Telegram Join My Telegram WhatsApp Join My WhatsApp

ಸಮಚಿತ್ತ ವ್ಯಕ್ತಿತ್ವ

ಕೆಲವು ವ್ಯಕ್ತಿಗಳನ್ನು ಅವರ ಬಹಿರಂಗದ ವ್ಯವಹಾರಗಳಿಂದ ಗುರುತಿಸುವುದು ಬಲು ಕಷ್ಟ. ಏಕೆಂದರೆ ಅವರು ಎಲ್ಲರಂತೆ ಸಾಮಾನ್ಯವಾಗಿ ಕಾಣುತ್ತಾರೆ; ಅವರಲ್ಲಿರುವ ವಿಶೇಷತೆಯು ಮೊದಲ ನೋಟದಲ್ಲಿ ಇತರರಿಗೆ ಸುಲಭವಾಗಿ ಗೋಚರಿಸುವುದಿಲ್ಲ; ಹಾಗೂ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಮುಂದಾಗುವುದೇ ಇಲ್ಲ. ಆದರೆ ಅವರ ನಡೆ-ನುಡಿ, ಮಾತಿನ ಶೈಲಿ, ಯೋಚನೆ, ಬದುಕಿನ ಬಗ್ಗೆ ಅವರಿಗಿರುವ ದೃಷ್ಟಿಕೋನ ಮತ್ತು ಇತರರೊಂದಿಗೆ ಅವರು ವರ್ತಿಸುವ ರೀತಿಯಲ್ಲಿ ಸ್ಪಷ್ಟವಾದ ವಿಭಿನ್ನತೆ ಕಾಣಿಸುತ್ತದೆ. ಈ ರೀತಿಯಿರುವ ವಿಭಿನ್ನ ಗುಣಗಳ ಸಮೂಹವೇ ಅವರ ವ್ಯಕ್ತಿತ್ವವನ್ನು ಇತರರಿಗಿಂತ ಭಿನ್ನವಾಗಿಸಿ ಹಲವರಲ್ಲಿ ಮೋಡಿಯನ್ನ ಮಾಡುತ್ತದೆ. ವ್ಯಕ್ತಿಯೊಬ್ಬ ಸಮಚಿತ್ತ ಎಂಬುದನ್ನು ಅರಿಯಲು ಕೆಲವು ಸೂಕ್ಷ್ಮ ವಿಷಯಗಳನ್ನ ಗಮನಿಸಲೇಬೇಕು.

ಸಮಚಿತ್ತದ ಏಕಾಂತ ಪ್ರಿಯರು

ಸಮಚಿತ್ತವುಳ್ಳವರು ಸಾಮಾನ್ಯವಾಗಿ ಏಕಾಂತ ಪ್ರಿಯರು. ದಿನದ ಹೆಚ್ಚು ಸಮಯ ಅವರು ಏಕಾಂತವಾಸಿಗಳಾಗಿರುತ್ತಾರೆ. ಇತರರೊಡನೆ ಬೆರೆಯುವುದು ಅವರಿಗೆ ಇಷ್ಟವಿಲ್ಲ ಎನ್ನುವ ಕಾರಣದಿಂದಲ್ಲ. ಬದಲಿಗೆ, ತಮಗೆ ಇಷ್ಟವಿರದ, ಅವಶ್ಯಕತೆಯೇ ಇಲ್ಲದ, ಬೇಡದ ಮಾತುಗಳಲ್ಲಿ ಕಾಲಹರಣ ಮಾಡಲು ಅವರು ಬಯಸುವುದಿಲ್ಲ.

