Telegram Join My Telegram WhatsApp Join My WhatsApp

ಭಾರತ್ ಟ್ಯಾಕ್ಸಿ : ಸಹಕಾರಿ ತತ್ವದೊಂದಿಗೆ ಟ್ಯಾಕ್ಸಿ ಕ್ಷೇತ್ರದಲ್ಲಿ ಹೊಸ ಅಧ್ಯಾಯ

₹500 ಹೂಡಿಕೆ ಮಾಡಿದರೆ ಚಾಲಕರೇ ಸಂಸ್ಥೆಯ ಪಾಲುದಾರರು!

ಭಾರತದಲ್ಲಿ ಆನ್‌ಲೈನ್ ಟ್ಯಾಕ್ಸಿ ಸೇವೆಗಳ ಕುರಿತು ಮಾತನಾಡಿದಾಗ ಸಾಮಾನ್ಯವಾಗಿ ಉಬರ್‌, ಓಲಾ, ಹಾಗೂ ರಾಪಿಡೊ, ಹೆಸರುಗಳು ಮೊದಲಿಗೆ ನೆನಪಿಗೆ ಬರುತ್ತವೆ. ಗಿಗ್ ಎಕಾನಮಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿಗಳು ಲಕ್ಷಾಂತರ ಚಾಲಕರಿಗೆ ಉದ್ಯೋಗಾವಕಾಶ ಒದಗಿಸಿದ್ದರೂ, ಪ್ರತಿಯೊಂದು ಪ್ರಯಾಣದ (ಟ್ರಿಪ್) ಮೇಲೆ 20 ರಿಂದ 30 ಶೇಕಡಾ ವರೆಗೆ ಕಮಿಷನ್ ವಸೂಲಿ ಮಾಡುವ ಪದ್ಧತಿ ಕುರಿತು ಚಾಲಕರಿಂದ ಅನೇಕ ಬಾರಿ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲೇ ಸಹಕಾರಿ ತತ್ವವನ್ನು ಆಧಾರವಾಗಿಟ್ಟುಕೊಂಡು ಭಾರತ್ ಟ್ಯಾಕ್ಸಿ” ಎಂಬ ಹೊಸ ಪ್ರಯೋಗ ಆರಂಭಗೊಂಡಿದ್ದು, ಇದು ದೇಶದ ಗಮನ ಸೆಳೆಯುತ್ತಿದೆ.

ಸಹಕಾರಿ ಮಾದರಿಯ ಪ್ರೇರಣೆ

ನವದೆಹಲಿ‌ನಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಅವರು ʼಭಾರತ್ ಟ್ಯಾಕ್ಸಿʼ ಸೇವೆಗೆ ಚಾಲನೆ ನೀಡಿದರು. ಹಾಲು ಉತ್ಪಾದಕರನ್ನು ಒಂದೇ ವೇದಿಕೆಗೆ ತರಿಸಿ, ಅವರನ್ನು ಸಂಸ್ಥೆಯ ಮಾಲೀಕರನ್ನಾಗಿಸಿದ Amul ಸಹಕಾರಿ ಮಾದರಿಯೇ ಈ ಯೋಜನೆಗೆ ಪ್ರೇರಣೆ. ಅಮೂಲ್‌ನಲ್ಲಿ ಹಾಲು ಉತ್ಪಾದಕರೇ ಕಂಪನಿಯ ಮಾಲೀಕರಾಗಿರುವಂತೆ, ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಸಹ-ಮಾಲೀಕರಾಗುತ್ತಾರೆ.

ಈ ಮಾದರಿಯ ಉದ್ದೇಶ ಸರಳವಾಗಿದೆ — ಮಧ್ಯವರ್ತಿ ಲಾಭವನ್ನು ಕಡಿಮೆ ಮಾಡಿ, ದುಡಿಯುವವರ ಕೈಗೆ ಹೆಚ್ಚಿನ ಆದಾಯ ತಲುಪಿಸುವುದು. ಚಾಲಕರನ್ನು ಕೇವಲ ಸೇವೆ ನೀಡುವವರಾಗಿ ನೋಡದೇ, ಸಂಸ್ಥೆಯ ಪಾಲುದಾರರನ್ನಾಗಿ ಪರಿಗಣಿಸುವುದು ಈ ಪ್ರಯತ್ನದ ಮುಖ್ಯ ಅಂಶ.

ಭಾರತ್ ಟ್ಯಾಕ್ಸಿಯ ವಿಶೇಷತೆಗಳು

ಭಾರತ್ ಟ್ಯಾಕ್ಸಿ ಒಂದು ರೈಡ್ ಹೈಲಿಂಗ್ (‌Ride Hailing Platform) ಪ್ಲಾಟ್ಫಾರ್ಮ್. ಗ್ರಾಹಕರು ಮೊಬೈಲ್ ಆಪ್ ಮೂಲಕ ಕ್ಯಾಬ್ ಬುಕ್ ಮಾಡಬಹುದು. ಆದರೆ ಇದರ ಪ್ರಮುಖ ವ್ಯತ್ಯಾಸವೆಂದರೆ, ಇಲ್ಲಿ ಕಮಿಷನ್ ಮಾದರಿ ಇರುವುದಿಲ್ಲ. ಗ್ರಾಹಕರು ಪಾವತಿಸುವ ಸಂಪೂರ್ಣ ಮೊತ್ತ ಚಾಲಕರಿಗೇ ಸೇರುತ್ತದೆ. ಇದರಿಂದ ಚಾಲಕರಿಗೆ ಹೆಚ್ಚಿನ ಆದಾಯ ನೇರವಾಗಿ ದೊರೆಯುವ ಸಾಧ್ಯತೆಯಿರುತ್ತದೆ.

ಇದಲ್ಲದೆ ʼಕನಿಷ್ಠ ಖಾತ್ರಿ ದರʼ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕಡಿಮೆ ದರದ ಪ್ರಯಾಣಗಳಿಂದ ಚಾಲಕರಿಗೆ ನಷ್ಟವಾಗದಂತೆ ನೋಡಿಕೊಳ್ಳಲಾಗಿದೆ. ಸೇವೆಯ ಪ್ರಮಾಣ ಮತ್ತು ಪ್ರಯಾಣದ ದೂರದ ಆಧಾರದ ಮೇಲೆ ಆದಾಯದ ಸಮತೋಲನವನ್ನು ಕಾಪಾಡಲಾಗುತ್ತದೆ. ಈ ವ್ಯವಸ್ಥೆಯಿಂದ ಚಾಲಕರಿಗೆ ಆರ್ಥಿಕ ಭದ್ರತೆ ಮತ್ತು ಸ್ಥಿರತೆ ದೊರೆಯುವ ನಿರೀಕ್ಷೆ ಇದೆ.

₹500 ಷೇರು – ಮಾಲೀಕತ್ವದ ಹೊಸ ಅವಕಾಶ

ಭಾರತ್ ಟ್ಯಾಕ್ಸಿ ಪ್ಲಾಟ್ಫಾರ್ಮ್‌ಗೆ ಸೇರಲು ಚಾಲಕರು ₹500 ಮೌಲ್ಯದ ಷೇರುಗಳನ್ನು ಖರೀದಿಸಬೇಕು. ಈ ಹೂಡಿಕೆ ಮಾಡಿದ ಕ್ಷಣದಿಂದಲೇ ಅವರು ಸಂಸ್ಥೆಯ ಪಾಲುದಾರರಾಗುತ್ತಾರೆ. ಅಂದರೆ, ಅವರು ಕೇವಲ ವೇತನ ಪಡೆಯುವ ಚಾಲಕರಲ್ಲ; ಆದರೆ ಸಂಸ್ಥೆಯ ಲಾಭದಲ್ಲಿ ಪಾಲುದಾರರು.

ಕಂಪನಿ ಲಾಭ ಗಳಿಸಿದರೆ, ಅದರ 80% ಪಾಲನ್ನು ಚಾಲಕರಿಗೆ ಹಂಚಲಾಗುತ್ತದೆ. ಉಳಿದ 20% ಹಣವನ್ನು ತಂತ್ರಜ್ಞಾನ ಅಭಿವೃದ್ಧಿ, ಆಪ್ ನಿರ್ವಹಣೆ ಮತ್ತು ಸೇವಾ ವಿಸ್ತರಣೆಗೆ ಬಳಸಲಾಗುತ್ತದೆ. ಅಲ್ಲದೆ ಲಾಭ ಹಂಚಿಕೆಯು ಎಲ್ಲರಿಗೂ ಸಮಾನವಾಗಿರದೆ; ಗ್ರಾಹಕರಿಗೆ ಹೆಚ್ಚು ಸೇವೆ ನೀಡಿದವರು, ಹೆಚ್ಚು ಪ್ರಯಾಣ ಮಾಡಿದ ಚಾಲಕರು, ಹೆಚ್ಚಿನ ಪಾಲು ಪಡೆಯುತ್ತಾರೆ. ಇದು ದುಡಿಯುವವರ ಶ್ರಮಕ್ಕೆ ನ್ಯಾಯ ಒದಗಿಸುವ ವ್ಯವಸ್ಥೆಯಾಗಿದೆ.

ಸೇವೆಯಿಂದ ಯಾರಿಗೆ ಲಾಭ?

  1. ಟ್ಯಾಕ್ಸಿ ಚಾಲಕರಿಗೆ:
    ಗಿಗ್‌ ಮಾದರಿಯಲ್ಲಿ ಖಾಸಗಿ ಒಡೆತನದ ಕಂಪನಿಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕರು, ಪ್ರತೀ ಪ್ರಯಾಣಕ್ಕೂ ಹೆಚ್ಚಿನ ಕಮೀಷನ್‌ ನೀಡಬೇಕಾಗಿತ್ತು. ತಾವು ಕೆಲಸ ಮಾಡಿ, ಪ್ರತೀ ಪ್ರಯಾಣಕ್ಕೂ ಕಮೀಷನ್‌ ನೀಡುವುದು ಚಾಲಕರಿಗೆ ಆರ್ಥಿಕ ಅನಾನುಕೂಲವನ್ನ ಉಂಟುಮಾಡಿತ್ತು. ಭಾರತ್ ಟ್ಯಾಕ್ಸಿ ಯೋಜನೆಯಲ್ಲಿ ಚಾಲಕರು ಕಡಿಮೆ ಹೂಡಿಕೆಯಲ್ಲಿ ಸಹ-ಮಾಲೀಕರಾಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ಎಲ್ಲಾ ಚಾಲಕರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬಹುದು.
  2. ಸ್ವಯಂ ಉದ್ಯೋಗ ಬಯಸುವ ಯುವಕರಿಗೆ:
    ಸ್ವಂತ ವಾಹನ ಹೊಂದಿರುವವರು ಕೇವಲ ₹500 ಹೂಡಿಕೆಯಿಂದ, ಈ ವ್ಯವಹಾರದ ಪಾಲುದಾರರಾಗಬಹುದು. ಉದ್ಯೋಗಕ್ಕಾಗಿ ಕಾಯುವುದಕ್ಕಿಂತ ಸ್ವಂತ ಉದ್ಯೋಗ ಆರಂಭಿಸಲು ಇದು ಉತ್ತಮ ಮಾರ್ಗವಾಗಿದೆ.
  3. ಸಹಕಾರಿ ಮಾದರಿ ಅನುಸರಿಸುವ ಚಾಲಕರಿಗೆ :
    ಗಿಗ್ ಎಕಾನಮಿಯಲ್ಲಿ ಸಹಕಾರಿ ತತ್ವವನ್ನು ಜಾರಿಗೆ ತರುವ ಪ್ರಮುಖ ಪ್ರಯೋಗವಾಗಿ ಇದು ಗಮನಾರ್ಹವಾಗಿದೆ. ಹಾಗೂ ಈ ಯೋಜನೆಯನ್ನು ಸೇವೆ ನೀಡುವ ಚಾಲಕರು ಆರ್ಥಿಕವಾಗಿ ಅನುಕೂಲವಾಗಿರುವಂತೆ ರಚಿಸಲಾಗಿದೆ.
  4. ಗ್ರಾಹಕರಿಗೆ:
    ಗ್ರಾಹಕರು ಪಾವತಿಸುವ ಹಣ ನೇರವಾಗಿ ಚಾಲಕರಿಗೆ ಹೋಗುವುದರಿಂದ ಸೇವೆ ಹೆಚ್ಚು ಪಾರದರ್ಶಕ ಮತ್ತು ನ್ಯಾಯ ಸಮ್ಮತವಾಗುತ್ತದೆ. ಈ ಯೋಜನೆಯಲ್ಲಿ ಚಾಲಕರು ಯಾವುದೇ ವಿಳಂಬವಿಲ್ಲದೆ ತ್ವರಿತವಾಗಿ ನ್ಯಾಯ ಸಮ್ಮತ ಹಣವನ್ನು ಪಡೆಯುತ್ತಾರೆ.

ಪ್ರಸ್ತುತ ಸೇವೆ ಮತ್ತು ಭವಿಷ್ಯದ ಯೋಜನೆ

ಪ್ರಸ್ತುತ ಭಾರತ್ ಟ್ಯಾಕ್ಸಿ ಯೋಜನೆಯು, ದೆಹಲಿ ಎನ್‌ಸಿಆರ್ ಮತ್ತು ರಾಜ್‌ಕೋಟ್ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ, ದೇಶದ ಇತರೇ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ವಿಸ್ತರಿಸುವ ಯೋಜನೆಯನ್ನು ಒಳಗೊಂಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಚಾಲಕರನ್ನು ತನ್ನ ಯೋಜನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತಹ ಗುರಿಯನ್ನು ಹೊಂದಿದೆ.

ಅಂತಿಮ ನುಡಿ :

“₹500 ಕೊಟ್ಟರೆ ನೀವೇ ಡ್ರೈವರ್, ನೀವೇ ಮಾಲೀಕರು” ಎಂಬ ಘೋಷಣೆ ಕೇವಲ ಆಕರ್ಷಕ ವಾಕ್ಯವಲ್ಲ; ಇದು ಸಹಕಾರಿ ಆಧಾರಿತ ಹೊಸ ಆರ್ಥಿಕ ಚಿಂತನೆಯ ಪ್ರತೀಕವಾಗಿದೆ. ಚಾಲಕರೇ ಸಂಸ್ಥೆಯ ಹೃದಯವಾಗಿರುವ ಈ ಮಾದರಿ ಯಶಸ್ವಿಯಾದರೆ, ಭವಿಷ್ಯದಲ್ಲಿ ಇತರೇ ಗಿಗ್ ಸೇವೆಗಳಿಗೂ ಇದು ಮಾದರಿಯಾಗಬಹುದು.

ಒಟ್ಟಿನಲ್ಲಿ, ಭಾರತ್ ಟ್ಯಾಕ್ಸಿʼ ಭಾರತೀಯ ಟ್ಯಾಕ್ಸಿ ಉದ್ಯಮದಲ್ಲಿ ಸಹಕಾರಿ ಕ್ರಾಂತಿಗೆ ನಾಂದಿ ಹಾಡುವ ಪ್ರಯತ್ನವಾಗಿದೆ. ಇದು ಚಾಲಕರ ಆರ್ಥಿಕ ಸ್ಥಿರತೆ, ಸ್ವಾವಲಂಬನೆ ಮತ್ತು ನ್ಯಾಯಯುತ ಆದಾಯ ವ್ಯವಸ್ಥೆಗೆ ದಾರಿ ಮಾಡಿಕೊಡಬಹುದೇ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಲಿವೆ.

Leave a Comment