ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷ, ವಿಶೇಷವಾಗಿ ಇಸ್ರೇಲ್ – ಇರಾನ್ ನಡುವಿನ ಉದ್ವಿಗ್ನತೆ, ಈಗ ಕೇವಲ ಭೌಗೋಳಿಕ, ರಾಜಕೀಯ ವಿಷಯವಲ್ಲ. ಇದು ಜಾಗತಿಕ ಸರಬರಾಜು ಸರಪಳಿ, ಇಂಧನ ಮಾರುಕಟ್ಟೆ ಮತ್ತು ಸಮುದ್ರ ಸಾಗಣೆ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಜಾಗತಿಕ ತೈಲ ಸಾಗಣೆಯ ಜೀವನಾಡಿಯಾದ ಹರ್ಮುಜ್ ಜಲಸಂಧಿ ಪ್ರದೇಶದ ಭದ್ರತಾ ಆತಂಕಗಳು ಭಾರತದಂತಹ ಆಮದು ಆಧಾರಿತ ಆರ್ಥಿಕತೆಗಳಿಗೆ ಗಂಭೀರ ಸವಾಲುಗಳನ್ನು ಸೃಷ್ಟಿಸುತ್ತಿವೆ.
ಹರ್ಮುಜ್ ಜಲಸಂಧಿ : ಜಾಗತಿಕ ಇಂಧನದ ಕಿರಿ ದ್ವಾರ
ಹರ್ಮುಜ್ ಜಲಸಂಧಿ ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಯ ಮೂಲಕ ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ತಂತ್ರಜ್ಞಾನವನ್ನೊಳಗೊಂಡ ಸಮುದ್ರ ಮಾರ್ಗವಾಗಿದೆ. ಸುಮಾರು 167 ಕಿಲೋಮೀಟರ್ ಉದ್ದವಿರುವ ಈ ಜಲಸಂಧಿ ತನ್ನ ಅತಿ ಕಿರಿದಾದ ಭಾಗದಲ್ಲಿ ಕೇವಲ 33 ಕಿಲೋಮೀಟರ್ ಅಗಲವಿದೆ. ಹಡಗು ಸಂಚಾರಕ್ಕೆ ಪ್ರತ್ಯೇಕವಾಗಿ ಸುಮಾರು 3 ಕಿಲೋಮೀಟರ್ ಅಗಲದ ಎರಡು ಮಾರ್ಗಗಳನ್ನು ಬಳಸಲಾಗುತ್ತದೆ. ಇದರ ಉತ್ತರ ಕರಾವಳಿ ಭಾಗವು ಇರಾನ್ ದೇಶದ ನಿಯಂತ್ರಣದಲ್ಲಿದ್ದು, ದಕ್ಷಿಣ ಕರಾವಳಿ ಭಾಗವು ಒಮನ್ ಮತ್ತು (Oman) ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ನಡುವೆ ಹಂಚಿಕೆಯಾಗಿದೆ. “ಹರ್ಮುಜ್ ಜಲಸಂಧಿಯು ಅಂತರರಾಷ್ಟ್ರೀಯ ಜಲಮಾರ್ಗವಾಗಿದ್ದರೂ, ಅದರ ಭೌಗೋಳಿಕ ಸ್ಥಾನಮಾನ ಹಾಗೂ ತಂತ್ರಜ್ಞಾನದ ಕಾರಣದಿಂದ ಈ ಪ್ರದೇಶದಲ್ಲಿ ಇರಾನ್‌ಗೆ ಹೆಚ್ಚಿನ ಪ್ರಭಾವವಿದೆ.”