ಏನನ್ನಾದರೂ ಮಾಡುತ್ತಲೇ ಇರುತ್ತಾರೆ

ನಿಮಗೆ ಗೊತ್ತೆ ಸಮಚಿತ್ತವುಳ್ಳವರು ಸುಮ್ಮನೇ ಕುಳಿತಿರಲಾರರು. ಏನನ್ನಾದರೂ ಮಾಡುತ್ತಲೇ ಇರುತ್ತಾರೆ. ಅದೂ ಏಕಾಂಗಿಯಾಗಿ. ಅವರಿಗೆ ಹಲವು ಹವ್ಯಾಸಗಳಿರುತ್ತವೆ. ಈ ಹವ್ಯಾಸಗಳಿಂದಲೇ ಅವರಿಗೆ ಇತರರ ಸಖ್ಯ ಬೇಕೆನಿಸುವುದಿಲ್ಲ. ಅವರ ಹವ್ಯಾಸಗಳನ್ನು ಓದುವುದು, ಬರೆಯುವುದು, ಚಿತ್ರಕಲೆ, ಸಂಗೀತ, ಧ್ಯಾನ, ಇತ್ಯಾದಿ ಎಂದು ಹೇಳಬಹುದು. ಕೆಲವು ಸಮಚಿತ್ತದ ಗೆಳೆಯರು ಗಂಟೆಗಟ್ಟಲೇ ಏನನ್ನೂ ಮಾಡದೆ ಸುಮ್ಮನೇ ಕುಳಿತಿರಬಲ್ಲರು. ನಿಮ್ಮ ಜೊತೆ ನೀವು, ಏಕಾಂತದಲ್ಲಿ ಸುಮ್ಮನೇ ಕುಳಿತಿರುವುದು ಸಾಮಾನ್ಯ ಸಂಗತಿಯೇನಲ್ಲ. ನಿಮ್ಮೊಂದಿಗೆ ನೀವು ಗೆಳೆತನವನ್ನ ಒಮ್ಮೆಯಾದರೂ ಮಾಡಿ ನೋಡಿ.

ಚಿಕ್ಕಮಗುವಿಗೆ ತಾನೆಂದೂ ಏಕಾಂಗಿಯೆಂದು ಅನ್ನಿಸುವುದೇ ಇಲ್ಲ. ಏಕೆಂದರೆ ಅದಕ್ಕೆ ತನ್ನದೇ ಆದ ವಿಶಾಲ ಪ್ರಪಂಚವಿದೆ. ಈಗತಾನೇ ಜನಿಸಿದ ಜೀವಿಗಳಲ್ಲಿಯೂ ಕೂಡ ಜೀವನಪ್ರೀತಿ ಹೆಚ್ಚೆಚ್ಚು ಉಪಸ್ತಿತಿಯಲ್ಲಿರುತ್ತದೆ. ಸಮಚಿತ್ತದವರು ಚಿಕ್ಕಮಗುವಿನಂತೆ ಎಲ್ಲರಲ್ಲಿಯೂ, ಎಲ್ಲೆಡೆಯೂ ಸಂತಸವನ್ನ, ಸೊಬಗನ್ನ ಕಾಣಬಲ್ಲರು. ಅವರದ್ದು ಅಂತರಂಗದ ದೃಷ್ಟಿ. ನಾವು ಕೇವಲ ನಮ್ಮ ಕಣ್ಣುಗಳಿಂದ ಮಾತ್ರ ನೋಡುತ್ತೇವೆ. ಕಿವಿಯಿಂದ ಮಾತ್ರ ಕೇಳುತ್ತೇವೆ. ಆದರೆ ಅವರು ತಮ್ಮ ಅಂತರಂಗದ ಧ್ವನಿಗೆ ಯಾವ ಸಮಯದಲ್ಲಿ ಬೇಕಾದರೂ ಕಿವಿಯಾಗಬಲ್ಲರು, ಕಣ್ಣಾಗಬಲ್ಲರು.

ಸಮಚಿತ್ತದ ವ್ಯಕ್ತಿಗಳಿಗೆ ಗುಂಪಿನಲ್ಲಿದ್ದು ವ್ಯರ್ಥ ಕಾಲಹರಣ ಮಾಡುವುದು, ಅನಾವಶ್ಯಕ ಮಾತುಗಳು, ಇವರಿಗೆ ಸೇರುವುದಿಲ್ಲ. ಇವರು ಸಾಮಾನ್ಯವಾಗಿ ಕಡಿಗೆ ಸಂಖ್ಯೆಯ ಗೆಳೆಯರನ್ನ ಹೊಂದಿರುತ್ತಾರೆ. ಸಂಬಂಧಿಕರೂ ಇವರಿಗೆ ಹತ್ತಿರವಾಗಬೇಕೆಂದೇನಿಲ್ಲ, ಇವರು ತಮ್ಮ ನಡತೆಗೆ ಸೂಕ್ತವೆನ್ನಿಸಿದ ವ್ಯಕ್ತಿಗಳೊಡನೆ ಮಾತ್ರ ನಿಖಟ ಸಂಪರ್ಕವನ್ನು ಇರಿಸಿಕೊಳ್ಳುತ್ತಾರೆ.

ಎಲ್ಲ ಸಮಯದಲ್ಲೂ, ಎಲ್ಲ ವಿಷಯದಲ್ಲೂ ಬೇಸರವೇ ಇಲ್ಲದೆ ಮಾತನಾಡುವ, ಎಲ್ಲವನ್ನೂ ತಿಳಿದವರಂತೆ ನಟಿಸುವ ವ್ಯಕ್ತಿಗಳು ಸತ್ಯಸಂಧರಾಗಿರುವುದಿಲ್ಲ; ಅಥವಾ ಅವರ ಉದ್ದೇಶಗಳೆಲ್ಲವೂ ಶುದ್ಧವಾಗಿರುವುದಿಲ್ಲ ಎಂಬುದನ್ನು ಏಕಾಂತವಾಸಿಗಳು ತಮ್ಮ ಜೀವನದ ಅನುಭವದಿಂದ ಅರಿತಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಭಾವನೆಗಳನ್ನು ಹಾಗೂ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಯಾವ ತ್ಯಾಗಕ್ಕಾದರೂ ಅವರು ಸದಾ ಸಿದ್ಧರಿರುತ್ತಾರೆ.

ಒಂಟಿತನ, ಏಕಾಂತ, ಮೌನ, ಜನಸಾಮಾನ್ಯರಿಗೆ ಬೇಸರ ಮತ್ತು ಭಯವನ್ನು ಉಂಟುಮಾಡಿದರೆ, ಸಮಚಿತ್ತವುಳ್ಳವರಿಗೆ ಅದು ಶಾಂತಿ ನೆಮ್ಮದಿಯನ್ನು ನೀಡುವ, ತನ್ನೊಳಗೇ ಆಳವಾದ ಚಿಂತನೆಗೆ ಹಾದಿ ತೋರುವ ಕ್ಷಣವಾಗಿರುತ್ತದೆ. ಪ್ರಾಪಂಚಿಕರು ಬೇಡವಾದ ವಿಷಯವನ್ನು ಮಾತನಾಡುತ್ತಲೇ, ತಮ್ಮ ಜೀವನವನ್ನು ಕಳೆಯುತ್ತಾರೆ, ಆದರೆ ಏಕಾಂತಪ್ರಿಯರು ತಮ್ಮೊಳಗೇ ಮುಳುಗಿ ಅನಗತ್ಯ ಗೊಂದಲಗಳಿಗೆ ಉತ್ತರವನ್ನ ಕಂಡುಕೊಳ್ಳುತ್ತಾರೆ ಹಾಗೂ ಕೆಲಕ್ಷಣಗಳ ಏಕಾಂತದಲ್ಲಿ ಅವರು ಶಕ್ತಿಯ ಕೇಂದ್ರವೇ ಆಗಿಬಿಡುತ್ತಾರೆ.

ಸ್ವಾರ್ಥಿಗಳ ಅಂತರಂಗವು ಸದಾ ಗೊಂದಲಗಳಿಂದ, ಬೇಡವಾದ ಪ್ರಾಪಂಚಿಕ ಚಿಂತನೆಗಳಿಂದ ತುಂಬಿರುತ್ತದೆ. ಪ್ರಾಪಂಚಿಕರೆಂದೂ ಸುಮ್ಮನಿರಲಾರರು, ಅವರಿಗೆ ಏಕಾಂತದ ಮೌನವು ಬೇಸರ, ಭಯವನ್ನ, ಗಾಬರಿಯನ್ನ ಉಂಟು ಮಾಡುತ್ತದೆ. ತುಮುಲಗಳಿಲ್ಲದೆ ಪ್ರಾಪಂಚಿಕರು ನೆಮ್ಮದಿಯನ್ನ ಕಾಣುವುದಿಲ್ಲ. “ಶುದ್ಧ ಪ್ರಾಪಂಚಿಕರು ಹಾಗೂ ಸ್ವಾರ್ಥಿಗಳು, ಕತ್ತಲೆಯ, ಮೌನದ, ನಿಶ್ಯಬ್ದದ, ಪ್ರಕೃತಿಯ, ಶಾಂತಿಯ ಸೊಬಗನ್ನು ತಮ್ಮ ಜೀವನದಲ್ಲಿ ಎಂದಿಗೂ ಅರಿಯಲಾರರು.”

ಮೌನದ ಸೊಬಗನ್ನ ಸವಿಯಲು ಏಕಾಂತದ ಗೆಳೆತನವನ್ನ ಮಾಡಿನೋಡಿ!

ಸಮಚಿತ್ತವುಳ್ಳ ವ್ಯಕ್ತಿಗಳ ಅಂತರಂಗದಲ್ಲಿ ತುಮುಲಗಳು ಏಳುವುದೇ ಇಲ್ಲವೆಂದಲ್ಲ. ಅವರು ಎಲ್ಲ ಸಂಕಟಗಳನ್ನ ಎದುರಿಸುತ್ತಾರೆ. ಘರ್ಷಣಗಳಿಲ್ಲದೆ ಜೀವನ ಸಾದ್ಯವಿಲ್ಲ ಎಂಬುದನ್ನ ಅವರು ಅರಿತಿದ್ದಾರೆ. ಆ ಕಾರಣದಿಂದ ಬೇಕೆಂದೇ ಸಂಕಟಗಳನ್ನ ಅವರು ಸ್ವಾಗತಿಸುವುದಿಲ್ಲ, ಹಾಗೂ ಸಂಕಟಗಳ ಸೃಷ್ಠಿಗೆ ತಾವೇ ಕಾರಣರಾಗುವುದಿಲ್ಲ.

ಅವರು ಯಾವುದೇ ಕಾರ್ಯವನ್ನು ಮಾಡುವಾಗ, ಮಾತನಾಡುವಾಗ, ಆಳವಾಗಿ ಯೋಚಿಸುತ್ತಾರೆ. ಅವರು ಸುಲಭದ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ನಿರ್ಣಯದ ಬಗ್ಗೆ, ತಾವು ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಸ್ಪಷ್ಟತೆಯಿದೆ. ಅವರು ತಮ್ಮ ನಡೆನುಡಿಯಲ್ಲಷ್ಟೇ ಅಲ್ಲದೆ, ತಾವು ಕೈಗೊಳ್ಳುವ ಪ್ರತಿ ಕ್ರಿಯೆಯ ಪರಿಣಾಮವನ್ನೂ, ಆಗುಹೋಗುಗಳನ್ನ ಬಲ್ಲರು. ಆ ಕಾರಣದಿಂದ ಅವರು ಯೋಚಿಸಿ, ಎಲ್ಲವನ್ನೂ ಅಳೆದು ತೂಗಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಹಾಗೆಂದು ಅವರು ಜಿಪುಣರೂ ಅಲ್ಲ. “ಸದಾ ಗೊಣಗುಟ್ಟುತ್ತಿರುವ ವ್ಯಕ್ತಿಯು ಸಾಧಿಸಲಾಗದ್ದನ್ನ ಸಮಚಿತ್ತವುಳ್ಳ ವ್ಯಕ್ತಿ ಮೌನವಾಗಿ ಸಾಧಿಸಬಲ್ಲರು.”

