ಬದುಕಿನಲ್ಲಿ ಸಂಬಂಧಗಳೆಂಬ ಗೊಂದಲ
ಸಂಬಂಧಗಳನ್ನು ಕಳೆದುಕೊಳ್ಳುವುದು ಬದುಕಿಗೆ ಒಳ್ಳೆಯದಲ್ಲ; ಹಾಗೆಯೇ ಅದು ಸುಲಭವೂ ಅಲ್ಲ. ಸಂಬಂಧಗಳಲ್ಲಿ ಕೆಲವೊಮ್ಮೆ ತಪ್ಪುಗಳು ಗೊತ್ತಿಲ್ಲದೆ ಜರುಗಬಹುದು. ಅಕಸ್ಮಾತ್, ತಿಳಿದೋ ತಿಳಿಯದೆಯೋ ಆಗಿ ಹೋದ ತಪ್ಪುಗಳನ್ನು ಮನ್ನಿಸುವುದರಿಂದ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತವೆ. ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗಿ, ಭರವಸೆ ಹಾಗೂ ಹೊಸ ಉತ್ಸಾಹ ಚಿಗುರೊಡೆಯುತ್ತವೆ. ತಪ್ಪುಗಳನ್ನು ಮನ್ನಿಸುವ ಗುಣದಿಂದ ಬದುಕಿನ ಹೊಸ ಸವಾಲುಗಳನ್ನ ಸಮಾಧಾನದಿಂದ ಎದುರಿಸಿ ಗೆಲ್ಲಬಹುದು. “ತಾನೇ ಸರಿ” ಎನ್ನುವ ಅಹಂಭಾವವೇ ಕೆಲವೊಮ್ಮೆ ಏಕಾಂತ ಜೀವನಕ್ಕೆ ಕಾರಣವಾಗುತ್ತದೆ. ಆ ತಪ್ಪನ್ನು ನಾವು ಮಾಡದಿರೋಣ.
ಸಾಧ್ಯವಾದರೆ ಇತರರ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಿ
ಯಾರಾದರೂ ನಿಮ್ಮನ್ನು ದ್ವೇಷಿಸಿದರೆ, ನಿಮಗೆ ಅವರ ಅವಶ್ಯಕತೆಯೇ ಇಲ್ಲ ಎನ್ನುವಂತೆ ವರ್ತಿಸಿ. ಮಾನಸಿಕವಾಗಿ, ದೈಹಿಕವಾಗಿ ಅಥವಾ ಆರ್ಥಿಕವಾಗಿ ನೀವು ಅವರ ಮೇಲೆ ಅವಲಂಬಿತರಾಗಿದ್ದರೆ, ನಿಮ್ಮ ಅವಲಂಬನೆಯನ್ನು ನಿಧಾನವಾಗಿ ಕಡಿಮೆ ಮಾಡಿಕೊಳ್ಳಿ. ಸಾಧ್ಯವಾದರೆ ಅವರ ಮೇಲಿನ ಅವಲಂಬನೆಯಿಂದ ಸಂಪೂರ್ಣ ಹೊರಬನ್ನಿ. ನೀವು ಸ್ವತಂತ್ರವಾಗಿ ಯೋಚಿಸಿದಷ್ಟೂ ಗಟ್ಟಿಯಾಗುತ್ತೀರಿ. ಹಾಗೆ ಗಟ್ಟಿಯಾದಂತೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೀರ ಎಂಬುದು ನಿಮಗೆ ತಿಳಿದಿರಲಿ. ಕೆಲವು ಸಂಬಂಧಗಳಲ್ಲಿ ಕಡಿಮೆ ಅವಲಂಬನೆಯೇ ನೆಮ್ಮದಿಯ ಬದುಕಿಗೆ ಅಗತ್ಯ ಎಂದು ಭಾವಿಸಿ, ಅನಾವಶ್ಯಕವಾಗಿ ಕೊರಗಬೇಡಿ. ಅಕಸ್ಮಾತ್ ತಪ್ಪುಗಳಾದರೆ ಮನ್ನಿಸಿ, ಕ್ಷಮಿಸಿ. ಆದರೆ ಅಲ್ಲಿಯೇ ನಿಲ್ಲಬೇಡಿ. ಕೆಲವೊಂದು ಸಂಬಂಧಗಳ ಅವಶ್ಯಕತೆ, ಅನುಕೂಲ ಮತ್ತು ಅವಲಂಬನೆಗಳನ್ನು ಅರ್ಥಮಾಡಿಕೊಳ್ಳಲು, ಕೆಲವೊಮ್ಮೆ ನೀವೂ ಸಹ, ಚಿಕ್ಕ ಬದಲಾವಣೆಯ ಪ್ರಯೋಗ ಮಾಡಿ ನೋಡಿ. ಇತರರ ಮನೋಭಾವವನ್ನ ಅರಿಯಲು ಪ್ರಯತ್ನಿಸಿ.
