ರದಾಯಿಕ ಕಲಾಶೈಲಿ ಆಗಿದ್ದು ಈ ಚಿತ್ರಕಲೆಗಳನ್ನ ಮುಖ್ಯವಾಗಿ ಪಾರಂಪರಿಕ ಕಲಾವಿದರು (old traditional artists / ಕುಟುಂಬ ಕಲಾವಿದರು) ಮಾಡುತ್ತಾರೆ. ಇದು ಪೀಳಿಗೆಯಿಂದ ಪೀಳಿಗೆಗೆ ಬಂದಿರುವ ಕಲಾ ಪರಂಪರೆಯಾಗಿದೆ. ಈಗಲೂ ಈ ಕಲೆಯನ್ನು ಇಂದಿನ ಕಲಾವಿದರು ಹೊಸ ರೂಪದಲ್ಲಿ ಮುಂದುವರೆಸುತ್ತಿದ್ದಾರೆ. ಚಿತ್ರಗಳಲ್ಲಿ ಬಂಗಾರದ ಹಾಳೆ ಬಳಸಿ ಅಲಂಕಾರ ಮಾಡಲಾಗುತ್ತದೆ ಮತ್ತು ದೇವತೆಗಳ ಚಿತ್ರಣವೇ ಪ್ರಮುಖ ವಿಷಯವಾಗಿರುತ್ತದೆ. ಈಗಲೂ ಈ ಚಿತ್ರಗಳನ್ನು ಮಾಡಿಕೊಡಲಾಗುತ್ತದೆ.
ಸರಸ್ವತಿ ಮಹಲ್ ಗ್ರಂಥಾಲಯ : ಏಷ್ಯಾದಲ್ಲಿನ ಅತ್ಯಂತ ಹಳೆಯ ಗ್ರಂಥಾಲಯಗಳಲ್ಲಿ ಒಂದಾಗಿದ್ದು, ಈ ಗ್ರಂಥಾಲಯವು ಅಪರೂಪವಾದ ತಾಳೆ ಎಲೆ ಹಸ್ತಪ್ರತಿಗಳನ್ನು ಹೊಂದಿದೆ. (palm-leaf manuscripts) ಈ ಹಸ್ತಪ್ರತಿಗಳಲ್ಲಿ ಇತಿಹಾಸ, ಸಾಹಿತ್ಯ, ವೈದ್ಯಕೀಯ, ಖಗೋಳಶಾಸ್ತ್ರ, ಧರ್ಮಶಾಸ್ತ್ರ ಇತ್ಯಾದಿ ವಿಷಯಗಳ ಜ್ಞಾನಭಂಡಾರವೇ ಅಡಗಿದೆ.
ತಂಜಾವೂರು ರಾಜ ಮಹಲ್ (Thanjavur Royal Palace) : ಇದೊಂದು ಮರಾಠರ ಆಡಳಿತದ ಸಮಯದಲ್ಲಿನ ಅರಮನೆಯ ಸಂಕೀರ್ಣವಾಗಿದ್ದು, ಇದು ಅನೇಕ ಬೆಳ್ಳಿ–ಕಂಚಿನ (ಬ್ರಾಂಜ್) ಮೂರ್ತಿಗಳು, ಹಸ್ತಪ್ರತಿಗಳು ಮತ್ತು ಐತಿಹಾಸಿಕ ವಸ್ತುಗಳ ವಿಶಾಲ ಸಂಗ್ರಹವನ್ನ ಒಳಗೊಂಡಿದೆ. ಇಲ್ಲಿ ದರ್ಬಾರ್ ಹಾಲ್ ಕೂಡ ಇದ್ದು, ಈ ರಾಜ ಮಹಲನ್ನು ಅಂದು ಆಡಳಿತ ನಡೆಸುತ್ತಿದ್ದ ನಾಯಕ್ ರಾಜರು ಆರಂಭದಲ್ಲಿ ನಿರ್ಮಿಸಿದರು ಎಂದು ಇತಿಹಾಸದ ಪುಟಗಳು ಹೇಳುತ್ತವೆ. 17ನೇ ಶತಮಾನದ ನಂತರ ಮರಾಠಾ ರಾಜವಂಶದವರು ಈ ರಾಜ ಮಹಲನ್ನು ವಿಸ್ತರಿಸಿ ಅಭಿವೃದ್ಧಿಪಡಿಸಿದರು.
