ಹಿಂದುಳಿದ ಮಹಿಳೆಯರ ಸಬಲೀಕರಣ
ಭಾರತದಲ್ಲಿ ಮಹಿಳೆಯರು ಕುಟುಂಬದ ಆಧಾರಸ್ತಂಭ ಮಾತ್ರವಲ್ಲ, ದೇಶದ ಆರ್ಥಿಕ ಪ್ರಗತಿಯ ಪ್ರಮುಖ ಚಾಲಕಶಕ್ತಿಯೂ ಆಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಅನೇಕ ಮಹಿಳೆಯರಿಗೆ ಸ್ವಂತ ವ್ಯವಹಾರ ಆರಂಭಿಸುವ ಕನಸು ಇದ್ದರೂ, ಹಣಕಾಸಿನ ಕೊರತೆ, ಬ್ಯಾಂಕ್ ಸಾಲ ಪಡೆಯುವ ಸಂಕಷ್ಟ, ಭದ್ರತೆ ನೀಡುವ ಸಮಸ್ಯೆ, ಮತ್ತು ಮಾರ್ಗದರ್ಶನದ ಅಭಾವದಿಂದ ಅವರ ಕನಸು ಕನಸಾಗಿಯೇ ಉಳಿದುಬಿಡುತ್ತದೆ. ಸರ್ಕಾರವು ಇಂತಹ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗುವುದರ ಜೊತೆಗೆ, ಸಮಾಜದಲ್ಲಿ ಗೌರವಯುತ ಸ್ಥಾನವನ್ನು ದೊರಕಿಸಿಕೊಡುವ ಉದ್ದೇಶದಿಂದ “ಉದ್ಯೋಗಿನಿ ಯೋಜನೆ” ಜಾರಿಗೆ ತಂದಿದೆ.
ಯೋಜನೆಯ ಮುಖ್ಯ ಉದ್ದೇಶ
ಈ ಯೋಜನೆಯ ಪ್ರಮುಖ ಗುರಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವುದು. ಮಹಿಳೆಯರು ತಮ್ಮದೇ ಆದ ಉದ್ಯಮ ಪ್ರಾರಂಭಿಸಿ, ಕುಟುಂಬದ ಆದಾಯವನ್ನು ಹೆಚ್ಚಿಸುವಂತಾಗಬೇಕು ಎಂಬುದು ಇದರ ಉದ್ದೇಶ. ಸ್ವಉದ್ಯೋಗದ ಮೂಲಕ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಬಹುದು. ಇದರಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಸಮಾಜದಲ್ಲಿ ಅವರ ಸ್ಥಾನಮಾನವೂ ಉನ್ನತವಾಗುತ್ತದೆ.
ಯೋಜನೆ ಕಾರ್ಯನಿರ್ವಹಿಸುವ ವಿಧಾನ
ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಕೈಗೊಳ್ಳಲು ಉದ್ದೇಶಿಸಿರುವ ವ್ಯಾಪಾರ ಅಥವಾ ಸೇವಾ ಚಟುವಟಿಕೆಗಳಿಗೆ ಬ್ಯಾಂಕುಗಳ ಮೂಲಕ ಸಾಲ ಪಡೆಯಬಹುದು. ಈ ಸಾಲವನ್ನು ಮಂಜೂರು ಮಾಡಿದ ನಂತರ, ಅದರ ಒಂದು ಭಾಗವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸಹಾಯಧನದ (Back End Subsidy) ರೂಪದಲ್ಲಿ ನೀಡಲಾಗುತ್ತದೆ. ಇದರಿಂದ ಮಹಿಳೆಯರು ಸಂಪೂರ್ಣ ಸಾಲವನ್ನು ತಾವೇ ತೀರಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಸರ್ಕಾರದ ಸಹಾಯಧನದಿಂದ ಸಾಲದ ಹೊರೆಯು ಗಣನೀಯವಾಗಿ ಕಡಿಮೆಯಾಗುತ್ತದೆ.