ಸಮಚಿತ್ತವುಳ್ಳವರಿಗೆ ಸಮಾಜಹಿತ ಚಿಂತನೆಯಿರುತ್ತದೆ. ಸಕಲ ಜೀವಿಗಳ ಒಳಿತನ್ನೂ ಅವರು ಯೋಚಿಸುತ್ತಾರೆ. ತಮ್ಮ ವಿಶಾಲ ಚಿಂತನೆಯ ಕಾರ್ಯದ ಬಗ್ಗೆ ಅವರೆಂದೂ ಹೇಳಿಕೊಳ್ಳುವುದಿಲ್ಲ. ಅವರಿಗೆ ತಮ್ಮ ಕೆಲಸದ ಮೇಲೆ ಸಂಶಯವಾಗಲಿ, ಸಂದೇಹವಾಗಲಿ ಇರುವುದೇ ಇಲ್ಲ. “ಅವರ ಸಂದೇಹವೂ ಸ್ಪಷ್ಟತೆಯಿಂದ ಕೂಡಿರುತ್ತದೆ ಎಂದು ಹೇಳಬಹುದು.”

ಅವರು ತಮಗೆ ತಿಳಿಯದ ವಿಷಯವನ್ನ ಇತರರಿಂದ ಕೇಳಿ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಹಾಗೆ ಇತರರಿಂದ ಕೇಳಿ ತಿಳಿಯುವುದು ತಮ್ಮ ಯೋಗ್ಯತೆಗೆ ಚಿಕ್ಕದೆಂದು ಅವರು ಭಾವಿಸುವುದಿಲ್ಲ, ಹಾಗೂ ಅವರೆಂದೂ ಕೀಳರಿಮೆಯಿಂದ ಬಳಲುವುದೇ ಇಲ್ಲ. ಸಮಚಿತ್ತವುಳ್ಳವರು ಏಕಾಂತವಾಸಿಗಳಷ್ಟೇ ಅಲ್ಲ, ಉತ್ಸಾಹಿಗಳೂ ಕೂಡ.

ಸಮಚಿತ್ತವುಳ್ಳವರು ಇತರರನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಇತರರು ಅವರನ್ನು ಸುಲಭವಾಗಿ ಮೋಸಗೊಳಿಸಲಾಗುವುದಿಲ್ಲ. ನಿಜ ಹೇಳಬೇಕೆಂದರೆ ಅವರು ಸೋತು ನಿಮ್ಮನ್ನು ಗೆದ್ದಿರುತ್ತಾರೆ. ಬಹುಷ ಈ ವಿಷಯವು ನಮಗೆ ಅರ್ಥವಾಗಲು ವರುಷಗಳೇ ಕಳೆದು ಹೋಗಬಹುದೇನೋ? ನಿಮ್ಮೊಡನೆ ವಾದ ಮಾಡಲು ಒಪ್ಪದೇ, ನಿಮ್ಮ ಮನಸ್ಸಿಗೆ ಘಾಸಿ ಮಾಡಲು ಒಪ್ಪದೇ, ನಿಮ್ಮ ಬಗ್ಗೆ ನಿಮಗೆ ಇಷ್ಟವಿಲ್ಲದ ಯಾವೊಂದು ವಿಷಯವನ್ನೂ ಅವರು ಎಂದಿಗೂ ಹೇಳಲಾರರು. ನಿಮ್ಮ ದೃಷ್ಟಿಕೋನದಂತೇ ಅವರು ನಿಮ್ಮನ್ನು ಅರ್ಥಮಾಡಿಕೊಂಡಿರುತ್ತಾರೆ. ಸಮಚಿತ್ತವುಳ್ಳವರು, ನಿಮ್ಮ ಬಗ್ಗೆ ನೀವೂ ತಿಳಿದಿರದ ವಿಷಯವನ್ನು ತಿಳಿದುಕೊಂಡಿರುತ್ತಾರೆ. ಅದಕ್ಕೇ ಅವರು ನಿಮ್ಮೊಡನೆ ಮಾತಿನ ಯುದ್ಧಕ್ಕಿಳಿಯುವುದಿಲ್ಲ. ಇತರರನ್ನು ಪ್ರೇರೇಪಿಸುವ ಯಾವೊಂದು ಕ್ಷಣವನ್ನೂ ಅವರು ವ್ಯರ್ಥ ಮಾಡುವುದೇ ಇಲ್ಲ.

ಇತರರ ಸಣ್ಣ ಕೆಲಸವನ್ನೂ ಕೊಂಡಾಡುವ ಅವರು ತಮ್ಮ ಹಿರಿಮೆಯನ್ನ ಎಂದಿಗೂ ಹೇಳಿಕೊಳ್ಳುವುದಿಲ್ಲ. ನಿಮ್ಮ ಒಂದು ಮುಖಭಾವ, ನೀವು ಆಡುವ ಒಂದು ಮಾತು, ನಿಮ್ಮ ನಗು, ಮಾತಿನ ಕಳಕಳಿ, ನಿಮ್ಮ ಒಂದು ಸಣ್ಣ ನಡೆಯಿಂದ ನೀವೆಷ್ಟು ಜಾಗರೂಕರು ಎಂಬುದನ್ನ ಅವರು ಒಂದು ಕ್ಷಣದಲ್ಲಿ ತಿಳಿದುಬಿಡುತ್ತಾರೆ. ಆದರೂ ಅವರು ಇತರರ ಬಗ್ಗೆ ಎಂದಿಗೂ ತಪ್ಪು ನಿರ್ಣಯಕ್ಕೆ ಬರುವುದಿಲ್ಲ.

ಸಮಚಿತ್ತವುಳ್ಳವರು ಇತರರನ್ನು ಸುಲಭವಾಗಿ ನಂಬುವುದಿಲ್ಲ; ಹಾಗೂ ಅವರು ನಿಮ್ಮನ್ನು ಸಂಶಯಿಸುವುದೂ ಇಲ್ಲ. ಅವರು ಕೆಲ ಸಮಯದವರೆಗೆ ನಿಮ್ಮನ್ನು ನಂಬಿದವರಂತೆ ನಟಿಸುತ್ತಾರೆ. ನಿಮ್ಮನ್ನು ನಿರಂತರ ಪರೀಕ್ಷೆ ಮಾಡುತ್ತಲೇ ಇರುತ್ತಾರೆ. ಆ ಪರೀಕ್ಷೆಯಲ್ಲಿ ನೀವೊಮ್ಮೆ ಗೆದ್ದುಬಿಟ್ಟರೆ, ಅವರೆಂದೂ ನಿಮ್ಮನ್ನ ಸಂಶಯ ಮಾಡಲಾರರು; ಅವರ ಕೊನೆ ಉಸಿರಿರುವವರೆಗೂ.

ಸಮಚಿತ್ತವುಳ್ಳವರು ದೈಹಿಕವಾಗಿ ಬಲಿಷ್ಠರಾಗಿರಬೇಕೆಂಬುದಿಲ್ಲ. ಆದರೆ ಅವರೊಳಗಿನ ಧೈರ್ಯ, ವಿಶ್ವಾಸವು ಅಪಾರವಾಗಿರುತ್ತದೆ. ದೊಡ್ಡ ದೇಹಬಲ ಇರುವವನಿಗೂ ಇಲ್ಲದ ಮನೋಬಲ, ಸ್ಥೈರ್ಯ ಮತ್ತು ಧೈರ್ಯವು ಇವರಲ್ಲಿರುತ್ತದೆ. ಅವರ ಮನೋಬಲ ದೈತ್ಯನಿಗಿಂತಲೂ ಎತ್ತರೆತ್ತರ.

ಸಮಚಿತ್ತವುಳ್ಲವರು ಪ್ರಸಿದ್ಧಿಗಾಗಿ ಕೆಲಸ ಮಾಡುವುದಿಲ್ಲ. ತೋರಿಕೆಗಾಗಿ, ಮನ್ನಣೆಗಾಗಿ ಕೆಲಸ ಮಾಡುವುದೆಂದರೆ ಅವರಿಗೆ ಅಲರ್ಜಿ. ಅವರು ನಿತ್ಯಜಾಗೃತರು. ತಮ್ಮ ಮನಸ್ಸು ಒಪ್ಪದಿರುವುದನ್ನ ಮಾಡಲಾರರು. ತಮಗೆ ಸರಿಯೆಂದು ತೋರಿದ ಅಭಿಪ್ರಾಯವನ್ನು ಧೈರ್ಯವಾಗಿ ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ತಮ್ಮ ಈ ನಡುವಳಿಕೆಯ ಕಾರಣ ಸಮಾಜವಾಗಲಿ, ಸಂಬಂಧಿಗಳಾಗಲಿ, ಇತರರಾಗಲಿ ತಮ್ಮನ್ನು ತಿರಸ್ಕರಿಸುವರೆಂಬ ಏಕೈಕ ಕಾರಣಕ್ಕೂ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಇತರರ ಹೇಳಿಕೆಗಳಿಂದ ಅವರೆಂದೂ ಘಾಸಿ ಹೊಂದುವುದೇ ಇಲ್ಲ.

ಸಮಚಿತ್ತವುಳ್ಳವರು ಜೀವನದಲ್ಲಿ ಯಶಸ್ಸನ್ನ ಗಳಿಸದೇ ಹೋದರೂ, ತಮ್ಮನ್ನ ಇತರರೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಹಾಗೂ ಇತರರನ್ನು ಮೆಚ್ಚಿಸಲು ಬದಲಾಗುವುದಿಲ್ಲ. ಸಾವಿರ ಜನರು ಇಷ್ಟ ಪಡುತ್ತಾರೆನ್ನುವ ಏಕೈಕ ಕಾರಣಕ್ಕೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಇತರರಂತೆ ಅವರು ಜೀವನದ ಓಟದಲ್ಲಿ ಭಾಗಿಯಾಗುವುದಿಲ್ಲ. ಏನು ಬಂದರೂ, ಎಲ್ಲವೂ ಕಳೆದು ಹೋದರೂ ಅವರ ಸಮಚಿತ್ತತೆ ಹಾಗೆಯೇ ಉಳಿದಿರುತ್ತದೆ. ದೈಹಿಕ ನೋವಾಗಲಿ, ಅಸಂತೋಷವಾಗಲಿ ಅವರ ಬಳಿ ಸುಳಿಯುವುದೇ ಇಲ್ಲ. ಅವರು ಸಂಖ್ಯಾಬಲದ ಹಿಂದೆ ಓಡುವುದಿಲ್ಲ, ಆದರೆ ಗುಣಮಟ್ಟವನ್ನು ನಿರ್ಮಿಸುತ್ತಾರೆ. (They dońt believe in quantiţy but, they build Quality)

ಸಮಚಿತ್ತವುಳ್ಳವರೂ ನೋವನ್ನ ಅನುಭವಿಸುತ್ತಾರೆ.

ಆದರೆ ತಮ್ಮ ನೋವಿಗೆ ಬೇರೆಯವರನ್ನ ಹೊಣೆಗಾರರನ್ನಾಗಿ ಮಾಡುವುದಿಲ್ಲ. ಬದಲಿಗೆ ನೋವನ್ನ ನಲಿವಾಗಿ ಪರಿವರ್ತಿಸಿಕೊಂಡು, ತಮ್ಮನ್ನೇ ತಾವು ಉತ್ತಮಗೊಳಿಸಿಕೊಳ್ಳುತ್ತಾರೆ. ಅವರು ಯಾರಿಗೂ ನೋವು ನೀಡುವುದಿಲ್ಲ. ತಮ್ಮಲ್ಲಿರುವ ಕ್ಷಮಿಸುವ ಗುಣದಿಂದ ಮುಂದೆ ಸಾಗುತ್ತಾ, ನಿರಂತರವಾಗಿ ಬೆಳೆಯುತ್ತಾರೆ.

ಕೊನೆಯದಾಗಿ, ಅತ್ಯಂತ ಮುಖ್ಯವಾದ ವಿಷಯವೇನೆಂದರೆ, ಸಮಚಿತ್ತವುಳ್ಳವರು ಇತರರಿಗೆ ಏನನ್ನೂ ಸಾಬೀತುಪಡಿಸುವ ಅಗತ್ಯವಿರುವುದಿಲ್ಲ. ಅವರ ಮಾತುಗಳಂತೆ ಅವರ ಕಾರ್ಯಗಳೂ ಮಾತನಾಡುತ್ತವೆ. ಸಮಚಿತ್ತವುಳ್ಳವರು ಸಾಮಾನ್ಯವಾಗಿ ಸ್ವ-ಅವಲೋಕನ ಬೆಳೆಸಿಕೊಂಡಿರುತ್ತಾರೆ. ಅವರು ಭೂಲೋಕದ ದೇವತೆಗಳಂತೆ. ಏಕೆಂದರೆ ಅವರಿಗೆ ಅಪೇಕ್ಷೆಗಳು ಇರುವುದಿಲ್ಲ. ಅಥವಾ ಅವರ ಅಪೇಕ್ಷೆಗಳು ಅತ್ಯಂತ ಕಡಿಮೆ. ಕಡಿಮೆ ಮಾತು, ಹೆಚ್ಚು ಜೀವನ ಮೌಲ್ಯವೇ ಇವರ ಬದುಕಾಗಿರುತ್ತದೆ.

ಅವರು ತಮ್ಜ ದೇಹ ಮತ್ತು ಮನಸ್ಸನ್ನು ಶಿಸ್ತಿನಿಂದ ಕಾಪಾಡಿಕೊಂಡಿರುತ್ತಾರೆ. ನಿಯಮಿತ ನಿದ್ರೆ, ಅಲ್ಪ ಆಹಾರ, ವ್ಯಾಯಾಮ, ಸತ್‌ ಚಿಂತನೆಗಳು ಅವರ ಉನ್ನತ ಮನಸ್ಸಿನ ಸ್ಥಿತಿಗೆ ಕಾರಣವಾಗಿರುತ್ತದೆ. ಸಮಚಿತ್ತದ ವ್ಯಕ್ತಿತ್ವವುಳ್ಳವನಿಗೆ ತನ್ನ ಸಾಮರ್ಥ್ಯದ ಅರಿವಿರುತ್ತದೆ, ಹೀಗಾಗಿ ಅವನು ತನ್ನ ವರ್ತನೆಯನ್ನ ನಿಯಂತ್ರಿಸಬಲ್ಲ. ಅಂತಿಮವಾಗಿ, ಸಮಚಿತ್ತದ ವ್ಯಕ್ತಿಗಳೊಡನೆ ಎಲ್ಲರೂ ಬೆರೆಯುತ್ತಾರೆ. ಅವರನ್ನ ವಿರೋಧಿಸಲು ಯಾವ ಕಾರಣವೂ ಇರುವುದೇ ಇಲ್ಲ

Leave a Comment