ಪ್ರತಿ ದಿನ ಸುಮಾರು 17 ರಿಂದ 20 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವು ಈ ಮಾರ್ಗದ ಮೂಲಕ ಸಾಗುತ್ತದೆ. ಒಂದು ಬ್ಯಾರೆಲ್ 159 ಲೀಟರ್ ಎಂದು ಗಣಿಸಿದರೆ, ದಿನಕ್ಕೆ ಸುಮಾರು 2.7 ರಿಂದ 3.2 ಬಿಲಿಯನ್ ಲೀಟರ್ ತೈಲ — ಅಂದರೆ ಸುಮಾರು 700 ರಿಂದ 850 ಮಿಲಿಯನ್ ಗ್ಯಾಲನ್ — ಹರ್ಮುಜ್ ಮೂಲಕ ಸಾಗುತ್ತದೆ. ಜಾಗತಿಕ ಸಮುದ್ರ ಮಾರ್ಗದ ತೈಲ ಸಾಗಣೆಯ ಸುಮಾರು 20 ಶೇಕಡಾ ಪಾಲು ಈ ಒಂದೇ ಕಿರಿದಾದ ದಾರಿಯ ಮೇಲೆ ಅವಲಂಬಿತವಾಗಿದೆ. ದಿನಕ್ಕೆ ಸರಾಸರಿ 80 ರಿಂದ 100 ಹಡಗುಗಳು, ವರ್ಷಕ್ಕೆ 30,000 ಕ್ಕೂ ಹೆಚ್ಚು ಹಡಗುಗಳು ಈ ಮಾರ್ಗ ಬಳಸುತ್ತವೆ. ಈ ದಾರಿಯಲ್ಲಿ ವ್ಯತ್ಯಯ ಉಂಟಾದರೆ ಜಾಗತಿಕ ಇಂಧನ ಮಾರುಕಟ್ಟೆ ತಕ್ಷಣವೇ ಅಸ್ಥಿರವಾಗುತ್ತದೆ.
ದೇಶವಾರು ಯುದ್ಧದ ಆರ್ಥಿಕ ಪರಿಣಾಮ
ಯುದ್ಧದ ಪರಿಣಾಮ ಇರಾನ್ ದೇಶದ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಯ ಮೇಲೆ ಬಹುಮಟ್ಟಿನಲ್ಲಿ ವ್ಯಕ್ತವಾಗುತ್ತದೆ. ತೈಲ ರಫ್ತು ಮೇಲಿನ ನಿರ್ಬಂಧಗಳು, ಕರೆನ್ಸಿಯ ಮೌಲ್ಯ ಕುಸಿತ, ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ನಿರ್ಬಂಧಗಳು, ಹಾಗೂ ಅಂತರರಾಷ್ಟ್ರೀಯ ರಾಜಕೀಯ ಒತ್ತಡಗಳು ದೇಶದ ಆರ್ಥಿಕ ಸ್ಥಿತಿಗೆ ಹೆಚ್ಚುವರಿ ಒತ್ತಡ ತರಬಹುದು. ಹರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಎಚ್ಚರಿಕೆಗಳು ಜಾಗತಿಕ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ತೈಲ ಬೆಲೆ ಏರಿಕೆಗೆ ಕಾರಣವಾಗಬಹುದು; ಆದರೆ ದೀರ್ಘಾವಧಿಯಲ್ಲಿ ಅದು ಇರಾನ್‌ನ ಸ್ವಂತ ತೈಲ ರಫ್ತು ಆದಾಯಕ್ಕೂ ಹಿನ್ನಡೆಯಾಗುವ ಸಾಧ್ಯತೆಯಿದೆ.
ಇಸ್ರೇಲ್‌ನ ಪರಿಸ್ಥಿತಿಯಲ್ಲಿ ರಕ್ಷಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗುತ್ತವೆ. ವಿದೇಶಿ ಹೂಡಿಕೆದಾರರು ಎಚ್ಚರಿಕೆ ವಹಿಸುವ ಸಾಧ್ಯತೆ ಹೆಚ್ಚುತ್ತದೆ. ಯುದ್ಧದ ಪರಿಸ್ಥಿತಿಯಲ್ಲಿ ಬಜೆಟ್ ಒತ್ತಡ ಹೆಚ್ಚುವುದು ಸಹಜ.
ಸೌದಿ ಅರೇಬಿಯವು ತೈಲ ಬೆಲೆ ಏರಿಕೆಯಿಂದ ತಾತ್ಕಾಲಿಕವಾಗಿ ಹೆಚ್ಚಿನ ಆದಾಯ ಲಾಭ ಪಡೆಯುವ ಸಾಧ್ಯತೆ ಇದೆ. ಆದರೆ ಹರ್ಮುಜ್ ಜಲಸಂಧಿ ಮಾರ್ಗದಲ್ಲಿ ಭದ್ರತಾ ಸಮಸ್ಯೆ ಅಥವಾ ಸಾಗಣೆ ಅಡಚಣೆ ಉಂಟಾದರೆ, ಮುಖ್ಯವಾಗಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತು ನಿರಂತರ ಕುಂಠಿತವಾಗುವ ಅಪಾಯ ಎದುರಾಗುತ್ತದೆ. ಸೌದಿಯ ಒಟ್ಟು ರಫ್ತಿನಲ್ಲಿ ಸುಮಾರು 70%–80% ಕ್ಕೂ ಹೆಚ್ಚು ಪಾಲು ತೈಲ ಮತ್ತು ಇಂಧನ ಸಂಬಂಧಿತ ಉತ್ಪನ್ನಗಳೇ ಆಗಿರುವುದರಿಂದ, ತೈಲ ಸಾಗಣೆಯಲ್ಲಿ ವ್ಯತ್ಯಯ ಉಂಟಾದರೆ ದೇಶದ ಪ್ರಮುಖ ಆದಾಯ ಮೂಲದ ಮೇಲೆ ನೇರ ಪರಿಣಾಮ ಬೀರುತ್ತದೆ. ಜೊತೆಗೆ, ಪೆಟ್ರೋಕೆಮಿಕಲ್ಸ್, ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳಂತಹ ಇತರೆ ಉತ್ಪನ್ನಗಳ ರಫ್ತುಗಳೂ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ.
ಯುಎಇ (United Arab Emirates) ಲಾಜಿಸ್ಟಿಕ್ಸ್ ಮತ್ತು ಜಾಗತಿಕ ವ್ಯಾಪಾರದ ಹಬ್ ಆಗಿರುವುದರಿಂದ, ಪ್ರಾದೇಶಿಕ ಸಂಘರ್ಷ ಉಂಟಾದರೆ ಬಂದರು ಆದಾಯದಲ್ಲಿ ಕುಸಿತ, ರತ್ನಾಭರಣ ಹಾಗೂ ಐಶಾರಾಮಿ ವಸ್ತುಗಳ ಮಾರುಕಟ್ಟೆಯಲ್ಲಿ ಮಂದಗತಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ವಿಮಾ ಪ್ರೀಮಿಯಂ ಏರಿಕೆಯಿಂದ, ಒಟ್ಟು ವ್ಯಾಪಾರ ವೆಚ್ಚವೂ ಹೆಚ್ಚಾಗಬಹುದು.
ಒಮನ್ (Oman)ಗೆ ಹರ್ಮುಜ್‌ನ ಭೌಗೋಳಿಕ ಸ್ಥಾನದಿಂದಾಗಿ ಭದ್ರತಾ ವೆಚ್ಚ ಹೆಚ್ಚಳ ಮತ್ತು ಬಂದರು ಆದಾಯ ಕುಸಿತದ ಸಾಧ್ಯತೆ ಇದೆ.
ಭಾರತಕ್ಕೆ ಈ ಯುದ್ಧದ ಪರಿಣಾಮ ಬಹುಮುಖವಾಗಿದೆ. ಕಚ್ಚಾ ತೈಲದ ಜಾಗತಿಕ ಬೆಲೆ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಬಹುದು. ಸಾಗಣೆ ಮತ್ತು ವಿಮಾ ವೆಚ್ಚ ಏರಿಕೆಯಿಂದ ರಫ್ತು ವೆಚ್ಚ ಹೆಚ್ಚುತ್ತದೆ. ಡಾಲರ್ ಬೇಡಿಕೆ ಹೆಚ್ಚುವುದರಿಂದ ರೂಪಾಯಿ ಮೌಲ್ಯದ ಮೇಲೂ ಒತ್ತಡ ಉಂಟಾಗಬಹುದು.
