ಬೈ ಎಲೆಕ್ಷನ್ ದಿನಾಂಕ ನಿಗದಿಯಾದ ತಕ್ಷಣವೇ ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪ್ರಮುಖ ಪಕ್ಷಗಳು ಅಭ್ಯರ್ಥಿ ಆಯ್ಕೆ, ಕಾರ್ಯಕರ್ತರ ಸಂಘಟನೆ ಹಾಗೂ ಪ್ರಚಾರ ತಂತ್ರಗಳ ರೂಪುರೇಷೆಗಳಲ್ಲಿ ತೊಡಗಿಕೊಂಡಿದ್ದು, ಕ್ಷೇತ್ರಗಳಲ್ಲಿ ಚುನಾವಣೆಯ ಸದ್ದು ಜೋರಾಗಿದೆ.
ಟಿಕೆಟ್ ಹಂಚಿಕೆ ಕುರಿತಾಗಿ ಪಕ್ಷಗಳ ಒಳಗೆ ಚರ್ಚೆಗಳು ತೀವ್ರಗೊಂಡಿದ್ದು, ಹಲವು ಅಕಾಂಕ್ಷಿಗಳು ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವಿಶೇಷವಾಗಿ ದಾವಣಗೆರೆ ಕ್ಷೇತ್ರದಲ್ಲಿ ಸಮುದಾಯ ಆಧಾರಿತ ರಾಜಕೀಯವೂ ಚರ್ಚೆಗೆ ಗ್ರಾಸವಾಗಿದ್ದು, ನಾಯಕರ ನಡುವೆ ಒತ್ತಡ–ಪೈಪೋಟಿ ಹೆಚ್ಚಾಗಿದೆ.
ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ್
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ಪ್ರಶ್ನೆ ಗಂಭೀರ ಕಗ್ಗಂಟಾಗಿ ಪರಿಣಮಿಸಿದೆ. ಪಕ್ಷದ ಒಳರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಅಧಿಕೃತ ಘೋಷಣೆಗೆ ಮುನ್ನವೇ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.
ಇನ್ನೊಂದೆಡೆ, ಬಾಗಲಕೋಟೆ ಕ್ಷೇತ್ರದಲ್ಲಿ ಎಚ್.ವೈ. ಮೇಟಿ ಅವರ ಪುತ್ರ ವಕೀಲ ಉಮೇಶ್ ಅವರನ್ನು ಅಭ್ಯರ್ಥಿಯಾಗಿ ಅಂತಿಮಗೊಳಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ಅವರ ನಿಧನದ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.
ದಾವಣಗೆರೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುಸ್ಲಿಂ ಸಮುದಾಯದ ನಾಯಕರು ಗಟ್ಟಿಧ್ವನಿ ಎತ್ತಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಹೆಚ್ಚಿರುವುದರಿಂದ, ತಮ್ಮ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ. ಈ ಬೇಡಿಕೆ ಈಡೇರದಿದ್ದರೆ ಬಂಡಾಯ ಮಾಡುವ ಎಚ್ಚರಿಕೆಯೂ ವ್ಯಕ್ತವಾಗಿದೆ, ಇದರಿಂದ ಕಾಂಗ್ರೆಸ್ ನಾಯಕತ್ವದ ಮೇಲೆ ಒತ್ತಡ ಹೆಚ್ಚಾಗಿದೆ.
ಕಾಂಗ್ರೆಸ್ ಯಾವುದೇ ಒಂದು ಸಮುದಾಯದ ಪಕ್ಷವಲ್ಲ ಎಂದ ಸುರ್ಜೇವಾಲಾ
ಈ ನಡುವೆ, ರಣದೀಪ್ ಸಿಂಗ್ ಸುರ್ಜೇವಾಲಾ ಕಾಂಗ್ರೆಸ್ ಯಾವುದೇ ಒಂದು ಸಮುದಾಯದ ಪಕ್ಷವಲ್ಲ ಎಂದು ಸ್ಪಷ್ಟಪಡಿಸಿ, ಅರ್ಹತೆಯ ಆಧಾರದಲ್ಲೇ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ, ದಾವಣಗೆರೆ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆ ಬೆಂಗಳೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಈಶ್ವರ್ ಖಂಡ್ರೆ ಸಹ ಭಾಗವಹಿಸಿದ್ದು, ಸಮರ್ಥ್ ಸ್ಪರ್ಧೆಗೆ ಖಂಡ್ರೆ ಬೆಂಬಲ ಸೂಚಿಸಿರುವುದು ಗಮನಸೆಳೆದಿದೆ.
ಇನ್ನೊಂದೆಡೆ, ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಮುಸ್ಲಿಂ ನಾಯಕರು ತಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ. ಸಲೀಮ್ ಅಹ್ಮದ್, ರಹೀಮ್ ಖಾನ್, ನಾಸಿರ್ ಹುಸೇನ್ ಸೇರಿದಂತೆ ಹಲವು ನಾಯಕರು ಈ ಬೇಡಿಕೆಯನ್ನು ಬಲವಾಗಿ ಮುಂದಿಟ್ಟಿದ್ದಾರೆ. ಟಿಕೆಟ್ ಸಿಗದಿದ್ದರೆ ರಾಜೀನಾಮೆ ನೀಡುವ ಎಚ್ಚರಿಕೆಯೂ ಕೇಳಿಬಂದಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಂ ನಾಯಕರನ್ನು ತಮ್ಮ ನಿವಾಸ ‘ಕಾವೇರಿ’ಗೆ ಆಹ್ವಾನಿಸಿ ಸಮಾಲೋಚನೆ ನಡೆಸಿದ್ದಾರೆ. ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ, ರಣದೀಪ್ ಸಿಂಗ್ ಸುರ್ಜೇವಾಲಾ ಕಾಂಗ್ರೆಸ್ ಯಾವುದೇ ಒಂದು ಸಮುದಾಯದ ಪಕ್ಷವಲ್ಲ ಎಂದು ಸ್ಪಷ್ಟಪಡಿಸಿ, ಅರ್ಹತೆಯ ಆಧಾರದಲ್ಲೇ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ, ದಾವಣಗೆರೆ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಸಮರ್ಥ್ ಅವರು ಪಕ್ಷದ ಅಧಿಕೃತ ನಿರ್ಧಾರಕ್ಕಿಂತ ಮುನ್ನವೇ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡೆ ಪಕ್ಷದ ಶಿಸ್ತು ಮತ್ತು ಸಂಘಟನಾ ಕ್ರಮಕ್ಕೆ ವಿರುದ್ಧವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಲವರು ಇದನ್ನು “ಒತ್ತಡ ತಂತ್ರ” ಎಂದು ನೋಡುತ್ತಿದ್ದು, ಹೈಕಮಾಂಡ್ ಮೇಲೆ ಟಿಕೆಟ್ ಪಡೆಯಲು ಪ್ರಭಾವ ಬೀರುವ ಪ್ರಯತ್ನವೆಂದು ವ್ಯಾಖ್ಯಾನಿಸುತ್ತಿದ್ದಾರೆ.
ಇದೇ ವೇಳೆ, ಸಮರ್ಥ್ ಅವರ ಈ ನಿರ್ಧಾರವು ಟಿಕೆಟ್ ಹಂಚಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದು, ಪಕ್ಷದೊಳಗಿನ ಗುಂಪುಗಳ ನಡುವಿನ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿದೆ. ವಿಶೇಷವಾಗಿ ಮುಸ್ಲಿಂ ಸಮುದಾಯದ ನಾಯಕರಲ್ಲಿ ಈ ನಡೆ ಅಸಮಾಧಾನವನ್ನು ಹೆಚ್ಚಿಸಿದ್ದು, “ಪಕ್ಷದ ಅಧಿಕೃತ ಅಭ್ಯರ್ಥಿಗೆ ಮುಂಚಿತವಾಗಿ ಸ್ಪರ್ಧೆಗೆ ಇಳಿಯುವುದು ಸರಿಯಲ್ಲ” ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಒಗ್ಗಟ್ಟಿನಿಂದ ಕೆಲಸ ಮಾಡುವ ಭರವಸೆ : ಡಿಸಿಎಂ ಡಿಕೆ ಶಿವಕುಮಾರ್
ಉಪಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷದ ಮುಖಂಡರ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆ ಅಭಿಪ್ರಾಯಗಳ ಆಧಾರದ ಮೇಲೆ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗುತ್ತದೆ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಕೂಡ ಮಾತುಕತೆ ನಡೆಸಲಾಗಿದೆ. ಶುಭ ದಿನವೆಂದು ಅವರ ಪುತ್ರ ಸಮರ್ಥ್ ನಾಮಪತ್ರ ಸಲ್ಲಿಸಿದ್ದು, ಅಗತ್ಯವಿದ್ದರೆ ಅದನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ನಾಯಕರು ಕೂಡ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.
ಶಾಮನೂರು ಕುಟುಂಬದ ವಿರುದ್ಧ ಜೆಡಿಎಸ್ ಮಾಜಿ ಶಾಸಕ ಟೀಕೆ
ಈ ನಡುವೆ, ದಾವಣಗೆರೆ ರಾಜಕೀಯದಲ್ಲಿ ಶಾಮನೂರು ಕುಟುಂಬದ ಪ್ರಭಾವದ ಕುರಿತು ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ತೀವ್ರ ವ್ಯಂಗ್ಯವಾಡಿದ್ದಾರೆ. “ಒಂದು ಕಾಲದಲ್ಲಿ ಬಿ-ಫಾರಂ ನಮ್ಮ ಮನೆಗೇ ಬರುತ್ತಿತ್ತು ಎಂದು ಹೇಳುತ್ತಿದ್ದರು. ಆದರೆ ಈಗ ಅದೇ ಟಿಕೆಟ್‌ಗಾಗಿ ಅಲೆದಾಡುವ ಪರಿಸ್ಥಿತಿ ಬಂದಿದೆ,” ಎಂದು ಕಿಡಿಕಾರಿದ್ದಾರೆ.
ದಾವಣಗೆರೆ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಶಾಮನೂರು ಕುಟುಂಬ ಮತ್ತು ಮುಸ್ಲಿಂ ಸಮುದಾಯದ ನಾಯಕರ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್ ಇನ್ನೂ ಅಂತಿಮವಾಗದ ಹಿನ್ನೆಲೆ ಗೊಂದಲ ಮುಂದುವರಿದಿದೆ.
ರಾಜಕೀಯದಲ್ಲಿ ಅಧಿಕಾರ ಶಾಶ್ವತವಲ್ಲ ಎಂಬ ಸಂದೇಶ ನೀಡಿದ ಶಿವಶಂಕರ್, “ಸೂರ್ಯ ಏರಿದಂತೆ ಇಳಿಯಲೇಬೇಕು. ಇತಿಹಾಸದಲ್ಲಿ ಕೋಟೆ ಕಟ್ಟಿದವರು ಕೂಡ ಮಣ್ಣಾಗಿದ್ದಾರೆ. ರಾಜಕೀಯ ಸ್ಥಾನಮಾನಗಳು ಎಂದಿಗೂ ಸ್ಥಿರವಲ್ಲ; ಕಾಲ ಬದಲಾದಂತೆ ಪರಿಸ್ಥಿತಿಗಳೂ ಬದಲಾಗುತ್ತವೆ,” ಎಂದು ಪರೋಕ್ಷವಾಗಿ ಶಾಮನೂರು ಕುಟುಂಬದ ಪ್ರಾಬಲ್ಯ ಕುಗ್ಗುತ್ತಿರುವುದನ್ನು ಸೂಚಿಸಿದ್ದಾರೆ.
ಇನ್ನೊಂದೆಡೆ, ಉಪಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಜೆಡಿಎಸ್ ಸಂಪೂರ್ಣ ಬೆಂಬಲ ಘೋಷಿಸಿದೆ. “ನಮ್ಮ ಬೆಂಬಲ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಇದೆ. ಅವರ ಪರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕೆ ಬರಲಿದ್ದಾರೆ,” ಎಂದು ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಸಾಮಾನ್ಯ ಚುನಾವಣೆ ಅಲ್ಲ ಎಂದು ಹೇಳಿದ ಅವರು, “ಇದು ‘ಸಾಮಾನ್ಯ ಜನ Vs ಶ್ರೀಮಂತಿಕೆ’ ನಡುವಿನ ಹೋರಾಟ. ಹಣಬಲದಿಂದ ಗೆಲುವು ಸಾಧ್ಯವಿಲ್ಲ; ಜನಬಲವೇ ಅಂತಿಮ,” ಎಂದು ಹೇಳಿದರು.
ಇದೇ ವೇಳೆ, ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಶಾಮನೂರು ಕುಟುಂಬಕ್ಕೆ ಮುಸ್ಲಿಂ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಬಾರಿ ಮುಸ್ಲಿಂ ಅಭ್ಯರ್ಥಿಗೇ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಸ್ಥಳೀಯ ಮಟ್ಟದಲ್ಲಿ ಜೋರಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಶಂಕರ್, “ದಿವಂಗತ ಶಾಮನೂರು ಶಿವಶಂಕರಪ್ಪ ಇಲ್ಲದ ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಪೈಪೋಟಿ ಇನ್ನಷ್ಟು ಕಠಿಣವಾಗಲಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.