ಒಂದು ದಿನದ ಜೈಲು ಅನುಭವ.
ಹೈದರಾಬಾದ್ನ ಹೊಸ ಆಕರ್ಷಣೆ, ಏಪ್ರಿಲ್ 28ರಿಂದ ಆರಂಭ
ಹೈದರಾಬಾದ್ ನಗರದ ಜನರಿಗೆ ಮತ್ತು ಪ್ರವಾಸಿಗರಿಗೆ ಈಗ ಒಂದು ವಿಚಿತ್ರವಾದ, ಆದರೆ ಅರ್ಥಪೂರ್ಣ ಅನುಭವ ಸಿಗಲಿದೆ. ಸಾಮಾನ್ಯವಾಗಿ ವಾರಾಂತ್ಯವನ್ನು ಕೆಫೆ, ಮಳಿಗೆ, ಅಥವಾ ಸಿನೆಮಾ ಹಾಲ್ಗಳಲ್ಲಿ ಕಳೆಯುವ ಜನರು, ಈಗ ಜೈಲು ಕೋಣೆಗಳಲ್ಲಿ ಒಂದು ದಿನ ಕಳೆದರೆ ಹೇಗಿರುತ್ತದೆ ಎಂಬುದನ್ನ ಖುದ್ದು ಅನುಭವಿಸಿ ತಿಳಿಯಬಹುದು. ಏಪ್ರಿಲ್ 28ರಿಂದ ಹೈದರಾಬಾದ್ನ ಚಂಚಲ್ಗುಡಾದ State Institute of Correctional Administration (ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಕರಕ್ಷನಲ್ ಅಡ್ಮಿನಿಸ್ಟ್ರೇಷನ್) (SICA) ಆವರಣದಲ್ಲಿ “ಜೈಲು ಮ್ಯೂಸಿಯಂ” ಆರಂಭವಾಗುತ್ತಿದೆ. ಇದರ ಜೊತೆಗೆ “ಫೀಲ್ ದ ಜೈಲು” ಅಥವಾ “ಒಂದು ದಿನ ಜೈಲು ಅನುಭವ” ಎಂಬ ವಿಶೇಷ ಕಾರ್ಯಕ್ರಮವನ್ನು ಪರಿಚಯಸಲಾಗುತ್ತಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಮನರಂಜನೆ ಅಲ್ಲ; ಆದರೆ ಜೈಲಿನೊಳಗಿನ ನೈಜ ಜೀವನವನ್ನು ಜನರಿಗೆ ಹತ್ತಿರದಿಂದ ಪರಿಚಯಿಸುವುದಾಗಿದೆ. ಜೈಲಿನಲ್ಲಿ ಖೈದಿಗಳ ಆಹಾರ, ದಿನಚರಿ, ನಿಯಮ-ಶಿಸ್ತಿನ ಕಟ್ಟುಪಾಡುಗಳು ಮತ್ತು ಖೈದಿಗಳ ಜೀವನ ಪರಿಸ್ಥಿತಿಗಳನ್ನು ನೇರವಾಗಿ ಅನುಭವಿಸಿ ತಿಳಿಯಲು ಈ ಕಾರ್ಯಕ್ರಮವು ಅವಕಾಶ ನೀಡುತ್ತದೆ. ಹೊರಗಿನಿಂದ ನೋಡಿದಾಗ ಜೈಲು ಜೀವನ ಹೇಗಿರಬಹುದು ಎಂಬ ಕಲ್ಪನೆಗಿಂತ, ತಾವೇ ಖುದ್ದಾಗಿ ಖೈದಿಯಂತೆ, ಜೈಲಿನ ಅನುಭವವನ್ನ ತಿಳಿಯುವುದು ಸಂಪೂರ್ಣ ವಿಭಿನ್ನವಾಗಿರುತ್ತದೆ.
ಈ ಯೋಚನೆ ಹೊಸದೇನಲ್ಲ. 2016ರಲ್ಲಿ ಸಂಗಾರೆಡ್ಡಿಯ ಹೆರಿಟೇಜ್ ಜೈಲು ಮ್ಯೂಸಿಯಂನಲ್ಲಿ ಇದೇ ರೀತಿಯ “ಫೀಲ್ ದ ಜೈಲು” (feel the jail) ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. 1796ರ ನಿಜಾಂ ಕಾಲದಲ್ಲಿ ನಿರ್ಮಿಸಲ್ಪಟ್ಟ ಈ ಜೈಲು, ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ನಂತರ ಮ್ಯೂಸಿಯಂ ಆಗಿ ಪರಿವರ್ತಿತವಾಯಿತು. ಈ ಸ್ತಳವು ಜೈಲಿನ ರೀತಿನೀತಿಗಳನ್ನ ಖುದ್ದು ತಿಳಿಯಲು ಅನುವು ಮಾಡಿಕೊಟ್ಟಿತ್ತು. ಐನೂರು (500) ರೂಪಾಯಿಗಳನ್ನ ಪಾವತಿಸಿ 24 ಗಂಟೆಗಳ ಕಾಲ ಜೈಲು ಜೀವನವನ್ನು ಅನುಭವಿಸಲು ಅವಕಾಶ ಇತ್ತು.
ವಿದ್ಯಾರ್ಥಿಗಳು, ಪ್ರವಾಸಿಗರು, ಕುಟುಂಬಗಳು ಮತ್ತು ಕಂಪನಿಗಳ ಗುಂಪುಗಳು ಸಹ ಈ ಅನುಭವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಯೋಜನೆಯ ವಿಶೇಷತೆ ಏನೆಂದರೆ, ಜೈಲು ಜೀವನವನ್ನು ಸುಂದರವಾಗಿ ತೋರಿಸುವ ಬದಲು ನಿಜವಾದ ಅನುಭವವನ್ನು ನೀಡುವುದಾಗಿತ್ತು.
ಸಂಗಾರೆಡ್ಡಿಯ ಯಶಸ್ಸಿನಿಂದ ಪ್ರೇರಿತಗೊಂಡು, ಈಗ ತೆಲಂಗಾಣ ಕಾರಾಗೃಹ ಇಲಾಖೆಯು ಈ ಯೋಜನೆಯನ್ನು ಹೈದರಾಬಾದ್ಗೆ ವಿಸ್ತರಿಸಿದೆ. ಚಂಚಲ್ಗುಡಾ ಜೈಲು ಆವರಣದಲ್ಲಿ ಸ್ಥಾಪಿತವಾಗುತ್ತಿರುವ ಈ ಮ್ಯೂಸಿಯಂ, ತೆಲಂಗಾಣದ ಕಾರಾಗೃಹ ವ್ಯವಸ್ಥೆಯ ಇತಿಹಾಸವನ್ನು ಪ್ರಾಚೀನ ಶಿಕ್ಷಾ ವಿಧಾನಗಳಿಂದ ಹಿಡಿದು ಆಧುನಿಕ ಸುಧಾರಣಾ ಕ್ರಮಗಳವರೆಗೆ ವಿವರಿಸುತ್ತದೆ. ಇಲ್ಲಿ ಪುನರ್ ನಿರ್ಮಿತ ಜೈಲು ಕೋಣೆಗಳು, ಹಳೆಯ ಸರಪಳಿಗಳು, ಖೈದಿಗಳು ಬಳಸುತ್ತಿದ್ದ ವಸ್ತುಗಳು ಮತ್ತು ಇತರೆ ಕೈಗಾರಿಕಾ ಸಾಧನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಆಡಿಯೋ-ವಿಜುವಲ್ ಪ್ರದರ್ಶನಗಳ ಮೂಲಕ ಖೈದಿಗಳ ದಿನಚರಿ, ನ್ಯಾಯಾಲಯಕ್ಕೆ ಹಾಜರಾಗುವ ಪ್ರಕ್ರಿಯೆಗಳು ಮತ್ತು ಕುಟುಂಬ ಸದಸ್ಯರ ಭೇಟಿಯ ಸಂಧರ್ಭಗಳನ್ನು ವಿವರಿಸಲಾಗುತ್ತದೆ. ಇದಲ್ಲದೆ, ಕೃಷಿ, ಹಸ್ತಲೋಮ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಳಗೊಂಡ ಜೈಲು ಕೈಗಾರಿಕೆಗಳನ್ನೂ ಇಲ್ಲಿ ಪರಿಚಯಿಸಲಾಗುತ್ತದೆ. ಇದರ ಮೂಲಕ ಖೈದಿಗಳ ಪುನರ್ವಸತಿ ಪ್ರಯತ್ನಗಳು ಹೇಗೆ ನಡೆಯುತ್ತವೆ ಎಂಬುದರ ಕುರಿತು ಸ್ಪಷ್ಟವಾದ ಅರಿವು ದೊರೆಯುತ್ತದೆ.
ಈ ಮ್ಯೂಸಿಯಂ ಅನುಭವವು ಕೇವಲ ಇತಿಹಾಸದ ಪರಿಚಯ ಮಾತ್ರವಲ್ಲದೆ; ಒಂದು ಶಿಕ್ಷಣಾತ್ಮಕ ಅನುಭವವೂ ಆಗಿದೆ. “ಫೀಲ್ ದ ಜೈಲು” ಕಾರ್ಯಕ್ರಮದ ವೇಳಾಪಟ್ಟಿ ಮತ್ತು ನೋಂದಣಿ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಈ ಅನುಭವವು ಜನರಿಗೆ ಸ್ವಾತಂತ್ರ್ಯದ ಮೌಲ್ಯ, ಅಪರಾಧದ ಪರಿಣಾಮಗಳು ಮತ್ತು ಜೈಲು ಜೀವನದ ಕಠಿಣ ಸತ್ಯಗಳನ್ನು ಅರ್ಥಮಾಡಿಸುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಲು ಉದ್ದೇಶಿಸಿದೆ.
ವಿಶೇಷವಾಗಿ ಯುವಜನತೆಗೆ ಇದು ಒಂದು ಎಚ್ಚರಿಕೆಯ ಅನುಭವವಾಗಿದ್ದು, ಉಪನ್ಯಾಸಗಳಿಗಿಂತ ನೇರ ಅನುಭವದ ಮೂಲಕ ಜೀವನ ಪಾಠವನ್ನು ನೀಡುತ್ತದೆ. ಹೈದರಾಬಾದ್ ನಿವಾಸಿಗಳಿಗೆ ಇದು ಸಾಮಾನ್ಯ ಮನರಂಜನೆಯಿಂದ ವಿಭಿನ್ನವಾದ, ಆಲೋಚನೆಗೆ ದಾರಿ ಮಾಡುವಂತಹ ಹೊಸ ಅನುಭವವಾಗಲಿದೆ. ಈ ಯೋಜನೆಯ ಮೂಲ ಉದ್ದೇಶ ನಿಜವಾದ ಜೀವನದ ಅರಿವು ತಿಳಿಸಿಕೊಡುವುದಾಗಿದೆ. ಈ ಯೋಜನೆಯು ಸೌಕರ್ಯಗಳಿಗಿಂತ ಹೆಚ್ದಾಗಿ ಬದುಕಿನ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನ ತಿಳಿದುಕೊಳ್ಳುವಂತೆ ಮಾಡಲಾಗಿದೆ.
ಇಂತಹ ಕಾರ್ಯಕ್ರಮಗಳು ನಮ್ಮ ಜೀವನದ ಮೌಲ್ಯಗಳನ್ನು ಮರುಪರಿಶೀಲಿಸಲು ಸಹಾಯ ಮಾಡುತ್ತವೆ. ಸ್ವಾತಂತ್ರ್ಯದ ಅರ್ಥವೇನು, ನಿಯಮಗಳನ್ನು ಪಾಲಿಸುವ ಮಹತ್ವವೇನು ಎಂಬುದನ್ನು ಮನಗಾಣಿಸಲು ಇದು ಒಳ್ಳೆಯ ಅವಕಾಶ. ಮನರಂಜನೆಗಿಂತ ಹೆಚ್ಚಿನ ಅರ್ಥ ಹೊಂದಿರುವ ಈ ಅನುಭವ, ಒಮ್ಮೆ ಪ್ರಯತ್ನಿಸಬೇಕಾದ ವಿಶಿಷ್ಟ ಪ್ರಯೋಗವೆಂದು ಹೇಳಬಹುದು.
ಸಂಗಾರೆಡ್ಡಿಯ “ಫೀಲ್ ದ ಜೈಲು” ವಿಭಿನ್ನ ಅನುಭವದ ಕಥೆ
ಇಂದಿನ ಕಾಲದಲ್ಲಿ ಜನರು ಸಾಮಾನ್ಯ ಹೋಟೆಲ್ಗಳಲ್ಲಿ ವಾಸಿಸುವುದಕ್ಕಿಂತ ವಿಭಿನ್ನ ಅನುಭವಗಳನ್ನು ಹುಡುಕುತ್ತಿದ್ದಾರೆ. ಟೆಂಟ್ನಲ್ಲಿ ವಾಸಿಸುವುದು, ಹಿಮಗುಹೆಗಳಲ್ಲಿ ಉಳಿಯುವುದು, ಬೆಟ್ಟದ ಅಂಚಿನಲ್ಲಿ ಕಾಲ ಕಳೆಯುವುದು ಇತ್ಯಾದಿ ಹೊಸ ಪ್ರಯೋಗಗಳು ಜನಪ್ರಿಯವಾಗುತ್ತಿವೆ. ಇದೇ ರೀತಿಯಲ್ಲಿ, ಒಂದು ದಿನ ಜೈಲಿನಲ್ಲಿ ಕಳೆದರೆ ಹೇಗಿರುತ್ತದೆ ಎಂಬ ಅನುಭವವೂ ಈಗ ಸಾಧ್ಯವಾಗಿದೆ.
ಹೈದರಾಬಾದ್ನಿಂದ ಸುಮಾರು 66 ಕಿಲೋಮೀಟರ್ ದೂರದಲ್ಲಿರುವ ಸಂಗಾರೆಡ್ಡಿಯ 220 ವರ್ಷ ಹಳೆಯ ಜಿಲ್ಲಾ ಕೇಂದ್ರ ಕಾರಾಗೃಹವನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇಲ್ಲಿ “ಫೀಲ್ ದ ಜೈಲು” ಎಂಬ ಯೋಜನೆಯಡಿ, ದಿನಕ್ಕೆ ಕೇವಲ ರೂ. 500 ಪಾವತಿಸಿ 24 ಗಂಟೆಗಳ ಕಾಲ ಜೈಲು ಜೀವನವನ್ನು ಅನುಭವಿಸಬಹುದು. ಇದು ಪ್ರವಾಸಿಗರಿಗೆ ಸಂಪೂರ್ಣ ವಿಭಿನ್ನವಾದ ಅನುಭವವನ್ನು ನೀಡುತ್ತದೆ.
ಈ ಅವಧಿಯಲ್ಲಿ ಭಾಗವಹಿಸುವವರಿಗೆ ಖಾದಿ ಬಟ್ಟೆಯ ಜೈಲು ಯೂನಿಫಾರ್ಮ್, ಉಕ್ಕಿನ ತಟ್ಟೆ ಮತ್ತು ಗ್ಲಾಸ್, ಸ್ನಾನದ ಹಾಗೂ ತೊಳೆಯುವ ಸಾಮಗ್ರಿಗಳು, ಮಂಚದ ವ್ಯವಸ್ಥೆ ಮತ್ತು ಫ್ಯಾನ್ ಸೇರಿದಂತೆ ಜೈಲು ನಿಯಮಾವಳಿಯ ಪ್ರಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆಹಾರವನ್ನು ಜೈಲು ಮೆನು ಪ್ರಕಾರವೇ ನೀಡಲಾಗುತ್ತದೆ. ಚಪಾತಿ, ಅಕ್ಕಿ, ರಸಂ, ಬೇಳೆ, ಕರ್ರಿ ಮತ್ತು ಮೊಸರು ಸೇರಿದಂತೆ ಸರಳ ಆಹಾರವನ್ನು ನೀಡಲಾಗುತ್ತದೆ.
ಇಲ್ಲಿ ಭಾಗವಹಿಸುವವರಿಗೆ ಕಡ್ಡಾಯ ಕೆಲಸದ ವೇಳಾಪಟ್ಟಿ ಇರದೇ ಇದ್ದರೂ, ತಾವು ವಾಸಿಸುವ ಕೋಣೆಯನ್ನು ಸ್ವಚ್ಛವಾಗಿಡುವುದು ಕಡ್ಡಾಯವಾಗಿದೆ. ಜೊತೆಗೆ ಸಸಿಗಳನ್ನು ನೆಡುವಂತಹ ಚಿಕ್ಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಈ ಮೂಲಕ ಜೈಲು ಜೀವನದ ಸರಳತೆ ಮತ್ತು ನಿಯಮಬದ್ಧತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಸಂಗಾರೆಡ್ಡಿಗೆ ತಲುಪುವುದು ಸಹ ಸುಲಭವಾಗಿದೆ. ಬೇಗಂಪೇಟ್ ವಿಮಾನ ನಿಲ್ದಾಣಕ್ಕೆ ಹಲವು ವಿಮಾನ ಸೇವೆಗಳು ಲಭ್ಯವಿದ್ದು, ರಸ್ತೆ ಮಾರ್ಗದ ಮೂಲಕ ಹೈದರಾಬಾದ್, ಸೆಕೆಂದ್ರಾಬಾದ್ ಸೇರಿದಂತೆ ಸುತ್ತಮುತ್ತಲಿನ ನಗರಗಳಿಂದ ಸುಲಭವಾಗಿ ತಲುಪಬಹುದು. ಹೀಗಾಗಿ ವಾರಾಂತ್ಯದ ಚಿಕ್ಕ ಪ್ರವಾಸಕ್ಕೆ ಇದು ಉತ್ತಮ ಆಯ್ಕೆಯಾಗಿದೆ.
ಸಂತಸವೆಂಬ ಬದುಕಿನ ಸೌಂದರ್ಯ! : ಓದಲು ಇಲ್ಲಿ ಕ್ಲಿಕ್ ಮಾಡಿ |
ಇದು ಎಲ್ಲಿದೆ?
- ಸ್ಥಳ: ಚಂಚಲ್ಗುಡಾ ಜೈಲು ಆವರಣ, ಹೈದರಾಬಾದ್
- ಸಂಸ್ಥೆ: SICA (ತರಬೇತಿ ಕೇಂದ್ರ)
- ಪರಿಸರ: ಕಾರ್ಯನಿರ್ವಹಿಸುತ್ತಿರುವ ಭದ್ರತಾ ಜೈಲು ಪ್ರದೇಶ
ಇದು ಕೇವಲ ಮ್ಯೂಸಿಯಂ ಅಲ್ಲ. ನೈಜ ಜೈಲು ಪರಿಸರದ ಒಂದು ಭಾಗ.
ಇಲ್ಲಿಯ ವಿಶೇಷತೆ ಏನು?
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಜೈಲು ಕೈದಿಯಂತೆ ಒಂದು ದಿನ ಕಳೆಯಬೇಕು. ಅದರಲ್ಲಿ:
- ಜೈಲಿನ ಆಹಾರ
- ನಿಗದಿತ ದಿನಚರಿ
- ಕಠಿಣ ನಿಯಮ-ಶಿಸ್ತಿನ ಅನುಸರಣೆ
- ಸರಳ ವಾಸಿಸುವ ವ್ಯವಸ್ಥೆ
- ನಿಯಂತ್ರಿತ ಸ್ವಾತಂತ್ರ್ಯ
ಇದು ಆರಾಮದಾಯಕ ಅನುಭವವಲ್ಲ — ನಿಜವಾದ ಜೀವನದ ಅನುಭವ.
ಜೈಲು ಮ್ಯೂಸಿಯಂನಲ್ಲಿ ಏನು ಇದೆ?
ಈ ಯೋಜನೆಯ ಜೊತೆಗೆ ಜೈಲು ಮ್ಯೂಸಿಯಂ ಕೂಡ ಇದೆ. ಇದರಲ್ಲಿ:
- ಜೈಲು ಕೋಣೆಗಳ ಮಾದರಿಗಳು
- ಹಳೆಯ ಸರಪಳಿಗಳು, ಕೈದಿಗಳ ಉಪಕರಣಗಳು
- ಇತಿಹಾಸದ ವಸ್ತುಗಳು
- ಆಡಿಯೋ-ವಿಜುವಲ್ ಪ್ರದರ್ಶನಗಳು
ಸಾಮಾನ್ಯ ಪ್ರವಾಸ ಅನುಭವಗಳಿಂದ ಬೇರೆ ಯಾವುದನ್ನಾದರೂ ಪ್ರಯತ್ನಿಸಲು ಇಚ್ಛಿಸುವವರಿಗೆ “ಫೀಲ್ ದ ಜೈಲು” ಒಂದು ಅಪರೂಪದ ಅವಕಾಶವಾಗಿದೆ. ಇದು ಕೇವಲ ವಿನೋದಕ್ಕಾಗಿ ಅಲ್ಲ, ಬದುಕಿನ ನಿಜವಾದ ಮೌಲ್ಯಗಳನ್ನು ಅರಿಯಲು ಸಹಾಯ ಮಾಡುವ ಅನುಭವವಾಗಿದೆ. ಈ ಅವಕಾಶವು ನಿಮ್ಮ ಬದುಕಿನಲ್ಲಿ ಒಮ್ಮೆ ವಿಶಿಷ್ಟ ನೆನಪಾಗಿ ಉಳಿಯಬಹುದು.