ಈ ವ್ಯವಸ್ಥೆಯು ಮಹಿಳೆಯರಿಗೆ ಉದ್ಯಮ ಆರಂಭಿಸಲು ಭದ್ರತೆ ಮತ್ತು ಧೈರ್ಯ ಒದಗಿಸುತ್ತದೆ. ಬ್ಯಾಂಕುಗಳ ಮೂಲಕ ಹಣಕಾಸು ನೆರವು ದೊರಕುವುದರಿಂದ, ಮಹಿಳೆಯರು ಅಧಿಕೃತವಾಗಿ ಹಣಕಾಸು ವ್ಯವಸ್ಥೆಗೆ ಸೇರ್ಪಡೆಯಾಗುತ್ತಾರೆ ಮತ್ತು ಇದರಿಂದ ಹೆಣ್ಣುಮಕ್ಕಳು ಹಾಗೂ ಗೃಹಿಣಿಯರು ಆರ್ಥಿಕ ಶಿಸ್ತು ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.
ಸಾಲದ ಮಿತಿ ಮತ್ತು ಸಹಾಯಧನದ ಪ್ರಮಾಣ
ಸಾಮಾನ್ಯ ಹಾಗೂ ವಿಶೇಷ ವರ್ಗದ ಮಹಿಳೆಯರಿಗೆ:
- ಯೋಜನಾ ವೆಚ್ಚ ರೂ. 1.00 ಲಕ್ಷದಿಂದ ರೂ. 3.00 ಲಕ್ಷವರೆಗೆ
- ಬ್ಯಾಂಕ್ ಮಂಜೂರು ಮಾಡುವ ಸಾಲದ ಮೊತ್ತಕ್ಕೆ ಶೇ. 30 ರಷ್ಟು ಹಣವನ್ನು ಸಹಾಯಧನವೆಂದು ಪರಿಗಣಿಸಲಾಗುತ್ತದೆ.
ಉದಾಹರಣೆಗೆ, 3 ಲಕ್ಷ ರೂ. ಸಾಲ ಪಡೆದರೆ, ಅದರ 30% ಅಂದರೆ 90,000 ರೂ. ಸಹಾಯಧನವಾಗಿ ಲಭಿಸುತ್ತದೆ. ಉಳಿದ ಸಾಲದ ಮೊತ್ತವನ್ನು ಮಾತ್ರ ಹೆಣ್ಣುಮಕ್ಕಳು / ಗೃಹಿಣಿಯರು ಮರುಪಾವತಿ ಮಾಡಬೇಕಾಗುತ್ತದೆ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಮಹಿಳೆಯರಿಗೆ:
- ಯೋಜನಾ ವೆಚ್ಚ ರೂ. 1.00 ಲಕ್ಷದಿಂದ ರೂ. 3.00 ಲಕ್ಷವರೆಗೆ
- ಬ್ಯಾಂಕ್ ಮಂಜೂರು ಮಾಡುವ ಸಾಲದ ಮೊತ್ತಕ್ಕೆ ಶೇ. 50 ರಷ್ಟು ಸಹಾಯಧನ
ಅಂದರೆ, 2 ಲಕ್ಷ ರೂ. ಸಾಲ ಪಡೆದರೆ, 1 ಲಕ್ಷ ರೂ. ಸಹಾಯಧನವಾಗಿ ದೊರೆಯಬಹುದು. ಇದು ಈ ವರ್ಗದ ಮಹಿಳೆಯರಿಗೆ ವಿಶೇಷ ಪ್ರೋತ್ಸಾಹವಾಗಿದ್ದು, ಆರ್ಥಿಕ ಅಂತರವನ್ನು ಕಡಿಮೆ ಮಾಡಲು ಸಹಕಾರಿ ಆಗುತ್ತದೆ.
ಯಾವ ಉದ್ಯಮಗಳನ್ನು ಆರಂಭಿಸಬಹುದು?
ಈ ಯೋಜನೆಯಡಿ ವಿವಿಧ ರೀತಿಯ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳನ್ನು ಆರಂಭಿಸಬಹುದು. ಉದಾಹರಣೆಗೆ:
- ಟೈಲರಿಂಗ್ ಮತ್ತು ಹೊಲಿಗೆ ಕೇಂದ್ರ
- ಬ್ಯೂಟಿ ಪಾರ್ಲರ್
- ಹಾಲು ಉತ್ಪಾದನೆ ಮತ್ತು ಪಶುಪಾಲನೆ
- ಕಿರಾಣಿ ಅಂಗಡಿ
- ಆಹಾರ ಸಂಸ್ಕರಣ ಘಟಕ
- ಮೊಬೈಲ್ ರಿಪೇರಿ ಮತ್ತು ಇತರೆ ಸೇವಾ ಕೇಂದ್ರಗಳು
- ಕರಕುಶಲ ವಸ್ತುಗಳ ಉತ್ಪಾದನೆ
ಮಹಿಳೆಯರು ತಮ್ಮ ಆಸಕ್ತಿ, ಕೌಶಲ್ಯ ಮತ್ತು ಸ್ಥಳೀಯ ಬೇಡಿಕೆಯ ಆಧಾರದ ಮೇಲೆ ತಾವು ಆರಂಭಿಸಬೇಕೆಂದಿರುವ ಉದ್ಯಮನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಸಂಭಂಧಿಸಿದಂತೆ ಸಂಪೂರ್ಣ ಯೋಜನಾ ವರದಿ ಸಿದ್ಧಪಡಿಸಬೇಕು.
ಅರ್ಹತಾ ಮಾನದಂಡಗಳು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆ:
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು
- ವಯಸ್ಸು 18 ರಿಂದ 55 ವರ್ಷಗಳೊಳಗಿರಬೇಕು
- ವಾರ್ಷಿಕ ಕುಟುಂಬ ಆದಾಯ:
- ಸಾಮಾನ್ಯ / ವಿಶೇಷ ವರ್ಗ: ರೂ. 1.5 ಲಕ್ಷದೊಳಗೆ
- ಪರಿಶಿಷ್ಟ ಜಾತಿ / ಪಂಗಡ: ರೂ. 2.00 ಲಕ್ಷದೊಳಗೆ
ಅಗತ್ಯ ದಾಖಲೆಗಳು
- ವಾಸಸ್ಥಳ ದೃಢೀಕರಣ ಪತ್ರ (ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ)
- ಆಧಾರ್ ಕಾರ್ಡ್
- ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ
- ಕೈಗೊಳ್ಳಲು ಉದ್ದೇಶಿಸಿರುವ ಉದ್ಯಮಕ್ಕೆ ಸಂಬಂಧಿಸಿದ ಯೋಜನಾ ವರದಿ
- ತಹಸೀಲ್ದಾರರಿಂದ ನೀಡಲಾದ ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
ಯೋಜನೆಯ ಮಹತ್ವ
ಉದ್ಯೋಗಿನಿ ಯೋಜನೆ ಕೇವಲ ಸಾಲ ನೀಡುವ ಯೋಜನೆಯಲ್ಲ; ಇದು ಮಹಿಳೆಯರ ಜೀವನವನ್ನು ಪರಿವರ್ತಿಸುವ ಶಕ್ತಿಯುತ ಸಾಧನವಾಗಿದೆ. ಸ್ವ ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುತ್ತಾರೆ, ಕುಟುಂಬದ ನಿರ್ಧಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ ಮತ್ತು ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯುತ್ತಾರೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳೆಯರಿಗೆ ಸಮಾನ ಅವಕಾಶ ಒದಗಿಸುವ ಮೂಲಕ ಸಮಗ್ರ ಸಾಮಾಜಿಕ ಅಭಿವೃದ್ಧಿಗೆ ಈ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ.