Telegram Join My Telegram WhatsApp Join My WhatsApp

ಸಂತಸದಿಂದ ಬದುಕುವುದು ಹೇಗೆ? ಸಂತೋಷ ಮತ್ತು ನೆಮ್ಮದಿಯ ಜೀವನ ರಹಸ್ಯಗಳು

ಸಂತಸದಿಂದ ಬದುಕುವುದು ಹೇಗೆ? ಸಂತೋಷ ಮತ್ತು ನೆಮ್ಮದಿಯ ಜೀವನ ರಹಸ್ಯಗಳು

ಸಂತಸದಿಂದ ಬದುಕುವುದು ಒಂದು ದೃಢ ನಿರ್ಧಾರ

ನಿಮ್ಮ ಹೃದಯದಲ್ಲಿ ಸಂತಸವಿದ್ದರೆ, ನೀವು ಹೇಗಿದ್ದರೂ, ಎಲ್ಲಿದ್ದರೂ ಸದಾ ನಗುತ್ತಲೇ ಇರುತ್ತೀರಿ. ಹೊರಗಿನ ಪರಿಸ್ಥಿತಿಗಳು, ಅಹಿತಕರ ವಿಷಯಗಳು, ಬೇರೆಯವರು, ಬೇಡವಾದ ಸಂಗತಿಗಳು ನಿಮ್ಮ ಸಂತಸವನ್ನು ಕಿತ್ತುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಜವಾದ ಸಂತಸವು ವ್ಯಕ್ತಿಗಳ ಒಳ ಮನಸ್ಸಿನಲ್ಲಿ ಮೂಡುವುದರಿಂದ, ಅದು ಸ್ಥಿರವಾಗಿಯೇ ಇರುತ್ತದೆ. ಏನೇ ಬಂದರೂ ನಾನು ಸಂತಸದಿಂದ, ನಗುಮೊಗದಿಂದ, ಭರವಸೆಯಿಂದ ಇರುತ್ತೇನೆ ಎನ್ನುವ ಗಟ್ಟಿ ತೀರ್ಮಾನವನ್ನು ನಾವು ಕೈಗೊಳ್ಳಬೇಕಷ್ಟೇ! ಏನು ಬಂದರೂ ಎದುರಿಸುತ್ತೇನೆ, ಮೇಲೆದ್ದು ನಿಲ್ಲುತ್ತೇನೆ ಎನ್ನುವ ಛಲವು ಬದುಕಿಗೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಸಂತಸವೇ ನಮ್ಮೆಲ್ಲರ ಬದುಕಿನ ಸೌಂದರ್ಯವಾಗಿದೆ. ಕೆಲವರು ನಿರಂತರ ಗೊಣಗುತ್ತಲೇ ಇರುತ್ತಾರೆ. ನೆಮ್ಮದಿಯಾಗಿ ಬದುಕುವುದು ಅವರಿಗೆ ತಿಳಿದಿರುವುದೇ ಇಲ್ಲ. ಬನ್ನಿ ಸಂತಸದಿಂದ ಬದುಕುವುದು ಹೇಗೆ? ಎಂಬುದನ್ನ ತಿಳಿಯೋಣ

ನಾವು ಯೋಚಿಸಿದಂತೆ ಬದುಕುತ್ತೇವೆ, ಬದುಕಿದಂತೆ ತೀರ್ಮಾನ ಕೈಗೊಳ್ಳುತ್ತೇವೆ. ತೀರ್ಮಾನ ಕೈಗೊಂಡಂತೆ ಕರ್ತವ್ಯವನ್ನು ಮಾಡುತ್ತೇವೆ. ಕರ್ತವ್ಯವನ್ನು ಮಾಡಿದ ರೀತಿಯಿಂದ ನಾವು ಎಂತಹ ವ್ಯಕ್ತಿಗಳೆಂದು ಗುರುತಿಸಿಕೊಳ್ಳುತ್ತೇವೆ. ಹೀಗಾಗಿ ಸರಿಯಾಗಿ ಯೋಚಿಸಿ, ಬದುಕುವ ನಿರ್ಧಾರವನ್ನು ನಾವು ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ನಮ್ಮ ಯೋಚನೆಗಳು ಮತ್ತು ಬದುಕು, ಸಮಾಜಮುಖಿ ಚಿಂತನೆಗಳಿಂದ ಕೂಡಿರಬೇಕು.

ಸಂತಸ ಮತ್ತು ಸಮಾಧಾನ ಒಂದೇ ಹೃದಯದ ಎರಡು ಮುಖಗಳು

ಸಂತಸದಿಂದಿರುವ ವ್ಯಕ್ತಿಗಳ ಮನಸ್ಸಿನಲ್ಲಿ ಅವರಿಗೆ ತಿಳಿಯದ ಶಾಂತಿ ಮತ್ತು ತೃಪ್ತಿ ನೆಲೆಸಿರುತ್ತದೆ. ಅವರು ಎಲ್ಲೆಡೆಯೂ, ಎಲ್ಲರಿಗೂ ಒಳಿತನ್ನೇ ಬಯಸುತ್ತಾರೆ. ನಿಮಗೆ ತಿಳಿಯದೆಯೇ, ಇತರರಲ್ಲಿಯೂ ಸಂತಸವನ್ನು ತರಲು ನೀವು ಕಾರಣವಾಗುತ್ತೀರಿ. ನಿಮ್ಮೊಡನಿರಲು ಎಲ್ಲರೂ ಬಯಸುತ್ತಾರೆ. ನಿಮ್ಮ ಸಾನಿಧ್ಯವು ಪ್ರೀತಿ, ಭರವಸೆ, ಸಮಾಧಾನದ ಬೆಳಕಿನಂತೆ ಪ್ರತಿಫಲಿಸುತ್ತದೆ, ಇತರರಿಗೆ ಶಾಂತಿಯನ್ನ ನೀಡುತ್ತದೆ.

ಉರಿಯುತ್ತಿರುವ ದೀಪವು ಬೆಳಕನ್ನು, ಶಾಂತಿಯನ್ನು ನೀಡಿದರೆ; ಉರಿಯುವ ಬೆಂಕಿ ಭಯವನ್ನು, ಬೆಳಕನ್ನು ನೀಡುತ್ತದೆ. ನಾವು ಏನಾಗಬೇಕೆಂದು ತೀರ್ಮಾನಿಸಬೇಕು. ಸದಾ ಸಂತಸದಿಂದಿರುವವರು ಎಂದಿಗೂ ಸಮಾಧಾನಿಗಳಾಗಿರುತ್ತಾರೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಸಂತಸ ಮತ್ತು ಸಮಾಧಾನಗಳು, ಒಂದೇ ಹೃದಯದ ಎರಡು ಪ್ರತಿಬಿಂಬಗಳು. ನಿಮ್ಮಲ್ಲಿ ಎಷ್ಟು ಸಮಾಧಾನವಿದೆಯೋ, ಅಷ್ಟೇ ಸಂತಸವೂ ನೆಲೆಸಿದೆ ಎಂದು ಹೇಳಬಹುದು.

ಮಕ್ಕಳ ಮನಸ್ಸು ಮತ್ತು ನಿಜವಾದ ಸಂತಸದ ಜೀವನ

ನಿಮ್ಮ ಮೊಗದ ನಗುವು ಇತರರಿಗೆ ಕಾಣಿಸಿದಂತೆ, ನಿಮ್ಮಾತ್ಮದ ಸೌಂಧರ್ಯದ ಕಾರಣದಿಂದ, ಇತರರು ನಿಮ್ಮಿಂದ ಆಕರ್ಷಿಸಲ್ಪಡುತ್ತಾರೆ. ಬೆಳಗುವ ದೀಪವು ಮತ್ತೊಂದು ದೀಪವನ್ನು ಬೆಳಗುವಂತೆ ನಿಮ್ಮ ಸನಿಹ ಬರುವ ಇತರರೂ ಸಂತಸ ಹೊಂದುತ್ತಾರೆ. ಸದಾ ನಗುತ್ತಲಿರುವ ಮೊಗವು ಸದಾ ಆಕರ್ಷಣೆಯಿಂದ ಕೂಡಿರುತ್ತದೆ. ಎಲ್ಲ ಸಮಯದಲ್ಲೂ ಸಂತಸದಿಂದಿರುವ ವ್ಯಕ್ತಿಗಳ ಮನಸ್ಸು, ಆಂತರ್ಯದಲ್ಲಿ ಮಕ್ಕಳ ಮನಸ್ಸಿನಂತಿರುತ್ತದೆ. ಅದಕ್ಕೇ ಅಲ್ಲವೇ, ಎಲ್ಲರೂ ಮಕ್ಕಳನ್ನ ಇಷ್ಟ ಪಡುವುದು. ಮಕ್ಕಳ ಜೊತೆ ಇರುವ ಸಮಯದಲ್ಲಿ ನಮ್ಮೆಲ್ಲಾ ಚಿಂತೆಗಳನ್ನ ಮರೆತು ನಾವೂ ಮಕ್ಕಳಂತಾಗುವುದು.

ವರ್ತಮಾನದಲ್ಲಿ ಬದುಕುವವರು ಮಾತ್ರ ಸಂತಸವನ್ನು ಕಾಣುತ್ತಾರೆ

ಮಕ್ಕಳಿಗೆ ನಾಳಿನ ಭಯವಿಲ್ಲ, ನಿನ್ನೆಯ ಚಿಂತೆಯಿಲ್ಲ. ವರ್ತಮಾನದಲ್ಲಿರುವ ಮನಸ್ಸು ನಿರಂತರವಾಗಿ ಸಂತಸದಿಂದ ಇರುತ್ತದೆ. ಹಳೆಯ, ನೋವಿನ, ಬೇಡದ ಚಿಂತೆಗಳನ್ನ ಮರೆತು ಇಂದಿನ ಕ್ಷಣದಲ್ಲಿ ಬದುಕಿದಾಗಲೇ ನಮ್ಮ ನೋವುಗಳು ಮಾಯವಾಗುತ್ತವೆ. ನಿರಂತರ ನೋವಿನ ಬಗ್ಗೆ, ಈ ಹಿಂದೆ ನಡೆದ, ಬದಲಿಸಲಾಗದ ಕಷ್ಟಗಳ ಬಗ್ಗೆಯೇ ಚಿಂತಿಸುವವರು, ಎಂದಿಗೂ ಸಂತಸದಿಂದಿರಲಾರರು. ನಿಮಗೆ ಗೊತ್ತೇ? ಕೆಲವರಿಗೆ ಸಾವಿರ ಸುಖಗಳಿದ್ದರೂ, ಬೇಡವಾದ ಒಂದು ಚಿಂತೆಯ ಹೆಸರಿನಲ್ಲಿ ನೆಮ್ಮದಿ ಕಳೆದವರಂತೆ ಬಾಳುತ್ತಾರೆ. ಈ ಕ್ಷಣದ ಸಂತಸವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಕೆಲವರಿಗೆ ಚಿಂತೆಯಲ್ಲೇ ಕೊರಗಲು ನೆಪಬೇಕು. ಅವರೆಂದೂ ಬದುಕಿನಲ್ಲಿ ಸಂತಸವನ್ನ ಕಾಣಲಾರರು. ಸುಡು ಬಿಸಿಲು, ಚಳಿ ಗಾಳಿ, ಜೋರಾದ ಮಳೆಯ ಕಾರಣದಿಂದಲೂ ಕೆಲವರು ಚಿಂತೆಗೀಡಾಗುತ್ತಾರೆ. ಸೃಷ್ಟಿಯ ಸೊಬಗನ್ನ ನೋಡಿ, ಆನಂದಿಸಬೇಕಾದ ಮನಸ್ಸು ಬೇಡವಾದ ಚಿಂತೆಗಳಲ್ಲೇ ಮುಳುಗಿ ನಲುಗಿಹೋಗುತ್ತದೆ.

ಅಸೂಯೆ, ದ್ವೇಷ ಮತ್ತು ಕೋಪದಿಂದ ದೂರವಿರುವುದು

ಬದುಕಿನಲ್ಲಿ ಸಂತಸವಿರುವ ಹೃದಯಗಳಿಗೆ ಅಸೂಯೆಗೆ ಜಾಗವಾದರೂ ಎಲ್ಲಿ? ನಿಮ್ಮ ಮನಸ್ಸು ಸ್ವಚ್ಛವಾದಂತೆಲ್ಲ, ಇತರರ ಯಶಸ್ಸಿಗೆ ಹೃದಯಪೂರ್ವಕವಾಗಿ ಸಂತೋಷ ಪಡುತ್ತೀರಿ. ಇತರರ ತಪ್ಪುಗಳನ್ನ ಕ್ಷಮಿಸುವ ಸ್ವಭಾವ ಹೊಂದಿರುತ್ತೀರ, ಯಾರ ಹೃದಯವನ್ನೂ ನೋಯಿಸುವುದಿಲ್ಲ. ನೀವು ಯಾವಾಗಲೂ ಇತರರಿಗೆ ಸಹಾಯ ಮಾಡಲು ಮುಂದಾಗುತ್ತೀರಿ ಮತ್ತು ಯಾರ ಬಗ್ಗೆಯೂ ಹಾಸ್ಯ ಮಾಡುವುದಿಲ್ಲ.

ಸಂತಸದಿಂದಿರುವವರು ನೋವಿನಲ್ಲಿರುವ ವ್ಯಕ್ತಿಗಳ ಕಷ್ಟವನ್ನು ಕೂಡಲೇ ಗ್ರಹಿಸಿಬಿಡುತ್ತಾರೆ. ಅವರು ಕೇವಲ ನಿಮ್ಮ ನೋವನ್ನ ಗುರುತಿಸಿದೇ, ನಿಮ್ಮ ನೋವಿಗೂ ಪರಿಹಾರ ನೀಡುತ್ತಾರೆ. ಆದರೆ ಆ ಪರಿಹಾರದ ಚಿಕಿತ್ಸೆಯನ್ನ ಪಡೆಯಲು ನೀವು ಮನಸ್ಸು ಮಾಡಬೇಕಷ್ಟೇ. ಸದಾಕಾಲ ಸಂತಸದಿಂದಿರುವ ವ್ಯಕ್ತಿಗಳ ಬದುಕನ್ನ  ಗಮನಿಸುವುದರಿಂದ, ಅದನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಬೇಡವಾದ ನೋವಿನ ಚಿಂತನೆಗಳು ನಮ್ಮ ಬದುಕಿನಿಂದ ದೂರ; ಬಲುದೂರ ಹೊರಟು ಹೋಗುತ್ತದೆ.

ಕಷ್ಟಗಳ ನಡುವೆಯೂ ಸಂತಸದಿಂದ ಬದುಕುವುದು ಹೇಗೆ?

ಒಬ್ಬ ವ್ಯಕ್ತಿ ಯಾವಾಗಲೂ ಸಂತಸದಿಂದ ಇರುತ್ತಾನೆಂದರೆ ಅವನಿಗೆ ಕಷ್ಟಗಳೇ ಇಲ್ಲ ಎಂದಲ್ಲ. ಆದರೆ ಅವರು ಕಷ್ಟಗಳಿಗಿಂತ ಹೆಚ್ಚಾಗಿ ಬದುಕನ್ನ ನೋಡುತ್ತಾರೆ, ಕಷ್ಟಗಳನ್ನೆದುರಿಸಿ ಹಿಮ್ಮೆಟ್ಟಿ ನಿಲ್ಲುತ್ತಾರೆ. ಆಗ ಕಷ್ಟಗಳು ಮಂಜಿನಂತೆ ಕರಗಿಬಿಡುತ್ತವೆ. ಸಂತಸದಿಂದಿರುವ ವ್ಯಕ್ತಿಗಳು ಗೋಳಾಡಲು ಕಾರಣವನ್ನ ಹುಡುಕದೇ, ಸಂತಸದಿಂದಿರಲು ಕಾರಣವನ್ನ ಹುಡುಕುತ್ತಾರೆ. ಬದುಕಿನಲ್ಲಿ ಇರುವುದು ಎರಡೇ ದಾರಿಗಳು ಒಂದು ಬೇಡವಾದ ಚಿಂತನೆಗಳಿಂದ ನೋವಿನಲ್ಲಿರುವುದು, ಇನ್ನೊಂದು ಬದಲಿಸಲಾಗದ ಬದುಕಿನ ಘಟನೆಗಳನ್ನ ಮರೆತು ಸದಾ ಸಂತಸದಿಂದಿರುವುದು.

ಸದಾ ಸಂತಸದಿಂದಲೇ ಬದುಕನ್ನ ನಡೆಸುತ್ತೇನೆಂದು ತೀರ್ಮಾನ ಕೈಗೊಂಡರೆ ನೀವು ಎಲ್ಲಾ ಸಮಯದಲ್ಲಿಯೂ, ಎಲ್ಲೆಡೆಯೂ ಸಂತಸ, ಸಂಭ್ರಮವನ್ನ ಕಾಣುತ್ತೀರಿ. ಹಾಗೂ ಎಲ್ಲ ಸಮಯದಲ್ಲೂ ಕೃತಜ್ಞತೆಯನ್ನು ಅಭ್ಯಾಸ ಮಾಡುತ್ತೀರಿ, ಇತರರನ್ನು ಹಣದಿಂದ, ಅವರ ಸ್ಥಾನದಿಂದ ಗುರುತಿಸದೆ, ಎಲ್ಲರೊಡನೆಯೂ ದಯೆಯಿಂದ ವರ್ತಿಸುತ್ತೀರಿ. ಬದಲಾಗಬೇಕಿರುವುದು ನಿಮ್ಮ ಮನಸ್ತಿತಿ ಮಾತ್ರ.

ಸಂತಸದಿಂದಿರುವಾಗ ನೀವು ವಿಶಾಲ ಚಿಂತನೆಯಲ್ಲಿ ತೊಡಗುತ್ತೀರ. ದ್ವೇಷ, ಪ್ರತೀಕಾರದ ಭಾವನೆಗಳು ನಿಮ್ಮಲ್ಲಿ ಮೂಡುವುದಿಲ್ಲ. ಎಲ್ಲರೊಡನೆ, ಎಲ್ಲ ಸಮಯದಲ್ಲೂ ನೀವು ಸತ್ಯದ ಹಾದಿಯಲ್ಲೇ ನಡೆಯುತ್ತೀರ. ಇತರರು ನಿಮ್ಮನ್ನು ಗಮನಿಸದಿದ್ದರೂ ನೀವು ಸತ್ಯನಿಷ್ಠರಾಗಿರುತ್ತೀರಿ. ನೀವು ಎಲ್ಲಿಗೆ ಹೋದರೂ ಒಳ್ಳೆಯ ವಿಷಯಗಳನ್ನು, ಸಂತಸವನ್ನು ಹರಡುತ್ತೀರಿ. ನಿಮ್ಮ ಹೃದಯದ ಪರಿಶುದ್ಧತೆಗೆ ಇದೇ ಸಾಕ್ಷಿ.

ಇತರರ ಒಳಿತನ್ನ ಬಯಸುವ ವ್ಯಕ್ತಿಗಳು ಮಾತ್ರ ಒಂದು ಕ್ಷಣವೂ ಯೋಚಿಸದೆ ಬೇರೆಯವರ ತಪ್ಪುಗಳನ್ನ ಕ್ಷಮಿಸುತ್ತಾರೆ. ತಪ್ಪುಗಳು ಆಗುವುದು ಸಹಜ. ಅವರು ತಮ್ಮಲ್ಲಿರುವ ಕ್ಷಮಿಸುವ ಗುಣದಿಂದ, ಇತರರು ಮತ್ತೊಮ್ಮೆ ಆ ತಪ್ಪನ್ನು ಮಾಡದಂತೆ ಸನ್ನಡೆತೆಯ ಹಾದಿಯನ್ನ ತೋರಿಸುತ್ತಾರೆ. ಹಾಗೆಯೇ ಕ್ಷಮಿಸುವ ಉದಾರಿಗಳನ್ನ, ಸಜ್ಜನರನ್ನ, ಶಕ್ತಿಹೀನರೆಂದು ಭಾವಿಸುವ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಕ್ಷಮಾಗುಣವುಳ್ಳ ವ್ಯಕ್ತಿಗಳು ಅತ್ಯಂತ ಬಲಶಾಲಿಗಳಾಗಿರುತ್ತಾರೆ. ಅವರು ದೈಹಿಕವಾಗಿ ತಮ್ಮ ಶಕ್ತಿಯನ್ನ ತೋರದಿದ್ದರೂ, ಎಂತಹ ಕಠಿಣ ಸಮಯದಲ್ಲೂ ಗೆಲುವನ್ನ ಕಾಣಬಲ್ಲರು.

ಹಸನ್ಮುಖಿಗಳು ಕೇವಲ ಸಂತಸದಿಂದಿರುವುದಷ್ಟೇ ಅಲ್ಲ. ಇತರರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ತಮ್ಮ ಒಂದು ಚಿಕ್ಕ ಸಹಾಯದಿಂದ ಇತರರಿಗೆ ಒಳ್ಳೆಯದಾಗುವುದಾದರೆ, ಅದನ್ನು ದೇವರು ತಮಗೆ ನೀಡಿದ ಸದಾವಕಾಶವೆಂದು ಭಾವಿಸುತ್ತಾರೆ. ಹಾಗೆ ಸಿಗುವ ಸೇವೆಯ ಸದಾವಕಾಶವನ್ನು ಅವರು ಎಂದಿಗೂ ಬಿಡುವುದೇ ಇಲ್ಲ. ತಮ್ಮ ವೈಯುಕ್ತಿಕ ಕಷ್ಟಗಳ ನಡುವೆಯೂ ಇತರರಿಗೆ ಸಹಾಯ ಹಸ್ತ ಚಾಚುವ ದೊಡ್ಡ ಗುಣದಿಂದ ಅವರು ಇತರರೆಲ್ಲರಿಗಿಂತ ಎತ್ತರದಲ್ಲಿರುತ್ತಾರೆ, ಭಿನ್ನವಾಗಿರುತ್ತಾರೆ.

ಸಹೃದಯಿಗಳು, ಎಂದಿಗೂ ಇತರರ ಮನಸ್ಸಿಗೆ ನೋವುಂಟು ಮಾಡುವುದಿಲ್ಲ. ಅವರ ಮಾತಿನಲ್ಲಿ, ಕೃತಿಯಲ್ಲಿ ಇತರರನ್ನ ನೋಯಿಸುವ ಉದ್ದೇಶವಿರುವುದಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಕಾರಣದಿಂದಲೇ ಅವರು ಹಸನ್ಮುಖಿಗಳಾಗಿ, ಹೆಚ್ಚು ಉಲ್ಲಾಸದಿಂದ ಕೂಡಿರುತ್ತಾರೆ. ಅವರ ನಿರ್ಧಾರಗಳು ತ್ವರಿತವಾಗಿರುತ್ತವೆ. ಯೋಚಿಸಿ, ಲೆಕ್ಕಾಚಾರ ಹಾಕಿ ಅವರು ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಸ್ವಾರ್ಥಕ್ಕಾಗಿ ಅವರು ಬದುಕುವುದಿಲ್ಲ. ಇತರರ ಅನುಕೂಲಗಳಿಗೆ ತಮ್ಮ ಕೈಲಾದ ಸಹಾಯವಾಗಲಿ ಎಂದು ಸದಾ ಯೋಚಿಸುತ್ತಾರೆ. ಅವರ ಬದುಕೇ ಒಂದು ಉದಾಹರಣೆ.

how-to-live-happily-secrets

ಸಂತಸದಿಂದಿರುವವರು ಇತರರ ನೋವಿಗೆ ಸ್ಪಂದಿಸುತ್ತಾರೆ

ಸಂತಸದಿಂದಿರುವ ವ್ಯಕ್ತಿಗಳು ಎಲ್ಲರಲ್ಲಿಯೂ ಸಮಾನ ಭಾವನೆ ಹೊಂದಿರುತ್ತಾರೆ. ಯಾವುದೇ ಕಾರಣದಿಂದಲೂ ಇತರರನ್ನ ಕೀಳಾಗಿ ಕಾಣುವುದಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಹಾಗೂ ಅವರಿರುವ ಸ್ತಾನದಿಂದಲೇ ದೊಡ್ಡವರು ಎಂದು ಭಾವಿಸುತ್ತಾರೆ. ವ್ಯಕ್ತಿಗಳು ಹೊಂದಿರುವ ಅಧಿಕಾರ, ಆಸ್ತಿ, ಹಣದ ಕಾರಣದಿಂದ ಇತರರ ಪ್ರಶಂಸೆ ಅವರು ಮಾಡುವುದಿಲ್ಲ. ಆದರೆ, ಇತರರಿಂದ ಪಡೆದ ಒಂದು ಸಣ್ಣ ಉಪಕಾರವನ್ನು ದೊಡ್ಡದೆನ್ನುವಂತೆ ಕೊಂಡಾಡುತ್ತಾರೆ, ಸ್ಮರಿಸುತ್ತಾರೆ. ತಮ್ಮ ದೃಷ್ಟಿಯಲ್ಲಿ ಎಲ್ಲರೂ ದೊಡ್ಡವರು, ಹೆಚ್ಚಿನವರು ಎನ್ನುವಂತೆ ವಿಶ್ವಾಸ ತೋರಿಸುತ್ತಾರೆ. ಯಾವ ಕಾರಣದಿಂದಲೂ ಇತರರನ್ನ ಹಾಸ್ಯ ಮಾಡಿ, ನಗುವ ಪ್ರವೃತ್ತಿ ಅವರು ಹೊಂದಿರುವುದಿಲ್ಲ. ಅಲ್ಲದೇ ಸಂತಸದಲ್ಲಿರುವ ವ್ಯಕ್ತಿಗಳು ಎಲ್ಲ ವಿಷಯದಲ್ಲೂ, ಎಲ್ಲರಿಗೂ ಕೃತಜ್ಞತೆಯನ್ನು ತೋರಿಸುತ್ತಾರೆ. ಕೃತಜ್ಞತೆಯೇ ಅವರ ಬದುಕಿನ ಉಸಿರಾಗಿರುತ್ತದೆ.

ಇತರರಿಂದಾದ ತಪ್ಪುಗಳಿಗೆ ದ್ವೇಷ  ಅಥವಾ ಪ್ರತೀಕಾರ ಸಾಧಿಸುವುದಿಲ್ಲ, ಇತರರ ತಪ್ಪುಗಳನ್ನ ಮನದಲ್ಲಿಟ್ಟು ಕೊಳ್ಳುವುದಿಲ್ಲ. ಜಗತ್ತು ತಮ್ಮನ್ನು ನೋಡುವಾಗ ಅಥವಾ ಯಾರೂ ಇಲ್ಲದಾಗಲೂ ಕೂಡ ಅವರು ಸತ್ಯಸಂಧರಾಗಿರುತ್ತಾರೆ. ತಮ್ಮ ಹೃದಯಕ್ಕೆ ನಿಷ್ಠರಾಗಿರುತ್ತಾರೆ. ಅವರ ಮನಸ್ಸು ನಿತ್ಯ ಜಾಗೃತವಾಗಿರುತ್ತದೆ. ಇತರರು ತಮ್ಮನ್ನು ಮೆಚ್ಚಲಿ ಎನ್ನುವ ಕಾರಣಕ್ಕೆ ತೋರಿಕೆಯ ಜೀವನವನ್ನು ನಡೆಸದೇ ಸತ್ಯಮಾರ್ಗದ ಬದುಕನ್ನ ನಡೆಸಲು ಯತ್ನಿಸುತ್ತಾರೆ. ತಾವು ಕೈಗೊಂಡ ತೀರ್ಮಾನಗಳಿಗೆ ತಮ್ಮ ಹೃದಯ ಸಾಕ್ಷಿಗೆ ವಿರುದ್ದವಾಗಿ ಅವರು ಏನನ್ನೂ ಮಾಡುವುದಿಲ್ಲ. ಪ್ರತಿಯೊಂದೂ ಅವರ ದೃಷ್ಟಿಯಲ್ಲಿ ದೇವರ ಲೀಲೆ, ಆ ದೈವವು ಅವರಿಗೆ ನೀಡಿರುವ ಕೊಡುಗೆ ಎಂದು ಭಾವಿಸುತ್ತಾರೆ.

ಸಮಾರೋಪ : ಸಂತಸವೇ ಬದುಕಿನ ನಿಜವಾದ ಸೌಂದರ್ಯ

ಸಂತಸದಿಂದ ಬದುಕುವುದು ಎಂದರೆ ಸಮಸ್ಯೆಗಳಿಲ್ಲದ ಜೀವನ ನಡೆಸುವುದು ಅಲ್ಲ. ಸಮಸ್ಯೆಗಳ ನಡುವೆಯೂ ನಗುತ್ತಾ, ಕೃತಜ್ಞತೆಯಿಂದ, ಪ್ರೀತಿಯಿಂದ, ಕ್ಷಮೆಯಿಂದ ಮತ್ತು ಸತ್ಯನಿಷ್ಠೆಯಿಂದ ಬದುಕುವುದು. ನಿಜವಾದ ಸಂತಸವು ಹೊರಗಿನಿಂದ ಬರುವುದಿಲ್ಲ; ಅದು ನಮ್ಮ ಹೃದಯದಲ್ಲೇ ಹುಟ್ಟುತ್ತದೆ. ಆದ್ದರಿಂದ ಸಂತಸವನ್ನು ಹುಡುಕಬೇಡಿ, ಸಂತಸದಿಂದ ಬದುಕುವುದನ್ನು ಅಭ್ಯಾಸ ಮಾಡಿ.

IAF ನೇಮಕಾತಿ 2026 | ಭಾರತೀಯ ವಾಯುಪಡೆಯಲ್ಲಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ :
ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ
ಕೆಲಸಕ್ಕೆ ಸಂಬಂಧಿಸಿದ ನಿರಂತರ ಮಾಹಿತಿಯನ್ನು ಪಡೆಯಲು ಪಕ್ಕದಲ್ಲಿ ಕಾಣುವ ನಮ್ಮ  ವಾಟ್ಸಪ್‌ ಗ್ರೂಪಿಗೆ ಜಾಯಿನ್‌ ಆಗಿರಿ.
ವ್ಯಕ್ತಿಯೆಂಬ ಪುಸ್ತಕ : ಜೀವನ ಬದಲಾಯಿಸುವ ಪುಸ್ತಕಗಳು ಮತ್ತು ವ್ಯಕ್ತಿಗಳ ಪ್ರಭಾವ :
ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Comment