Telegram Join My Telegram WhatsApp Join My WhatsApp

ಯುದ್ಧ! ಜಾಗತಿಕ ಪ್ರತಿಫಲ

ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಇರಾನ್ ಸುತ್ತಲಿನ ಸಂಘರ್ಷವು ಕೇವಲ ಪ್ರಾದೇಶಿಕ ಗಡಿಗಳೊಳಗೆ ಸೀಮಿತವಾದ ಯುದ್ಧವಲ್ಲ; ಅದು ಜಾಗತಿಕ ಆರ್ಥಿಕ ವ್ಯವಸ್ಥೆಯನ್ನೇ ಕದಡುವ ಸಾಮರ್ಥ್ಯ ಹೊಂದಿರುವ ಗಂಭೀರ ಬೆಳವಣಿಗೆ. ಇಂದಿನ ವಿಶ್ವವು ತಂತ್ರಜ್ಞಾನ, ವ್ಯಾಪಾರ, ಇಂಧನ ಪೂರೈಕೆ ಹಾಗೂ ಇತರೆ ವಿನಿಮಯ ಸರಪಳಿಗಳ ಮೂಲಕ ಪರಸ್ಪರವಾಗಿ ಗಾಢವಾಗಿ ಜೋಡಿಸಿಕೊಂಡಿದೆ. ಹೀಗಾಗಿ, ಒಂದು ದೇಶದಲ್ಲಿ ಉಂಟಾಗುವ ರಾಜಕೀಯ ಅಸ್ಥಿರತೆ ಅಥವಾ ಉದ್ವಿಗ್ನತೆ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಇತರ ರಾಷ್ಟ್ರಗಳ ಮಾರುಕಟ್ಟೆಗಳ ಮೇಲೆ, ಜನಸಾಮಾನ್ಯರ ಬದುಕಿನ ಮೇಲೆ, ನೇರ ಪರಿಣಾಮ ಬೀರುತ್ತದೆ.

ಇರಾನ್ ಸುತ್ತಮುತ್ತ ಉಲ್ಬಣಗೊಂಡಿರುವ ಯುದ್ಧೋನ್ಮಾದ ಜಾಗತಿಕ ಆರ್ಥಿಕತೆಯಲ್ಲಿ ಅಪಾರವಾದ ಅಸ್ಥಿರತೆ ಮತ್ತು ಗೊಂದಲವನ್ನು ಸೃಷ್ಟಿಸುತ್ತಿದೆ. ಇದರ ಪರಿಣಾಮದ ಹೊರೆ ಅಂತಿಮವಾಗಿ ಇತರ ದೇಶಗಳ ಸಾಮಾನ್ಯ ಜನರ ಬದುಕಿನ ಮೇಲೆ ಹೊರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯುದ್ಧವೆಂದರೆ ಕೇವಲ ಸಾವು-ನೋವುಗಳ ಲೆಕ್ಕಾಚಾರವಲ್ಲ, ಆಸ್ತಿಪಾಸ್ತಿಗಳ ನಷ್ಟವಲ್ಲ, ಹಲವು ದೇಶಗಳ, ವಿಭಿನ್ನ ಚಿಂತನೆಗಳ ನಡುವೆ ನಡೆಯುವ ಕಾದಾಟ ಮಾತ್ರವಲ್ಲ; ಯುದ್ಧವೆಂದರೆ ಸೋಲುಗಳ ಸರಮಾಲೆ, ಅನಿಶ್ಚಿತ ಭವಿಷ್ಯದ ಭೀತಿ, ಅಸಹಾಯಕತೆಯ ನೋವು ಮತ್ತು ಮಾನವೀಯ ಮೌಲ್ಯಗಳ ಸಂಕಟ ಎಂದು ಬಣ್ಣಿಸಬಹುದೇನೋ!

ಇರಾನ್‌ಎಂಬ ಇಂಧನ ಕ್ಷೇತ್ರ

ಇರಾನ್‌ನ ಆರ್ಥಿಕತೆಯ ಪ್ರಮುಖ ಆಧಾರ ಇಂಧನವಾಗಿದೆ. ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ದ್ರವೀಕೃತ ಅನಿಲ (LPG ಮತ್ತು LNG) ಇವುಗಳು ಅದರ ಪ್ರಮುಖ ರಫ್ತು ವಸ್ತುಗಳು. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನದ ಬೇಡಿಕೆ ಯಾವಾಗಲೂ ಸ್ಥಿರವಾಗಿರುವುದರಿಂದ ಇರಾನ್ ತೈಲ ರಫ್ತಿನ ಮೂಲಕ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಗಳಿಸುತ್ತದೆ. ಇಂಧನ ಮಾತ್ರವಲ್ಲದೆ, ಮೆಥನಾಲ್, ಯೂರಿಯಾ, ಅಮೋನಿಯಾ ಮುಂತಾದ ಪೆಟ್ರೋಕೆಮಿಕಲ್ ಉತ್ಪನ್ನಗಳೂ ಬಹುಪಾಲು ರಾಷ್ಟ್ರಗಳಿಗೆ ರಫ್ತು ಆಗುತ್ತವೆ. ಪ್ಲಾಸ್ಟಿಕ್ ಮೂಲಪದಾರ್ಥಗಳು ಮತ್ತು ವಿವಿಧ ರಾಸಾಯನಿಕ ವಸ್ತುಗಳು ಕೈಗಾರಿಕಾ ವಲಯಕ್ಕೆ ಅಗತ್ಯವಾದವುಗಳಾಗಿವೆ.

ಕೃಷಿ ಉತ್ಪನ್ನಗಳಲ್ಲಿಯೂ ಇರಾನ್‌ಗೆ ವಿಶೇಷ ಸ್ಥಾನವಿದೆ. ಪಿಸ್ತಾ ಉತ್ಪಾದನೆಯಲ್ಲಿ ಅದು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಪಿಸ್ತಾ, ಬಾದಾಮಿ, ಅಂಜೂರ, ಖರ್ಜೂರ, ಒಣದ್ರಾಕ್ಷಿ ಮತ್ತು ವಿಶ್ವಪ್ರಸಿದ್ಧ ಕೇಸರಿ (ಸಾಫ್ರನ್) ಅನೇಕ ದೇಶಗಳಿಗೆ ರಫ್ತು ಆಗುತ್ತವೆ. ಈ ಉತ್ಪನ್ನಗಳು ಕೇವಲ ಆಹಾರ ಪದಾರ್ಥಗಳಲ್ಲ; ಅವು ಹಲವು ದೇಶಗಳ ಸಂಸ್ಕೃತಿ ಮತ್ತು ಹಬ್ಬ-ಹರಿದಿನಗಳ ಭಾಗವಾಗಿವೆ. ಮಸಾಲೆ ಪದಾರ್ಥಗಳು, ಜಾಯಿಕಾಯಿ, ದಾಲ್ಚಿನ್ನಿ ಮತ್ತು ಪರ್ಶಿಯನ್ ಕಾರ್ಪೆಟ್‌ಗಳಂತಹ ಸಾಂಪ್ರದಾಯಿಕ ವಸ್ತುಗಳೂ ಇರಾನ್‌ನ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಇರಾನ್‌ನ ಇಂಧನ ಮತ್ತು ಇತರ ಉತ್ಪನ್ನಗಳ ಮೇಲೆ ಹಲವು ರಾಷ್ಟ್ರಗಳು ಅವಲಂಬಿತವಾಗಿವೆ. ಚೈನಾ ದೇಶವು ಇರಾನ್‌ ಇಂಧನದ ಬಹುದೊಡ್ಡ ಖರೀದಿದಾರ ರಾಷ್ಟ್ರವಾಗಿದೆ. ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಆರ್ಥಿಕತೆಯನ್ನು ನಿರ್ವಹಿಸಲು ಚೀನಾ ದೇಶವು ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಅವಲಂಬಿತವಾಗಿದೆ.

ಭಾರತ ದೇಶವೂ ಕೂಡ ತೈಲ, ಅನಿಲ ಮತ್ತು ಕೆಲವು ರಾಸಾಯನಿಕ ಉತ್ಪನ್ನಗಳ ವಿಷಯದಲ್ಲಿ ಮಧ್ಯಪ್ರಾಚ್ಯದ ರಾಷ್ಟ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಭಾರತ ತನ್ನ ಕಚ್ಚಾ ತೈಲದ ಅಗತ್ಯದ ಸುಮಾರು 20 ಶೇಕಡಾವರೆಗೆ ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಇರಾನ್ ಸೇರಿದಂತೆ ಹಲವು ಕೊಲ್ಲಿ ರಾಷ್ಟ್ರಗಳ ಪಾಲು ಗಮನಾರ್ಹವಾಗಿದೆ. ಟರ್ಕಿ, ಇರಾಕ್‌, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೂಡ ವ್ಯಾಪಾರ ಮತ್ತು ಇಂಧನಕ್ಕೆ  ಸಂಬಂಧಿಸಿದಂತೆ ಇರಾನ್‌ನೊಂದಿಗೆ ಸಂಪರ್ಕ ಹೊಂದಿವೆ. ಈ ಪರಸ್ಪರ ಅವಲಂಬನೆ ಯುದ್ಧದ ಪರಿಣಾಮವನ್ನು ವ್ಯಾಪಕಗೊಳಿಸುತ್ತದೆ.

ಯುದ್ಧದ ತಕ್ಷಣದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಗೋಚರಿಸುತ್ತದೆ. ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಸಾಗಣೆ ