Telegram Join My Telegram WhatsApp Join My WhatsApp

ಕೃಷಿ ವಿಜ್ಞಾನ + ಡಿಜಿಟಲ್ ಜ್ಞಾನ = ಭಾರತ್ ವಿಸ್ತಾರ್ – ರೈತನ ಕೈಯಲ್ಲಿ ತಂತ್ರಜ್ಞಾನ, ಹೊಲದಲ್ಲಿ ನಂಬಿಕೆಯ ಭವಿಷ್ಯ

ಭಾರತ್‌ ವಿಸ್ತಾರ್‌ : ಕೃಷಿಗೆ ಸಂಭಂಧಿಸಿದ ಎಲ್ಲಾ ವಿಷಯಗಳನ್ನು ಏಕಕಾಲಕ್ಕೆ ಒಂದೇ ಸೂರಿನಡಿಯಲ್ಲಿ ತಂದುಕೊಡುವ
ಎಐ ಆಧಾರಿತ ಮಾಯಾಜಾಲ.

ಭಾರತ ಕೃಷಿ ಪ್ರಧಾನ ದೇಶವಾದರೂ, ಕಳೆದ ಹಲವು ದಶಕಗಳಿಂದ ರೈತರು ಸೂಕ್ತ ಸಮಯಕ್ಕೆ ಕೃಷಿಗೆ ಸಂಭಂಧಿಸಿದ ಮಾಹಿತಿಯ ಕೊರತೆಯಿಂದ ನಿರಂತರವಾಗಿ ಸಂಕಷ್ಟವನ್ನು ಅನುಭವಿಸುತ್ತಲೇ ಇದ್ದಾರೆ. ಮಳೆಯ ಮುನ್ಸೂಚನೆ ತಡವಾಗಿ ಸಿಗುವುದು, ಮಾರುಕಟ್ಟೆ ದರದ ಸ್ಪಷ್ಟ ಮಾಹಿತಿ ಇಲ್ಲದಿರುವುದು, ಕೀಟ ರೋಗಗಳ ಪರಿಹಾರಕ್ಕಾಗಿ ಸರ್ಕಾರಿ ಅಧಿಕಾರಿಗಳನ್ನೇ ಅವಲಂಭಿಸುವ ಪರಿಸ್ಥಿತಿ. ಇವೆಲ್ಲವು ವ್ಯವಸಾಯವನ್ನೇ ಉಸಿರಾಗಿಸಿಕೊಂಡಿದ್ದ ರೈತನ ಶ್ರಮಕ್ಕೆ ದೊಡ್ಡ ಸವಾಲಾಗಿದ್ದವು. ಇದು ರೈತರ ಬದುಕು ದುಸ್ತರವಾಗಿಸಿತ್ತು. ಇತ್ತೀಚಿನ ದಿನಗಳಲ್ಲಿ ರೈತರ ಶ್ರಮಕ್ಕೆ, ಬೆಳೆಗೆ, ಬದುಕಿಗೆ, ಬೆಲೆಯಿಲ್ಲ ಎನ್ನುವಂತಾಗಿತ್ತು.

ಸರಿಯಾದ ಸಮಯದಲ್ಲಿ ಸೂಕ್ತ ಮಾಹಿತಿ ಸಿಗದಿದ್ದರೆ ಕೃಷಿಯಲ್ಲಿ ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರವು, ಸಂಪೂರ್ಣ ಇಳುವರಿಯನ್ನು ಹಾಳು ಮಾಡಬಹುದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿರುವ ಭಾರತ್ ವಿಸ್ತಾರ್” ಯೋಜನೆಯು, ರೈತರಿಗೆ ವ್ಯವಸಾಯಕ್ಕೆ ಸಂಭಂಧಿಸಿದ ಸಂಪೂರ್ಣ ಡಿಜಿಟಲ್ ಮಾಹಿತಿಯನ್ನ, ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಭಾರತ್ ವಿಸ್ತಾರ್ ಎನ್ನುವ ಡಿಜಿಟಲ್‌ ಮಾಹಿತಿ ಕೇಂದ್ರ –
ಒಂದೇ ವೇದಿಕೆಯಲ್ಲಿ ಸಂಪೂರ್ಣ ಕೃಷಿ ಮಾಹಿತಿ

ಭಾರತ್ ವಿಸ್ತಾರ್ ಯೋಜನೆಯ ಪ್ರಮುಖ ಉದ್ದೇಶವೇ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವುದು.

ದೇಶದ ಹೆಮ್ಮೆಯ ರೈತರು ಇನ್ನು ಮುಂದೆ ಕೃಷಿಗೆ ಸಂಭಂಧಿಸಿದ ವಿವರಗಳಿಗಾಗಿ, ಹಲವಾರು ಕಛೇರಿಗಳಿಗೆ ಹೋಗುವ ಅಗತ್ಯವಿಲ್ಲ. ಭಾರತ್ ವಿಸ್ತಾರ್ ಎನ್ನುವ ಡಿಜಿಟಲ್‌ ವೇದಿಕೆಯಲ್ಲಿ:

  • ಸ್ಥಳೀಯ ಹವಾಮಾನ ಮುನ್ಸೂಚನೆ
  • ಮಾರುಕಟ್ಟೆಯ ದರ ವಿವರಗಳು
  • ಮಣ್ಣಿನ ಆರೋಗ್ಯ ವಿಶ್ಲೇಷಣೆ
  • ಕಾಲಕ್ಕೆ ತಕ್ಕಂತೆ, ಸೂಕ್ತ ಬೆಳೆಯ ಆಯ್ಕೆ ಹಾಗೂ ಸಲಹೆಗಳು
  • ಬೆಳೆಗೆ ಸಂಭಂಧಿಸಿದಂತೆ ಗೊಬ್ಬರ ಹಾಗೂ ನೀರಿನ ಪ್ರಮಾಣದ ಮಾಹಿತಿ
  • ಕೀಟ ಹಾಗೂ ಬೆಳೆಗಳಿಗೆ ಸಂಭಂಧಿಸಿದ ರೋಗ ನಿರ್ವಹಣಾ ವಿಧಾನಗಳು
  • ಪಶುಸಂಗೋಪನೆ ಕುರಿತ ಸಲಹೆಗಳು

ಇವೆಲ್ಲವೂ ಒಂದೇ ವ್ಯವಸ್ಥೆಯಲ್ಲಿ , ಏಕಕಾಲದಲ್ಲಿ ಲಭ್ಯವಿದೆ

155261 – ನಂಬರಿಗೆ ಒಂದು ಫೋನ್‌ಕಾಲ್ ಸಾಕು

ಈ ಯೋಜನೆಯ ಅತ್ಯಂತ ವಿಶೇಷ ಅಂಶವೆಂದರೆ, ಇದನ್ನು ಬಳಸಲು ಸ್ಮಾರ್ಟ್‌ಫೋನ್ ಅಥವಾ ಇಂಟರ್ನೆಟ್ ಅವಶ್ಯಕವಿಲ್ಲ. ಕೃಷಿಗೆ ಸಂಭಂಧಿಸಿದ ಸಂಪೂರ್ಣ ಮಾಹಿತಿ ತಿಳಿಯಲು ಸಾಮಾನ್ಯ ಮೊಬೈಲ್ ಇದ್ದರೆ ಸಾಕು. ʼ155261ʼ ನಂಬರಿಗೆ ಕೇವಲ ಒಂದು ಫೋನ್‌ಕಾಲ್ ಸಾಕು.

155261 ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿದರೆ, ರೈತರು ತಮ್ಮ ಸಮಸ್ಯೆಗೆ, ತಕ್ಷಣದಲ್ಲಿಯೇ ಸೂಕ್ತ ಸಲಹೆ ಪಡೆಯಬಹುದು.

ಮೊಬೈಲ್‌ ಬಳಸುವ ತಿಳುವಳಿಕೆ ಇಲ್ಲದವರು, ಮೊಬೈಲ್‌ ಅಪ್ಲಿಕೇಶನ್ ಬಗ್ಗೆ ತಿಳಿಯದವರು, ಓದಲು, ಬರೆಯಲು, ಬಾರದವರು, ಅನಾರೋಗ್ಯದಲ್ಲಿರುವ ಸಮಯದಲ್ಲಿಯೂ ಕೂಡ ಭಾರತ್ ವಿಸ್ತಾರ್ ಡಿಜಿಟಲ್‌ ಮಾಹಿತಿ ಕೇಂದ್ರದಿಂದ ಪ್ರಯೋಜನ ಪಡೆಯಬಹುದು. ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ಸರಳಗೊಳಿಸಿ ರೈತರಿಗೆ ತ್ವರಿತವಾಗಿ ತಲುಪಿಸುವ ಪ್ರಯತ್ನವೇ “ಭಾರತ್‌ ವಿಸ್ತಾರ್‌”

ಮೊಬೈಲ್ ಅಪ್ಲಿಕೇಶನ್ ಮತ್ತು ಎಐ ಆಧಾರಿತ ಸೇವೆ

ಡಿಜಿಟಲ್ ಪರಿಣಿತ ರೈತರಿಗೆ ಭಾರತ್‌ ವಿಸ್ತಾರ್‌ (Bharat Vistaar) ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ. ಈ ಅಪ್ಲಿಕೇಶನ್ ಮೂಲಕ ರೈತರು; ಮಾತಿನ ಮೂಲಕ ಅಥವಾ ಸಂದೇಶದ ಮೂಲಕ ಪ್ರಶ್ನೆ ಕೇಳಿ ಸೂಕ್ತ ಉತ್ತರವನ್ನ ಪಡೆಯಬಹುದು.

ಎಐ ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯು, ರೈತರು ಕೇಳುವ ಪ್ರಶ್ನೆಗಳಿಗೆ ತ್ವರಿತ ಮತ್ತು ನಿಖರ ಉತ್ತರವನ್ನ ತಕ್ಷಣದಲ್ಲಿಯೇ ನೀಡುತ್ತದೆ. ಅಲ್ಲದೆ ಈ ಯೋಜನೆಯು ಜನಸಾಮಾನ್ಯರು ಈ ಹಿಂದೆ ಕೇಳಿರುವ ಪ್ರಶ್ನೆಗಳು ಮತ್ತು ಅದಕ್ಕೆ ಸೂಚಿಸಿದ ಸೂಕ್ತ ಪರಿಹಾರದ ವಿವರಗಳನ್ನೂ ಒಳಗೊಂಡಿರುತ್ತದೆ.

ಮೊದಲ ಹಂತದಲ್ಲಿ ಈ ಯೋಜನೆಯು ಹಿಂದಿ ಮತ್ತು ಇಂಗ್ಲೀಷಿನಲ್ಲಿ ಲಭ್ಯವಿದ್ದು, ಮುಂದಿನ ಮೂರು ತಿಂಗಳಿನಲ್ಲಿ, ಕನ್ನಡ, ಗುಜರಾತಿ, ಅಸ್ಸಾಮಿ, ಬೆಂಗಾಲಿ ಸೇರಿದಂತೆ ಹನ್ನೊಂದು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ. ಇದರಿಂದ ಗ್ರಾಮೀಣ ರೈತರಿಗೆ ಭಾಷಾ ಅಡೆತಡೆ ಇಲ್ಲದೆ ಸಂಪೂರ್ಣ ಮಾಹಿತಿಯು ದೊರೆಯಲಿದೆ.

ಭಾರತ್-ವಿಸ್ತಾರ್ ಬಗ್ಗೆ ಹೆಚ್ಚಿನ ಮಾಹಿತಿ

ಭಾರತ್-ವಿಸ್ತಾರ್ ಎಂದರೆ ಕೃಷಿ ಸಂಪನ್ಮೂಲಗಳನ್ನು ಪಡೆಯಲು ವಾಸ್ತವಿಕವಾದ ಮಾಹಿತಿಗಳನ್ನೊಳಗೊಂಡ ಸಮಗ್ರ ವ್ಯವಸ್ಥೆ (Virtually Integrated System to Access Agricultural Resources) ಇದು ಸರ್ಕಾರದ ಕೃಷಿ ದತ್ತಾಂಶಗಳು ಮತ್ತು ಸಂಶೋಧನಾ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ತರುವಂತಹ ಒಂದು ಜಾಣತನದ ಕೃತಕ ಬುದ್ಧಿಮತ್ತೆ ವ್ಯವಸ್ಥೆಯಾಗಿದೆ.

  • ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು
  • ರೈತರಿಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುವುದು
  • ಕಸ್ಟಮೈಸ್ ಮಾಡಿದ ಸಲಹಾ ಬೆಂಬಲದ ಮೂಲಕ ಕೃಷಿಗೆ ಸಂಭಂಧಿಸಿದ ಉಪಯುಕ್ತ ಮಾಹಿತಿಗಳ ಮೂಲಕ ರೈತರ ಆದಾಯವನ್ನ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಭಾರತ್-ವಿಸ್ತಾರ್ ವೈಶಿಷ್ಟ್ಯತೆಗಳು

  • ಸ್ಥಳೀಯ ಭಾಷೆಯಲ್ಲಿ ಮಾಹಿತಿ : ಈ ಎಐ ಸಾಧನವು ಬಹುಭಾಷಾ ಬೆಂಬಲವನ್ನು ಹೊಂದಿದೆ. ಇದರಿಂದ ರೈತರು ತಮ್ಮದೇ ಭಾಷೆಯಲ್ಲಿ (ಕನ್ನಡ ಸೇರಿದಂತೆ) ಪ್ರಶ್ನೆಗಳನ್ನು ಕೇಳಿ, ಕೃಷಿಗೆ ಸಂಭಂಧಿಸಿದ ಸಲಹೆಗಳನ್ನು ಪಡೆಯಬಹುದು.
  • ನಿಖರವಾದ ಸಲಹೆಗಳು : ರೈತರ ಹೊಲಕ್ಕೆ ಸಂಭಂಧಿಸಿದ, ಬೆಳೆಗೆ ಸಂಭಂಧಿಸಿದ ಸಾಮಾನ್ಯ ಮಾಹಿತಿಯ ಜೊತೆಗೆ, ಜಮೀನಿನ ಮಣ್ಣಿನ ಗುಣಮಟ್ಟ, ಹವಾಮಾನ ಮತ್ತು ರೈತರು ಬೆಳೆಯುವ / ಬೆಳೆದಿರುವ ಬೆಳೆಗೆ ತಕ್ಕಂತೆ ವೈಯಕ್ತಿಕ ಸಲಹೆಗಳನ್ನು ಇದು ನೀಡುತ್ತದೆ.
  • ಹವಾಮಾನ ಮತ್ತು ಕೀಟ ಬಾಧೆ ಎಚ್ಚರಿಕೆ : ಮಳೆ, ಬರ ಅಥವಾ ಕೀಟಗಳ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡುವ ಮೂಲಕ ಬೆಳೆ ಹಾನಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.
  • ಬಿತ್ತನೆ ನಿರ್ಧಾರ : ಯಾವ ಸಮಯದಲ್ಲಿ ಬಿತ್ತನೆ ಮಾಡಬೇಕು, ಎಷ್ಟು ಗೊಬ್ಬರ ಹಾಕಬೇಕು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ಕಾಲಕ್ಕೆ ತಕ್ಕಂತೆ ನೀಡುವುದರಿಂದ ರೈತರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

150 ಕೋಟಿ ರೂ. ಮೀಸಲು – ಕೋಟ್ಯಾಂತರ ರೈತರಿಗೆ ಲಾಭ

ಕೇಂದ್ರ ಸರ್ಕಾರವು ಮುಂಬರುವ ಆರ್ಥಿಕ ವರ್ಷದಲ್ಲಿ ಈ ಯೋಜನೆಗಾಗಿ 150 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ. ದೇಶದ ಹದಿನಾಲ್ಕು ಕೋಟಿಗೂ ಅಧಿಕ ರೈತರನ್ನು ಭಾರತ್‌ ವಿಸ್ತಾರ್‌ ಡಿಜಿಟಲ್ ವ್ಯವಸ್ಥೆಯ ವ್ಯಾಪ್ತಿಗೆ ತಂದು, ಕೃಷಿಯನ್ನು ಲಾಭದಾಯಕ ವೃತ್ತಿಯಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ.

ಮಾಹಿತಿಯ ಅಸಮಾನತೆಯನ್ನು ಕಡಿಮೆ ಮಾಡಿ, ರೈತರಿಗೆ ಸಮಾನ ಅವಕಾಶ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಡಿಜಿಟಲ್ ಕೃಷಿಯ ಹೊಸ ಅಧ್ಯಾಯ

ಭಾರತ್-ವಿಸ್ತಾರ್ : ಇದು ಮುಖ್ಯವಾಗಿ ಎರಡು ಪ್ರಮುಖ ವ್ಯವಸ್ಥೆಗಳನ್ನು ಒಳಗೊಂಡಿದೆ.
1. ಅಗ್ರಿ-ಸ್ಟ್ಯಾಕ್: ರೈತರ ಗುರುತಿನ ಚೀಟಿ, ಭೂ ದಾಖಲೆಗಳು ಮತ್ತು ಬೆಳೆಗಳ ಮಾಹಿತಿಯನ್ನು ಹೊಂದಿರುವ ಡಿಜಿಟಲ್ ವೇದಿಕೆಯಾಗಿದೆ.

2. ಐಸಿಎಆರ್‌ ಸಂಶೋಧನಾ ಮಾಹಿತಿ: ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಭಿವೃದ್ಧಿಪಡಿಸಿರುವ ಉತ್ತಮ ಕೃಷಿ ಪದ್ಧತಿಗಳ ಮಾಹಿತಿಯನ್ನು ಒಳಗೊಂಡಿದೆ.

Leave a Comment