ಹಿಂದೂ ಆಚರಣೆಗಳು ಕೇವಲ ನಂಬಿಕೆ, ಆಚರಣೆಗಳಲ್ಲ; ಅವು ಬದುಕಿಗೆ ಆತ್ಮಶಾಂತಿ, ಭಕ್ತಿ, ಸಹನೆಯೊಂದಿಗೆ, ಪ್ರಕೃತಿಯೊಡನೆ ಒಂದಾಗುವ ಅನುಭವವನ್ನು ನೀಡುವ ಆಧ್ಯಾತ್ಮಿಕ ಪ್ರಯಾಣಗಳಾಗಿವೆ. ಊರಹಬ್ಬ, ನಾಡಹಬ್ಬ, ಜಾತ್ರೆ, ಪುಣ್ಯಕ್ಷೇತ್ರಗಳ ದರ್ಶನ, ತೀರ್ಥಯಾತ್ರೆ, ಇತ್ಯಾದಿಗಳು ನಿರಂತರವಾಗಿ ನಮ್ಮ ನಂಬಿಕೆಯನ್ನು ಇಮ್ಮಡಿಗೊಳಿಸಿ, ಬದುಕನ್ನ ಸುಂದರಗೊಳಿಸಿವೆ. ದೈವ ಸನ್ನಿಧಿಯನ್ನು ಅನುಭವಿಸಿ, ಆರಾಧಿಸಲು ಕಾರಣವಾದ ಹಲವು ಯಾತ್ರೆಗಳಲ್ಲಿ ಕಾಶಿ-ರಾಮೇಶ್ವರ ಯಾತ್ರೆ, ಕೈಲಾಸ ಯಾತ್ರೆ, ಚಾರ್‌ಧಾಮ್ ಯಾತ್ರೆ, ವೈಷ್ಣೋದೇವಿ ಯಾತ್ರೆ, ಇತ್ಯಾದಿಗಳು ಹಿಂದೂಗಳ ಪ್ರಮುಖವಾದ ಯಾತ್ರೆಗಳಾಗಿವೆ.
ಚಾರ್‌ಧಾಮ್ ಯಾತ್ರೆಯ ಬಗ್ಗೆ ಹೆಚ್ಚಿನ ಮಾಹಿತಿ
ಚಾರ್‌ಧಾಮ್ ಯಾತ್ರೆಯನ್ನು ಬೇಸಿಗೆಯ ಸಮಯದ ಮಾರ್ಚ್-ಏಪ್ರಿಲ್ ತಿಂಗಳಿನ ಆಸುಪಾಸಿನಲ್ಲಿ ಆರು ತಿಂಗಳಿನವರೆಗೆ ನೆರವೇರಿಸಲಾಗುತ್ತದೆ. ದೇಶಾದ್ಯಂತ ನೆಲೆಸಿರುವ ಲಕ್ಷಾಂತರ ಯಾತ್ರಿಗಳು; ಚಾರ್‌ಧಾಮ್‌ಗೆ ಈ ಸಮಯದಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಚಳಿಗಾಲದ ನಂತರ ಆರಂಭವಾಗುವ ತೀವ್ರ ಹಿಮಪಾತದ ಕಾರಣ; ವರ್ಷದ ಅಕ್ಟೋಬರ್-ನವಂಬರ್ ತಿಂಗಳಿನಲ್ಲಿ ನಂತರದ ಆರು ತಿಂಗಳವರೆಗೆ ಸ್ತಗಿತಗೊಳಿಸಲಾಗುತ್ತದೆ. ಪ್ರತೀವರ್ಷವೂ ಈ ಆಚರಣೆಯನ್ನು ಹೀಗೆಯೇ ಪಾಲಿಸಲಾಗುತ್ತದೆ.
ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಸ್ತಾನವು ಪ್ರಸ್ತುತ ವರ್ಷ 2026ರ ಏಪ್ರಿಲ್ 19-22ರ ಸುಮಾರಿಗೆ ಪ್ರಾರಂಭವಾಗುವ ನೀರಿಕ್ಷೆಯಿದೆ. ಚಾರ್‌ಧಾಮ್ ಯಾತ್ರೆಯು ಕೇದಾರನಾಥ, ಬದರಿನಾಥ, ಗಂಗೋತ್ರಿ, ಮತ್ತು ಯಮುನೋತ್ರಿ ಎಂಬ ನಾಲ್ಕು ಪ್ರಮುಖ ಪುಣ್ಯ ಕ್ಷೇತ್ರಗಳನ್ನು ಒಳಗೊಂಡಿದೆ. ಈ ನಾಲ್ಕು ಪ್ರಮುಖ ದೇವಸ್ತಾನಗಳು ಉತ್ತರಾಖಂಡ್ ರಾಜ್ಯದಲ್ಲಿ ನೆಲೆಸಿವೆ. ಹಿಮಾಲಯದ ತಪ್ಪಲಿನಲ್ಲಿ ನೆಲೆಸಿರುವ ದೈವವನ್ನು, ನಾವೆಲ್ಲರೂ ಬದುಕಿನಲ್ಲಿ ಒಮ್ಮೆಯಾದರೂ ನೋಡಿ ಕಣ್ತುಂಬಿಕೊಳ್ಳೊಣ.
ಶ್ರೀಯುತ, ಟಿ. ಗಂಗಾಧರಲಿಂಗ ಅವರನ್ನು ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕರನ್ನಾಗಿ ನೇಮಿಸಲಾಗಿದ್ದು, ದೇವಾಲಯಕ್ಕೆ ಸಂಭಂಧಿಸಿದ ಎಲ್ಲಾ ಪೂಜಾ ಆಚರಣೆಗಳು ಹಾಗೂ ಸಮಾರಂಭಗಳನ್ನು ನೋಡಿಕೊಳ್ಳುವ ಮಹತ್ತರ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
2026ರ ಚಾರ್‌ಧಾಮ್ ಯಾತ್ರೆ – ಆರಂಭ ದಿನಾಂಕಗಳು
ಕೇದಾರನಾಥ – ಏಪ್ರಿಲ್ 22, 2026
ಬದರಿನಾಥ – ಏಪ್ರಿಲ್ 24, 2026
ಗಂಗೋತ್ರಿ – ಏಪ್ರಿಲ್ 19, 2026
ಯಮುನೋತ್ರಿ – ಏಪ್ರಿಲ್ 19, 2026
ಯಾತ್ರೆಯ ಅವಧಿ ಮತ್ತು ಪ್ಯಾಕೇಜ್ ವ್ಯವಸ್ಥೆ
ಹಿಮಾಲಯದ ಮಡಿಲಿನಲಿ ಒಂದಾಗಿರುವ ಚಾರ್‌ಧಾಮ್ ಯಾತ್ರೆಯು ವಿಭಿನ್ನವಾಗಿದ್ದು, ಇತರೆಲ್ಲಾ ಯಾತ್ರೆಗಳಿಗಿಂತ ಕಠಿಣವಾಗಿದೆ. ಈ ಕಾರಣ ಮುಕ್ಕಾಲುಪಾಲು ಯಾತ್ರಿಗಳು ಚಾರ್‌ಧಾಮ್ ಯಾತ್ರೆಯನ್ನು ಪ್ರವಾಸಿ ಕೇಂದ್ರಗಳ ಮೂಲಕವೇ ನೋಡಲು ಹೋಗುತ್ತಾರೆ. ಎಂದಿನಂತೆ ನವೆಂಬರ್ ತಿಂಗಳ ಅಂತ್ಯದೊಳಗೆ ವರ್ಷ 2026ರ ಚಾರ್‌ಧಾಮ್ ಯಾತ್ರೆಯು ಮುಕ್ತಾಯಗೊಂಡು ದೇವಸ್ತಾನವನ್ನು ದೀಪಾವಳಿಯನಂತರ ಮುಂದಿನ ಆರು ತಿಂಗಳು ಮುಚ್ಚಲಾಗುತ್ತದೆ.
ಪ್ರಕೃತಿಯ ಹವಾಮಾನದ ಪರಿಸ್ತಿತಿಗಳಿಗೆ ತಕ್ಕಂತೆ ಬದಲಾಗುವ ಈ ಯಾತ್ರೆಯನ್ನು ಸೂಕ್ತ ಮಾರ್ಗದರ್ಶನವುಳ್ಳ ಕೇಂದ್ರ / ವ್ಯಕ್ತಿಗಳೊಡನೆ ಭೇಟಿ ನೀಡುವುದು ಅತ್ಯವಶ್ಯಕವಾಗಿದೆ. ಸಂಪೂರ್ಣ ಪ್ಯಾಕೇಜ್ ಒಳಗೊಂಡಿರುವ ಈ ಪ್ರವಾಸವನ್ನು ಕೆಲವು ಖಾಸಗಿ ಪ್ರವಾಸಿ ಕೇಂದ್ರಗಳು ನಡೆಸಿಕೊಡುತ್ತವೆ. ಈ ಪ್ಯಾಕೇಜು ಸಂಪೂರ್ಣ ಪ್ರವಾಸದ ಸಮಯದ ಊಟ, ವಸತಿ, ಇತ್ಯಾದಿ ಖರ್ಚುಗಳನ್ನ ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಈ ಯಾತ್ರೆಯನ್ನು 12 ರಿಂದ 15 ದಿನಗಳ ಅವಧಿಯಲ್ಲಿ ಮುಕ್ತಾಯಗೊಳಿಸಬಹುದು.
ನೋಂದಣಿ ಕಡ್ಡಾಯ
ಪ್ರಕೃತಿ ಪ್ರಿಯರಿಗೆ ಚಾರ್‌ಧಾಮ್ ಯಾತ್ರೆಯು ವಿಶೇಷ ಅತ್ಮತೃಪ್ತಿಯನ್ನ ನೀಡುತ್ತದೆ. ಕಳೆದ ಕೆಲವು ವರ್ಷಗಳಿಂದೀಚಿಗೆ ಚಾರ್‌ಧಾಮ್ ಯಾತ್ರೆಯನ್ನು ಹಿಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿ ಮಾಡುವಂತಹ ವ್ಯವಸ್ತೆಯನ್ನು ಕಲ್ಪಿಸಲಾಗಿದೆ.
ಮೊದಲ ಬಾರಿಗೆ ಚಾರ್‌ಧಾಮ್‌ಗೆ ಹೊರಟಿರುವ ಯಾತ್ರಿಗಳಿಗೆ
ಕೆಲವು ಉಪಯುಕ್ತ ಸಲಹೆಗಳು.
- ಯಾತ್ರೆಗೆ ಹೋಗುವ ಮುನ್ನ, ದಿನವೂ ವಾಕ್ ಮಾಡುವ ಅಭ್ಯಾಸ ಮಾಡಿ, ನಿಮ್ಮ ದೇಹವನ್ನು ಬಲಪಡಿಸಿಕೊಳ್ಳಿ
- ಈ ಯಾತ್ರೆಗೆ ನೋಂದಣಿ ಕಡ್ಡಾಯವಾಗಿದ್ದು, ಉಚಿತವಾಗಿ ಮಾಡಬಹುದಾಗಿದೆ
- ಸಾರಿಗೆ ವ್ಯವಸ್ತೆ, ವಸತಿ ವ್ಯವಸ್ತೆಯನ್ನ ಮುಂಚಿತವಾಗಿ ಕಾಯ್ದಿರಿಸಿಕೊಳ್ಳಿ
- ನೋಂದಣಿಗೆ ಸಂಭಂಧಿಸಿದ ದಾಖಲೆಗಳನ್ನ ಮರೆಯದಿರಿ
- ದಿನನಿತ್ಯವೂ ಸೇವಿಸುವ ಮಾತ್ರೆಗಳನ್ನು ಮರೆಯದಿರಿ
- ಕಡಿಮೆ ಲಗೇಜು ಇದ್ದಷ್ಟೂ, ನಿಮ್ಮ ಪ್ರಯಾಣ ಹೆಚ್ಚು ಸಾರ್ಥಕ
- ಬೇಸಿಗೆಯ ಸಮಯದಲ್ಲೂ ಈ ಕ್ಷೇತ್ರವು ಹಿಮದಿಂದ ಕೂಡಿದ್ದು, ಬೆಚ್ಚಗಿನ ಉಣ್ಣೆಯ ಕೋಟುಗಳನ್ನ ಮರೆಯದಿರಿ
ಜನದಟ್ಟಣೆಯನ್ನು ನಿವಾರಿಸಲು ಹಾಗೂ ಹೆಚ್ಚಿನ ಜನರಿಗೆ ಸೂಕ್ತ ವ್ಯವಸ್ತೆ ಕಲ್ಪಿಸಲು, ಚಾರ್‌ಧಾಮ್‌ಗೆ ಭೇಟಿ ನೀಡುವ ಎಲ್ಲಾ ಭಕ್ತರಿಗೂ ನೋಂದಣಿಯನ್ನು ಉತ್ತರಾಖಂಡ್ ರಾಜ್ಯ ಸರ್ಕಾರವು ಕಡ್ಡಾಯಗೊಳಿಸಿದೆ. ಈ ನೋಂದಣಿಯನ್ನು ಉತ್ತರಾಖಂಡ್ ರಾಜ್ಯದ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅಥವಾ ಅಧೀಕೃತ ಕೌಂಟರ್‌ಗಳಲ್ಲಿ ಸುಲಭವಾಗಿ, ಉಚಿತವಾಗಿ ಮಾಡಬಹುದಾಗಿದೆ. ಏಪ್ರಿಲ್‌ನಿಂದ ಆರಂಭವಾಗುವ ಈ ಯಾತ್ರೆಯನ್ನು ಆಯಾ ರಾಜ್ಯದ ಕೆಲವು ಖಾಸಗಿ ಟೂರ್ ಪ್ಯಾಕೆಜ್ ಕೇಂದ್ರಗಳು, ನೋಂದಣಿಯೊಂದಿಗೆ ಸಂಪೂರ್ಣ ಪ್ರವಾಸದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ. ಚಾರ್‌ಧಾಮ್ ಭೇಟಿಗೆ ಹೋಗುವ ಎಲ್ಲಾ ಭಕ್ತರೂ ಉಚಿತವಾಗಿ ನೋಂದಣಿಯನ್ನ ಮಾಡಬಹುದಾಗಿದೆ.
ನೋಂದಣಿಗೆ ಸಂಭಂಧಿಸಿದ ಕೆಲವು ಉಪಯುಕ್ತ ಮಾಹಿತಿಗಳು
- ಬೇಕಾದ ದಾಖಲಾತಿಗಳು : ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ,
ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ - ನೋಂದಣಿಯ ವಿವರಗಳ ವೆಬ್‌ಸೈಟ್ : registrationandtouristcare.uk.gov.in. ನಲ್ಲಿ ಲಭ್ಯವಿದೆ
- ಉಚಿತ ಮೊಬೈಲ್ ಆಪ್ : “Tourist Care Uttarakhand” (Android/iOS).
- +91 8394833833 ಮೊಬೈಲ್ ಸಂಖ್ಯೆಗೆ “Yatra” ಎಂದು ಕಳಿಸುವ ಮೂಲಕವೂ ನೋಂದಾಯಿಸಬಹುದಾಗಿದೆ
- ಹೆಚ್ಚಿನ ಮಾಹಿತಿಗೆ ಉಚಿತ ಸಹಾಯವಾಣಿ 0135-1364
- ವೈಯಕ್ತಿಕ ನೋಂದಣಿ : ಋಷಿಕೇಶ್ ಮತ್ತು ಹರಿದ್ವಾರ ಬಸ್ ನಿಲ್ದಾಣ ಹಾಗೂ
ಸೋನ್ ಪ್ರಯಾಗ್ ಮತ್ತು ಗೌರಿಕುಂಡ ಸ್ಥಳದಲ್ಲಿಯೂ ಮಾಡಬಹುದಾಗಿದೆ.