ಮಧ್ಯಪ್ರಾಚ್ಯ ಉದ್ವಿಗ್ನತೆ ಮತ್ತು ಹರ್ಮುಜ್ ಜಲಸಂಧಿಯ ಮಹತ್ವ
ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ, ಹರ್ಮುಜ್ ಜಲಸಂಧಿ ಈಗ ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಚರ್ಚೆಗಳ ಪ್ರಮುಖ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ, ಪರ್ಷಿಯನ್ ಕೊಲ್ಲಿ ಪ್ರದೇಶವನ್ನು ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುವ ಈ ಸಣ್ಣ ಜಲಮಾರ್ಗವು ಜಗತ್ತಿನ ಒಟ್ಟು ಕಚ್ಚಾ ತೈಲ ಸಾಗಣೆಯಲ್ಲಿಯೇ ಮಹತ್ತರ ಪಾತ್ರ ವಹಿಸುತ್ತದೆ.
ಭದ್ರತಾ ಆತಂಕಗಳು ಮತ್ತು ಆರ್ಥಿಕ ಪರಿಣಾಮಗಳು
ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಹರ್ಮುಜ್ ಜಲಸಂಧಿಯಲ್ಲಿ ಭದ್ರತಾ ಆತಂಕಗಳು ಹೆಚ್ಚಾಗಿವೆ. ಜಗತ್ತಿನಲ್ಲೇ ಅತ್ಯಂತ ಬ್ಯುಸಿ ತೈಲ ಸಾಗಣೆ ಮಾರ್ಗವಾಗಿರುವ ಈ ಜಲಸಂಧಿಯ ಮೂಲಕ ದಿನಕ್ಕೆ ಸುಮಾರು 80 ರಿಂದ 100 ಹಡಗುಗಳು ಸಂಚರಿಸುತ್ತಿದ್ದು, 20ಕ್ಕೂ ಹೆಚ್ಚು ದೇಶಗಳು ಈ ಮಾರ್ಗದ ಮೇಲೆ ನೇರವಾಗಿ ಅವಲಂಬಿತವಾಗಿವೆ. ಇಂತಹ ಪ್ರಮುಖ ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾದ ಪರಿಣಾಮವಾಗಿ ಹಲವು ದೇಶಗಳ ನೂರಾರು ಹಡಗುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇದರ ಪರಿಣಾಮವಾಗಿ ತೈಲದ ಬೆಲೆ ಏರಿಕೆ, ಸರಬರಾಜಿನ ವಿಳಂಬ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಕಂಡುಬರುತ್ತಿದೆ. ವಿಶೇಷವಾಗಿ ಮಧ್ಯಪ್ರಾಚ್ಯದ ತೈಲದ ಮೇಲೆ ಅವಲಂಬಿತವಾಗಿರುವ ಅಭಿವೃದ್ಧಿಶೀಲ ರಾಷ್ಟ್ರಗಳು ಗಂಭೀರ ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿವೆ.
ಯುದ್ಧದ ಪರಿಣಾಮ – ಜಗತ್ತಿನ ಮೇಲೆ ಹೊಡೆತ
ಯುದ್ಧವನ್ನು ಆರಂಭಿಸಿದ್ದು ಅಮೇರಿಕಾ ಮತ್ತು ಇಸ್ರೇಲ್ ರಾಷ್ಟ್ರಗಳು. ಅದರೆ ಯುದ್ಧದ ಪರಿಣಾಮಗಳು ಈ ದೇಶಕ್ಕೆ ಮಾತ್ರ ಸೀಮಿತವಾಗದೆ, ಭಾರತವೂ ಸೇರಿದಂತೆ ಅನೇಕ ದೇಶಗಳು ಈ ಸಂಘರ್ಷದ ನಷ್ಟವನ್ನು ಅನುಭವಿಸುತ್ತಿವೆ. ಯುದ್ಧದ ಪರಿಣಾಮವಾಗಿ ಜಾಗತಿಕ ಆರ್ಥಿಕ ಅನಿಶ್ಚಿತತೆ ಹೆಚ್ಚಿದ್ದು, ಇಂಧನದ ಬೆಲೆ ಏರಿಕೆ, ಸರಬರಾಜಿನ ಅಡಚಣೆ ಹಾಗೂ ಮಾರುಕಟ್ಟೆಯ ಅಸ್ಥಿರತೆ ಉಂಟಾಗಿದೆ. ಈ ಪರಿಸ್ಥಿತಿಯಲ್ಲಿ ವಿಶ್ವದ ರಾಷ್ಟ್ರಗಳಿಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯತೆ ಅತ್ಯವಶ್ಯಕವಾಗಿದೆ.
ಟ್ರಂಪ್ ಹೇಳಿಕೆ ಮತ್ತು ಅಮೇರಿಕದ ನಿಲುವು
ಯುದ್ಧವನ್ನು ಆರಂಭಿಸಿದ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಹರ್ಮುಜ್ ಜಲಸಂಧಿಯ ಮೇಲೆ ನಾವು ಅವಲಂಬಿತರಲ್ಲ, ಇದು ಮುಖ್ಯವಾಗಿ ಏಷ್ಯಾದ ದೇಶಗಳಿಗೆ ಅಗತ್ಯವಿರುವ ಮಾರ್ಗ” ಎಂದು ಹೇಳುವ ಮೂಲಕ, ಅಮೇರಿಕವು ತನ್ನ ಶಕ್ತಿ ಮತ್ತು ಸ್ವಾವಲಂಬನೆಯನ್ನು ಒತ್ತಿ ಹೇಳಲು ಪ್ರಯತ್ನಿಸಿದೆ. ಈ ಹೇಳಿಕೆ ಜಾಗತಿಕ ರಾಜಕೀಯದಲ್ಲಿ ಅಮೇರಿಕ ತನ್ನ ಪ್ರಭಾವವನ್ನು ಮುಂದುವರಿಸಲು ಕೈಗೊಂಡ ತಂತ್ರದ ಭಾಗವಾಗಿಯೇ ಕಾಣಲಾಗುತ್ತಿದೆ.
ಜಾಗತಿಕ ಮಟ್ಟದ ಚರ್ಚೆಗಳು ಮತ್ತು ಶೃಂಗಸಭೆ
ಇದರ ನಡುವೆ, ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಯುನೈಟೆಡ್ ಕಿಂಗ್ಡಮ್ ನೇತೃತ್ವದಲ್ಲಿ 60ಕ್ಕೂ ಹೆಚ್ಚು ರಾಷ್ಟ್ರಗಳ ಶೃಂಗಸಭೆ ನಡೆಯಿತು. ಭಾರತ ಸೇರಿದಂತೆ ಅನೇಕ ದೇಶಗಳು ಈ ಸಭೆಯಲ್ಲಿ ಭಾಗವಹಿಸಿವೆ. ಈ ಸಭೆಯಲ್ಲಿ ಇಂಧನ ಸುರಕ್ಷತೆ, ಜಾಗತಿಕ ತೈಲ ಸರಬರಾಜಿನ ನಿರಂತರತೆ ಮತ್ತು ಆರ್ಥಿಕ ಸ್ಥೈರ್ಯವನ್ನು ಕಾಪಾಡುವ ಕುರಿತು ಸವಿಸ್ತಾರ ಚರ್ಚೆಗಳು ನಡೆದವು. ಇದು ಪರಿಸ್ಥಿತಿಯ ಗಂಭೀರತೆಯನ್ನು ಸ್ಪಷ್ಟಪಡಿಸುವ ಬೆಳವಣಿಗೆಯಾಗಿದೆ.
ಭಾರತ–ಇರಾನ್ ಸಂಬಂಧ ಮತ್ತು ಭರವಸೆ
ಭಾರತದ ದೃಷ್ಟಿಯಿಂದ ನೋಡಿದರೆ, ಇರಾನ್ ನೀಡಿರುವ ಭರವಸೆ ಮಹತ್ವದ್ದಾಗಿದೆ. “ಹರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಭಾರತ ನಮ್ಮ ಸ್ನೇಹಿತ ರಾಷ್ಟ್ರ ಎಂದು ಹೇಳಿದೆ. ಅಲ್ಲದೇ “ತನ್ನ ದೇಶದಲ್ಲಿರುವ ಭಾರತೀಯರು ಸುರಕ್ಷಿತರಿದ್ದಾರೆ” ಎಂದು ಇರಾನ್ ಹೇಳಿರುವುದು, ಭಾರತ-ಇರಾನ್ ನಡುವಿನ ಸ್ನೇಹಪೂರ್ಣ ಸಂಬಂಧವನ್ನು ಮತ್ತೊಮ್ಮೆ ದೃಢಪಡಿಸುತ್ತದೆ. ಇಂತಹ ಹೇಳಿಕೆಗಳು ಭಾರತದ ಇಂಧನ ಭದ್ರತೆ ಬಗ್ಗೆ ಇರುವ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದರಲ್ಲಿ ಸಹಾಯಕವಾಗಿವೆ.
ಯುದ್ಧದ ಪರಿಣಾಮ ಸಾವು ನೋವು
ಅಮೇರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಪರಿಣಾಮವಾಗಿ ಇರಾನ್ನ ಅಲ್ ಅರ್ಬುಜ್ ಪ್ರದೇಶದಲ್ಲಿನ ಸೇತುವೆ ಧ್ವಂಸಗೊಂಡಿದ್ದು, ಈ ಘಟನೆಯಲ್ಲಿ 8 ಜನರು ಸಾವನ್ನಪ್ಪಿ, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ವರದಿಗಳು ಲಭ್ಯವಾಗಿವೆ. ಈ ಘಟನೆ ಯುದ್ಧದ ಪರಿಣಾಮ ಕೇವಲ ರಾಜಕೀಯ ಅಥವಾ ಸೈನಿಕ ಮಟ್ಟದಲ್ಲೇ ಸೀಮಿತವಾಗಿಲ್ಲ, ಸಾಮಾನ್ಯ ಜನರ ಜೀವನಕ್ಕೂ ತೀವ್ರವಾಗಿ ಹೊಡೆತ ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಒಟ್ಟಾರೆ ಪರಿಸ್ಥಿತಿ – ಜಾಗತಿಕ ಆತಂಕ
ಒಟ್ಟಾರೆಯಾಗಿ ನೋಡಿದರೆ, ಈ ಸಂಘರ್ಷವನ್ನು ಅಮೇರಿಕ ಮುನ್ನಡೆಸುತ್ತಿದ್ದರೂ, ಅದರ ದುಷ್ಪರಿಣಾಮಗಳು ಜಗತ್ತಿನ ವಿವಿಧ ದೇಶಗಳಿಗೆ ತಲುಪುತ್ತಿವೆ. ತೈಲ ಬೆಲೆ ಏರಿಕೆ, ಇಂಧನ ಕೊರತೆ ಮತ್ತು ಆರ್ಥಿಕ ಅಸ್ಥಿರತೆ ಈಗಾಗಲೇ ಗೋಚರಿಸುತ್ತಿವೆ. ಹೀಗಾಗಿ, ಹರ್ಮುಜ್ ಜಲಸಂಧಿ ಸುತ್ತಲಿನ ಉದ್ವಿಗ್ನತೆ ಜಾಗತಿಕ ಮಟ್ಟದಲ್ಲಿ ಗಂಭೀರ ಚಿಂತೆಗೆ ಕಾರಣವಾಗಿದೆ.
ರಣರಂಗಕ್ಕಿಂತ ಉಗ್ರವಾದ ವಾಕ್ಸಮರ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆ ಅಮೆರಿಕಾ ಮತ್ತು ಇರಾನ್ ನಡುವೆ ಕೇವಲ ರಣರಂಗದಲ್ಲಷ್ಟೇ ಅಲ್ಲ, ವಾಕ್ಸಮರದಲ್ಲಿಯೂ ತೀವ್ರತೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕ್ಷಿಪಣಿ ದಾಳಿಗಳಷ್ಟೇ ತೀಕ್ಷ್ಣವಾಗಿ ನಾಯಕರ ಮಾತಿನ ಹೊಡೆದಾಟವೂ ಮುಂದುವರಿಯುತ್ತಿದೆ.
ಟ್ರಂಪ್ ಬೆದರಿಕೆ – ಇರಾನ್ಗೆ ಕಠಿಣ ಎಚ್ಚರಿಕೆ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದು, “ಇರಾನ್ನ್ನು ಶಿಲಾಯುಗಕ್ಕೆ ಮರಳಿಸುವ ಮಟ್ಟದ ಹೊಡೆತ ನೀಡುತ್ತೇವೆ” ಎಂದು ಹೇಳಿದ್ದಾರೆ. ಮುಂದಿನ ಕೆಲವು ವಾರಗಳಲ್ಲಿ ದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕಾ-ಇಸ್ರೇಲ್ ಜಂಟಿ ಕಾರ್ಯಾಚರಣೆಯಿಂದ ಇರಾನ್ನ ಸೈನಿಕ ಸಾಮರ್ಥ್ಯ ಬಹುತೇಕ ನಾಶವಾಗಿದೆ ಎಂದು ಕೂಡ ಟ್ರಂಪ್ ಹೇಳಿಕೊಂಡಿದ್ದಾರೆ.
ಇರಾನ್ನ ತಿರುಗೇಟು – “ನಮ್ಮ ಶಕ್ತಿ ಕಡಿಮೆ ಅಂದಾಜು ಮಾಡಬೇಡಿ”
ಟ್ರಂಪ್ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿದ ಇರಾನ್, ಅಮೆರಿಕಾದ ಬೆದರಿಕೆಯನ್ನು ತಳ್ಳಿಹಾಕಿ, “ನಮ್ಮ ಸಾಮರ್ಥ್ಯವನ್ನು ಕಡಿಮೆ ಎಣಿಸಬೇಡಿ. ಅಮೆರಿಕಾಗೆ ಶಾಶ್ವತ ಅವಮಾನ ಎದುರಾಗುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಎಚ್ಚರಿಸಿದೆ. ಅಮೆರಿಕಾ ಸಂಪೂರ್ಣ ಶರಣಾಗತವಾಗುವವರೆಗೂ ಯುದ್ಧ ನಿಲ್ಲುವುದಿಲ್ಲ ಎಂಬ ಕಠಿಣ ನಿಲುವನ್ನೂ ಪ್ರಕಟಿಸಿದೆ.
ಸೈನಿಕ ಸಾಮರ್ಥ್ಯ ಕುರಿತ ವಾದವಿವಾದ
ಇರಾನ್ ತನ್ನ ಮಿಲಿಟರಿ ವ್ಯವಸ್ಥೆ ದುರ್ಬಲಗೊಂಡಿದೆ ಎಂಬ ಟ್ರಂಪ್ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ತನ್ನ ಕ್ಷಿಪಣಿ ಉತ್ಪಾದನಾ ಘಟಕಗಳು, ದೀರ್ಘಶ್ರೇಣಿಯ ದಾಳಿ ಸಾಮರ್ಥ್ಯ, ಆಧುನಿಕ ಡ್ರೋನ್ಗಳು ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳು ಇನ್ನೂ ಬಲವಾಗಿವೆ ಎಂದು ತಿಳಿಸಿದೆ. ಜೊತೆಗೆ, ಮಿಲಿಟರಿ ಉಪಕರಣಗಳ ಉತ್ಪಾದನೆ ಸುರಕ್ಷಿತ ಮತ್ತು ರಹಸ್ಯ ಸ್ಥಳಗಳಲ್ಲಿ ನಡೆಯುತ್ತಿದ್ದು, ಅದನ್ನು ನಾಶಮಾಡುವುದು ಸುಲಭವಲ್ಲ ಎಂದು ಹೇಳಿದೆ.
“ಇತಿಹಾಸ ನಮ್ಮನ್ನು ಚೆನ್ನಾಗಿ ತಿಳಿದಿದೆ” – ಇರಾನ್ ಟೀಕೆ
ಟ್ರಂಪ್ “ಶಿಲಾಯುಗ” ಹೇಳಿಕೆಗೆ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ. ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ, “ನಾವು ಸಾವಿರಾರು ವರ್ಷಗಳ ನಾಗರಿಕತೆಯನ್ನು ಹೊಂದಿರುವ ದೇಶ. ಇತಿಹಾಸವೇ ನಮ್ಮ ಶಕ್ತಿಯನ್ನು ಹೇಳುತ್ತದೆ” ಎಂದು ಪ್ರತಿಕ್ರಿಯಿಸಿದೆ. ಜೊತೆಗೆ, ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಆಧುನಿಕ ಯುಗಕ್ಕೆ ತಂದವರು ಯಾರು ಎಂಬುದನ್ನು ಜಗತ್ತು ತಿಳಿದಿದೆ ಎಂದು ಅಮೆರಿಕಾವನ್ನು ಟೀಕಿಸಿದೆ.
ಯುದ್ಧದ ಜೊತೆಗೆ ವಾಕ್ಸಮರ ತೀವ್ರ
ಒಟ್ಟಾರೆಯಾಗಿ ನೋಡಿದರೆ, ಅಮೆರಿಕಾ ಮತ್ತು ಇರಾನ್ ನಡುವೆ ನಡೆಯುತ್ತಿರುವ ಈ ಸಂಘರ್ಷದಲ್ಲಿ ರಣರಂಗದ ಯುದ್ಧಕ್ಕಿಂತಲೂ ವಾಕ್ಸಮರವೇ ಹೆಚ್ಚು ಉಗ್ರವಾಗಿ ಕಾಣಿಸುತ್ತಿದೆ. ಪರಸ್ಪರ ಬೆದರಿಕೆಗಳು, ಆರೋಪ-ಪ್ರತ್ಯಾರೋಪಗಳು ಹೆಚ್ಚುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉದ್ವಿಗ್ನತೆ ಮತ್ತಷ್ಟು ಏರಿಕೆಯಾಗುವ ಸೂಚನೆಗಳು ಕಾಣಿಸುತ್ತಿವೆ.