ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಕುರಿತು ಮುಖ್ಯಮಂತ್ರಿಗಳ ಪತ್ರ
ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಯ ಕುರಿತು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮವಾಗಿ ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ವಿಶೇಷವಾಗಿ ದುಬೈ ಸೇರಿದಂತೆ ವಿವಿಧ ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ, ವ್ಯವಹಾರ ಹಾಗೂ ವೈಯಕ್ತಿಕ ಕಾರಣಗಳಿಂದ ತೆರಳಿದ್ದ ಸಾವಿರಾರು ಕನ್ನಡಿಗರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ.
ಪತ್ರದಲ್ಲಿನ ಪ್ರಮುಖ ಮನವಿಗಳು
ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ಕೆಳಗಿನ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ:
- ಸಂಕಷ್ಟದಲ್ಲಿರುವ ಭಾರತೀಯರನ್ನು, ವಿಶೇಷವಾಗಿ ಕನ್ನಡಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಸಲುವಾಗಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಬೇಕು.
- ಭಾರತೀಯ ರಾಯಭಾರ ಕಚೇರಿಗಳ ಮೂಲಕ ಸಿಲುಕಿರುವವರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಂಡು ಅಗತ್ಯ ಮಾರ್ಗದರ್ಶನ ಮತ್ತು ಸಹಾಯ ಒದಗಿಸಬೇಕು.
- ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಡುವೆ ಸಮನ್ವಯ ಸಾಧಿಸಲು ವಿಶೇಷ ಕಾರ್ಯಪಡೆ (Task Force) ರಚಿಸಬೇಕು.
- ಕುಟುಂಬ ಸದಸ್ಯರಿಗೆ ನಿಖರ ಹಾಗೂ ತಾಜಾ ಮಾಹಿತಿ ದೊರಕುವಂತೆ ಸಹಾಯವಾಣಿ ಮತ್ತು ಮಾಹಿತಿ ಕೇಂದ್ರಗಳನ್ನು ಬಲಪಡಿಸಬೇಕು.
- ಟಿಕೆಟ್ ರದ್ದುಪಡಿಸುವಿಕೆ ಅಥವಾ ದಿನಾಂಕ ಬದಲಾವಣೆ ಹಿನ್ನೆಲೆಯಲ್ಲಿ ಯಾವುದೇ ದಂಡ ವಿಧಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಬೇಕು.
ಕನ್ನಡಿಗರ ಸುರಕ್ಷತೆಯನ್ನು ಅತ್ಯಂತ ಪ್ರಾಮುಖ್ಯತೆಯಿಂದ ಪರಿಗಣಿಸಬೇಕೆಂದು ಮುಖ್ಯಮಂತ್ರಿಗಳು ಒತ್ತಾಯಿಸಿದ್ದು, ಅಗತ್ಯವಿದ್ದಲ್ಲಿ ತಕ್ಷಣ ಸ್ಥಳಾಂತರ ಕಾರ್ಯಾಚರಣೆ (Evacuation) ಆರಂಭಿಸಲು ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರವು 24×7 ಸಹಾಯವಾಣಿ ವ್ಯವಸ್ಥೆಯ ಮೂಲಕ ವಿದೇಶಗಳಲ್ಲಿ ಸಿಲುಕಿರುವವರ ಮಾಹಿತಿ ಸಂಗ್ರಹಿಸಿ, ಅವರ ಕುಟುಂಬಗಳಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿದೆ. ರಾಜ್ಯದ ಹೊರಗಿರುವ ಪ್ರತಿಯೊಬ್ಬ ಕನ್ನಡಿಗನ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಸರ್ಕಾರ ನೀಡಿದೆ.
ಅಬುಧಾಬಿಯಿಂದ ಬೆಂಗಳೂರಿಗೆ ಮೊದಲ ವಿಶೇಷ ವಿಮಾನ
ಇದೇ ಸಮಯದಲ್ಲಿ ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ನಡುವೆ ವಿದೇಶಗಳಲ್ಲಿ ಸಿಲುಕಿದ್ದ ಕನ್ನಡಿಗರಿಗೆ ಮಹತ್ವದ ನೆಮ್ಮದಿ ದೊರಕಿದೆ. ಅಬುಧಾಬಿಯಿಂದ ಹೊರಟ ಮೊದಲ ವಿಶೇಷ ಸ್ಥಳಾಂತರ ವಿಮಾನವು ನೂರಾರು ಕನ್ನಡಿಗರನ್ನ ಒತ್ತು, ಯಶಸ್ವಿಯಾಗಿ ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣವನ್ನು ಸೋಮವಾರ ರಾತ್ರಿ ತಲುಪಿದೆ.
ಉದ್ವಿಗ್ನ ಪರಿಸ್ಥಿತಿಯಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಅನೇಕರು ಟಿಕೆಟ್ ರದ್ದುಪಡಿಸುವಿಕೆ, ದಿನಾಂಕ ಬದಲಾವಣೆ ಹಾಗೂ ಭದ್ರತಾ ಆತಂಕಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಉದ್ಯೋಗ, ವ್ಯವಹಾರ ಹಾಗೂ ವೈಯಕ್ತಿಕ ಕಾರಣಗಳಿಂದ ಅಬುಧಾಬಿಯಲ್ಲಿ ತಂಗಿದ್ದವರಿಗೆ ತಾಯ್ನಾಡಿಗೆ ಮರಳುವ ಸ್ಪಷ್ಟ ಮಾರ್ಗ ಕಾಣದೆ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮನ್ವಯದ ಪ್ರಯತ್ನದಿಂದ ಈ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಯಿತು.
ವಿಮಾನ ಬೆಂಗಳೂರು ತಲುಪುತ್ತಿದ್ದಂತೆಯೇ ಆರೋಗ್ಯ ತಪಾಸಣೆ ಹಾಗೂ ಇಮಿಗ್ರೇಷನ್ ಪ್ರಕ್ರಿಯೆಗಳು ನಿಯಮಾನುಸಾರ ನೆರವೇರಿಸಲಾಯಿತು. ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕುಟುಂಬ ಸದಸ್ಯರು ಆತುರದಿಂದ ಕಾದಿದ್ದು, ಆತ್ಮೀಯರನ್ನು ಮತ್ತೆ ಕಂಡ ಸಂತೋಷದಲ್ಲಿ ಭಾವುಕ ಕ್ಷಣಗಳು ಮೂಡಿಬಂದವು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಯುಕ್ತ ಕ್ರಮದಿಂದ ಈ ವ್ಯವಸ್ಥೆ ಸಾಧ್ಯವಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಗಲ್ಫ್ ರಾಷ್ಟ್ರಗಳಲ್ಲಿ ಉಳಿದಿರುವವರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇನ್ನೂ ಹೆಚ್ಚುವರಿ ವಿಶೇಷ ವಿಮಾನಗಳನ್ನು ಏರ್ಪಡಿಸಿ ವಿದೇಶದಲ್ಲಿರುವ ಭಾರತೀಯರನ್ನ ತ್ವರಿತವಾಗಿ ಕರೆತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಮೊದಲ ವಿಶೇಷ ವಿಮಾನದ ಆಗಮನವು ಸಂಕಷ್ಟದ ನಡುವೆ ಭರವಸೆಯ ಸಂಕೇತವಾಗಿ ಪರಿಣಮಿಸಿದೆ.
ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಸುರಕ್ಷಿತವಾಗಿ ವಾಪಸ್ – ಭಾವುಕ ಕ್ಷಣಗಳು
ದುಬೈನಲ್ಲಿ ಉಂಟಾದ ಅಸ್ಥಿರ ಹಾಗೂ ಗೊಂದಲಕಾರಿ ಪರಿಸ್ಥಿತಿಯಿಂದ ಕಳೆದ ಕೆಲವು ದಿನಗಳಿಂದ ಆತಂಕದಲ್ಲಿದ್ದ ಕನ್ನಡಿಗರು ಇದೀಗ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ನೂರಾರು ಕನ್ನಡಿಗರನ್ನು ಕರೆತಂದ ವಿಶೇಷ ವಿಮಾನವು ನಿನ್ನೆ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣವನ್ನು ತಲುಪಿದೆ. ತಾಯ್ನಾಡಿಗೆ ವಾಪಸು ಬಂದ ನಂತರ ಅವರು ಹಂಚಿಕೊಂಡ ಮನದ ಮಾತುಗಳು ಗಮನ ಸೆಳೆಯುತ್ತಿವೆ.
“ಈಗ ನಾವು ಸಂಪೂರ್ಣವಾಗಿ ಸುರಕ್ಷಿತರಾಗಿದ್ದೇವೆ”
ಅಲ್ಲಿ ಕೆಲವು ದಿನಗಳು ಅನಿಶ್ಚಿತತೆ ಮತ್ತು ಆತಂಕದ ವಾತಾವರಣ ಇತ್ತು ಎಂದು ಹಲವರು ತಿಳಿಸಿದ್ದಾರೆ. “ಇದೀಗ ಮನೆ ತಲುಪಿದ ಸಂತೋಷವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲ” ಎಂದು ಕೆಲವರು ಹೇಳಿದರು.
“ಕುಟುಂಬವನ್ನು ಕಂಡ ಕ್ಷಣ ಮರೆಯಲಾಗದು”
ವಿಮಾನ ನಿಲ್ದಾಣದಲ್ಲಿ ಕುಟುಂಬ ಸದಸ್ಯರನ್ನು ಭೇಟಿಯಾದ ಕ್ಷಣ ಹಲವರನ್ನು ಭಾವುಕರನ್ನಾಗಿಸಿತು. ಕಣ್ಣೀರಿನಲ್ಲೇ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದವರು, “ಈ ಅನುಭವ ನಮ್ಮ ಜೀವನದಲ್ಲಿ ಮಹತ್ವದ ಪಾಠ ಕಲಿಸಿದೆ” ಎಂದು ಅಭಿಪ್ರಾಯಪಟ್ಟರು.
“ಸರ್ಕಾರದ ಸಹಕಾರ ಶ್ಲಾಘನೀಯ”
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತ್ವರಿತ ಕ್ರಮದಿಂದ ವಿಶೇಷ ವಿಮಾನ ವ್ಯವಸ್ಥೆ ಸಾಧ್ಯವಾಯಿತು ಎಂದು ಹೇಳಿ ಅನೇಕರು ಕೃತಜ್ಞತೆ ವ್ಯಕ್ತಪಡಿಸಿದರು.
“ಆತಂಕದ ದಿನಗಳಿಗೆ ತೆರೆ ಬಿದ್ದಿದೆ”
“ಕೆಲ ದಿನಗಳು ಅನಿಶ್ಚಿತತೆಯಲ್ಲಿ ಕಳೆದವು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಇನ್ನೂ ಅಲ್ಲಿ ಉಳಿದವರು ಕೂಡ ಶೀಘ್ರವೇ ಸುರಕ್ಷಿತವಾಗಿ ವಾಪಸ್ ಬರಲಿ” ಎಂದು ಅವರು ಆಶಿಸಿದರು.
ಒಟ್ಟಿನಲ್ಲಿ, ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಸುರಕ್ಷಿತವಾಗಿ ತಾಯ್ನಾಡು ತಲುಪಿರುವುದು ಕುಟುಂಬಗಳಿಗೆ ಅಪಾರ ಸಂತೋಷ ತಂದಿದ್ದು, ಎಲ್ಲರೂ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಇರಾನ್‌ಗೆ ಸೇರಿದ ಯುದ್ಧ ಹಡಗುಗಳ ಮೇಲೆ ದಾಳಿ – ಉದ್ವಿಗ್ನತೆ ಹೆಚ್ಚಳ
ಇದೆಲ್ಲದರ ಮಧ್ಯೆ ಇರಾನ್‌ಗೆ ಸೇರಿದ ನೌಕೆಗಳ ಮೇಲೆ ದಾಳಿ ನಡೆದಿರುವ ಕುರಿತು ವರದಿಗಳು ಪ್ರಕಟವಾಗಿವೆ. ಕೆಲವು ಮಾಹಿತಿಗಳ ಪ್ರಕಾರ, ಒಮೆನ್ ಸಮುದ್ರ ಪ್ರದೇಶ ಹಾಗೂ ಕೊಲ್ಲಿ ಬಂದರು ಸುತ್ತಮುತ್ತ ಇರಾನ್‌ಗೆ ಸೇರಿದ ಹತ್ತಕ್ಕೂ ಹೆಚ್ಚು ಹಡಗುಗಳು ಹಾನಿಗೊಳಗಾಗಿವೆ ಎಂದು ಹೇಳಲಾಗಿದೆ.
ಈ ದಾಳಿಗಳ ಪರಿಣಾಮವಾಗಿ ಕೆಲವು ಹಡಗುಗಳು ಸಂಪೂರ್ಣ ನಾಶವಾಗಿದ್ದು, ಇನ್ನು ಕೆಲವು ಗಂಭೀರ ಹಾನಿಗೆ ಒಳಗಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಗಳು ಆ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿವೆ.
ಸಂಬಂಧಿತ ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾ ವಹಿಸುತ್ತಿದ್ದು, ಹೆಚ್ಚಿನ ಹಾಗೂ ಖಚಿತ ಮಾಹಿತಿಯನ್ನು ಅಧಿಕೃತ ಪ್ರಕಟಣೆಗಳ ಮೂಲಕವೇ ತಿಳಿಸಲಾಗುವುದು ಎಂದು ಸೂಚಿಸಲಾಗಿದೆ.