ವ್ಯವಸ್ಥೆಯೊಡನೆ ಸಿಕ್ಕಿ ನಲುಗುವ ವ್ಯಕ್ತಿತ್ವಗಳು
ಸಂಧರ್ಭ 1
ಕೆಲ ವರುಷಗಳ ಹಿಂದಿನ ಮಾತು, ಊರಿನಲ್ಲಿ ಒಂದೆರಡು ಬಾವಿಗಳಿರುತ್ತಿದ್ದವು. ಬಾವಿಯ ನೀರಿಗೆ ಊರಿನ ಜನರು ಅವಲಂಭಿತರಾಗಿದ್ದರು. ಬಾವಿಗಳು ಕೆಲವೊಮ್ಮೆ ಊರಿನ ಹೊರಗಡೆ ಇರುತ್ತಲಿದ್ದವು. ಮನೆಯ ಮುಂದಿರುವ ನಲ್ಲಿಯ ನೀರು ಎಂಟತ್ತು ದಿನಗಳಿಗೊಮ್ಮೆ, ಇಲ್ಲವೇ ಹದಿನೈದು ದಿನಗಳಿಗೊಮ್ಮೆ ಬರುತ್ತಿತ್ತು. ಕೆಲವೊಮ್ಮೆ ಇಪ್ಪತ್ತು ದಿನಗಳಾದರೂ ಕುಡಿಯುವ ನೀರು ಬರುತ್ತಲೇ ಇರಲಿಲ್ಲ (ಅಥವಾ ಬಿಡುತ್ತಲೇ ಇರಲಿಲ್ಲ ಎಂದೆನ್ನಬಹುದು) ಆ ಸಮಯದಲ್ಲಿ ಈಗಿರುವಂತೆ ಮನೆಗಳ ಮುಂದೆ ಜನಸಾಮಾನ್ಯರಿಗೆ ಬೋರ್‌ವೆಲ್ ನೀರು ಸಿಗುತ್ತಿರಲಿಲ್ಲ.
ನೀರು ಬಂದಾಗ (ಬಿಟ್ಟಾಗ) ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ನೀರನ್ನ ಶೇಖರಿಸಬೇಕಿತ್ತು. ಉಳ್ಳವರು ತಮ್ಮ ಮನೆಯಲ್ಲಿ ನೀಲಿ ಬಣ್ಣದ ಡ್ರಮ್‌ಗಳನ್ನ ನೀರಿಗಾಗಿಯೇ ಇಟ್ಟುಕೊಂಡಿದ್ದರು. ಬೇರೆಯವರಿಗೆ ಮನೆಯನ್ನು ಬಾಡಿಗೆ ಕೊಡುವ ಶ್ರೀಮಂತರು, ಸಾಮಾನ್ಯವಾಗಿ ತಮ್ಮದೇ ಬೋರ್‌ವೆಲ್ ಹೊಂದಿದ್ದರು. ಬೋರ್‌ವೆಲ್ ಹೊಂದುವುದು ಕೂಡ ಪ್ರತಿಷ್ಠೆಯ ಲಕ್ಷಣವಾಗಿತ್ತು.
