ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಆರ್ಥಿಕವಾಗಿ ಬಲ ತುಂಬಲು ಸರ್ಕಾರದಿಂದ ಜಾರಿಗೆ ತರಲಾಗಿರುವ ಮಹತ್ವದ ಯೋಜನೆಗಳಲ್ಲಿ “ಸ್ವಯಂ ಉದ್ಯೋಗ ಯೋಜನೆ” ಪ್ರಮುಖವಾಗಿದೆ. ಉದ್ಯೋಗಕ್ಕಾಗಿ ಅಲೆದಾಡುವುದಕ್ಕಿಂತ, ಸ್ವಂತ ಉದ್ಯಮ ಪ್ರಾರಂಭಿಸಿ ಆತ್ಮನಿರ್ಭರರಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ.
ಸಣ್ಣ ವ್ಯಾಪಾರ, ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ವಂತ ವ್ಯವಹಾರ ಆರಂಭಿಸಲು ಬಯಸುವ ಯುಕವರಿಗೆ ಈ ಯೋಜನೆಯಲ್ಲಿ ಆರ್ಥಿಕ ನೆರವು ಪಡೆಯಬಹುದು.
ಯೋಜನೆಯ ಮುಖ್ಯ ಉದ್ದೇಶ
ಈ ಯೋಜನೆಯ ಮೂಲ ಉದ್ದೇಶ ಅಲ್ಪಸಂಖ್ಯಾತ ಸಮುದಾಯದ ಯುವಕರು ಮತ್ತು ಮಹಿಳೆಯರನ್ನು ಸ್ವಯಂ ಉದ್ಯೋಗದತ್ತ ಪ್ರೇರೇಪಿಸುವುದು, ಹಾಗೂ ಆರ್ಥಿಕವಾಗಿ ಸ್ವಾವಲಂಭಿಗಳಾಗುವಂತೆ ಮಾಡುವುದು. ಈ ಯೋಜನೆಯಲ್ಲಿ ಬ್ಯಾಂಕ್ ಸಾಲದ ಜೊತೆಗೆ ಸರ್ಕಾರದಿಂದ ಸಹಾಯಧನವನ್ನೂ (Subsidy) ನೀಡಲಾಗುತ್ತದೆ, ಇದರಿಂದ ಹೊಸದಾಗಿ ಉದ್ಯಮ ಆರಂಭಿಸುವ ವ್ಯಕ್ತಿಗಳಿಗೆ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ.
ಈ ಯೋಜನೆಯ ಲಾಭ ಪಡೆಯಲು ಬಯಸುವವರಿಗೆ, ರಾಷ್ಟ್ರೀಕೃತ ಹಾಗೂ ಷೆಡ್ಯೂಲ್ಡ್ ಬ್ಯಾಂಕ್ಗಳ ಸಹಯೋಗದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ. ಘಟಕ ವೆಚ್ಚದ 33% ರಷ್ಟು ಅಥವಾ ಗರಿಷ್ಠ ₹1.00 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ. ಇದು ಹೊಸ ಉದ್ಯಮ ಆರಂಭಿಸುವವರಿಗೆ ದೊಡ್ಡ ಆರ್ಥಿಕ ನೆರವಾಗಿದೆ.
ಯಾವ ಯಾವ ಕ್ಷೇತ್ರಗಳಿಗೆ ಸಾಲ ಸೌಲಭ್ಯ ಲಭ್ಯವಿದೆ?
ಈ ಯೋಜನೆಯಡಿ ಕೆಳಗಿನ ಚಟುವಟಿಕೆಗಳಿಗೆ ಸಾಲ ಹಾಗೂ ಸಹಾಯಧನ ಸಿಗುತ್ತದೆ:
- ಸಣ್ಣ ವ್ಯಾಪಾರ (ಕಿರಾಣಿ ಅಂಗಡಿ, ಹೊಲಿಗೆ ಕೇಂದ್ರ, ಮೊಬೈಲ್ ರಿಪೇರಿ)
- ಗುಡಿ ಕೈಗಾರಿಕೆ (ಕರಕುಶಲ ಉತ್ಪನ್ನಗಳು, ಆಹಾರ ಸಂಸ್ಕರಣೆ, ಇತ್ಯಾದಿ)
- ಸೇವಾ ಕ್ಷೇತ್ರ (ಸಲೂನ್, ಗ್ಯಾರೇಜ್, ಟೈಲರಿಂಗ್ ಯೂನಿಟ್)
- ಕೃಷಿ ಆಧಾರಿತ ಚಟುವಟಿಕೆಗಳು (ಹಾಲು ಉತ್ಪಾದನೆ, ಕುರಿ/ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ)
ಇದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ತಮ್ಮ ಅನುಕೂಲ ಹಾಗೂ ಸಾಮರ್ಥ್ಯಕ್ಕೆ ತಕ್ಕಂತಹ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು.
ಅರ್ಹತಾ ಮಾನದಂಡಗಳು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಅರ್ಹತೆಗಳು ಅಗತ್ಯ:
- ಅರ್ಜಿದಾರರು ರಾಜ್ಯದ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
- ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
- ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ₹6.00 ಲಕ್ಷ ಮೀರಬಾರದು.
- ಕುಟುಂಬದ ಯಾವುದೇ ಸದಸ್ಯರು ರಾಜ್ಯ / ಕೇಂದ್ರ ಸರ್ಕಾರ ಅಥವಾ ಸಾರ್ವಜನಿಕ ವಲಯದ ಉದ್ಯೋಗಿಯಾಗಿರಬಾರದು.
- ಅರ್ಜಿದಾರರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ಮೂಲಕ ಈಗಾಗಲೇ ಸಾಲ ಪಡೆದಿರಬಾರದು.
ಈ ನಿಯಮಗಳು ನಿಜವಾಗಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ಲಾಭ ತಲುಪುವಂತೆ ರೂಪಿಸಲಾಗಿದೆ.
ಅಗತ್ಯ ದಾಖಲೆಗಳು
ಅರ್ಜಿದಾರರು ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:
- ಆನ್ಲೈನ್ ಅರ್ಜಿ ಫಾರ್ಮ್
- ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ ಪ್ರತಿ
- ಯೋಜನಾ ವರದಿ (Project Report)
ಯೋಜನಾ ವರದಿ ಅತ್ಯಂತ ಮುಖ್ಯ : “ಸ್ವಯಂ ಉದ್ಯೋಗ” ಯೋಜನೆಯಡಿಯಲ್ಲಿ ಹೊಸದಾಗಿ ಉದ್ಯಮ ಆರಂಭಿಸಲು ಬಯಸುವ ವ್ಯಕ್ತಿಗಳು ತಾವು ಆರಂಭಿಸಬೇಕೆಂದಿರುವ ಉದ್ಯಮಕ್ಕೆ ಸಂಭಂಧಿಸಿದ ಸಂಪೂರ್ಣ ವಿವರಗಳ ಪಟ್ಟಿಯನ್ನು ಹೊಂದಿರಬೇಕು. ತಾವು ಆರಂಭಿಸುವ ಹೊಸ ಉದ್ಯೋಗದ ಮಾಹಿತಿ, ಕಚ್ಚಾವಸ್ತುಗಳ ಮಾಹಿತಿ, ಮಾರುಕಟ್ಟೆಯ ವಿವರ, ಅದಕ್ಕೆ ಸಂಭಂಧಿಸಿದ ಹಣದ ಹೂಡಿಕೆ ಎಷ್ಟು? ಆದಾಯ ಹೇಗೆ ಬರುತ್ತದೆ? ಎಂಬ ಸಂಪೂರ್ಣ ಸವಿವರಗಳನ್ನು ಸ್ಪಷ್ಟವಾಗಿ ನೀಡಬೇಕು.
ಆಯ್ಕೆ ಪ್ರಕ್ರಿಯೆ ಮತ್ತು ಸಮಿತಿ
ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ:
- ಆಯಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು – ಅಧ್ಯಕ್ಷರು
- ತಾಲ್ಲೂಕಿನ ವಿಧಾನ ಪರಿಷತ್ ಸದಸ್ಯರು – ಸಹಾಧ್ಯಕ್ಷರು
- ತಾಲ್ಲೂಕು ತಹಶೀಲ್ದಾರರು
- ಕಾರ್ಯನಿರ್ವಾಹಣಾಧಿಕಾರಿ, ತಾಲ್ಲೂಕು ಪಂಚಾಯತ್
- ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್
- ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರು
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು
- ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ – ಸದಸ್ಯ ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ.
ಈ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಿಗೆ ಅನುಮೋದನೆ ನೀಡುತ್ತದೆ.
ಕೊನೆ ಮಾತು
ಸ್ವಯಂ ಉದ್ಯೋಗ ಯೋಜನೆ ನಿಜವಾಗಿಯೂ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಚಿನ್ನದ ಅವಕಾಶ. ಉದ್ಯೋಗಕ್ಕಾಗಿ ಕಾಯುವುದಕ್ಕಿಂತ, ಸ್ವಂತ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಲು ಇದು ಒಳ್ಳೆಯ ಮಾರ್ಗ.
ಸರ್ಕಾರದ ಸಹಾಯಧನ ಹಾಗೂ ಬ್ಯಾಂಕ್ ಸಾಲದ ಬೆಂಬಲದಿಂದ ನಿಮ್ಮ ಕನಸಿನ ಉದ್ಯಮವನ್ನು ಆರಂಭಿಸಬಹುದು. ಸರಿಯಾದ ಯೋಜನೆ, ಪರಿಶ್ರಮ ಮತ್ತು ಸಂಕಲ್ಪ ಇದ್ದರೆ ಈ ಯೋಜನೆಯು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು.
ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