Telegram Join My Telegram WhatsApp Join My WhatsApp

ಇರಾನ್ ಮೇಲಿನ ದಾಳಿಯಿಂದ ಅಮೆರಿಕಾಗೆ ಆರ್ಥಿಕ ನಷ್ಟ

ಸುಮಾರು 800 ಮಿಲಿಯನ್ ಡಾಲರ್ ಹಾನಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ, ಇರಾನ್ ನಡೆಸಿದ ಪ್ರತಿದಾಳಿಗಳಿಂದ ಅಮೆರಿಕದ ಸೈನಿಕ ತಾಣಗಳಿಗೆ ಭಾರೀ ಹಾನಿ ಉಂಟಾಗಿದೆ. ವರದಿಗಳ ಪ್ರಕಾರ, ಯುದ್ಧದ ಮೊದಲ ಎರಡು ವಾರಗಳಲ್ಲಿಯೇ ಸುಮಾರು 800 ಮಿಲಿಯನ್ ಡಾಲರ್ ನಷ್ಟ ಸಂಭವಿಸಿದೆ. ಜೋರ್ಡನ್ ಸೇರಿದಂತೆ ಗಲ್ಪ್ ಪ್ರದೇಶದ ಹಲವು ದೇಶಗಳಲ್ಲಿರುವ ಅಮೆರಿಕದ ಪ್ರಮುಖ ಸೈನಿಕ ಮೂಲಸೌಕರ್ಯಗಳು, ವಿಶೇಷವಾಗಿ ವಾಯು ರಕ್ಷಣಾ ವ್ಯವಸ್ಥೆಗಳು, ಈ ದಾಳಿಯಲ್ಲಿ ಗುರಿಯಾಗಿವೆ.

ಪ್ರತಿದಾಳಿಗಳಲ್ಲಿ ಹೆಚ್ಚು ಹಾನಿ

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ದಾಳಿ ಆರಂಭಿಸಿದ ನಂತರ, ಇರಾನ್ ತೀವ್ರ ಪ್ರತಿದಾಳಿ ನಡೆಸಿತು. ಯುದ್ಧದ ಮೊದಲ ವಾರದಲ್ಲಿಯೇ ಈ ಪ್ರತಿದಾಳಿಗಳಿಂದ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ವಿಶ್ಲೇಷಣೆಗಳು ಸೂಚಿಸುತ್ತವೆ. ಗಲ್ಪ್ ಪ್ರದೇಶದಲ್ಲಿನ ಅಮೆರಿಕದ ನೆಲೆಗಳಿಗೆ ಉಂಟಾದ ನಷ್ಟದ ಪೂರ್ಣ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಲಭ್ಯವಿರುವ ಅಂದಾಜುಗಳು ಯುದ್ಧ ದೀರ್ಘಕಾಲ ಮುಂದುವರಿದರೆ ಅಮೆರಿಕ ಎದುರಿಸಬೇಕಾದ ಆರ್ಥಿಕ ಮತ್ತು ಸೇನಾ ವೆಚ್ಚದ ಗಂಭೀರತೆಯನ್ನು ಸ್ಪಷ್ಟಪಡಿಸುತ್ತವೆ.

ಸಂಪೂರ್ಣ ಮಾಹಿತಿ ಲಭ್ಯವಿಲ್ಲ

ಅಮೆರಿಕದ ಸೈನಿಕ ತಾಣಗಳಿಗೆ ಉಂಟಾದ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ವರದಿಗಳ ಪ್ರಕಾರ, ನಿಜವಾದ ನಷ್ಟ ಇನ್ನೂ ಹೆಚ್ಚಿನದಾಗಿರುವ ಸಾಧ್ಯತೆಯಿದೆ. ಈ ಕುರಿತು ಅಮೆರಿಕದ ರಕ್ಷಣಾ ಇಲಾಖೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಇನ್ನಷ್ಟು ಕುತೂಹಲಕರವಾಗಿಸಿದೆ.

ಪ್ರಮುಖ ಸೇನಾ ತಾಣಗಳಿಗೆ ಹೊಡೆತ

ಜೋರ್ಡನ್, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಗಲ್ಪ್ ಪ್ರದೇಶದ ಇತರೆ ದೇಶಗಳಲ್ಲಿರುವ ಅಮೆರಿಕದ ವಾಯು ರಕ್ಷಣಾ ಮತ್ತು ಸಂವಹನ ವ್ಯವಸ್ಥೆಗಳು ಇರಾನ್ ದಾಳಿಗೆ ಗುರಿಯಾಗಿವೆ. ವಿಶೇಷವಾಗಿ ಜೋರ್ಡನ್‌ನಲ್ಲಿರುವ ಅಮೆರಿಕ ಏರ್‌ಬೇಸ್‌ನಲ್ಲಿ ಸ್ಥಾಪಿತವಾಗಿರುವ THAAD ರಾಡಾರ್ ವ್ಯವಸ್ಥೆಗೆ ಭಾರೀ ಹಾನಿಯಾಗಿದೆ. ಈ ವ್ಯವಸ್ಥೆಯ ಮೌಲ್ಯವೇ ಸುಮಾರು 485 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಜೊತೆಗೆ ಬಹರೈನ್‌ನ ನೌಕಾಪಡೆ ತಾಣದಲ್ಲಿಯೂ ಕೆಲವು ಪ್ರಮುಖ ಉಪಕರಣಗಳು ಹಾನಿಗೊಳಗಾಗಿವೆ. ಕಟ್ಟಡಗಳು ಮತ್ತು ಇತರೆ ಮೂಲಸೌಕರ್ಯಗಳಿಗೆ ಸುಮಾರು 310 ಮಿಲಿಯನ್ ಡಾಲರ್ ನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ.

ಉಪಗ್ರಹ ಚಿತ್ರಗಳಲ್ಲಿ ದಾಳಿಯ ಸುಳಿವು

ಉಪಗ್ರಹ ಚಿತ್ರಗಳ ವಿಶ್ಲೇಷಣೆಯಲ್ಲಿ, ಅಮೆರಿಕದ ಹಲವು ವಾಯುನೆಲೆಗಳ ಮೇಲೆ ಇರಾನ್ ದಾಳಿ ನಡೆಸಿರುವುದು ಸ್ಪಷ್ಟವಾಗಿ ಕಾಣಿಸಿದೆ. ಕುವೈತ್‌ನ ಅಲಿ ಅಲ್-ಸಲೀಮ್ ಏರ್‌ಬೇಸ್‌, ಖತಾರ್‌ನ ಅಲ್-ಉದೈದ್ ಏರ್‌ಬೇಸ್‌ ಹಾಗೂ ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ಏರ್‌ಬೇಸ್‌ಗಳೂ ಈ ದಾಳಿಗೆ ಗುರಿಯಾಗಿರುವುದು ದೃಢಪಟ್ಟಿದೆ. ಈ ಬೆಳವಣಿಗೆಗಳು ಯುದ್ಧದ ತೀವ್ರತೆ ಮತ್ತು ವ್ಯಾಪ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಪ್ರಾಣಹಾನಿ ಮತ್ತು ಮಾನವೀಯ ನಷ್ಟ

ಯುದ್ಧ ಆರಂಭವಾದ ಬಳಿಕ ಅಮೆರಿಕದ 13 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಟ್ಟಾರೆ ಸಾವಿನ ಸಂಖ್ಯೆ ಸುಮಾರು 3,200ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸುಮಾರು 1,400 ಮಂದಿ ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಂಡಿರುವುದು ಪರಿಸ್ಥಿತಿಯ ಗಂಭೀರತೆ ಮತ್ತು ಮಾನವೀಯ ಸಂಕಷ್ಟದ ತೀವ್ರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಅಮೆರಿಕಾದಲ್ಲಿ ಹೆಚ್ಚುತ್ತಿರುವ ಆರ್ಥಿಕ ಹೊರೆ

ಯುದ್ಧದ ಆರ್ಥಿಕ ಹೊರೆ ಅಮೆರಿಕದ ಮೇಲೆ ದಿನೇದಿನೇ ಹೆಚ್ಚುತ್ತಿದೆ. ಮೊದಲ 6 ದಿನಗಳಲ್ಲಿ ಸುಮಾರು 11.3 ಬಿಲಿಯನ್ ಡಾಲರ್ ವೆಚ್ಚವಾಗಿದ್ದು, ಕೇವಲ 12 ದಿನಗಳಲ್ಲಿ ಇದು 16.5 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಈ ಪ್ರವೃತ್ತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ವೆಚ್ಚ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ, ಹೆಚ್ಚುತ್ತಿರುವ ಯುದ್ಧ ವೆಚ್ಚವನ್ನು ನಿರ್ವಹಿಸಲು ಅಮೆರಿಕದ ರಕ್ಷಣಾ ಇಲಾಖೆ ಹೆಚ್ಚುವರಿ 200 ಬಿಲಿಯನ್ ಡಾಲರ್ ಅನುದಾನವನ್ನು ಕೇಳಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಇರಾನ್‌ಗೆ ರಷ್ಯಾ-ಚೀನಾ ಬೆಂಬಲಿಸುತ್ತಲಿವೆಯೇ?
ಅಮೆರಿಕಕ್ಕೆ ಹಿನ್ನಡೆಯಾಗುತ್ತಿರುವ ಹಲವು ಕಾರಣಗಳು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಚಿಸಿದಂತೆ ಎಲ್ಲಾ ಯೋಜನೆಗಳು ಯಶಸ್ವಿಯಾಗಿದ್ದರೆ, ಜಾಗತಿಕ ರಾಜಕೀಯದ ಚಿತ್ರಣವೇ ಸಂಪೂರ್ಣವಾಗಿ ಬೇರೆಯಾಗಿರುತ್ತಿತ್ತು. ಆದರೆ ಅಂತರರಾಷ್ಟ್ರೀಯ ರಾಜಕೀಯದಲ್ಲಿ ಅಂದಾಜುಗಳಿಗಿಂತ ವಾಸ್ತವಗಳು ಬೇರೆ ರೀತಿಯಲ್ಲಿ ರೂಪುಗೊಳ್ಳುತ್ತವೆ. ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಕಠಿಣ ನಿಲುವು ತೆಗೆದುಕೊಂಡು ಇಸ್ರೇಲ್ ಜೊತೆಗೂಡಿ ಯುದ್ಧಕ್ಕೆ ಇಳಿದ ಅಮೆರಿಕ, ಈಗ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಇರಾನ್‌ಗೆ ರಷ್ಯಾ ಮತ್ತು ಚೀನಾ ನೀಡುತ್ತಿರುವ ಪರೋಕ್ಷ ಬೆಂಬಲ ಅಮೆರಿಕದ ತಂತ್ರಗಳಿಗೆ ದೊಡ್ಡ ಅಡ್ಡಿಯಾಗಿದ್ದು, ಯುದ್ಧದ ಸಮೀಕರಣವನ್ನೇ ಬದಲಾಯಿಸುವಂತಾಗಿದೆ.

ಇದೇ ವೇಳೆ, ಕಳೆದ ವಾರ ಅಮೆರಿಕವು ತನ್ನ ಮಿತ್ರ ರಾಷ್ಟ್ರಗಳಾದ ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶಗಳಿಗೆ ಯುದ್ಧದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರೂ, ಯಾವುದೇ ದೇಶವೂ ನೇರವಾಗಿ ಸಹಾಯ ನೀಡಲು ಮುಂದೆ ಬರಲಿಲ್ಲ. ಈ ಬೆಳವಣಿಗೆ ಅಮೆರಿಕದ ಲೆಕ್ಕಾಚಾರಕ್ಕೆ ವಿರುದ್ಧವಾಗಿತ್ತು. ಬಹುಶ, ಇಂತಹ ಪ್ರತಿಕ್ರಿಯೆಯನ್ನು ಅಮೆರಿಕ ನಿರೀಕ್ಷಿಸಿರಲಿಲ್ಲವೇನೋ? ಈ ಕಾರಣದಿಂದ ಅಮೆರಿಕದ ಮೇಲೆ ಇರುವ ಒತ್ತಡ ಮತ್ತಷ್ಟು ಹೆಚ್ಚಾಯಿತು.

ಮಧ್ಯಪ್ರಾಚ್ಯದ ಯುದ್ಧ ಈಗ ಕೇವಲ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವಲ್ಲ. ಇದು ಜಾಗತಿಕ ಶಕ್ತಿಗಳ ನಡುವೆ ನಡೆಯುತ್ತಿರುವ ಪರೋಕ್ಷ ಹೋರಾಟವಾಗಿದೆ. ರಷ್ಯಾ ಮತ್ತು ಚೀನಾ ನೇರವಾಗಿ ಯುದ್ಧದಲ್ಲಿ ಭಾಗವಹಿಸದಿದ್ದರೂ, ಇರಾನ್‌ಗೆ ತಾಂತ್ರಿಕ, ಗುಪ್ತಚರ ಹಾಗೂ ಆರ್ಥಿಕ ನೆರವು ನೀಡುವ ಮೂಲಕ ಈ ಯುದ್ಧದ ಸಮತೋಲನವನ್ನು ಬದಲಾಯಿಸುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.

ರಷ್ಯಾ ದೇಶವವು ತನ್ನ ಮಿತ್ರ, ಇರಾನ್‌ಗೆ ಅತ್ಯಾಧುನಿಕ ಗುಪ್ತಚರ ಮಾಹಿತಿಯನ್ನು ಒದಗಿಸುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ದೇಶಗಳ ಸೇನಾ ಚಲನವಲನಗಳ ಬಗ್ಗೆ ನಿಖರ ಮಾಹಿತಿ ಹಂಚಿಕೊಳ್ಳುವ ಮೂಲಕ, ಇರಾನ್‌ಗೆ ತಂತ್ರಜ್ಞಾನಿಕ ಮೇಲುಗೈ ನೀಡುತ್ತಿದೆ. ಉಪಗ್ರಹಗಳ ಮೂಲಕ ಸಿಗುವ ಈ ಮಾಹಿತಿಯ ನೆರವಿನಿಂದ, ಇರಾನ್ ತನ್ನ ದಾಳಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸುತ್ತಿದೆ. ಜೊತೆಗೆ ಡ್ರೋನ್ ತಂತ್ರಜ್ಞಾನದಲ್ಲಿಯೂ ರಷ್ಯಾವು ಮಹತ್ವದ ಪಾತ್ರ ವಹಿಸುತ್ತಿದೆ.

ಇನ್ನೊಂದೆಡೆ, ಚೀನಾ ಇರಾನ್‌ಗೆ ಕ್ಷಿಪಣಿ ತಂತ್ರಜ್ಞಾನ ಹಾಗೂ ಅಗತ್ಯ ಕಚ್ಚಾ ವಸ್ತುಗಳನ್ನು ಒದಗಿಸುತ್ತಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳ ತಯಾರಿಕೆಗೆ ಬೇಕಾದ ಪ್ರಮುಖ ರಾಸಾಯನಿಕಗಳನ್ನು ಪೂರೈಸುವ ಮೂಲಕ, ಇರಾನ್ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಜೊತೆಗೆ, ಚೀನಾದ ನ್ಯಾವಿಗೇಷನ್ ವ್ಯವಸ್ಥೆಯ ಸಹಾಯದಿಂದ ಇರಾನ್ ತನ್ನ ಕ್ಷಿಪಣಿಗಳ ನಿಖರತೆಯನ್ನು ಹೆಚ್ಚಿಸಿಕೊಂಡಿದೆ.

ಆರ್ಥಿಕವಾಗಿ ಕೂಡ ಚೀನಾ ಇರಾನ್‌ಗೆ ಬೆಂಬಲ ನೀಡುತ್ತಿದೆ. ಅಮೆರಿಕದ ನಿರ್ಬಂಧಗಳನ್ನು ಮೀರಿ ಇರಾನ್‌ನ ತೈಲವನ್ನು ಖರೀದಿಸುವ ಮೂಲಕ, ಇರಾನ್‌ ದೇಶದ ಆರ್ಥಿಕ ಸ್ಥಿತಿಯನ್ನು ಸ್ಥಿರವಾಗಿಡಲು ಸಹಕಾರ ನೀಡುತ್ತಿದೆ. ಇದರಿಂದ ಯುದ್ಧದ ಖರ್ಚುಗಳನ್ನು ನಿರ್ವಹಿಸಲು ಇರಾನ್‌ಗೆ ನೆರವಾಗಿದೆ.

ಈ ಬೆಳವಣಿಗೆಗಳಿಂದಾಗಿ, ಜಾಗತಿಕ ರಾಜಕೀಯದಲ್ಲಿ ಎರಡು ಬಲವಾದ ಶಕ್ತಿಕೇಂದ್ರಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಒಂದು ಕಡೆ ಅಮೆರಿಕ ಮತ್ತು ಅದರ ಮೈತ್ರಿಕೂಟ, ಮತ್ತೊಂದೆಡೆ ರಷ್ಯಾ-ಚೀನಾ-ಇರಾನ್ ಒಕ್ಕೂಟ. ಈ ಹೊಸ ಸಮೀಕರಣವು ಜಾಗತಿಕ ಶಕ್ತಿಯ ಸಮತೋಲನವನ್ನು ಬದಲಾಯಿಸುವ ಸಾಧ್ಯತೆ ಇರಬಹುದೇನೋ?

ಅಮೆರಿಕದ ಯೋಜನೆಗಳು ನಿರೀಕ್ಷಿಸಿದಂತೆ ಫಲ ನೀಡದಿರುವುದು ಟ್ರಂಪ್‌ಗೆ ದೊಡ್ಡ ಸವಾಲಾಗಿದೆ. ಇರಾನ್ ದೇಶವನ್ನು ಅತೀ ಶೀಘ್ರದಲ್ಲಿಯೇ ಮಣಿಸುತ್ತೇನೆ ಎನ್ನುವ ಲೆಕ್ಕಾಚಾರವೇ ವಿಫಲವಾಗಿದೆ. ರಷ್ಯಾ ಮತ್ತು ಚೀನಾ ನೀಡುತ್ತಿರುವ ಬೆಂಬಲದಿಂದ ಇರಾನ್ ಇನ್ನಷ್ಟು ಬಲಿಷ್ಠವಾಗಿ ಎದುರಿಸುತ್ತಿದೆ. ಇನ್ನೊಂದೆಡೆ ಅಮೇರಿಕಾವು ಇಸ್ರೇಲ್‌ ನಂಬಿ ಅಸಹಾಯಕನಾದಂತಿದೆ.

ಒಟ್ಟಿನಲ್ಲಿ, ಈ ಯುದ್ಧ ಕೇವಲ ಪ್ರಾದೇಶಿಕ ಸಂಘರ್ಷವಲ್ಲ; ಇದು ಜಾಗತಿಕ ರಾಜಕೀಯದ ದಿಕ್ಕು ಬದಲಾಯಿಸುವ ಮಹತ್ವದ ಘಟ್ಟವಾಗಿದೆ. ಅಮೆರಿಕದ ಮುಂದಿನ ನಡೆ ಏನು ಎಂಬುದು ಈಗ ಇಡೀ ಜಗತ್ತಿನ ಕುತೂಹಲದ ಕೇಂದ್ರವಾಗಿದೆ.

Leave a Comment