ತಂಜಾವೂರು ನಗರವು ಕೇವಲ ಬೃಹದೇಶ್ವರ ದೇವಾಲಯಕ್ಕಾಗಿ ಮಾತ್ರವಲ್ಲದೆ, ತನ್ನ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯಿಂದಲೂ ಕೂಡ ಪ್ರಸಿದ್ಧವಾಗಿದೆ. ತಂಜಾವೂರನ್ನು “ತಮಿಳುನಾಡಿನ ಅನ್ನದ ಬಟ್ಟಲು” ಎಂದು ಕರೆಯುತ್ತಾರೆ. ಏಕೆಂದರೆ ಕಾವೇರಿ ಡೆಲ್ಟಾದ ಫಲವತ್ತಾದ ಭೂಮಿಯಲ್ಲಿ ಅಕ್ಕಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. ಜೊತೆಗೆ ತಂಜಾವೂರು ಚಿತ್ರಕಲೆ, ತಲಯಾಟಿ ಗೊಂಬೆಗಳು, ಕಂಚಿನ ಮೂರ್ತಿಗಳು ಮತ್ತು ತಂಜಾವೂರು ವೀಣೆ ಮೊದಲಾದ ಕಲೆಗಳು ಇಲ್ಲಿ ಪ್ರಸಿದ್ಧವಾಗಿವೆ.
ತಂಜಾವೂರು ವೀಣೆ (Thanjavur Veena) ಭಾರತದ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ತಂತಿ ವಾದ್ಯಗಳಲ್ಲಿ ಒಂದಾಗಿದೆ. ಈ ವಾದ್ಯವನ್ನು ತಂಜಾವೂರು ಪ್ರದೇಶದಲ್ಲಿ ಕೈಯಿಂದ ತಯಾರಿಸಲಾಗುತ್ತದೆ ಮತ್ತು ಕರ್ನಾಟಕ ಸಂಗೀತದಲ್ಲಿ (Carnatic music) ಪ್ರಮುಖ ಸ್ಥಾನವನ್ನು ಹೊಂದಿದೆ. ಈ ವೀಣೆಯನ್ನು ಸಾಮಾನ್ಯವಾಗಿ ಹಲಸಿನ ಮರದಿಂದ (ಜಾಕ್‌ಫ್ರೂಟ್) ನಿರ್ಮಿಸಲಾಗುತ್ತದೆ ಮತ್ತು ಅದಕ್ಕೆ ವಿಶೇಷವಾದ ನಾದ ಗುಣಮಟ್ಟ (sound quality) ಇರುತ್ತದೆ.
ತಂಜಾವೂರಿನ ವೀಣೆಯು ತನ್ನ ಸೂಕ್ಷ್ಮ ಕೈಗಾರಿಕೆ ಮತ್ತು ಸಾಂಪ್ರದಾಯಿಕ ವಿನ್ಯಾಸಕ್ಕಾಗಿ ಪ್ರಸಿದ್ಧವಾಗಿದೆ. ಇದನ್ನು ತಯಾರಿಸಲು ಅತ್ಯಂತ ನಿಖರವಾದ ಕೌಶಲ್ಯ ಬೇಕಾಗುತ್ತದೆ, ಆದ್ದರಿಂದ ಇದನ್ನು ಕಲಾವಿದರ ಪರಂಪರೆಯ ಗುರುತು ಎಂದು ಪರಿಗಣಿಸಲಾಗುತ್ತದೆ. ಇದು ಭಾರತೀಯ ಶಾಸ್ತ್ರೀಯ ಸಂಗೀತದ ಆಳವಾದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
|
|
ತಂಜಾವೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಭಾರತದಲ್ಲಿನ ಪ್ರಮುಖ ರೇಷ್ಮೆ ನೇಕಾರಿಕಾ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿವೆ. ಇಲ್ಲಿ ಕೈಮಗ್ಗ (handloom) ರೇಷ್ಮೆ ಸೀರೆಗಳ ತಯಾರಿಕೆ ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಸ್ಥಳೀಯ ನೇಕಾರರು ತಮ್ಮ ಪರಂಪರೆಯ ಕೌಶಲ್ಯವನ್ನು ಬಳಸಿ ಅತ್ಯಂತ ಸೂಕ್ಷ್ಮ ಮತ್ತು ಸುಂದರ ರೇಷ್ಮೆ ಸೀರೆಗಳನ್ನು ತಯಾರಿಸುತ್ತಾರೆ. ಈ ಸೀರೆಗಳು ತಮ್ಮ ಗುಣಮಟ್ಟ, ನಯವಾದ ತಂತು ಮತ್ತು ವಿಶಿಷ್ಟ ವಿನ್ಯಾಸಗಳಿಗಾಗಿ ಬಹಳ ಪ್ರಸಿದ್ಧವಾಗಿವೆ.
ವಿಶೇಷವಾಗಿ ತಿರುವುಭುವನಂ ರೇಷ್ಮೆ (Thirubhuvanam Silk) ತಂಜಾವೂರು ಪ್ರದೇಶದ ಹೆಮ್ಮೆಯ ಉತ್ಪನ್ನವಾಗಿದೆ. ಈ ರೇಷ್ಮೆ ಸೀರೆಗಳು ತಮ್ಮ ವಿಶಿಷ್ಟ ಲೇಸ್ ಕೆಲಸ (lace work) ಮತ್ತು ಸಾಂಪ್ರದಾಯಿಕ ವಿನ್ಯಾಸಗಳಿಗಾಗಿ ಜನಪ್ರಿಯವಾಗಿವೆ. ಪ್ರತಿಯೊಂದು ಸೀರೆಗೂ ಸೂಕ್ಷ್ಮ ಕೈಚಾತುರ್ಯ ಮತ್ತು ಕಲಾತ್ಮಕ ಸ್ಪರ್ಶ ನೀಡಲಾಗುತ್ತದೆ, ಇದರಿಂದಾಗಿ ಅವುಗಳು ಅತ್ಯಂತ ಆಕರ್ಷಕ ಮತ್ತು ಮೌಲ್ಯಯುತವಾಗುತ್ತವೆ.
ಈ ರೇಷ್ಮೆ ನೇಕಾರಿಕೆ ಕೇವಲ ಉದ್ಯಮವಲ್ಲ, ಅದು ತಂಜಾವೂರಿನ ಸಾಂಸ್ಕೃತಿಕ ಪರಂಪರೆಯ ಒಂದು ಭಾಗವಾಗಿದೆ. ಹಲವಾರು ಕುಟುಂಬಗಳು ತಲೆಮಾರುಗಳಿಂದ ಈ ಕೌಶಲ್ಯವನ್ನು ಮುಂದುವರೆಸಿಕೊಂಡು ಬರುತ್ತಿವೆ. ಇದರ ಮೂಲಕ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ದೊರಕುತ್ತಿದ್ದು, ತಂಜಾವೂರು ತನ್ನ ಸಾಂಪ್ರದಾಯಿಕ ಕಲೆ ಮತ್ತು ಕೈಗಾರಿಕೆಗೆ ಇನ್ನಷ್ಟು ಪ್ರಸಿದ್ಧಿಯಾಗುತ್ತಿದೆ.
ಬೆಂಗಳೂರಿನಿಂದ ತಂಜಾವೂರು ರಸ್ತೆ ಮಾರ್ಗವು ಸುಮಾರು 360 ಕಿಲೋಮೀಟರ್ ಇದ್ದು, ರಸ್ತೆ ಮಾರ್ಗದ ಪ್ರಯಾಣದ ಅವಧಿ ಸುಮಾರು 6 ರಿಂದ 8 ಗಂಟೆಗಳಾಗುತ್ತವೆ.