ಭಾರತದ ರಫ್ತು ವಲಯಗಳ ಮೇಲೆ ಪರಿಣಾಮ
ಅಕ್ಕಿ ರಫ್ತು
ಸೌದಿ ಅರೇಬಿಯ, ಇರಾನ್, ಯುಎಇ, ಇರಾಕ್, ಮತ್ತು ಒಮನ್, ಭಾರತೀಯ ಬಾಸ್ಮತಿ ಅಕ್ಕಿಯ ಪ್ರಮುಖ ಮಾರುಕಟ್ಟೆಗಳಾಗಿವೆ. ಯುದ್ಧ ಪರಿಸ್ಥಿತಿಯಲ್ಲಿ ಹಡಗು ಸಾಗಣೆ ವಿಳಂಬ, ಎಲ್‌ಸಿ ತೆರೆಯುವಲ್ಲಿ ತಡ ಮತ್ತು ಪಾವತಿ ಅನಿಶ್ಚಿತತೆಯ ಕಾರಣದಿಂದ ಹೊಸ ಒಪ್ಪಂದಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು. ಇದರಿಂದ ರಫ್ತು ಕುಂಠಿತವಾಗಿ ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ಇದು ಬಾಸ್ಮತಿ ಅಕ್ಕಿಯ ಬೆಲೆಯ ಮೇಲೆ ಪರಿಣಾಮ ಬೀರಬಹುದು.
ಇಂಧನ ಮತ್ತು ಪೆಟ್ರೋಕೆಮಿಕಲ್
ಭಾರತವು ಜಗತ್ತಿನ ಪ್ರಮುಖ ಕಚ್ಚಾ ತೈಲ ಆಮದುದಾರ ದೇಶಗಳಲ್ಲಿ ಒಂದಾಗಿದೆ. ದೇಶದ ಒಟ್ಟು ಕಚ್ಚಾ ತೈಲ ಅವಶ್ಯಕತೆಯ ಸುಮಾರು 80% ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಉಂಟಾದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತಕ್ಷಣವೇ ಏರಿಕೆಯಾಗುತ್ತದೆ. ವಿಶೇಷವಾಗಿ ಹರ್ಮುಜ್ ಜಲಸಂಧಿ ಮಾರ್ಗದಲ್ಲಿ ಅಸ್ಥಿರತೆ ಕಂಡುಬಂದರೆ, ಸರಬರಾಜು ವ್ಯತ್ಯಯದ ಭೀತಿ ಕಾರಣವಾಗಿ ತೈಲ ಬೆಲೆಗಳಲ್ಲಿ ತೀವ್ರ ವ್ಯತ್ಯಾಸ ಉಂಟಾಗಬಹುದು.
ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತದ ರಿಫೈನರಿಗಳ ಖರೀದಿ ವೆಚ್ಚ ಹೆಚ್ಚುತ್ತದೆ. ಇದರ ಜೊತೆಗೆ ಯುದ್ಧ ಪರಿಸ್ಥಿತಿಯಲ್ಲಿ ಹಡಗು ಸಾಗಣೆ ಶುಲ್ಕ, ಭದ್ರತಾ ಶುಲ್ಕ ಹಾಗೂ ವಿಮಾ ಪ್ರೀಮಿಯಂಗಳು ಏರಿಕೆಯಾಗುತ್ತವೆ. ಪರಿಣಾಮವಾಗಿ ಒಟ್ಟು ಲ್ಯಾಂಡಿಂಗ್ ಕಾಸ್ಟ್ (import landing cost) ಹೆಚ್ಚುತ್ತದೆ. ರಿಫೈನರಿಗಳು ಉತ್ಪಾದಿಸುವ ಪೆಟ್ರೋಲ್, ಡೀಸೆಲ್ ಮತ್ತು ಇತರೆ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ.
