ಬದುಕು ಮತ್ತು ಹಲವು ವಿಷಯಗಳು
ಬದುಕಿನಲ್ಲಿ ಎಲ್ಲರೂ ನಮ್ಮನ್ನು ಇಷ್ಟಪಡಲೇ ಬೇಕೆನ್ನುವ ಅಗತ್ಯವೇನಿಲ್ಲ. ಅದು ಗೆಳೆತನ, ಸಂಬಂಧ, ಉದ್ಯೋಗ, ಮತ್ತಿನ್ನಾವುದೇ ಕ್ಷೇತ್ರವಾಗಿದ್ದರೂ, ಬದುಕಿನಲ್ಲಿ ಎದುರಾಗುವ ಹಲವರು ನಮ್ಮಿಂದ ಅಂತರವನ್ನು ಕಾಯ್ದುಕೊಂಡೇ ಇರುತ್ತಾರೆ. “ಈ ಅಂತರವೇ ಬದುಕಿನ ನೀತಿಯೆಂಬುದನ್ನ ಮರೆಯದಿರೋಣ.”
ನಾವು ನಮ್ಮ ಮಾರ್ಗದಲ್ಲಿ ಸಹಜವಾಗಿ, ನಿಷ್ಠೆಯಿಂದ ಸಾಗುತ್ತಿದ್ದರೂ ಕೆಲವೊಮ್ಮೆ ಇತರರಿಂದ ವಿರೋಧವು ಸಹಜವಾಗಿ ಮೂಡಬಹುದು. ಆದರೂ ಕೆಲವರು ವಿನಾಕಾರಣ ನಮ್ಮನ್ನು ಇಷ್ಟಪಡುವುದೇ ಇಲ್ಲ. ಹಾಗೆಂದು ಅವರನ್ನ ಮೆಚ್ಚಿಸಲು ನಾವು ಬದಲಾಗುವ ಅವಶ್ಯಕತೆಯಿರುವುದಿಲ್ಲ. ಕೆಲವರು ನಮ್ಮನ್ನು ಇಷ್ಟಪಡದಿರಲು ಅವರದೇ ಆದ ಕಾರಣಗಳೂ ಇರಬಹುದೇನೋ? ಆದರೆ ನಾವು, ನಮ್ಮ ಬದುಕಿನ ಮೌಲ್ಯಗಳನ್ನು ಬಿಟ್ಟುಕೊಡಬಾರದಷ್ಟೇ!
ನಮ್ಮನ್ನು ಒಪ್ಪದವರನ್ನು, ವಿರೋಧಿಸುವವರನ್ನು ಮೆಚ್ಚಿಸಲು ನಮ್ಮನ್ನು ನಾವು ಬದಲಿಸಿಕೊಳ್ಳಬೇಕೆಂಬ ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ಭಾವನೆಗಳು, ಕಾರಣಗಳು, ಪರಿಮಿತಿಗಳು, ಸಾಮರ್ಥ್ಯದ ಕೊರತೆ, ಚಿಂತನೆ, ಬದುಕಿನ ಸಂಕೋಲೆಗಳು ಇದ್ದೇ ಇರುತ್ತವೆ; ಅಲ್ಲವೇ? ಕೆಲವರು ಯಾಕೆ ನಮ್ಮನ್ನು ಇಷ್ಟಪಡುವುದಿಲ್ಲ ಎನ್ನುವುದಕ್ಕೆ ಕೆಳಗಿನ ಕಾರಣಗಳೂ ಇರಬಹುದು.
ನಮ್ಮ ಯಶಸ್ಸು ಕೆಲವರಿಗೆ ಅಸಹನೀಯವೆನಿಸಬಹುದು
ಇತರರಿಗಿಂತ ಕಡಿಮೆ ಸಮಯದಲ್ಲಿ, ವೇಗವಾಗಿ ಮುನ್ನಡೆದು, ನಾವು ಯಶಸ್ಸನ್ನ ಗಳಿಸಿದಾಗ, ಕೆಲವರು ತಮ್ಮ ಜೀವನವನ್ನು ನಮ್ಮೊಂದಿಗೆ ಹೋಲಿಸಲು ಶುರುಮಾಡುತ್ತಾರೆ. ಆ ಹೋಲಿಕೆಯಲ್ಲಿ ಕೆಲವೊಮ್ಮೆ ಅವರಿಗೆ ತಾವು ಮಾಡಿದ ಸಾಧನೆ ಕಡಿಮೆ ಅನ್ನಿಸಬಹುದು. ಆ ಭಾವನೆ ನಿಧಾನವಾಗಿ ಒತ್ತಡವಾಗಿ, ಅಸಹನೆಯಾಗಿ ರೂಪಾಂತರವಾಗುತ್ತದೆ. ನಮ್ಮ ಸಾಧನೆ ಅವರಿಗೆ ಪ್ರೇರಣೆ ಆಗುವ ಬದಲು ಒತ್ತಡದಂತೆ ಕಂಡಾಗ ಇತರರಿಗೆ ನಮ್ಮ ಮೇಲಿರುವ ಅವರ ದೃಷ್ಟಿ ನಕಾರಾತ್ಮಕವಾಗಬಹುದು.
ಸಾಧನೆಯೆನ್ನುವುದು ಎಲ್ಲರಿಗೂ ಎಲ್ಲ ಸಮಯದಲ್ಲೂ ಒಂದೇ ರೀತಿಯ ಫಲಿತಾಂಶ ನೀಡುವುದಿಲ್ಲ. ಇತರರಿಗಿಂತ ಹೆಚ್ಚು ಯಶಸ್ಸು ಮತ್ತು ಹಿರಿಮೆಯನ್ನು ನಾವು ಗಳಿಸಿದಾಗ, ಕಡಿಮೆ ಫಲಿತಾಂಶ ಪಡೆದ ಹಾಗೂ ನಮ್ಮ ಸಾಧನೆಯನ್ನು ಮೀರಲಾಗದ ಸಂಕುಚಿತ ಮನಸ್ಸುಗಳಿಗೆ ಅದು ಕೆಲವೊಮ್ಮೆ ಅಸಹನೀಯವಾಗಿ ಕಾಣಬಹುದು. ಆ ಅಸಹನೆ ನಮ್ಮ ಬಗ್ಗೆ ಅವರಲ್ಲಿ ತಪ್ಪು ಭಾವನೆ ಮೂಡಿಸಿರಬಹುದು.
ಇತರರ ನಿಯಂತ್ರಣಕ್ಕೆ ನೀವು ಸುಲಭವಾಗಿ ಒಳಗಾಗುವುದಿಲ್ಲ
ಸ್ವತಂತ್ರವಾಗಿ ಯೋಚಿಸಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಭಾವವುಳ್ಳ ವ್ಯಕ್ತಿಗಳು ಸಾಮಾನ್ಯವಾಗಿ ತಮಗೆ ಸರಿ ಎನ್ನಿಸಿದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ. ಅದು ವಯಸ್ಸು, ಹುಮ್ಮಸ್ಸಿನ ಕಾರಣ, ಅಥವಾ ಅನುಭವವಿಲ್ಲದ ಕಾರಣವಿರಲೂಬಹುದು. ಆದರೆ ಹಾಗೆ ತೆಗೆದುಕೊಂಡ ನಿರ್ಧಾರಗಳು ಕೆಲವೊಮ್ಮೆ ಕಠಿಣವಾಗಿರಬಹುದು ಇಲ್ಲವೇ, ತಪ್ಪಾಗಿರಲೂಬಹುದು. ಆದರೆ ಒಳ್ಳೆಯ ಉದ್ದೇಶದಿಂದ ಬೇರೊಬ್ಬರು ಹೇಳಿದ ನಿರ್ಧಾರವನ್ನು ತಿರಸ್ಕರಿಸಿದ ಕಾರಣಕ್ಕಾಗಿ ನೀವು ಇತರರಿಂದ ದೋಷಿಗಳೆಂದು ಭಾವಿಸಲ್ಪಡುತ್ತೀರಿ.
ನೀವು ಆಯ್ದುಕೊಂಡ ತೀರ್ಮಾನದಿಂದ ನೀವು ಯಶಸ್ಸನ್ನ ಬೇಗನೇ ಹೊಂದಿದರೆ, ಅಥವಾ ಯಶಸ್ಸೇ ಹೊಂದದಿದ್ದರೆ, ನಿಮಗೆ ಮಾರ್ಗದರ್ಶನ ನೀಡಲು ಹೊರಟ ವ್ಯಕ್ತಿಗೆ ಅದು ಕೆಲವೊಮ್ಮೆ ತಮ್ಮ ನಿರ್ಧಾರವನ್ನು ತಿರಸ್ಕರಿಸಿದರೆಂಬ ಭಾವನೆಯನ್ನ ಮೂಡಿಸಿರಬಹುದು. ಅಥವಾ ನೀವು ಅವರ ನಿಯಂತ್ರಣದಿಂದ ತಪ್ಪಿಸಿಕೊಂಡು ಹೋದಿರೆನ್ನುವ ಭಾವನೆಯನ್ನ ಅವರಲ್ಲಿ ತಂದಿರಬಹುದಲ್ಲವೇ?
ನೀವು ತೆಗೆದುಕೊಂಡ ನಿರ್ಧಾರದಿಂದ ಕೆಲವೊಮ್ಮೆ, ಇತರರಿಗೆ ಅನಾನುಕೂಲ, ಅಸೌಕರ್ಯ ಉಂಟಾಗಿರಬಹುದು; ಹಾಗೂ ಅದು ನಿಮಗೆ ತಿಳಿಯದಿರಬಹುದು. ನಿಮ್ಮ ಬಗ್ಗೆ ಅವರಿಗಿರುವ ತಪ್ಪು ಗ್ರಹಿಕೆಯು ಕೆಲವೊಮ್ಮೆ ನೀವು ಸುಲಭವಾಗಿ ಅವರ ನಿಯಂತ್ರಣಕ್ಕೆ ಒಳಪಡುವುದಿಲ್ಲ ಎನ್ನುವ ಭಾವನೆಯನ್ನ ಮೂಡಿಸಿರಬಹುದು.
ನಿಮ್ಮ ಯಶಸ್ಸು ಮತ್ತು ಏಳಿಗೆಯನ್ನು ಬಯಸುವವರು, ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಗಮನದಲ್ಲಿಡಿ. ವಿನಾಕಾರಣ ತಪ್ಪುಗ್ರಹಿಕೆಗಳಿಂದ ದೂರವಾಗಬೇಡಿ, ಸಂಬಂಧಗಳನ್ನು ಸ್ಪಷ್ಟತೆಯಿಂದ ಉಳಿಸಿಕೊಳ್ಳೋಣ
ನಿಮ್ಮ ಆತ್ಮವಿಶ್ವಾಸ ಕೆಲವರಿಗೆ ಭಯ ಮೂಡಿಸಬಹುದು
ಈ ಜಗತ್ತಿನಲ್ಲಿ ಶ್ರೇಷ್ಟವಾದದ್ದನ್ನ ಸಾಧಿಸಿದವರೆಲ್ಲರೂ ತಮ್ಮ ಮೇಲೆ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಗಳಾಗಿದ್ದಾರೆ. ಸಾಧನೆಯನ್ನ ಕೆಲವರು ಕಡಿಮೆ ವಯಸ್ಸಿನಲ್ಲಿ ಸಾಧಿಸಿರಬಹುದು ಇಲ್ಲವೇ ಕೊನೆಯಲ್ಲಿ. ಆದರೆ “ತನ್ನ ಬಗ್ಗೆ ಸಂಪೂರ್ಣ ಆತ್ಮವಿಶ್ವಾಸವುಳ್ಳ ವ್ಯಕ್ತಿ ಮಾತ್ರವೇ ಶ್ರೇಷ್ಟವಾದದ್ದನ್ನ ಸಾಧಿಸಬಲ್ಲ” ಎಂಬುದನ್ನ ಈ ಜಗತ್ತು ತಿಳಿದಿದೆ. ಈ ಜಗತ್ತು ಫಲಿತಾಂಶವನ್ನು ಮಾತ್ರ ಕಾಣುತ್ತದೆ. ಆದರೆ ಆತ್ಮವಿಶ್ವಾಸವುಳ್ಳ ವ್ಯಕ್ತಿಯೊಬ್ಬ ಯಶಸ್ಸಿನ ಶಿಖರವೇರಲು ಇಟ್ಟ ಪ್ರತಿಯೆಜ್ಜೆಯ ಶ್ರಮವನ್ನು, ಸಂಕಟವನ್ನು ಕಾಣುವುದೇ ಇಲ್ಲ.
ಆತ್ಮವಿಶ್ವಾಸವುಳ್ಳ ವ್ಯಕ್ತಿ ಮಾತ್ರ ಬಲವಾದ ತೀರ್ಮಾನವನ್ನು ತೆಗೆದುಕೊಳ್ಳಬಲ್ಲ. ಏಕೆಂದರೆ ಅವನಿಗೆ ತನ್ನ ತೀರ್ಮಾನ ಹಾಗೂ ಧೃಡಸಂಕಲ್ಪದ ಮೇಲೆ ಅಪಾರವಾದ ನಂಬಿಕೆ. ತನ್ನನ್ನು ಹಾಗೂ ತನ್ನ ಸಂಕಲ್ಪವನ್ನು ಪರೀಕ್ಷಿಸಿಕೊಳ್ಳಬೇಕೆಂಬ ನಿರಂತರ ಹೆಬ್ಬಯಕೆ. ಅದಕ್ಕಾಗಿ ಏನನ್ನಾದರೂ ಎದುರಿಸಲು ಸದಾ ಸಿದ್ಧ. ಅಂತಹ ಆತ್ಮವಿಶ್ವಾಸವು ಯಾವುದೇ ವ್ಯಕ್ತಿಗಾಗಲಿ, ತನ್ನ ಗುರಿ ತಲುಪುವವರೆಗೂ ಸುಮ್ಮನಿರಲು ಬಿಡುವುದಿಲ್ಲ. ನಿಮಗೆ ತಿಳಿದಿರಲಿ. ಆತ್ಮವಿಶ್ವಾಸವುಳ್ಳ ವ್ಯಕ್ತಿಯೊಬ್ಬ ತನ್ನ ತೀರ್ಮಾನದ ಕಾರಣ ಅಚಾತುರ್ಯದಿಂದ ನಡೆದ ತಪ್ಪನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡರೆ ಮತ್ತೂ ಎತ್ತರಕ್ಕೆ ಏರಬಲ್ಲ.
ಆತ್ಮವಿಶ್ವಾಸವುಳ್ಳ ವ್ಯಕ್ತಿಯ ನಡೆ-ನುಡಿ ಮತ್ತು ಕೆಲಸಗಳು ಇತರರಿಗೆ ಸ್ಪೂರ್ತಿಯಾಗುತ್ತವೆ. ಅವನು ತನ್ನನ್ನು ಸರಳವಾಗಿ ತೋರಿಸಿಕೊಂಡರೂ, ತನ್ನ ಆತ್ಮವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಜಗತ್ತು ಆತ್ಮವಿಶ್ವಾಸವಿರುವ ವ್ಯಕ್ತಿಯನ್ನು ಹೃದಯಪೂರ್ವಕವಾಗಿ ಮೆಚ್ಚುತ್ತದೆ; ಆದರೆ ಅವನಂತೆ ಬದುಕಲು ಹೆದರಿ ಹಿಂಜರಿಯುತ್ತದೆ. ಈ ಜಗತ್ತಿನಲ್ಲಿ ಆತ್ಮವಿಶ್ವಾಸದಿಂದ ಬದುಕುವವರು ಕಡಿಮೆ. ಆದರೆ ಸ್ವಾರ್ಥಕ್ಕಾಗಿ, ತನ್ನ ಹಾಗು ತನ್ನ ಕುಟುಂಬದವರ ಏಳಿಗೆಗಾಗಿ ಬದುಕುತ್ತಿರುವವರು ಹೆಚ್ಚೆಚ್ಚು.
ನಿಮಗೆ ಗೊತ್ತೇ, ಆತ್ಮವಿಶ್ವಾಸವುಳ್ಳ ವ್ಯಕ್ತಿಯ ಮಾತು, ನಡೆ, ನುಡಿ, ನೋಟ, ಚಿಂತನೆ ಎಲ್ಲವೂ ವಿಭಿನ್ನ. ಅವನು ನೋಡಲು ಮೃದು ಆದರೆ ಆಚರಣೆಯಲ್ಲಿ ಕಠಿಣ. ಅವನ ಬದುಕು ಬಲು ಘೋರ. ನೀವು ಅವನನ್ನ ನೋಡಿ ಮೆಚ್ಚಬಹುದು. ಆದರೆ ನೀವೆಂದೂ ಅವನಂತೆ ಆಗಲಾರಿರಿ, ಖಂಡಿತಾ ಅವನಂತೆ ಬದುಕಲಾರಿರಿ. ತನ್ನ ಮೇಲೆ ವಿಶ್ವಾಸವಿರುವ ವ್ಯಕ್ತಿಯ ನಡೆಗಳು ಕೆಲವೊಮ್ಮೆ ಸಂಕುಚಿತ ಜನರಲ್ಲಿ ಹೀನ ಭಾವವನ್ನು ಮೂಡಿಸಬಹುದು. ಈ ಕಾರಣದಿಂದ ಸಂಕುಚಿತ ಸ್ವಭಾವದವರು ಅವನನ್ನು ದೂರವಿಡಲು, ಅಥವಾ ಅವನಿಂದ ದೂರವುಳಿಯಲು ಪ್ರಯತ್ನಿಸುತ್ತಾರೆ.
ಸಂತೋಷವನ್ನು ಕೆಲವರು ನಿರ್ಮಲ ಮನಸ್ಸಿನಿಂದ ಅನುಭವಿಸುವುದಿಲ್ಲ
ಸಂಕುಚಿತ ವ್ಯಕ್ತಿಗಳು ಇತರರ ಏಳಿಗೆಯನ್ನ ಸಹಿಸಲಾರರು. ಆತ್ಮವಿಶ್ವಾಸವುಳ್ಳ ವ್ಯಕ್ತಿಗಳ ಏಳಿಗೆಯು ಸಂಕುಚಿತ ಮನಸ್ಸಿನ ವ್ಯಕ್ತಿಗಳಿಗೆ ಸ್ಪರ್ಧೆಯಂತೆ ತೋರಬಹುದು. ತಾವು ಸಾಧಿಸಲಾಗದ ಯಶಸ್ಸನ್ನ ಇನ್ನೊಬ್ಬರು ಸಾಧಿಸಿದಾಗ ಇವರಿಗೆ ಸಾಧಾರಣವಾಗಿ ಹೊಟ್ಟೆಕಿಚ್ಚು, ಕೋಪ, ಅಸಹನೀಯತೆ, ತಮ್ಮ ಬಗ್ಗೆ ಕೀಳರಿಮೆ ಭಾವನೆ ಮೂಡಿರಲೂಬಹುದು. ನಿಮ್ಮ ಯಶಸ್ಸುನ್ನು ಅವರು ಸಾಧನೆ ಎಂದು ಕಾಣುವುದರ ಬದಲು ಹೋಲಿಕೆಯೆ ಭಾವನೆಯಿಂದ ನೋಡಿ, ನಿಮ್ಮೊಡನೆ ಸ್ಪರ್ಧೆಗಿಳಿದು ಮತ್ತೆ ಮತ್ತೆ ಸೋಲುತ್ತಾರೆ. ಬದುಕೆನ್ನವುದೇ ಹೀಗೆ ಒಂದು ರೀತಿಯ ವಿಧಿಯಾಟವೆನ್ನಬಹುದು.
ಆತ್ಮವಿಶ್ವಾಸವಿರುವ ವ್ಯಕ್ತಿ ಇತರರ ಏಳಿಗೆಯನ್ನು ಕಂಡು ಹೆಮ್ಮೆಪಡುತ್ತಾನೆ, ಕೊಂಡಾಡುತ್ತಾನೆ. ಹಾಗೆಯೇ, ತನ್ನ ಗುರಿಯನ್ನು ಸಾಧಿಸಲು ನಿರಂತರ ಹವಣಿಸುತ್ತಾನೆ. ಅಕಸ್ಮಾತ್ ತಾನಂದುಕೊಂಡಿದ್ದನ್ನು ಅವನ ಬದುಕಿನಲ್ಲಿ ಸಾಧಿಸಲಾಗದಿದ್ದರೆ, ಅವನೆಂದೂ ಇತರರ ಬಗ್ಗೆ ಹೊಟ್ಟೆಕಿಚ್ಚು ಪಡುವುದಿಲ್ಲ; ಅಲ್ಲದೇ ತನ್ನ ಪ್ರಯತ್ನವನ್ನ ಬಿಡುವುದೂ ಇಲ್ಲ. ತನ್ನದೆನ್ನುವ ಎಲ್ಲವನ್ನೂ ಕಳೆದುಕೊಂಡರೂ ಆತ್ಮವಿಶ್ವಾಸವನ್ನು ಇವನೆಂದಿಗೂ ಕಳೆದುಕೊಳ್ಳಲಾರ, ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಲಾರ.
ಯಶಸ್ವೀ ವ್ಯಕ್ತಿ ಎಲ್ಲೆಡೆಯೂ ಸಂತಸವನ್ನೇ ಕಾಣುತ್ತಾನೆ.
ಎಲ್ಲಾ ಸಮಯದಲ್ಲಿಯೂ ಸಂತಸವಾಗಿರುವುದು, ಬದುಕಿನ ಭರವಸೆಯನ್ನ ಕಳೆದುಕೊಳ್ಳದಿರುವುದು, ತನ್ನ ಗುರಿಗಾಗಿ ನಿರಂತರ ಪ್ರಯತ್ನ ಪಡುವುದು ಯಶಸ್ವೀ ವ್ಯಕ್ತಿಯ ಗುಣವಾಗಿರುತ್ತದೆ. ಅವನು ಕಷ್ಟವನ್ನ ಎದುರಿಸುತ್ತಾನೆ, ತನ್ನ ಗುರಿಗಾಗಿ ನಿರಂತರ ಶ್ರಮಿಸುತ್ತಾನೆ, ಸಾಧ್ಯವಾದರೆ ಇತರರಿಗೆ ತನ್ನ ಕೈಲಾದ ಸಹಾಯ ಮಾಡುತ್ತಾನೆ. ಯಾವ ಕಾರಣಕ್ಕೂ ಇತರರ ಮನಸ್ಸು ನೋಯಿಸುವ ಕೆಲಸವನ್ನು ಆತ ಮಾಡಲಾರ.
ಕೆಲವರಿಗೆ ಇತರರ ಯಶಸ್ಸನ್ನ ನೋಡಿ ಸಂತಸಪಡುವ ಮನಸ್ಸು ಇರುವುದಿಲ್ಲ, ಹಾಗೂ ತಮ್ಮದೇ ಆದ ಉದ್ದೇಶ, ಗುರಿಯೂ ಇರುವುದಿಲ್ಲ. ಅವರು ವಿಧಿಯ ಕೈಗೊಂಬೆಗಳು. “ತನ್ನದೆನ್ನುವ ಗುರಿಯಿಲ್ಲದ, ಇತರರ ಯಶಸ್ಸನ್ನು ಸಂಭ್ರಮಿಸದ ಮನಸ್ಸುಗಳಿಂದಲೇ ಈ ಜಗತ್ತು ಆಪತ್ತನ್ನ ಎದುರಿಸುತ್ತಲಿದೆ. ಸಂಕುಚಿತ ಮನಸುಗಳೂ ವಿಕಾಸದೆಡೆಗೆ ಸಾಗಲಿ, ಈ ಜಗತ್ತು ಸುಂದರ ಸ್ವರ್ಗವಾಗಲಿ. ಲೋಕದೆಲ್ಲೆಡೆ ಶಾಂತಿ ಬೆಳಗಲಿ.”
ನಿಮ್ಮ ಪ್ರಭಾವದಿಂದ ಕೆಲವರು ತಮ್ಮ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ ಎಂದು ಭಾವಿಸುತ್ತಾರೆ
ನಿಮ್ಮ ಮೇಲೆ ನಿಮಗಿರುವ ಭರವಸೆಯಿಂದ, ನೀವು ಮಾಡಿದ ಸಾಧನೆಗಳಿಂದ ನಿಮಗೆ ತಿಳಿಯದೆಯೇ, ನೀವು ಇತರರ ಮೇಲೆ ಪ್ರಭಾವ ಬೀರುತ್ತಲೇ ಇರುತ್ತೀರಿ. ನಿಮ್ಮ ಸಾಧನೆಯ ಕಾರಣದಿಂದ ಕೆಲವರು ನಿಮ್ಮೊಂದಿಗೆ ಆಕರ್ಷಿತರಾಗಿರುತ್ತಾರೆ. ಹೀಗೆ ಇತರರ ಮೇಲೆ ನೀವು ನಿಮಗೆ ತಿಳಿಯದೇ ಬೀರುವ ಪ್ರಭಾವವನ್ನು, ಕೆಲವರು ತಮ್ಮ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ ಎಂದು ಭಾವಿಸುತ್ತಾರೆ. ಜನರು ನಿಮ್ಮೆಡೆಗೆ ಹೆಚ್ಚೆಚ್ಚು ಆಕರ್ಷಿತರಾದಂತೆ, ತಾವು ದೂರವಾಗುಳಿದೆವು ಎಂದು ಸಂಕುಚಿತ ವ್ಯಕ್ತಿಗಳು ತಪ್ಪು ಗ್ರಹಿಕೆ ಹೊಂದುತ್ತಾರೆ.
ಉತ್ತಮ ಭಾವನೆಯುಳ್ಳ ವ್ಯಕ್ತಿಗಳು ತಮ್ಮ ಮಾತು, ಕೃತಿಗಳ ಮೂಲಕ ತಮಗೆ ತಿಳಿದೋ, ತಿಳಿಯದೆಯೋ, ಇತರರನ್ನ ನಿರಂತರವಾಗಿ ತಮ್ಮೆಡೆಗೆ ಆಕರ್ಷಿಸುತ್ತಲೇ ಇರುತ್ತಾರೆ. ಇವರ ಒಂದೊಂದು ಯಶಸ್ಸನ್ನೂ ಜಗತ್ತು ಹೃದಯದಿಂದ ಮೆಚ್ಚುತ್ತದೆ. ಯಶಸ್ವೀ ವ್ಯಕ್ತಿಯ ಸಾಧನೆಯನ್ನ ತಮ್ಮದೇ ಸಾಧನೆಯೆಂದು ಕೊಂಡಾಡುತ್ತದೆ. ಆದರೆ ಸಂಕುಚಿತ ಮನಸ್ಸು ಈ ಸಾಧನೆಯನ್ನ ಗೌರವಿಸದೇ, ಸಮಾಜದಲ್ಲಿ ತಮ್ಮ ವೈಯುಕ್ತಿಕ ಪ್ರಾಮುಖ್ಯತೆ, ಪ್ರತಿಷ್ಠೆಯು ಕಳೆದು ಹೋಗುತ್ತಲಿದೆ, ಕಡಿಮೆಯಾಗುತ್ತಲಿದೆ ಎಂದು ಭಾವಿಸುತ್ತದೆ. ಈ ಭಾವನೆಯಿರುವ ಜನರು ನಿಮ್ಮಿಂದ ದೂರವುಳಿಯುತ್ತಾರೆ, ಈ ಕಾರಣದಿಂದ ಬೇರೆಯವರ ಯಶಸ್ಸನ್ನ ಸಂಕುಚಿತ ಜನರು ಸಂಭ್ರಮಿಸುವುದೇ ಇಲ್ಲ
ಕೆಲವರು ನಿಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ
ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದು, ನಿಮ್ಮದೇ ಆದ ಸ್ವತಂತ್ರ ಚಿಂತನೆಗಳಿದ್ದರೆ, ನೀವು ಇತರರ ಮಾತುಗಳನ್ನ ಖಂಡಿತಾ ಕೇಳಲಾರಿರಿ. ನಿಮ್ಮ ಚಿಂತನೆಗಳನ್ನು ಮೊದಲು ಕಾರ್ಯರೂಪಕ್ಕೆ ತರಲು ನೀವು ನಿರಂತರ ಶ್ರಮಿಸುತ್ತಲೇ ಇರುತ್ತೀರಿ. ಗುರಿಯನ್ನು ಸಾಧಿಸಲು ನಿಮ್ಮ ಹಾದಿಯಲ್ಲಿ ನೀವು ಸಾಗತೊಡಗಿದಾಗ ನಿಮ್ಮ ಚಿಂತನೆ ಹಾಗೂ ಕಾರ್ಯಗಳು ಕೆಲವರಿಗೆ ಸ್ವೇಚ್ಛೆ ಎನ್ನಿಸಬಹುದು. ನೀವು ನಿಮ್ಮದೇ ರೀತಿಯಲ್ಲಿ ಬದುಕುತ್ತಿರುವುದನ್ನು ನೋಡಿ, ಕೆಲವರು ಅದನ್ನು ನಿಯಂತ್ರಿಸಲು ಪ್ರಯತ್ನಿಸಬಹುದು.
ಗುರಿಯಿರುವ, ತನ್ನ ಮೇಲೆ ಭರವಸೆಯಿರುವ ವ್ಯಕ್ತಿಗೆ ಇತರರ ಸಂಕುಚಿತ ಭಾವನೆಗಳು ಅರಿವಾಗುವುದೇ ಇಲ್ಲ. ಬುದ್ಧಿವಂತನಿಗೆ ಗುರಿಯ ಕಡೆಗೆ ಗಮನ, ಸಂಕುಚಿತ ವ್ಯಕ್ತಿಗೆ ತನ್ನ ಗೌರವದ ಕಡೆಗೆ ಗಮನ. ಗುರಿಯೆಡೆಗೇ ಸಾಗುವ ನಿಮ್ಮ ಸಾಹಸವನ್ನು ಅವನು ತನ್ನ ಬಗ್ಗೆ ನಿಮಗೆ ತಿರಸ್ಕಾರದ ಮನೋಭಾವವಿದೆ ಎಂದು ಭಾವಿಸಲೂಬಹುದು. ಈ ಭಾವನೆಯು ಅವನಲ್ಲಿ ನಿರಂತರ ಕೀಳರಿಮೆಯನ್ನ ಉಂಟುಮಾಡುತ್ತದೆ. ತನ್ನ ಕೀಳರಿಮೆಯನ್ನು ನಿಯಂತ್ರಿಸಲಾಗದ ಕೀಳು ಮನುಷ್ಯ, ಸಾಧಿಸಲು ಹೊರಟಿರುವ ಹಠವಾದಿಯ ಛಲವನ್ನು ನಿಯಂತ್ರಿಸಲು ಹವಣಿಸುತ್ತಾನೆ. ಈ ನಿಟ್ಟಿನಲ್ಲಿ ನಿಮ್ಮ ಸ್ವಾತಂತ್ರ್ಯವನ್ನು ಕಸಿಯಲು, ನಿಮ್ಮ ಬಗ್ಗೆ ನಿಮಗಿರುವ ವಿಶ್ವಾಸವನ್ನು ತಗ್ಗಿಸಲು ಪ್ರಯತ್ನಿಸುತ್ತಾನೆ. ಆದರೂ ಯಶಸ್ವೀ ವ್ಯಕ್ತಿ ಜೀವನದಲ್ಲಿ ಗೆಲ್ಲುತ್ತಲೇ ಇರುತ್ತಾನೆ.