ನಿಮ್ಮನ್ನು ಪ್ರಶ್ನಿಸುವವರ ಎಲ್ಲ ಸವಾಲುಗಳೂ ಒಳ್ಳೆಯದ್ದಾಗಿರುವುದಿಲ್ಲ
ನಮ್ಮ ವ್ಯಕ್ತಿತ್ವಕ್ಕೆ ನಿರಂತರವಾಗಿ ಸವಾಲೆಸೆಯುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ನಿರಂತರ ತಮಾಷೆ ಮಾಡುತ್ತಾ ನಮ್ಮ ವ್ಯಕ್ತಿತ್ವವನ್ನು ಕೆಣಕುವ, ನಮ್ಮನ್ನು ಕೀಳಾಗಿ ಕಾಣುವ ವ್ಯಕ್ತಿಗಳೊಂದಿಗೆ ಸ್ನೇಹವನ್ನು ಮುಂದುವರಿಸಬೇಡಿ. ಅಹಂಕಾರಿಗಳು ಮತ್ತು ಸ್ವಾರ್ಥಿಗಳು ಮಾತ್ರ ಇತರರನ್ನು ಕೀಳಾಗಿ ಕಾಣುತ್ತಾರೆ. ಉದಾತ್ತ ವ್ಯಕ್ತಿಗಳು ಎಲ್ಲರೊಂದಿಗೆ ಬೆರೆಯುತ್ತಾರೆ; ಎಲ್ಲರಲ್ಲೂ, ಎಲ್ಲ ಸಮಯದಲ್ಲೂ ಒಳಿತನ್ನೇ ಕಾಣಲು ಪ್ರಯತ್ನಿಸುತ್ತಾರೆ. ನಮಗೆ ಸವಾಲೆಸೆಯುವ ವ್ಯಕ್ತಿಗಳ ಉದ್ದೇಶವನ್ನ ತಿಳಿದುಕೊಳ್ಳಿ. ನಮ್ಮ ಏಳಿಗೆಯನ್ನು ಬಯಸುವವರು ಸವಾಲೆಸೆಯುವಂತೆ, ನಮ್ಮನ್ನ ಹಾಳು ಮಾಡಲು ಕೆಲವರು ಸವಾಲೆಸೆಯಬಹುದು.
ನಿಮ್ಮ ಮೌನ ಹಾಗೂ ನಿರ್ಲಕ್ಷ್ಯವೇ ಕೆಲವರಿಗೆ ಉತ್ತರವಾಗಿರಲಿ
ನಮ್ಮನ್ನು ಮೂರ್ಖರನ್ನಾಗಿಸಿ ನಗಲು ಪ್ರಯತ್ನಿಸುವ ವ್ಯಕ್ತಿಗಳೊಂದಿಗೆ ಸಮಾಧಾನದಿಂದ ವರ್ತಿಸುವ ಗುಣವನ್ನು ಬೆಳೆಸಿಕೊಳ್ಳಿ. ಅವರೊಂದಿಗೆ ನೀವೂ ಶಾಂತವಾಗಿ ನಕ್ಕುಬಿಡಿ. ಪದೇಪದೇ ಇಂತಹ ಘಟನೆಗಳು ನಡೆಯುತ್ತಿದ್ದರೆ, ಅಂತಹವರನ್ನು ನಿರ್ಲಕ್ಷಿಸಿ; ಆದರೆ ಅವರಿಂದ ಕಲಿತ ಪಾಠವನ್ನು ಮರೆಯಬೇಡಿ. ನಿಮ್ಮ ಸಾಮರ್ಥ್ಯವನ್ನು ನೀವು ಅರಿಯಲು ಅವರು ಸಹಾಯ ಮಾಡಿದ್ದಾರೆ ಎಂದು ಭಾವಿಸಿ. ಪದೇಪದೇ ಇತರರನ್ನು ಅವಮಾನಿಸುವ ವ್ಯಕ್ತಿಗಳು, ಕೊನೆಗೆ ತಾವೇ ಮೂರ್ಖರಂತೆ ಕಾಣುತ್ತಾರೆ. ಯುದ್ಧದಲ್ಲಿ ಮಾತ್ರವೇ ಕತ್ತಿಗೆ ಕತ್ತಿ ಬಳಸಬಹುದು; ಕೆಲವೊಮ್ಮೆ ಬದುಕಿನಲ್ಲಿ ಮೌನ ಮತ್ತು ನಿರ್ಲಕ್ಷ್ಯವೇ ಅತೀ ಹೆಚ್ಚಿನ ಕೆಲಸವನ್ನ ಮಾಡುತ್ತದೆ.
ನಿಮ್ಮನ್ನು ಕೆಣಕುವ ವ್ಯಕ್ತಿಗಳನ್ನು ನಿರ್ಲಕ್ಷಿಸಿ ನಡೆಯಿರಿ
ನಮ್ಮ ನಡೆಯ ಮೇಲೆ ಕೆಲವರಿಗೆ ಸದಾ ಕಣ್ಣಿರುತ್ತದೆ. ಇತರರ ಸಾಧನೆಯನ್ನು ಮೆಚ್ಚುವ ಗುಣ ಅವರಲ್ಲಿರುವುದಿಲ್ಲ. ಮತ್ತೆ ಕೆಲವರು ನಮ್ಮನ್ನು ಅತಿಯಾಗಿ ಪರೀಕ್ಷಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ನಮ್ಮನ್ನು ಕೆಣಕುತ್ತಲೇ ಇರುತ್ತಾರೆ. ಅಂತಹ ಸಮಯದಲ್ಲಿ ಸಾಧ್ಯವಾದಷ್ಟು ಅತಿಯಾಗಿ ಪ್ರತಿಕ್ರಿಯಿಸಬೇಡಿ. ಅವರ ಮಾತುಗಳು ನಿಮ್ಮ ಮನಸ್ಸನ್ನು ಕಾಡಲಾರವು ಎನ್ನುವ ಧೈರ್ಯದಿಂದ ನಡೆದುಕೊಳ್ಳಿ. ಕಠಿಣ ಸಮಯದಲ್ಲಿಯೂ ನಿಮ್ಮ ವ್ಯಕ್ತಿತ್ವವು ಯಾರಿಂದಲೂ ಕುಂದಲಾರದು ಎನ್ನುವ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳಿ; ಮಿಕ್ಕಿದ್ದೆಲ್ಲ ತಾನಾಗಿಯೇ ಸರಿಯಾಗುತ್ತದೆ. ಕಾಲವು ಎಲ್ಲದಕ್ಕೂ, ಎಲ್ಲರಿಗೂ ಉತ್ತರ ನೀಡುತ್ತದೆ. ನಮ್ಮಲ್ಲಿ ಕಾಯುವ ಗುಣವಿರಬೇಕಷ್ಟೇ.
ನಿಮ್ಮ ಮನದ ಹತಾಶೆಯನ್ನು ಎಲ್ಲರ ಮುಂದೆ ಹೊರಹಾಕಬೇಡಿ
ಕೆಲವು ಸಂದರ್ಭಗಳಲ್ಲಿ ನಿಮಗೆ ಏನೂ ಸಿಗಲಿಲ್ಲವೆನ್ನುವ ನೋವು ಮತ್ತು ಬೇಸರವನ್ನು ಯಾವ ಕಾರಣಕ್ಕೂ ಹೊರಹಾಕಬೇಡಿ. ಎಲ್ಲರೊಡನೆ ಎಲ್ಲ ವಿಷಯವನ್ನು, ಎಲ್ಲ ಸಂಧರ್ಭಗಳಲ್ಲಿ ಹೇಳಿಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಯಾವ ಕಾರಣದಿಂದಲೂ ಹತಾಶೆ ಹೊಂದಬೇಡಿ. ಹತಾಶೆಯು ನಿಮ್ಮನ್ನು ಮತ್ತಷ್ಟು ದುಃಖದೊಳಗೆ ತಳ್ಳಬಹುದು. ನಿಮ್ಮನ್ನು ಕೆಳಗೆ ತಳ್ಳಲು ಅವಕಾಶಕ್ಕಾಗಿ ಕಾಯುತ್ತಿರುವ ಮತ್ತೊಬ್ಬರಿಗೆ ನಿಮ್ಮ ಹತಾಶೆಯು ಅವಕಾಶವನ್ನು ನೀಡಬಹುದು. ಕೊಡುವವನಿಗೆ ಎಂದಿಗೂ ಹತಾಶೆಯು ಮೂಡುವುದಿಲ್ಲ. ಪಡೆಯುವವನಿಗೆ ಮಾತ್ರ ಹತಾಶೆ ಮೂಡಬಲ್ಲದು. ನೀವು ಏನಾಗಬೇಕೆಂದು ಯೋಚಿಸಿ ನಿರ್ಧರಿಸಿ.
ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಿ, ಆದರೆ ಅದರಲ್ಲಿಯೇ ಮುಳುಗಬೇಡಿ
ಅಕಸ್ಮಾತ್ ನಿಮ್ಮಿಂದ ಏನಾದರೂ ತಪ್ಪಾದರೆ, ನಿಮ್ಮ ತಪ್ಪುಗಳ ಮೇಲೆಯೇ ಹೆಚ್ಚು ಗಮನ ಕೊಡಬೇಡಿ, ಕೊರಗಬೇಡಿ. ನೀವು ಇತರರನ್ನು ಕ್ಷಮಿಸಿದಂತೆ, ನಿಮ್ಮ ತಪ್ಪನ್ನೂ ಕಡೆಗಣಿಸಿ; ಹಾಗೆಯೇ ಆ ತಪ್ಪನ್ನು ತಿದ್ದಿಕೊಳ್ಳಲು ಯತ್ನಿಸಿ. ನಿಮ್ಮ ತಪ್ಪನ್ನು ಸರಿಯೆಂದು ವಾದಿಸಬೇಡಿ. ಪದೇಪದೇ ನಿಮ್ಮ ತಪ್ಪನ್ನು ಎತ್ತಿ ತೋರುವ ವ್ಯಕ್ತಿಗಳನ್ನೂ ಕಡೆಗಣಿಸಿ. ಆಗ ನಿಮಗೆ ತಿಳಿಯದಂತೆ ನಿಮ್ಮ ಮನಸ್ಸಿನ ಮೇಲೆ ಹೆಚ್ಚು ನಿಯಂತ್ರಣ ಹೊಂದಲು ಆರಂಭಿಸುತ್ತೀರಿ; ನಿಮ್ಮನ್ನು ನೀವು ಇನ್ನಷ್ಟು ಅರಿಯತೊಡಗುತ್ತೀರಿ.
ಕೆಲವೊಮ್ಮೆ ಮಾತಿಗಿಂತ ಮೌನವೇ ಲೇಸು
ಕೆಲವೊಮ್ಮೆ ನಾವು ಏನೂ ಹೇಳದಿದ್ದರೂ, ನಮ್ಮ ಇರುವಿಕೆಯೇ ಇತರರಿಗೆ ನಮ್ಮ ಬಗ್ಗೆ ಇರುವ ಭಾವನೆಗಳನ್ನು ತಿಳಿಸಬಹುದು. ಆ ಸಮಯದಲ್ಲಿ ಸಾಧ್ಯವಾದಷ್ಟು ಮೌನ ಮತ್ತು ಸಂಯಮವನ್ನು ರೂಢಿಸಿಕೊಳ್ಳಿ. ಅನಾವಶ್ಯಕ ಮಾತುಗಳನ್ನು ಆಡಬೇಡಿ. ಆಗ ನೀವು ಭಾವನೆಗಳಿಗೆ ತಕ್ಷಣ ಒಳಗಾಗುವ ವ್ಯಕ್ತಿಗಿಂತ, ಆತ್ಮನಿಯಂತ್ರಣ ಹೊಂದಿರುವ ವ್ಯಕ್ತಿಯಂತೆ ಕಾಣುತ್ತೀರಿ. ಆ ಸಂದರ್ಭದಲ್ಲಿ ನಿಮ್ಮ ಮಾತಿಗೆ ಹೆಚ್ಚು ಮೌಲ್ಯ ಸಿಗುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ.
ಅತಿಯಾದ ಲಭ್ಯತೆ ಕೆಲವೊಮ್ಮೆ ನೋವಿಗೆ ಕಾರಣವಾಗಬಹುದು
ಇತರರ ಮೇಲೆ ಸದಾ ಅವಲಂಬಿತವಾಗಿರುವುದು, ಅತಿಯಾಗಿ ಅಂಟಿಕೊಂಡಿರುವುದು, ನಿರಂತರ ಲಭ್ಯವಿರುವುದು, ಇವೆಲ್ಲವೂ ಕೆಲವೊಮ್ಮೆ ನಮ್ಮ ಬಗ್ಗೆ ಇರುವ ಸಲಿಗೆಯನ್ನು ಹೆಚ್ಚಿಸಬಹುದು. ನಮ್ಮ ಮೇಲಿನ ಅಭಿಮಾನವೇ ಕೆಲ ಸಂದರ್ಭಗಳಲ್ಲಿ ನಮ್ಮ ಮನಸ್ಸಿಗೆ ನೋವಾಗುವ ಕ್ಷಣಗಳನ್ನು ತರಬಹುದು. ಹೀಗಾಗಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡಿ. ಹಾಗೆಂದು ಎಲ್ಲರಿಂದಲೂ ದೂರ ಉಳಿಯುವ ಯೋಚನೆ ಮಾಡಬೇಕಿಲ್ಲ.
ಪ್ರತಿಯೊಬ್ಬರೂ ತಮ್ಮ ದೃಷ್ಟಿಯಲ್ಲಿ ಸರಿ
ಈ ಸೃಷ್ಟಿಯಲ್ಲಿರುವ ಎಲ್ಲ ಜೀವಿಗಳೂ ತಮ್ಮದೇ ದೃಷ್ಟಿಯಲ್ಲಿ ಸರಿಸಮಾನರು, ಹಾಗೂ ಹೆಚ್ಚಿನವರು ತಮ್ಮ ಅಭಿಪ್ರಾಯದಲ್ಲಿ ತಾವೇ ಒಳ್ಳೆಯವರು. ಈಗ ತಾನೇ ಹುಟ್ಟಿದ ಮಗುವಿನಿಂದ ಹಿಡಿದು, ಸಾವಿನ ಬಾಗಿಲು ತಟ್ಟಲು ಸಿದ್ಧವಾಗಿರುವ ವ್ಯಕ್ತಿಯವರೆಗೂ ಪ್ರತಿಯೊಬ್ಬರೂ ತಾನೇ ಸರಿ ಎನ್ನುವ ಭಾವನೆಯಲ್ಲೇ ಬದುಕುತ್ತಾರೆ. ಹಾಗೆಂದು ಇತರರು ತಪ್ಪಿತಸ್ಥರು ಅಥವಾ ಭ್ರಮೆಯಲ್ಲಿದ್ದಾರೆ ಎಂದು ಹೇಳಲಾಗದು. ಈ ಸೃಷ್ಟಿಯ ನಿಯಮವೇ ಹಾಗೆ. ಎಲ್ಲ ಜೀವಿಗಳೂ ಈ ನಿಯಮವನ್ನು ಪಾಲಿಸಲೇಬೇಕು. ಇಲ್ಲಿ ಎಲ್ಲರೂ ತಮ್ಮದೇ ದೃಷ್ಟಿಯಲ್ಲಿ ಹೆಚ್ಚಿನವರೇ. ತಮ್ಮ ಆಟವನ್ನು ಆಡಲೆಂದು, ತಮ್ಮ ಬದುಕನ್ನ ನಡೆಸಲೆಂದು ಬಂದವರು.
ನಿಮಗೆ ತಿಳಿದಿರಲಿ ಎಲ್ಲರೂ, ಎಲ್ಲ ಸಮಯದಲ್ಲೂ ಒಂದೇ ರೀತಿಯಲ್ಲಿರಲು ಸಾಧ್ಯವೇ ಇಲ್ಲ. ಇಂದು ನೀವಂದುಕೊಂಡಂತೆ ನಾಳೆ ಇರಲಾರಿರಿ, ಇಂದು ತೆಗೆದುಕೊಂಡ ತೀರ್ಮಾನವನ್ನು ಮುಂದೆಯೂ ತೆಗೆದುಕೊಳ್ಳಲಾರಿರಿ. ಸೃಷ್ಟಿಯ ಎಲ್ಲಾ ಸಂಬಂಧಗಳೂ, ಗೆಳೆತನವೂ, ಈ ಕಠಿಣ ಪರೀಕ್ಷೆಯನ್ನ ಹಾದು ಬಂದು ತೇರ್ಗಡೆಯಾಗಿ ಉಳಿದ ಸಂಬಂಧಗಳೇ ಆಗಿವೆ!
ವ್ಯಕ್ತಿತ್ವವನ್ನು ರೂಪಿಸುವ ಬಗೆ ಯಾವುದು?
ಬದುಕು ಮನುಷ್ಯನಿಗೆ ನೀಡಿದ ಅವಕಾಶಗಳು, ಅನುಕೂಲಗಳು, ಆಲೋಚನೆಗಳು ಮತ್ತು ಸೌಲಭ್ಯಗಳ ಜೊತೆಗೆ, ವ್ಯಕ್ತಿಯು ಜೀವನದಲ್ಲಿ ಗಳಿಸಿರುವ ಜ್ಞಾನ, ಚಿಂತನಾಶಕ್ತಿ, “ತನ್ನಂತೆ ಇತರರೂ” ಎನ್ನುವ ಮನೋಭಾವ, ಅವನು ಓದಿದ್ದು, ಇತರರಿಂದ ಕಲಿತ ಪಾಠಗಳು ಮತ್ತು ಇತರರ ಬಗ್ಗೆ ಇರುವ ಕಾಳಜಿ, ಸಮಾಜಮುಖಿ ಚಿಂತನೆ ಇತ್ಯಾದಿಗಳೆಲ್ಲವೂ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗುತ್ತವೆ. ಈ ಗುಣಗಳೇ ವ್ಯಕ್ತಿಯ ಚಾರಿತ್ರ್ಯವನ್ನು ರೂಪಿಸುತ್ತವೆ. ವ್ಯಕ್ತಿ ಸಾಗಿ ಬಂದ ಹಾದಿ, ಬದುಕನ್ನು ಅರ್ಥೈಸಿಕೊಂಡ ರೀತಿ, ಸಮಾಜದ ಬಗ್ಗೆ ಮತ್ತು ಸಂಬಂಧಗಳ ಬಗ್ಗೆ ಅವನಿಗಿರುವ ಜವಾಬ್ದಾರಿ ಹಾಗೂ ಕಾಳಜಿ, ಇವೆಲ್ಲದರ ಪ್ರಭಾವದಿಂದ ಪ್ರತಿಯೊಬ್ಬರೂ ಆ ಕ್ಷಣಕ್ಕೆ ತಕ್ಕಂತೆ, ತಮಗೆ ಸರಿಯೆನ್ನಿಸಿದ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ದೃಷ್ಟಿಯಲ್ಲಿ ಸರಿಯಾಗಿಯೇ ಇರುತ್ತಾರೆ. ಇದೇ ಬದುಕಿನ ವೈಚಿತ್ರ್ಯ.
ನಿಮ್ಮ ಇಂದಿನ ತೀರ್ಮಾನ ನಾಳೆ ಬದಲಾಗಬಹುದು
ಇಂದು ನೀವು ಆಡಿದ ಮಾತು ಅಥವಾ ತೆಗೆದುಕೊಂಡ ತೀರ್ಮಾನ, ಮುಂದೊಂದು ದಿನ ಇನ್ನೊಬ್ಬರ ದೃಷ್ಟಿಯಲ್ಲಿ ತಪ್ಪೆನಿಸಬಹುದು; ಅಥವಾ ನಿಮಗೇ ತಪ್ಪೆನಿಸಬಹುದು. ಹಾಗೆಂದು ಇಂದಿನ ಈ ಕ್ಷಣದ ತೀರ್ಮಾನವನ್ನು ಸಂಪೂರ್ಣ ತಪ್ಪೆಂದು ಹೇಳಬಹುದೇ?
ನಮಗೆ ಹಸಿವಾದರೆ, ನಾವೇ ಊಟ ಮಾಡಬೇಕೆನ್ನುವ ನಿಯಮದಂತೆ, ಬದುಕು ನಮಗೆ ನೀಡಿದ ಅವಕಾಶಗಳ ಜೊತೆಗೆ ಈ ಸಮಯದಲ್ಲಿ ನಮ್ಮಗಿದ್ದ ತಿಳುವಳಿಕೆ, ಅಲೋಚನೆ, ಇತರರ ಬಗ್ಗೆ ನಾವು ತೆಗೆದುಕೊಳ್ಳುವ ತೀರ್ಮಾನಗಳು ಬದಲಾಗುತ್ತವೆ. ಅನುಭವ, ತಿಳುವಳಿಕೆ, ಸಮಯ, ಸಂಧರ್ಭಗಳು, ವ್ಯಕ್ತಿಗಳು ಬದಲಾದಂತೆ, ನಮ್ಮ ತೀರ್ಮಾನಗಳೂ ಬದಲಾಗಬಹುದು. ಇಂದು ನಾವು ತೆಗೆದುಕೊಂಡ ತೀರ್ಮಾನವು ಮುಂದೊಂದು ದಿನ ಹೀಗೆಯೇ ಇರಬೇಕೆನ್ನುವಂತೆ ತೀರ್ಮಾನಿಸುವ ನಿಯಮವೇನಿಲ್ಲ.
ಈ ನಿಟ್ಟಿನಲ್ಲಿಯೇ ನಾವು ಯೋಚಿಸಬೇಕು, ಬದುಕಬೇಕು, ತೀರ್ಮಾನ ಕೈಗೊಳ್ಳಬೇಕು. ನಮ್ಮ ಜೊತೆಗಿರುವವರ ಬಗ್ಗೆ, ಸಕಲ ಜೀವಿಗಳ ಬದುಕಿನ ಬಗ್ಗೆಯೂ ನಾವು ಯೋಚಿಸಲೇಬೇಕು.
ಮಳೆ ಬಂದಿತೆಂದರೆ ಎಲ್ಲರೂ ಮಳೆಯಲ್ಲಿ ನೆನೆದು ಸಂತಸ ಕಾಣಬೇಕೆಂಬ ನಿಯಮವೇನಿಲ್ಲ. ಅನಾರೋಗ್ಯದಲ್ಲಿರುವ ವ್ಯಕ್ತಿಯೊಬ್ಬ ಮಳೆಯಿಂದ ದೂರವುಳಿದ ಎನ್ನುವ ಏಕೈಕ ಕಾರಣಕ್ಕೆ ಅವನು ಮಳೆಯನ್ನ ಪ್ರೀತಿಸುವುದಿಲ್ಲ ಎಂದು ಹೇಳಲಾಗದು, ಅಲ್ಲವೇ?
![]() |
ಸಂತಸವೆಂಬ ಬದುಕಿನ ಸೌಂದರ್ಯ! : ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ |
