ನಿಜವಾದ ಯಶಸ್ಸನ್ನು ಕೇವಲ ಒಬ್ಬ ವ್ಯಕ್ತಿ ಗಳಿಸಿರುವ ಹಣ, ಅಂತಸ್ತು, ಅಧಿಕಾರ, ಹೆಸರು, ಸ್ನೇಹಿತರು ಹಾಗೂ ಸಮಾಜದಲ್ಲಿ ಹೊಂದಿರುವ ಸ್ಥಾನದಿಂದ ಅಳೆಯಲು ಸಾಧ್ಯವಿಲ್ಲ. ಕೆಲವೊಂದು ವ್ಯಕ್ತಿಗಳು ಇವೆಲ್ಲವನ್ನೂ ಮೀರಿ ನಿಲ್ಲುತ್ತಾರೆ. ಜಗತ್ತು ಯಾವುದನ್ನು ದೊಡ್ಡದೆಂದು ಭಾವಿಸುತ್ತದೆಯೋ, ಅದನ್ನು ಇವರು ತುಚ್ಛವೆಂದು ಕಡೆಗಣಿಸುತ್ತಾರೆ. ಯಶಸ್ಸನ್ನು ಮೀರಿ ನಿಲ್ಲುವ ವ್ಯಕ್ತಿತ್ವದ ಕೆಲವು ವ್ಯಕ್ತಿಗಳಿದ್ದಾರೆ ಅವರನ್ನ ಅರಿಯುವುದ ಸುಲಭದ ಮಾತಲ್ಲ.
ಯಶಸ್ಸನ್ನು ಮೀರಿ ನಿಲ್ಲುವ ವ್ಯಕ್ತಿತ್ವ
ಎಲ್ಲವನ್ನೂ ಮೀರಿ ನಿಲ್ಲುವ ವ್ಯಕ್ತಿತ್ವ ಹೊಂದಿರುವ ಜನರ ಕೆಲವು ವಿಶೇಷ ಗುಣಗಳು
ಈ ವ್ಯಕ್ತಿಗಳಿಗೆ ಯಶಸ್ಸು ಎಂದರೆ ಕೇವಲ ಇತರರನ್ನು ಮೆಚ್ಚಿಸುವುದಲ್ಲ, ಯಾವುದೋ ಒಂದು ಸಾಧನೆಗೈದು ಸುಮ್ಮನಾಗುವುದಲ್ಲ. ತಮ್ಮ ಅಂತರಂಗಕ್ಕೆ ಪ್ರಾಮಾಣಿಕವಾಗಿ ಬದುಕುವುದು, ತಾವು ನಂಬಿದ ವಿಚಾರಗಳಿಗಾಗಿ ನಿಲ್ಲುವುದು, ಅಗತ್ಯ ಬಿದ್ದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ತಮ್ಮ ಬದುಕಿನಲ್ಲಿ ಸಾಧ್ಯವಾದಷ್ಟು ಇತರರ ಒಳಿತಿಗಾಗಿ ಬಾಳುವುದಾಗಿದೆ.
ಇಂತಹ ವ್ಯಕ್ತಿಗಳನ್ನು ಹೊರಗಿನಿಂದ ನೋಡಿದಾಗ ಕೆಲವೊಮ್ಮೆ ಅವರು ಹಠಮಾರಿಗಳಂತೆ, ಸೊಕ್ಕಿನವರಂತೆ ಅಥವಾ ಕಠಿಣ ಹೃದಯದವರಂತೆ ಕಾಣಬಹುದು. ಆದರೆ ನಿಧಾನವಾಗಿ ಅವರ ಅಂತರಂಗವನ್ನು ತಿಳಿದಾಗ ಅವರ ವ್ಯಕ್ತಿತ್ವದ ಮತ್ತೊಂದು ನೋಟ ಕಾಣಿಸುತ್ತದೆ. ಅವರು ಅತ್ಯಂತ ಸೂಕ್ಷ್ಮವಾಗಿ ಯೋಚಿಸುವವರು, ಆಳವಾಗಿ ಚಿಂತಿಸುವವರು ಮತ್ತು ಜೀವನದ ಪ್ರತಿಯೊಂದು ವಿಚಾರವನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರು.
ಇಂತಹ ವ್ಯಕ್ತಿಗಳಲ್ಲಿರುವ ಸಾಮಾನ್ಯ ಗುಣವೆಂದರೆ, ತಮಗೆ ತಿಳಿದಿಲ್ಲದ ವಿಷಯವನ್ನು “ತಮಗೆ ಗೊತ್ತಿಲ್ಲ” ಎಂದು ಯಾವುದೇ ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತಾರೆ. ಹಾಗೆ ಹೇಳುವುದರಿಂದ ಇತರರು ತಮ್ಮ ಬಗ್ಗೆ ತಪ್ಪಾಗಿ ಭಾವಿಸುತ್ತಾರೆ ಎಂದು ಅವರು ಯೋಚಿಸುವುದಿಲ್ಲ. ಅವರ ದೃಷ್ಟಿಯಲ್ಲಿ ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ಪ್ರತಿಯೊಬ್ಬರೂ ತಮ್ಮ ಸ್ಥಾನದಲ್ಲಿ ದೊಡ್ಡವರು ಎಂಬ ನಂಬಿಕೆ ಅವರಲ್ಲಿರುತ್ತದೆ. ಎಲ್ಲರೂ ಎಲ್ಲವನ್ನೂ ತಿಳಿದಿರಬೇಕೆಂದಿಲ್ಲ ಹಾಗೂ ಅದು ಸಾಧ್ಯವೂ ಇಲ್ಲ ಎಂಬ ಸತ್ಯ ಅವರಿಗೆ ಗೊತ್ತಿರುತ್ತದೆ. ಜನರ ಮೆಚ್ಚುಗೆಗಿಂತ ಜೀವನವೇ ಅವರಿಗೆ ಹೆಚ್ಚು ಮುಖ್ಯವಾಗಿದೆ.
ಅವರು ಸುಲಭವಾಗಿ ಮೋಸ ಹೋಗುವುದಿಲ್ಲ, ಹಾಗೂ ಇತರರಿಗೆ ಎಂದಿಗೂ ವಂಚಿಸುವುದಿಲ್ಲ. ಸತ್ಯಸಂಧತೆ ಮತ್ತು ಪ್ರಾಮಾಣಿಕತೆ ಅವರ ವ್ಯಕ್ತಿತ್ವದ ಪ್ರಮುಖ ಭಾಗವಾಗಿರುತ್ತದೆ. ತಮ್ಮ ಎದುರಿನ ವ್ಯಕ್ತಿಯ ಕಪಟತನವನ್ನು ಅವರು ಸುಲಭವಾಗಿ ಗ್ರಹಿಸಬಲ್ಲರು. ತಮ್ಮ ಉದ್ದೇಶವನ್ನು ಇತರರು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ತಿಳಿದಾಗ, ಕಠಿಣ ನಿರ್ಧಾರ ತೆಗೆದುಕೊಳ್ಳಲು ಅವರು ಹಿಂಜರಿಯುವುದಿಲ್ಲ.
ಇವರು ಯಾವುದೇ ವಿಷಯದಲ್ಲಿಯೂ ಅನಗತ್ಯ ಗೊಂದಲಕ್ಕೆ ಒಳಗಾಗದೆ, ತಮ್ಮ ಅಂತರಾತ್ಮದ ಮಾತಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಅಗತ್ಯವಿದ್ದರೆ ಯಾರೊಂದಿಗೂ ರಾಜಿಯಾಗುವುದಿಲ್ಲ. ಏಕೆಂದರೆ ಅವರ ಪಾಲಿಗೆ ಹೊರಗಿನವರ ಅಭಿಪ್ರಾಯಕ್ಕಿಂತ ತಮ್ಮ ಅಂತರಂಗದ ಸತ್ಯವೇ ಮುಖ್ಯವಾಗಿರುತ್ತದೆ.
ಇಂತಹ ವ್ಯಕ್ತಿಗಳು ಮೊದಲು ವಿಷಯವನ್ನು ಕೂಲಂಕುಷವಾಗಿ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಅಗತ್ಯವಿದ್ದರೆ ಎದುರಿನ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಆ ವ್ಯಕ್ತಿಯ ಉದ್ದೇಶವೇನು? ಅವರು ಹೇಳುತ್ತಿರುವ ಮಾತಿನ ಹಿಂದಿನ ಕಾರಣವೇನು? ಅವರ ನಡೆ ಮತ್ತು ಮಾತಿನ ನಡುವೆ ವ್ಯತ್ಯಾಸವಿದೆಯೇ? ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ ಒಂದು ವಿಷಯವನ್ನು ಕೇವಲ ಅದರ ಮೇಲ್ಮೈಯಲ್ಲಿ ನೋಡುವುದಿಲ್ಲ. ಬೇರೆಯವರು ಗಮನಿಸದ ವಿಷಯಗಳನ್ನು ಇವರು ಚೆನ್ನಾಗಿ ಗ್ರಹಿಸುತ್ತಾರೆ. ಈ ಕಾರಣದಿಂದ ಅವರ ನಿರ್ಧಾರಗಳು ಇತರರಿಗೆ ಕೆಲವೊಮ್ಮೆ ವಿಚಿತ್ರವೆನ್ನಿಸಬಹುದು.
ಇವರು ಸುಲಭವಾಗಿ ಮೋಸ ಹೋಗುವವರಲ್ಲ. ಆದರೆ ತಮ್ಮವರ ಒಳಿತಿಗಾಗಿ, ಸಂಬಂಧವನ್ನು ಉಳಿಸುವುದಕ್ಕಾಗಿ ಕೆಲವೊಮ್ಮೆ ಏನೂ ತಿಳಿಯದವರಂತೆ ವರ್ತಿಸುತ್ತಾರೆ. ಇದು ಅವರ ದೌರ್ಬಲ್ಯವಲ್ಲ; ಅವರ ವಿಶಾಲ ಹೃದಯದ ಸಂಕೇತ.
ತಮ್ಮ ನಿರ್ಧಾರಗಳ ಮೇಲೆ ಅಚಲವಾದ ನಂಬಿಕೆ
ಇಂತಹ ವ್ಯಕ್ತಿಗಳ ಅಂತರಂಗದಲ್ಲಿ ಗಟ್ಟಿಯಾದ ನಿಲುವು ಹೊಂದಿರುತ್ತಾರೆ. ಜಗತ್ತು ಏನೇ ಹೇಳಿದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಜಗತ್ತು ಅವರನ್ನು ವಿರೋಧಿಸಿದರೂ, ಅವರು ಏಕಾಂಗಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ಬಂದರೂ ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವುದಿಲ್ಲ.
ಎಲ್ಲ ವಿಷಯಗಳ ಬಗ್ಗೆಯೂ ಇವರಿಗೆ ತಮ್ಮದೇ ಆದ ವಿಶಾಲ ಚಿಂತನೆಗಳಿರುತ್ತವೆ. ಇತರರು ಇವರ ಮೂಲ ನಂಬಿಕೆಗಳನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ. ತಮಗೆ ತೋಚಿದ ದಾರಿ ಸರಿ ಎನ್ನಿಸಿದರೆ, ಜೀವನವಿಡೀ ಏಕಾಂಗಿಯಾಗಿ ಸಾಗಲು ಸಹ ಇವರು ಸಿದ್ಧರಾಗಿರುತ್ತಾರೆ.
ಅವರಲ್ಲಿನ ದೃಢತೆ ಕೇವಲ ಹಠದಿಂದ ಬಂದಿರುವುದಲ್ಲ. ತಮ್ಮ ಮೇಲೆ ಅವರಿಗಿರುವ ವಿಶ್ವಾಸ, ತಮ್ಮ ನಿಲುವಿಗಾಗಿ ಎಲ್ಲವನ್ನೂ ಎದುರಿಸುವ ಛಲ ಮತ್ತು ತಮ್ಮ ಮೌಲ್ಯಗಳ ಮೇಲಿರುವ ನಂಬಿಕೆ ಅವರ ವ್ಯಕ್ತಿತ್ವದ ಭಾಗವಾಗಿರುತ್ತದೆ. ಇವರು ಪ್ರಕೃತಿಯಂತೆ ದೃಢನಿಶ್ಚಲತೆಯನ್ನು ಹೊಂದಿರುತ್ತಾರೆ.
ಪ್ರಪಂಚವು ಇವರನ್ನು ಹಠಮಾರಿ ಅಥವಾ ಅಹಂಕಾರಿ ಎಂದು ಭಾವಿಸಬಹುದು. ಆದರೆ ಇತರರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬ ಭಯದಿಂದ ಅವರು ತಮ್ಮ ನಿರ್ಧಾರವನ್ನು ಬದಲಿಸುವುದಿಲ್ಲ. ಏಕೆಂದರೆ ಅವರ ಆತ್ಮವಿಶ್ವಾಸವು ಹೊರಗಿನ ಪ್ರಶಂಸೆಯ ಮೇಲೆ ನಿಂತಿರುವುದಿಲ್ಲ. ಅಗತ್ಯ ಬಂದರೆ ಏಕಾಂಗಿಯಾಗಿಯಾದರೂ ತಮ್ಮ ನಿರ್ಧಾರದೊಂದಿಗೆ ನಿಲ್ಲಲು ಅವರು ಸಿದ್ಧರಾಗಿರುತ್ತಾರೆ.
ಅವರು ಯಾರ ಹಂಗಿಗೂ ಒಳಗಾಗುವುದಿಲ್ಲ ಹಾಗೂ ಯಾರಿಗೂ ಅನಗತ್ಯವಾಗಿ ಅಂಜುವುದಿಲ್ಲ. ತಮ್ಮ ಬದುಕಿನ ನಿರ್ಧಾರಗಳನ್ನು ಇತರರ ಒಪ್ಪಿಗೆ, ಭಯ ಅಥವಾ ಒತ್ತಡದ ಆಧಾರದ ಮೇಲೆ ತೆಗೆದುಕೊಳ್ಳುವುದಿಲ್ಲ. ಯಾರು ಏನು ಹೇಳುತ್ತಾರೆ? ಯಾರು ತಮ್ಮನ್ನು ಇಷ್ಟಪಡುತ್ತಾರೆ ಅಥವಾ ಯಾರು ವಿರೋಧಿಸುತ್ತಾರೆ? ಎಂಬುದಕ್ಕಿಂತ, ತಮ್ಮ ಮನಸ್ಸಿಗೆ ಸರಿ ಎನ್ನಿಸಿದಂತೆ ಬದುಕಲು ಇವರು ಸದಾ ಸಿದ್ಧರಿರುತ್ತಾರೆ.
ಅಧಿಕಾರದಲ್ಲಿರುವ ವ್ಯಕ್ತಿಯಾಗಿರಲಿ, ಪ್ರಭಾವಶಾಲಿಯಾಗಿರಲಿ ಅಥವಾ ತಮ್ಮನ್ನು ವಿರೋಧಿಸುವ ಯಾರೇ ಆಗಿರಲಿ, ತಮಗೆ ತೋಚಿದ ಸತ್ಯವನ್ನು ಹೇಳುವುದರಿಂದ ಅವರು ಹಿಂದೆ ಸರಿಯುವುದಿಲ್ಲ.
ಅವರ ವರ್ತನೆಯನ್ನು ಗಮನಿಸಿದರೆ, ಅವರು ಯಾರೊಂದಿಗೂ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನಿಸುವುದೇ ಇಲ್ಲ. ಇತರರನ್ನು ಹಿಂದಿಕ್ಕಬೇಕು, ತಾವು ಎಲ್ಲರಿಗಿಂತ ಮುಂದೆ ಇರಬೇಕು ಎಂಬ ಮನಸ್ಥಿತಿಯಲ್ಲಿ ಅವರು ಬದುಕುವುದಿಲ್ಲ. ಅವರ ಸ್ಪರ್ಧೆ ಇತರರೊಂದಿಗೆ ಇರುವುದಿಲ್ಲ. ಅವರು ತಮ್ಮದೇ ಆದ ದಾರಿಯಲ್ಲಿ ಸಾಗುತ್ತಾರೆ.
ನಿನ್ನೆಗಿಂತ ಇಂದು ತಾವು ಉತ್ತಮರಾಗಬೇಕು ಎಂಬ ಚಿಂತನೆಯಲ್ಲಿಯೇ ಅವರು ಬದುಕುತ್ತಾರೆ. ತಮ್ಮ ಹಿಂದಿನ ದಿನದ ವ್ಯಕ್ತಿತ್ವಕ್ಕಿಂತ ಇಂದು ಸ್ವಲ್ಪ ಉತ್ತಮರಾಗಬೇಕು ಎಂಬುದು ಅವರ ನಿಜವಾದ ಸ್ಪರ್ಧೆಯಾಗಿರುತ್ತದೆ.
ಅವರಿಗೆ ಮತ್ತೊಬ್ಬರ ಯಶಸ್ಸು ತಮ್ಮ ಸೋಲಿನಂತೆ ಕಾಣುವುದಿಲ್ಲ. ಇತರರ ಗಳಿಕೆಯನ್ನು, ಸಾಧನೆಯನ್ನು, ಹಿರಿಮೆಯನ್ನು ತಮ್ಮೊಂದಿಗೆ ಹೋಲಿಕೆ ಮಾಡಿಕೊಂಡು ಅಸೂಯೆಪಡುವುದಿಲ್ಲ. ಏಕೆಂದರೆ ಅವರಿಗೆ ತಮ್ಮ ದಾರಿ ಹಾಗೂ ಗುರಿಯ ಬಗ್ಗೆ ಸ್ಪಷ್ಟವಾದ ಅರಿವಿರುತ್ತದೆ.
ಅವರು ಎಲ್ಲವನ್ನೂ ಶಾಂತವಾಗಿ ಸ್ವೀಕರಿಸುತ್ತಾರೆ. ಕಷ್ಟ ಬಂದಾಗ ಗಾಬರಿಯಾಗುವುದಿಲ್ಲ. ನಿರೀಕ್ಷಿಸಿದಂತೆ ನಡೆಯದಿದ್ದಾಗ ಅಸಹನೆ ತೋರಿಸುವುದಿಲ್ಲ. ಅವರ ಶಾಂತ ಸ್ವಭಾವವನ್ನು ಕೆಲವರು ದೌರ್ಬಲ್ಯವೆಂದು ಭಾವಿಸಬಹುದು. ಆದರೆ ವಾಸ್ತವದಲ್ಲಿ ಆ ಮೌನದ ಹಿಂದೆ ಅಪಾರವಾದ ಆತ್ಮಸ್ಥೈರ್ಯವಿರುತ್ತದೆ. ಪ್ರತಿಯೊಂದು ವಿಷಯಕ್ಕೂ ತಕ್ಷಣ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂಬುದನ್ನು ಅವರು ಅರಿತಿರುತ್ತಾರೆ.
ಅವರು ಜೀವನದಲ್ಲಿ ಎದುರಾಗುವ ಎಲ್ಲವನ್ನೂ ಸಹಜವಾಗಿ ಸ್ವೀಕರಿಸುತ್ತಾರೆ. ಎಲ್ಲವೂ ತಮ್ಮ ಇಚ್ಛೆಯಂತೆ ನಡೆಯಬೇಕೆಂದು ನಿರೀಕ್ಷಿಸುವುದಿಲ್ಲ. ಅನುಕೂಲಗಳನ್ನು ಸಂತೋಷದಿಂದ ಸ್ವೀಕರಿಸುವಂತೆ, ಕಷ್ಟಗಳನ್ನೂ ಶಾಂತವಾಗಿ ಸ್ವೀಕರಿಸುತ್ತಾರೆ.
ಅವರ ಮನಸ್ಸಿನಲ್ಲಿ ಅನಗತ್ಯ ದೂರುಗಳಿರುವುದಿಲ್ಲ. ನಡೆದದ್ದನ್ನು ಕುರಿತು ಸದಾ ಕೊರಗುವುದಕ್ಕಿಂತ, ಅದರಿಂದ ಏನು ಕಲಿಯಬಹುದು ಎಂಬುದನ್ನು ಯೋಚಿಸುತ್ತಾರೆ. ಅದಕ್ಕಾಗಿಯೇ ಪರಿಸ್ಥಿತಿಗಳು ಹೇಗೇ ಬದಲಾಗಲಿ, ಅವರ ಮನಸ್ಸಿನ ಸಮತೋಲನ ಸುಲಭವಾಗಿ ಕಳೆದುಹೋಗುವುದಿಲ್ಲ.
ಅವರು ಎಲ್ಲರ ಜೊತೆಯಲ್ಲಿದ್ದರೂ ತಮ್ಮ ಅಂತರಂಗದಲ್ಲಿ ಸ್ವತಂತ್ರರಾಗಿರುತ್ತಾರೆ. ಜನರ ನಡುವೆ ಇರುವುದು ಅವರಿಗೆ ಕಷ್ಟವೇನಲ್ಲ. ಯಾರ ಮೇಲೆಯೂ ಅನಗತ್ಯ ದ್ವೇಷ ಬೆಳೆಸಿಕೊಳ್ಳುವುದಿಲ್ಲ.
ಅವರಿಗೆ ತಮ್ಮದೇ ಆದ ಒಂದು ಪ್ರಪಂಚವಿದೆ. ಅಲ್ಲಿ ಅವರ ಆಲೋಚನೆಗಳು, ಕನಸುಗಳು, ಗುರಿಗಳು ಮತ್ತು ನಿರ್ಧಾರಗಳಿರುತ್ತವೆ. ತಮ್ಮ ಅಂತರಂಗದ ಪ್ರತಿಯೊಂದು ವಿಚಾರವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುವ ಅಗತ್ಯತೆಯಿದೆ ಎಂದು ಅವರಿಗನ್ನಿಸುವುದಿಲ್ಲ. ಅವರ ಏಕಾಂತ ಜನರಿಂದ ದೂರವಿರುವುದಲ್ಲ; ತಮ್ಮನ್ನು ತಾವು ಆಳವಾಗಿ ಅರ್ಥಮಾಡಿಕೊಳ್ಳಲು ಅವರು ಆರಿಸಿಕೊಂಡಿರುವ ಒಂದು ಮೌನದ ಜಾಗ. ಕೆಲವೊಮ್ಮೆ ಜನರ ಮಧ್ಯೆಯೇ ಇದ್ದರೂ ತಮ್ಮೊಳಗೆ ತಾವು ಪ್ರಯಾಣಿಸುತ್ತಿರುತ್ತಾರೆ.
ಸಾಮಾನ್ಯವಾಗಿ ಜನರು ತಮ್ಮವರ ಹಾಗೂ ತಮ್ಮ ಕುಟುಂಬದ ಅನುಕೂಲದ ಬಗ್ಗೆ ಯೋಚಿಸುತ್ತಾರೆ. ಆದರೆ ಇವರಿಗೆ ಜಗತ್ತಿನ ಜೀವಿಗಳೆಲ್ಲರ ಸಂತೋಷವೂ ತಮ್ಮ ಸಂತಸದಂತೆ ತೋರುತ್ತದೆ.
ಇವರು ತಮ್ಮ ಸಂತೋಷಕ್ಕಾಗಿ ಯಾರನ್ನೂ ಅವಲಂಬಿಸುವುದಿಲ್ಲ
ಇವರು ಎಲ್ಲರೊಂದಿಗೂ ಸಂತೋಷದಿಂದ ಇರುತ್ತಾರೆ, ಆದರೆ ತಮ್ಮ ಸಂತೋಷಕ್ಕಾಗಿ ಯಾರನ್ನೂ ಅವಲಂಬಿಸುವುದಿಲ್ಲ. ಇವರು ಸದಾ ಎಲ್ಲ ಜೀವಿಗಳ ಅನುಕೂಲ ಮತ್ತು ಕಲ್ಯಾಣವನ್ನೂ ಯೋಚಿಸುತ್ತಾರೆ. ಅವರ ದೃಷ್ಟಿಯಲ್ಲಿ ಬದುಕು ಎಂದರೆ ಕೇವಲ “ನಾನು ಮತ್ತು ನನ್ನವರು” ಎಂಬ ಸೀಮಿತ ವಲಯವಲ್ಲ. ತಮ್ಮಿಂದ ಸಾಧ್ಯವಾದಷ್ಟು ಮತ್ತೊಬ್ಬರಿಗೆ ಒಳಿತಾಗಬೇಕು, ತಮ್ಮ ಕಾರಣದಿಂದ ಯಾರಿಗೂ ಅನಗತ್ಯ ತೊಂದರೆ ಆಗಬಾರದು ಎಂಬ ಮನೋಭಾವ ಅವರಲ್ಲಿರುತ್ತದೆ.
ಸಾಮಾನ್ಯವಾಗಿ ಜನರು ತಮ್ಮ ಅನುಕೂಲಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಆದರೆ ಇವರು ತಮ್ಮ ಪ್ರತಿಯೊಂದು ಕರ್ಮದ ಹಿಂದಿರುವ ಕಾರಣಗಳ ಬಗ್ಗೆ ಹಾಗೂ ಜೀವನದ ಸಾರ್ಥಕತೆಯ ಬಗ್ಗೆ ಯೋಚಿಸುತ್ತಾರೆ. “ನನಗೆ ಇದರಿಂದ ಏನು ಸಿಗುತ್ತದೆ?” ಎನ್ನುವುದಕ್ಕಿಂತ, “ನನ್ನ ಬದುಕಿನಿಂದ ಏನು ಅರ್ಥಪೂರ್ಣವಾದದ್ದು ಸಾಧ್ಯ?” ಎಂಬ ಚಿಂತನೆಯಲ್ಲಿಯೇ ಇವರು ಬದುಕನ್ನು ನಡೆಸುತ್ತಾರೆ. ಒಬ್ಬ ವ್ಯಕ್ತಿಗಿಂತ ಹತ್ತು ಜನರಿಗೆ ಅನುಕೂಲವಾಗುತ್ತದೆ ಎಂದಾದರೆ, ತಮ್ಮ ವೈಯಕ್ತಿಕ ಅನುಕೂಲವನ್ನು ತ್ಯಜಿಸಿ ಹತ್ತು ಜನರ ಒಳಿತನ್ನು ಆಯ್ಕೆ ಮಾಡುತ್ತಾರೆ.
ಅವರ ದೃಷ್ಟಿಕೋನ “ನನಗೆ ಏನು ಸಿಗುತ್ತದೆ?” ಎಂಬುದಲ್ಲ. “ನನ್ನಿಂದ ಎಷ್ಟು ಜನರಿಗೆ ಒಳಿತಾಗಬಹುದು?” ಎಂಬುದಾಗಿರುತ್ತದೆ. ಅವರು ತಮ್ಮ ತ್ಯಾಗವನ್ನು ಎಂದಿಗೂ ಹೇಳಿಕೊಳ್ಳುವುದಿಲ್ಲ. ತಮ್ಮ ಬದುಕಿನ ಸಾರ್ಥಕತೆಯನ್ನು ಮಾತುಗಳಲ್ಲಿ ಸಾಬೀತುಪಡಿಸುವ ಬದಲು, ತಮ್ಮ ಬದುಕಿನ ರೀತಿಯಲ್ಲಿ ತೋರಿಸುತ್ತಾರೆ.
ಅವರು ಯಾರ ವಿರುದ್ಧವೂ ಬದುಕುವುದಿಲ್ಲ. ಯಾರನ್ನೂ ಸೋಲಿಸಬೇಕು ಎಂಬ ಉದ್ದೇಶವೂ ಅವರಿಗಿರುವುದಿಲ್ಲ. ತಮ್ಮ ವಿಚಾರಗಳು ಮತ್ತು ಮೌಲ್ಯಗಳೊಂದಿಗೆ ಬದುಕುತ್ತಾರೆ. ಅವರು ಯಾರ ವಿರೋಧಿಗಳೂ ಅಲ್ಲ; ಆದರೆ ತಮ್ಮ ತತ್ವಗಳಿಗೆ ವಿರುದ್ಧವಾದ ಯಾವುದಕ್ಕೂ ಸುಮ್ಮನೆ ತಲೆಬಾಗುವವರೂ ಅಲ್ಲ. ಅಂತಹ ವ್ಯಕ್ತಿಗಳು ಗುಂಪಿನಲ್ಲಿದ್ದಾಗ ನಾಯಕತ್ವ ಅವರನ್ನು ಅರಸಿಕೊಂಡು ಬರುತ್ತದೆ. ಆದರೂ ಅವರು ತಮ್ಮನ್ನು ನಾಯಕರೆಂದು ಭಾವಿಸುವುದಿಲ್ಲ. ನಾಯಕತ್ವ ಅವರ ಪಾಲಿಗೆ ಅಧಿಕಾರವಲ್ಲ; ಅದು ಜವಾಬ್ದಾರಿ.
ಅವರು ಇತರರಲ್ಲಿ ತಪ್ಪುಗಳನ್ನು ಹುಡುಕುವುದಕ್ಕಿಂತ, ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂದು ಯೋಚಿಸುತ್ತಾರೆ. ಅವರದು ಎತ್ತರದ ಚಿಂತನೆಗಳ ಸರಳ ಜೀವನ. ಅವರ ಕನಸುಗಳು ಹಣಗಳಿಕೆ ಅಥವಾ ಅಧಿಕಾರಕ್ಕೆ ಸೀಮಿತವಾಗಿರುವುದಿಲ್ಲ. ತಮ್ಮ ಮಹತ್ವವನ್ನು ಜಗತ್ತಿನ ಮುಂದೆ ಪ್ರದರ್ಶಿಸಬೇಕೆಂಬ ಚಪಲತೆಯೂ ಅವರಲ್ಲಿರುವುದಿಲ್ಲ. ಅವರು ಎಲ್ಲರಂತೆ ಸಾಮಾನ್ಯವಾಗಿ ಬದುಕುತ್ತಾರೆ.
ಅವರಿಗೆ ತಮ್ಮ ಅಪಾರ ಸಾಮರ್ಥ್ಯದ ಅರಿವಿರುತ್ತದೆ. ಆದರೂ ಇತರರ ಮುಂದೆ ಅದನ್ನು ಪ್ರದರ್ಶಿಸುವುದಿಲ್ಲ. ಪ್ರಪಂಚ ನೀಡುವ ಗೌರವ, ಹೊಗಳಿಕೆ, ಸನ್ಮಾನ ಮತ್ತು ಪ್ರಶಂಸೆಗಳಿಗಾಗಿ ಅವರು ಬದುಕುವುದಿಲ್ಲ. ಅವರ ಮಹತ್ವವನ್ನು ಅವರು ಹೇಳಿಕೊಳ್ಳಬೇಕಾಗಿಲ್ಲ. ಅವರ ನಡೆ, ನಿರ್ಧಾರಗಳು, ಮೌಲ್ಯಗಳು ಮತ್ತು ಇತರರಿಗಾಗಿ ಮಾಡುವ ಕೆಲಸಗಳೇ ಅವರ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸುತ್ತವೆ.
ನಿಜವಾದ ಯಶಸ್ಸು ಎಂದರೆ ಜಗತ್ತಿನ ಮುಂದೆ ದೊಡ್ಡವರಾಗಿ ಕಾಣಿಸಿಕೊಳ್ಳುವುದಲ್ಲ. ಯಾರೂ ನೋಡದಿದ್ದರೂ, ತಮ್ಮ ಮೌಲ್ಯಗಳಿಗೆ ನಿಷ್ಠರಾಗಿರುವುದು. ಪರಿಸ್ಥಿತಿಗಳು ಬದಲಾದರೂ ತಮ್ಮ ಅಂತರಂಗದ ಮಾತನ್ನು ಕೇಳುವುದು, ತಮ್ಮ ಬದುಕಿನಿಂದ ಸಾಧ್ಯವಾದಷ್ಟು ಒಳಿತನ್ನು ಮಾಡುವುದು ಎಂದು ಇವರು ನಂಬುತ್ತಾರೆ. ಅಂತಹ ವ್ಯಕ್ತಿತ್ವದ ಕಾರಣದಿಂದ ಇವರು ಎಲ್ಲವನ್ನೂ ಮೀರಿ ನಿಲ್ಲುತ್ತಾರೆ.
ಹಣ, ಅಧಿಕಾರ, ಹೆಸರು ಮತ್ತು ಸ್ಥಾನಮಾನಗಳು ಒಂದು ದಿನ ಬದಲಾಗಬಹುದು. ಆದರೆ ಒಬ್ಬ ವ್ಯಕ್ತಿ ತನ್ನ ಬದುಕಿನ ಮೂಲಕ ಬಿಟ್ಟುಹೋಗುವ ಮೌಲ್ಯಗಳು, ಒಳಿತು ಮತ್ತು ಪ್ರಭಾವ ಮಾತ್ರ ದೀರ್ಘಕಾಲ ಉಳಿಯುತ್ತವೆ.
ಅಂತಿಮವಾಗಿ, ಯಶಸ್ಸು ಎಂದರೆ ಎಷ್ಟು ಎತ್ತರಕ್ಕೆ ಏರಿದ್ದೇವೆ ಎಂಬುದಷ್ಟೇ ಅಲ್ಲ; ಎತ್ತರಕ್ಕೆ ಏರಿದ ನಂತರವೂ ನಾವು ಎಷ್ಟು ಸರಳವಾಗಿ, ಪ್ರಾಮಾಣಿಕವಾಗಿ ಮತ್ತು ಇತರರ ಒಳಿತನ್ನು ಯೋಚಿಸುತ್ತಾ ಬದುಕಿದ್ದೇವೆ ಎಂಬುದಾಗಿದೆ.