ಭಾರತ ರಿಫೈನ್ ಮಾಡಿದ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತದೆ. ಆದರೆ ಜಾಗತಿಕ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಮಾರಾಟ ಬೆಲೆಗಳನ್ನು ಸಂಪೂರ್ಣವಾಗಿ ಏರಿಸಲು ಸಾಧ್ಯವಿಲ್ಲದ ಸಂದರ್ಭಗಳಲ್ಲಿ, ಕಚ್ಚಾ ತೈಲ ದುಬಾರಿಯಾದರೂ ರಫ್ತು ಬೆಲೆ ಸಮಾನ ಪ್ರಮಾಣದಲ್ಲಿ ಏರದಿದ್ದರೆ ಲಾಭಾಂಶ ಕುಸಿಯುತ್ತದೆ. ಇದನ್ನು ರಿಫೈನರಿ ಮಾರ್ಜಿನ್ ಒತ್ತಡ (refining margin pressure) ಎಂದು ಹೇಳಬಹುದು.
ಇದರ ಜೊತೆಗೆ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ರಾಜಕೀಯ ಮತ್ತು ಸಾಮಾಜಿಕ ಒತ್ತಡವನ್ನೂ ಸೃಷ್ಟಿಸುತ್ತದೆ. ಬೆಲೆಗಳನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಾಗದಿದ್ದರೆ, ತೈಲ ಮಾರಾಟ ಕಂಪನಿಗಳ ಮೇಲೂ ಆರ್ಥಿಕ ಒತ್ತಡ ಹೆಚ್ಚುತ್ತದೆ. ಮತ್ತೊಂದೆಡೆ, ತೈಲ ಆಮದುಗಾಗಿ ಹೆಚ್ಚುವರಿ ಡಾಲರ್ ಅಗತ್ಯವಿರುವುದರಿಂದ ರೂಪಾಯಿ ಮೌಲ್ಯಕ್ಕೂ ಒತ್ತಡ ಉಂಟಾಗಬಹುದು.
ಹೀಗಾಗಿ, ಒಂದೆಡೆ ಕಚ್ಚಾ ತೈಲದ ಖರೀದಿ ವೆಚ್ಚ ಏರಿಕೆ, ಮತ್ತೊಂದೆಡೆ ಸಾಗಣೆ ಮತ್ತು ವಿಮಾ ವೆಚ್ಚಗಳ ಹೆಚ್ಚಳ, ಮತ್ತು ತೃತೀಯವಾಗಿ ರಫ್ತು ಲಾಭಾಂಶ ಕುಸಿತ — ಈ ಮೂರೂ ಒತ್ತಡಗಳು ಒಂದೇ ಸಮಯದಲ್ಲಿ ಎದುರಾಗುವ ಪರಿಸ್ಥಿತಿಯೇ ಬಹುಮಟ್ಟಿನ ಆರ್ಥಿಕ ಒತ್ತಡದ ಸ್ಥಿತಿಯಾಗಿದೆ.
ಫಾರ್ಮಾ ವಲಯ
ಮಧ್ಯಪ್ರಾಚ್ಯದಲ್ಲಿ ಭಾರತೀಯ ಜನರಿಕ್ ಔಷಧಿಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಆದರೆ ಯುದ್ಧದ ಸಂದರ್ಭಗಳಲ್ಲಿ ಬ್ಯಾಂಕಿಂಗ್ ನಿರ್ಬಂಧಗಳು, ಡಾಲರ್ ಪಾವತಿ ವಿಳಂಬ ಮತ್ತು ಹಣ ವರ್ಗಾವಣೆಯ ತಾಂತ್ರಿಕ ತೊಂದರೆಗಳು ಕಂಪನಿಗಳ ಕ್ಯಾಶ್‌ಫ್ಲೋ ಮೇಲೆ ಒತ್ತಡ ಉಂಟುಮಾಡಬಹುದು.
ಕೃಷಿ ಮತ್ತು ಆಹಾರ ಸಂಸ್ಕರಣೆ
ಚಹಾ, ಸಕ್ಕರೆ, ಮಸಾಲೆಗಳು ಹಾಗೂ ಮಾಂಸ ಉತ್ಪನ್ನಗಳಿಗೆ ಕೊಲ್ಲಿ ರಾಷ್ಟ್ರಗಳು ಭಾರತದ ಪ್ರಮುಖ ರಫ್ತು ಮಾರುಕಟ್ಟೆಗಳಾಗಿವೆ. ವಿಶೇಷವಾಗಿ ಸೌದಿ ಅರೇಬಿಯ, ಯುಎಇ, ಒಮನ್, ಕತಾರ್ ಮತ್ತು ಕುವೈತ್ ದೇಶಗಳಲ್ಲಿ ಭಾರತೀಯ ಆಹಾರ ಉತ್ಪನ್ನಗಳಿಗೆ ಸ್ಥಿರ ಬೇಡಿಕೆ ಇದೆ. ಈ ಮಾರುಕಟ್ಟೆಗಳು ಬೆಲೆಯ ಸ್ಪರ್ಧಾತ್ಮಕತೆ ಮತ್ತು ಸಮಯಪಾಲನೆಯ ಮೇಲೆ ಹೆಚ್ಚಿನ ಒತ್ತಡವನ್ನ ಉಂಟು ಮಾಡುತ್ತವೆ.
ಯುದ್ಧದ ಸಂದರ್ಭಗಳಲ್ಲಿ ಸಮುದ್ರ ಸಾಗಣೆಯಲ್ಲಿ ಉಂಟಾಗುವ ವಿಳಂಬವು ಶೀಘ್ರ ಹಾಳಾಗುವ ಆಹಾರ ವಸ್ತುಗಳಿಗೆ ಗಂಭೀರ ಅಪಾಯವನ್ನ ಉಂಟುಮಾಡುತ್ತದೆ. ವಿಶೇಷವಾಗಿ ಮಾಂಸ ಉತ್ಪನ್ನಗಳಂತಹ ಆಹಾರವು ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಹಡಗುಗಳು ಪರ್ಯಾಯ ಮಾರ್ಗ ಬಳಸಬೇಕಾದರೆ, ಸಾಗಣೆ ಅವಧಿ ದೀರ್ಘವಾಗುತ್ತದೆ. ಇದರ ಪರಿಣಾಮವಾಗಿ ಉತ್ಪನ್ನಗಳ ಗುಣಮಟ್ಟ ಕುಸಿತ, ಹೆಚ್ಚುವರಿ ಪರಿಶೀಲನೆ ಮತ್ತು ಸಂಗ್ರಹಣಾ ವೆಚ್ಚ, ಹಾಗೆಯೇ ಕೆಲವೊಮ್ಮೆ ಸರಕುಗಳನ್ನು ಹಿಂತಿರುಗಿಸುವ ಪರಿಸ್ಥಿತಿಯೂ ಉಂಟಾಗಬಹುದು.
ಇದರ ಜೊತೆಗೆ, ಶೀತಗೃಹ (cold storage) ವ್ಯವಸ್ಥೆಯ ಅವಧಿ ಹೆಚ್ಚಾದಂತೆ ವಿದ್ಯುತ್ ಮತ್ತು ನಿರ್ವಹಣಾ ವೆಚ್ಚವೂ ಏರಿಕೆಯಾಗುತ್ತದೆ. ಯುದ್ಧದ ಸಂದರ್ಭಗಳಲ್ಲಿ ವಿಮಾ ಪ್ರೀಮಿಯಂಗಳು ಹೆಚ್ಚಾಗುವುದರಿಂದ ರಫ್ತು ವೆಚ್ಚ ಮತ್ತಷ್ಟು ಹೆಚ್ಚುತ್ತದೆ. ಇದು ಭಾರತೀಯ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಕುಗ್ಗಿಸಬಹುದು.
ದೀರ್ಘಾವಧಿಯಲ್ಲಿ, ಆಮದುದಾರರು ಪರ್ಯಾಯ ಪೂರೈಕೆದಾರರನ್ನು ಹುಡುಕುವ ಸಾಧ್ಯತೆ ಇದೆ. ಉದಾಹರಣೆಗೆ ಬ್ರೆಜಿಲ್, ಥಾಯ್ಲ್ಯಾಂಡ್ ಅಥವಾ ಆಸ್ಟ್ರೇಲಿಯಾ; ಒಮ್ಮೆ ಮಾರುಕಟ್ಟೆ ಪಾಲು ಕಳೆದುಕೊಂಡರೆ, ಅದನ್ನು ಮರುಪಡೆಯುವುದು ಸುಲಭವಲ್ಲ. ಆದ್ದರಿಂದ ಸಾಗಣೆ ವ್ಯತ್ಯಯಗಳು ಕೇವಲ ತಾತ್ಕಾಲಿಕ ನಷ್ಟವಲ್ಲ; ಅವು ದೀರ್ಘಾವಧಿಯ ಮಾರುಕಟ್ಟೆ ಹಿನ್ನಡೆಯನ್ನೂ ಉಂಟುಮಾಡುವ ಸಾಧ್ಯತೆ ಹೊಂದಿವೆ.
ಇಂಜಿನಿಯರಿಂಗ್ ಮತ್ತು ರತ್ನಾಭರಣ
ಮಧ್ಯಪ್ರಾಚ್ಯದ ನಿರ್ಮಾಣ ವಲಯದಲ್ಲಿ ಮಂದಗತಿ ಕಂಡುಬಂದರೆ ಭಾರತೀಯ ಇಂಜಿನಿಯರಿಂಗ್ ಉತ್ಪನ್ನಗಳ ಬೇಡಿಕೆ ಕುಸಿಯಬಹುದು. ಯುದ್ಧದ ಪರಿಸ್ಥಿತಿಯಲ್ಲಿ ಐಶಾರಾಮಿ ಖರೀದಿಗಳು ಸಾಮಾನ್ಯವಾಗಿ ಕಡಿಮೆಯಾಗುವುದರಿಂದ ರತ್ನಾಭರಣ ರಫ್ತಿಗೂ ಹೊಡೆತ ಬೀಳಬಹುದು.
ಸಮಗ್ರ ಆರ್ಥಿಕ ಪರಿಣಾಮ
ಮಧ್ಯಪ್ರಾಚ್ಯ ಸಂಘರ್ಷವು ಮೂರು ಪ್ರಮುಖ ಆರ್ಥಿಕ ಅಪಾಯಗಳನ್ನು ಉಂಟುಮಾಡುತ್ತದೆ. ಸರಬರಾಜು ಸರಪಳಿ ವ್ಯತ್ಯಯ, ಪಾವತಿ ಅನಿಶ್ಚಿತತೆ ಮತ್ತು ಇಂಧನ ವೆಚ್ಚ ಏರಿಕೆ. ಸಂಘರ್ಷ ದೀರ್ಘಕಾಲ ಮುಂದುವರಿದರೆ, ಭಾರತದ ವಿದೇಶಿ ವಿನಿಮಯ ಆದಾಯದ ಮೇಲೆ ಒತ್ತಡ ಹೆಚ್ಚಬಹುದು. ರೂಪಾಯಿ ಮೌಲ್ಯ ಕುಸಿತ, ಆಮದು ವೆಚ್ಚ ಏರಿಕೆ ಮತ್ತು ವ್ಯಾಪಾರ ಹಿನ್ನಡೆಯಾಗುವ ಸಾಧ್ಯತೆಗಳಿವೆ.
ಒಟ್ಟಾರೆ, ಹರ್ಮುಜ್‌ನಂತಹ ಕಿರಿದಾದ ಸಮುದ್ರ ದಾರಿಯಲ್ಲಿ ಉಂಟಾಗುವ ಅಸ್ಥಿರತೆ ಜಗತ್ತಿನ ಐದನೇ ಭಾಗದ ತೈಲ ಸಾಗಣೆಯನ್ನು ಪ್ರಭಾವಿಸುತ್ತದೆ. ಅದರ ಪ್ರತಿಫಲ ಮಧ್ಯಪ್ರಾಚ್ಯದ ತೈಲ ಕ್ಷೇತ್ರಗಳಿಂದ ಹಿಡಿದು ಭಾರತದ ರೈತನ ಹೊಲದವರೆಗೆ ತಲುಪುತ್ತದೆ.
ಇದು ಕೇವಲ ಒಂದು ಪ್ರದೇಶದ ಯುದ್ಧವಲ್ಲ — ಜಾಗತಿಕ ಆರ್ಥಿಕ ಸಮತೋಲನವನ್ನು ಪರೀಕ್ಷಿಸುವ ಸನ್ನಿವೇಶವಾಗಿದೆ.