ಜನಸಾಮಾನ್ಯರಿಗೆ ನಿತ್ಯವೂ ನೀರಿನ ಹಾಹಾಕಾರ ಉಂಟಾಗುತ್ತಲೇ ಇತ್ತು. ಬೇಸಿಗೆಯ ಸಮಯದಲ್ಲಿ, ಹಬ್ಬದ ದಿನಗಳಲ್ಲಿ ಕುಡಿಯುವ ನೀರಿಲ್ಲದ ಗೋಳು ಹೆಚ್ಚಾಗಿರುತಿತ್ತು. ಆ ದಿನಗಳಲ್ಲಿ ನಲ್ಲಿಯಲ್ಲಿ ಬರುವ ನೀರನ್ನು ಕುಡಿಯಲು, ಗೃಹ ಉಪಯೋಗಕ್ಕೆ, ಮತ್ತೆಲ್ಲಾ ಕೆಲಸಗಳಿಗೂ ಬಳಸುತ್ತಿದ್ದರು. ನಲ್ಲಿಯ ನೀರು ಬಂದಾಗ ಎಲ್ಲರಿಗೂ ಹೆಚ್ಚು ನೀರನ್ನ ಶೇಖರಿಸುವ ತವಕ. ಹಲವು ದಿನಗಳಿಗೊಮ್ಮೆ ಬರುವ ನೀರಿಗಾಗಿ ಜನರು ಕಿತ್ತಾಡುತ್ತಲಿದ್ದರು. ಕೆಲವೊಮ್ಮೆ ಅಂತಹ ಕಿತ್ತಾಟಗಳಿಂದ ಮನಸ್ತಾಪಗಳಾಗುತ್ತಿದ್ದವು. ಹೆಚ್ಚು ಕೊಡಪಾನ (ಬಿಂದಿಗೆ) ಇದ್ದವರಿಗೆ, ತಮ್ಮ ಮನೆಯ ಮುಂದೆ ನಲ್ಲಿಯ ವ್ಯವಸ್ತೆ ಇರುವವರಿಗೆ ಹೆಚ್ಚು ನೀರು ಸಿಗುತ್ತಿತ್ತು. ಉಳ್ಳವರಿಗೆ, ಜೋರು ಬಾಯಿ ಇದ್ದವರಿಗೆ ಹೆಚ್ಚು ನೀರು ಸಿಕ್ಕರೆ; ಜೋರು ಬಾಯಿಲ್ಲದವರು ಸಿಕ್ಕಷ್ಟೇ ಶಿವ! ಎಂದು ಸಪ್ಪೆ ಮೋರೆ ಹಾಕಿಕೊಳ್ಳಬೇಕಿತ್ತು.
ಅಕಸ್ಮಾತ್ ಮನೆಯಲ್ಲಿ ಯಾರೂ ಇಲ್ಲದಾಗ ನಲ್ಲಿಯ ನೀರು ಬಂದಿತೆಂದರೆ, ಮತ್ತೆ ಮುಂದಿನ ಹಲವು ದಿನಗಳವರೆಗೂ ನೀರೇ ಇರುವುದಿಲ್ಲವೆನ್ನುವ ಸಂಕಟ. ಪರ ಊರಿನ ಕಾರ್ಯಕ್ರಮಗಳಿಗೆ ಹೋಗಬೇಕೆಂದರೆ ನಲ್ಲಿಯ ನೀರಿನ ಬರುವಿಕೆಯನ್ನಾದರಿಸಿ ಹೋಗುವ ತೀರ್ಮಾನ ಕೈಗೊಳ್ಳಬೇಕಿತ್ತು. ನೀರಿನ ಬವಣೆ ಅಂದು ಬಹುಶಹ ಎಲ್ಲರ ಮನೆಯಲ್ಲೂ ಹೀಗೇಯೇ ಇತ್ತು. ಮದುವೆ ಮುಂತಾದ ದೊಡ್ಡ ಕಾರ್ಯಗಳಲ್ಲಿ ನೀರನ್ನು ತರಲೆಂದೆ ಹಲವರನ್ನ ನೇಮಿಸಬೇಕಿತ್ತು.
ಕೆಲವು ಊರುಗಳಲ್ಲಿ ನೀರಿನ ಅಭಾವ ತುಂಬಾ ಹೆಚ್ಚಾಗಿತ್ತು. ಹಾಗೆ ನೀರಿನ ಅಭಾವವಿರುವ ಊರಿನ ಗಂಡುಮಕ್ಕಳಿಗೆ ತಮ್ಮ ಮನೆಯ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಒಪ್ಪದ, ತಿರಸ್ಕರಿಸಿದ, ಉದಾಹರಣೆಗಳೂ ಆಗಿ ಹೋದವು.
ಕೆಲವೊಮ್ಮೆ ಹಬ್ಬದ ದಿನದಂದೇ ನಲ್ಲಿಯಲ್ಲಿ ನೀರನ್ನ ಬಿಡುತ್ತಿದ್ದರು. ಹಲವು ದಿನಗಳ ನಂತರ ನಲ್ಲಿಯ ನೀರು ಬಂದಿತ್ತೆನ್ನುವ ಸಂತಸ ಒಂದಾದರೆ, ಕುಡಿಯುವ ನೀರನ್ನ ಹಿಡಿಯಲೇ ಬೇಕೆನ್ನುವ ಸಂಕಟ ಇನ್ನೊಂದೆಡೆ. ಮನೆಯಲ್ಲಿ ಹೆಂಗಸೊಬ್ಬರೇ ಇದ್ದರೆ ಹಬ್ಬ ಮಾಡಬೇಕೋ, ನೀರನ್ನು ಹಿಡಿಯಬೇಕೋ ಎನ್ನುವ ಸಂಕಟದ ಗೊಂದಲ. ಅಕಸ್ಮಾತ್ ಆ ಸಮಯದಲ್ಲಿ ಮನೆಗೆ ಅತಿಥಿಗಳು ಬಂದಿದ್ದರಂತೂ ನೀರಿನ ಸಂಕಟವನ್ನ ಹೇಳಲಾಗದು. ಈ ಗೋಳು ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿತ್ತು.
ಅದಕ್ಕೂ ಮೀರಿದ ಸಂಕಟವೆಂದರೆ ಕೆಲವೊಮ್ಮೆ ಹಬ್ಬದ ದಿನಗಳಲ್ಲೂ ನೀರನ್ನು ಬಿಡುತ್ತಲೇ ಇರಲಿಲ್ಲ. ಕುಡಿಯಲು, ಹಬ್ಬದ ಸ್ನಾನ ಮಾಡಲು, ಅಡುಗೆ ಮಾಡಲು, ಬೇಳೆ ಬೇಯಿಸಲು ನೀರಿಲ್ಲದೇ ಹೋದರೆ ಏನು ಗತಿ? ಹಬ್ಬದ ಸಮಯದಲ್ಲಿ ಮನೆಯ ತುಂಬಾ ಜನರಿದ್ದರೆ, ನೆಂಟರಿದ್ದರೆ, ನೀರೇ ಇಲ್ಲದಿದ್ದರೆ?
ಆ ಸಮಯದಲ್ಲಿ ಹಬ್ಬದ ಹಿಂದಿನ ದಿನವೇ ಅಮ್ಮನಿಗಾಗಿ ಹಲವು ಮೈಲಿಗಳ ದೂರದಿಂದ ಕುಡಿಯುವ ನೀರನ್ನ ಎಲ್ಲಿಂದಲಾದರೂ, ಯಾರ ಮನೆಯಿಂದಾದರೂ ತರಲೇ ಬೇಕಿತ್ತು. ಬೋರ್‌ವೆಲ್ ನೀರಿನಲ್ಲಿ ಬೇಳೆ ಬೇಯುವುದಿಲ್ಲ. ಹಬ್ಬದ ಅಡುಗೆ ಸರಿಯಾಗುವುದಿಲ್ಲ ಎಂಬ ಸಂಕಟ ಅಮ್ಮನಿಗೆ.
ಅಮ್ಮನಂತೆ ನೂರಾರು ಮನೆಯ, ಸಾವಿರಾರು ಹೆಣ್ಣುಮಕ್ಕಳು ನೀರಿನ ಕಾರಣದಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದರು. ಹಲವು ವರ್ಷಗಳಿಂದ ನೀರಿಗಾಗಿ ಬಸವಳಿದು ಏನು ಮಾಡಬೇಕೆಂದು ತೋಚದ, ಮನೆಯಲ್ಲಿದ್ದ ಅಮ್ಮ ಹೇಳುತ್ತಿದ್ದುದು ಒಂದೇ ಮಾತು “ದೇವ್ರೇ ನಮಗ್ಯಾಕೆ ಈ ಸಂಕಟ ತಂದ್ಬಿಟ್ಟೆ!”
ಸಂಧರ್ಭ 2
ಬೇಸಿಗೆಯಲ್ಲಿ ನೀರಿಲ್ಲದ ಸಂಕಟ ಒಂದೆಡೆಯಾದರೆ, ಮಳೆಗಾಲದಲ್ಲಿ ಇನ್ನೊಂದು ರೀತಿಯ ಸಂಕಟ. ಬೇಸಿಗೆಯಲ್ಲಿ ನೀರಿಲ್ಲದ ಕಾರಣದಿಂದ ಅಮ್ಮನಿಗೆ ನಿರಂತರ ನೆನಪಾಗುತ್ತಿದ್ದ ದೇವರು; ತನ್ನ ಇರುವಿಕೆಯನ್ನ ತಿಳಿಸಲು ಮಳೆಗಾಲದಲ್ಲಿ ನೀರಿನ ರೂಪದಲ್ಲಿ ಮನೆಗೆ ಬರುತ್ತಿದ್ದ!. ಮಳೆಗಾಲ ಬಂತೆಂದರೆ ಮನೆಯು ಸೋರುತ್ತಿತ್ತು. ಕೆಲವೊಮ್ಮೆ ಛಾವಣಿಯಿಂದ, ಮುರಿದ ಹಂಚಿನೊಳಗಿಂತ ಬಿದ್ದ ಮಳೆಯ ನೀರು, ಮನೆಯ ವಸ್ತುಗಳು, ಪುಸ್ತಕ, ಬಟ್ಟೆ, ಹಾಸಿಗೆ, ಎಲ್ಲವನ್ನು ತೊಯ್ಯಿಸಿ ಹಾಳುಮಾಡುತ್ತಿತ್ತು.
ಭೀಕರ ಮಳೆಗಾಲದಲ್ಲಿ ಗಂಟೆಗಳವರೆಗೆ ರಭಸದಲ್ಲಿ ಮಳೆ ಬಂದಿತೆಂದರೆ ಮನೆಯ ಮುಂದಿನ ಅಂಗಳ ಕರೆಯಂತಾಗುತ್ತಿತ್ತು. ಮನೆಯ ಮುಂದಿನ ಮೋರಿಯ ನೀರು ಕೆಲವೊಮ್ಮೆ ತುಂಬಿ ತುಳುಕುತಲಿತ್ತು. ಮಳೆಯ ನೀರು, ಮೋರಿಯ ನೀರಿನೊಂದಿಗೆ ಬೆರೆತು, ಮನೆಯೊಳಗೆ ದಾಳಿ ಮಾಡಲು ಸಂಚು ಹೂಡುತ್ತಿತ್ತು.
ಮೋರಿಗೆ ಜನರು ಕಸ ಎಸೆಯುವುದರಿಂದ, ನೀರು ಮುಂದೆ ಹೋಗಲು ಸಾಧ್ಯವಾಗದ ಕಾರಣದಿಂದ ಮೋರಿಗಳು ಬ್ಲಾಕ್ ಆಗುತ್ತಲಿದ್ದವು. ಆ ಸಮಯದಲ್ಲಿ ಮೋರಿಯ ನೀರು ಕೆಲವೊಮ್ಮೆ ಬಚ್ಚಲು ಮನೆಯಿಂದ, ಟಾಯ್ಲೆಟ್ ಕಡೆಯಿಂದ ಮನೆಯೊಳಗೆ ನುಗ್ಗುತ್ತಲಿತ್ತು. ಕೆಲವೊಮ್ಮೆ ಈ ಸಂಕಟ ನಮ್ಮ ಬೀದಿಯಲ್ಲಿದ್ದ ಪ್ರತಿಯೊಂದು ಮನೆಗಳಲ್ಲೂ ಸಾಮಾನ್ಯ ಎನ್ನುವಂತಿತ್ತು. ನಮ್ಮ ಊರಿನಂತೆ, ಬೆಂಗಳೂರಿನ ಹಲವು ಬಡಾವಣೆಗಳು ಮಳೆಗಾಲದ ಮಳೆಯ ನರ್ತನವನ್ನ ಕಂಡು ನೊಂದಿರುವ ಕುಟುಂಬಗಳಿವೆ ಎಂಬುದನ್ನ ನೆನಪು ಮಾಡಿಕೊಳ್ಳೋಣ. ಮನೆಯೊಳಗೆ ನುಗ್ಗುವ ಮೋರಿಯ ನೀರಿನ ಸಂಕಟವನ್ನ ಕಂಡವರೇ ಬಲ್ಲರು. ಆ ಸಮಯದಲ್ಲಿ ಮನೆಯಲ್ಲಿದ್ದ ಅಮ್ಮ ಹೇಳುತ್ತಿದ್ದುದು ಮತ್ತದೇ ಮಾತು “ದೇವ್ರೇ ನಮಗ್ಯಾಕೆ ಈ ಸಂಕಟ ತಂದ್ಬಿಟ್ಟೆ!”
ಸಂಧರ್ಭ 3
ಊರಿನಲ್ಲಿ ಮನೆ ಕಟ್ಟಿಸುತ್ತಿರುವ ಸಮಯ. ಮನೆಯ ಕರೆಂಟ್ ಕನೆಕ್ಷನ್ನಿಗಾಗಿ ವಿದ್ಯುತ್ ಇಲಾಖೆಗೆ ದುಡ್ಡು ಕಟ್ಟಿದ್ದ ಅಪ್ಪ, ಸಂಬಂಧಿಸಿದ ಕಚೇರಿಗೆ ಹಲವು ತಿಂಗಳವರೆಗೆ ಅಡ್ಡಾಡುತ್ತಲೇ ಇದ್ದರು. ಹಾಗೆ ನಿರಂತರ ಅಡ್ಡಾಡುವ ಕಾರಣದಿಂದ ಅಲ್ಲಿಯ ಕೆಲವು ಅಧಿಕಾರಿಗಳಿಗೆ ಅಪ್ಪ ಪರಿಚಿತರೂ ಆಗಿಬಿಟ್ಟಿದ್ದರು. ಒಂದು ದಿನ ಸಂಜೆಯ ಸಮಯ, ಕರೆಂಟ್ ಕನೆಕ್ಷನ್ನಿಗೆ ಸಂಬಂಧಿಸಿದ ಇಂಜಿನಿಯರ್ ಕಾಣಲು ಹೋದಾಗ, ಇಂಜಿನಿಯರ್ ಅದೇ ಸಮಯದಲ್ಲಿ ತಮ್ಮ ಮನೆಗೆ ಹೊರಟಿದ್ದರು. ಅಪ್ಪನನ್ನು ನೋಡಿದ ಅವರು ಸ್ವಲ್ಪ ಕೆಲ್ಸ ಇದೆ ಬಾ ಎಂದು ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ, ಅಲ್ಲಿದ್ದ ದೊಡ್ಡದಾದ ಹಲಸಿನ ಹಣ್ಣನ್ನ ತಮ್ಮ ಮನೆಗೆ ಒಯ್ಯಲು ಅಪ್ಪನ ನೆರವು ಕೇಳಿದರು. ಅಪ್ಪ ಅವರ ಮಾತಿಗೆ ಸಮ್ಮತಿಸಿದರು.
ಆಗ ತಾನೇ ಊರು ಬೆಳೆಯುತ್ತಲಿತ್ತು. ಇಂಜಿನಿಯರ್ ಸಾಹೇಬರ ಮನೆಯು, ಐದಾರು ಕಿಲೋಮೀಟರ್ ದೂರದಲ್ಲಿದ್ದ ಊರಿನ ಹೊರವಲಯದ ಹೊಸ ಬಡಾವಣೆಯಲ್ಲಿತ್ತು. ಬೈಕ್ ಏರಿ, ಅವರಿಂದೆ ಕುಳಿತ ಅಪ್ಪ, ಸಾಹೇಬರನ್ನು, ಹಲಸಿನ ಹಣ್ಣನ್ನು ಅವರ ಮನೆಗೆ ಕ್ಷೇಮವಾಗಿ ತಲುಪಿಸಲು ನೆರವಾದರು.
ವಾಪಾಸು ಅಪ್ಪ ತನ್ನ ಮನೆಗೆ ಬಂದಾಗ ಸಮಯ ರಾತ್ರಿಯಾಗಿತ್ತು. ಕೈಯಲ್ಲಿ ಒಂದು ಕಾಸೂ ಇಲ್ಲದ ಅಪ್ಪ, ಕತ್ತಲ ಹಾದಿಯಲ್ಲಿ, ಹಲವು ಕಿಲೋಮೀಟರ್ ದೂರವನ್ನು ನಡೆದುಕೊಂಡೇ ಬಂದಿದ್ದರು. ಬಡಪಾಯಿ ಅಪ್ಪನಿಗೆ ತನ್ನ ಮನಸ್ತಿತಿಯನ್ನ ಸಾಹೇಬರ ಬಳಿ ಹೇಳಿಕೊಳ್ಳಲು ಅವಕಾಶವೇ ಇರಲಿಲ್ಲ. ಹಣ್ಣು ಮನೆ ಸೇರಿದೆ ಎನ್ನುವ ಕುಷಿಯಲ್ಲಿದ್ದ ಸಾಹೇಬ, ಅಪ್ಪನ ಬಳಿ ಹಣವಿದೆಯೇ? ತಾನು ವಾಪಾಸು ಅವರನ್ನು ಬಿಡಲು ಸಾಧ್ಯವೇ ಎಂದು ಯೋಚಿಸಲೇ ಇಲ್ಲ. ಮನೆಗೆ ಬಂದ ಅಪ್ಪ, ಎಲ್ಲವನ್ನೂ ಅಮ್ಮನಿಗೆ ಹೇಳಿದಾಗ; ಆಗಲೂ ಅಮ್ಮ ಹೇಳಿದ್ದು ಅದೇ ಮಾತು “ದೇವ್ರೇ ನಮಗ್ಯಾಕೆ ಈ ಸಂಕಟ ತಂದ್ಬಿಟ್ಟೆ”
ಅಮ್ಮ ನೊಂದುಕೊಂಡಾಗಲೆಲ್ಲ, “ದೇವ್ರೇ ನಮಗ್ಯಾಕೆ ಈ ಸಂಕಟ ತಂದ್ಬಿಟ್ಟೆ” ಎಂದು ಹೇಳುತ್ತಿದ್ದಳು. ಪ್ರತಿಬಾರಿಯೂ ಅಮ್ಮ ಈ ಮಾತನ್ನು ಹೇಳಿದಾಗಲೆಲ್ಲ, ಆ ದೇವರೇ ಇಂತಹ ಸಂಕಟಗಳನ್ನ ತಂದಿಡುವವನು ಎಂದು ನಾನು ನಂಬತೊಡಗಿದೆ. ಕಾಲ ಸರಿಯತೊಡಗಿತು. ಅಮ್ಮನಂತಹ ನೂರಾರು ಅಮ್ಮಂದಿರು ಕೂಡ ಇದೇ ಮಾತನ್ನ ಹೇಳತೊಡಗಿದರು. ಅವರ ಮನಸ್ತಿತಿಯೂ ಅಮ್ಮನಂತಹುದೇ ಇತ್ತು. ದೇವರ ಹೆಸರಿನಲ್ಲಿ ನೂರಾರು ಅಮ್ಮಂದಿರು ಇಂತಹ ಸಾವಿರ ಸಂಕಟಗಳನ್ನ ದಾಟಿ ಬಂದರು.
ಅಮ್ಮನ ಕೊನೆಯುಸಿರು ಇರುವವರೆಗೂ ಬದುಕಿನಲ್ಲಿ ಅವಳಿಗೆ, ಈ ರೀತಿಯ ಸಂಕಟಗಳು ಬರುತ್ತಲೇ ಇದ್ದವು. ವರುಷಗಳು ಕಳೆದವು. ಅಪ್ಪ ಅಮ್ಮ ಇನ್ನಿಲ್ಲವಾದರು. ಅಮ್ಮನಂತೇ, ಎಲ್ಲದಕ್ಕೂ ಆ ದೇವರೇ ಕಾರಣ ಎಂದು ನಾನೂ ನಂಬಿದ್ದೆ. ದೇವರನ್ನ ನಂಬುವ, ಎಲ್ಲದಕ್ಕೂ ಅವನನ್ನೇ ಹೊಣೆಗಾರನಾಗಿ ಮಾಡುವ ಅಮ್ಮನ ಅನಿಸಿಕೆ ತಪ್ಪು ಎಂದು ಆಗಾಗ ನನಗನ್ನಿಸತೊಡಗಿತು.
![]() |
ಸಂಧರ್ಭ 4
ಅದೃಷ್ಟಕ್ಕೆ ಇಂದು ಮನೆ ಮನೆಗಳಲ್ಲೂ ನಲ್ಲಿಯ ನೀರು ಬರುತ್ತಲಿದೆ. ಈಗ ಮೊದಲಿನಂತೆ ಕುಡಿಯುವ ನೀರಿಗೆ ತೊಂದರೆಯೇನಿಲ್ಲ ಆದರೆ ಇಂದು ನಾವು ಕುಡಿಯುತ್ತಿರುವ ನೀರು ಮೊದಲಿನಂತೆ ಪರಿಶುದ್ಧವಾಗಿಲ್ಲ. ಒಂದು ಲೀಟರ್ ಕುಡಿಯುವ ನೀರಿಗಾಗಿ, ಐದು ಲೀಟರ್ ನೀರನ್ನ ವ್ಯರ್ಥಮಾಡುವ ಸ್ತಿತಿಗೆ ನಾವಿಂದು ಬಂದು ತಲುಪಿದ್ದೇವೆ. ದುರಂತವೆಂದರೆ ನಮ್ಮಲ್ಲಿರುವ ಬಹುತೇಕ ಕೆರೆಗಳು, ನೀರಿನ ಮೂಲಗಳು ಕಲುಷಿತಗೊಂಡಿವೆ. ವರದಿಗಳ ಪ್ರಕಾರ ದೇಶದ ನೀರಿನ 70% ಭಾಗ ಮಾಲಿನ್ಯಗೊಂಡಿದೆ. ಈಗಲೂ ದೇಶದ 50% ಅಧಿಕ ಗ್ರಾಮೀಣ ಮಹಿಳೆಯರು ಮತ್ತು ಹೆಣ್ಣುಮಕ್ಕಳು ದಿನನಿತ್ಯದ ಬಹಳ ಸಮಯವನ್ನು ನೀರು ತರಲು ವ್ಯಯಿಸುತ್ತಾರೆಂದು ನೀತಿ ಆಯೋಗದ ವರದಿಗಳು ಹೇಳುತ್ತವೆ.
2030ರೊಳಗೆ ಭಾರತದ 40% ಜನಸಂಖ್ಯೆಗೆ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತವೆ. ಸುರಕ್ಷಿತ ಕುಡಿಯುವ ನೀರಿನ ಸಮರ್ಪಕ ವ್ಯವಸ್ತೆಯಿರದೆ ಪ್ರತೀ ವರ್ಷವೂ ಎರಡು ಲಕ್ಷ ಜನರು ಸಾವನ್ನಪ್ಪುತ್ತಾರೆ ಎಂದು ವರದಿಗಳು ಹೇಳುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಬೇಸಿಗೆಯ ಕಾಲದಲ್ಲಿ, ತೀವ್ರ ನೀರಿನ ಕೊರತೆ ಕಾಣಿಸಿಕೊಳ್ಳುತ್ತದೆ. ಈ ಬವಣೆಯು ಈಗಲೂ ನಿರಂತರವಾಗಿದೆ. ಹಿಂದುಳಿದ ಕೆಲವು ಹಳ್ಳಿಗಳಲ್ಲಿ ಈಗಲೂ ಈ ವ್ಯವಸ್ತೆಯು ಬದಲಾಗಿಲ್ಲ.
ದೇಶದಲ್ಲಿ ಎಲ್ಲದಕ್ಕೂ ಸಂಬಂಧಿಸಿದ ಇಲಾಖೆಗಳಿವೆ, ಅಧಿಕಾರಿಗಳಿದ್ದಾರೆ, ಮಿನಿಸ್ಟರ್‌ಗಳಿದ್ದಾರೆ. ಎಲ್ಲರೂ ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ಯೋಚಿಸಿ ಸಮಾಧಾನ ಪಟ್ಟುಕೊಳ್ಳಬೇಕಷ್ಟೇ!
ಮನೆಯ ಮುಂದಿನ ರಸ್ತೆಗಳು ಗುಂಡಿಮಯವಾಗಿದೆ. ಆ ರಸ್ತೆಗಳಲ್ಲಿ ಬಿದ್ದು ಕೈಕಾಲು ಮುರಿದುಕೊಂಡ, ಪ್ರಾಣ ಕಳೆದುಕೊಂಡ, ಜೀವನವಿಡೀ ಅಂಗವಿಕಲನಾಗುಳಿದ ವ್ಯಕ್ತಿಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಮ್ಮ ನಿರ್ಲ್ಯಕ್ಷದ ಕಾರಣವಿದು ಎನ್ನುವ ಆಲೋಚನೆಯೇ ಇರುವುದಿಲ್ಲ. ಕೆಲವು ಅಧಿಕಾರಿಗಳಿಗೆ ರಸ್ತೆ ಕೆತ್ತಿದ ನೆನಪೇ ಇರುವುದಿಲ್ಲ. ಕೆಲವೊಮ್ಮೆ ತಿಂಗಳಾದರೂ ಕಸದ ಗಾಡಿಗಳು ಬರುವುದೇ ಇಲ್ಲ. ಕಸ ಎತ್ತುವ ಪೌರ ಕಾರ್ಮಿಕರಿಗೆ ಹಲವು ತಿಂಗಳು ಸಂಬಳವೇ ಸಿಕ್ಕಿರುವುದಿಲ್ಲ. ಅಧಿಕಾರಿಗಳು ಪ್ರತಿ ತಿಂಗಳೂ ಸಂಬಳವನ್ನ ಎಣಿಸುತ್ತಾರೆ, ಆದರೆ ತಮ್ಮ ಕರ್ತವ್ಯವನ್ನು ಮರೆಯುತ್ತಾರೆ. ಅಧಿಕಾರಗಳು ಮಾಡುವ ತಪ್ಪಿಗೆ ಜನಸಾಮಾನ್ಯರು ತಮ್ಮ ಹಣೆಬರಹವನ್ನು, ದೇವರನ್ನು ದೂಷಿಸುತ್ತಾರೆ.
ಇಂದು ನಾವು ಕುಡಿಯುವ ನೀರು, ತಿನ್ನುವ ಆಹಾರ, ಸೇವಿಸುವ ಗಾಳಿಯೂ ಕೂಡ ಕಲುಷಿತವಾಗಿದೆ ಎಂದು ವರದಿಗಳು ಹೇಳುತ್ತವೆ. ನಮ್ಮಲ್ಲಿ ಕೇವಲ ಗುಂಡಿಬಿದ್ದ ರಸ್ತೆಗಳಷ್ಟೇ ಅಲ್ಲ, ಗುಂಡಿಬಿದ್ದ ಮನಸ್ಸುಗಳ ಅಧಿಕಾರಿಗಳೂ ಇದ್ದಾರೆ. ಜನಸಾಮಾನ್ಯರ ಕಷ್ಟ ಅವರಿಗೆ ಅರ್ಥವಾಗುವುದೇ ಇಲ್ಲ. ರಸ್ತೆ ನಿರ್ಮಿಸುವುದು, ಮತ್ತದೇ ರಸ್ತೆಗಳನ್ನ ಕೆತ್ತುವುದು, ಹಗಲಿನಲ್ಲೂ ಬೀದಿ ದೀಪ ಬೆಳಗುವುದು, ಸಣ್ಣ ಸರ್ಕಾರಿ ಕೆಲಸಕ್ಕೆ ತಿಂಗಳುಗಳ ಕಾಲ ಅಲೆದಾಡಿಸುವುದು, ಹಿರಿಯ ನಾಗರೀಕರು ಕಾರ್ಡುಗಳಿಗೆ ನಿತ್ಯವೂ ಕಚೇರಿಗೆ ಅಲೆಯುವುದು, ಪಿಂಚಣಿಗಾಗಿ, ಬಿಪಿಎಲ್ ಕಾರ್ಡುಗಳಿಗಾಗಿ, ಮೂಲಭೂತ ಅವಶ್ಯಕತೆಗಳಿಗಾಗಿ ಅಲೆದಾಡಿ ಬದುಕಿನ ಭರವಸೆಯನ್ನೆ ಕಳೆದುಕೊಂಡಿರುವ ಜನಸಾಮಾನ್ಯರ ಸಂಕಟಗಳು ಹಾಗೆಯೇ ಉಳಿದಿವೆ. “ಭ್ರಷ್ಟರಿಗೆ ತಮ್ಮ ಭ್ರಷ್ಟತನದ ಬಗ್ಗೆ ಬೇಸರವೇ ಇರುವುದಿಲ್ಲ”
“ಸರ್ಕಾರಿ ಕೆಲಸ ದೇವರ ಕೆಲಸ” ಎನ್ನುವ ಏಕೈಕ ಕಾರಣಕ್ಕೆ ಅಮ್ಮ ದೇವರ ನೆನಪು ಮಾಡಿಕೊಳ್ಳುತ್ತಿದ್ದಳೇನೋ, ನಾನರಿಯೇ? ಅಮ್ಮನಂತೆ ನೊಂದಿರುವ, ಯಾರಿಗೂ ಏನನ್ನೂ ಹೇಳಿಕೊಳ್ಳಲಾಗದ ವ್ಯವಸ್ಥೆಯೊಡನೆ ಸಿಕ್ಕಿ ನಲುಗುವ ನೂರಾರು ವ್ಯಕ್ತಿತ್ವಗಳು ಈಗಲೂ ಅಮ್ಮನ ಮಾತನ್ನ ಹೇಳುತ್ತಲಿವೆ “ದೇವ್ರೇ ನಮಗ್ಯಾಕೆ ಈ ಸಂಕಟ ತಂದ್ಬಿಟ್ಟೆ”??
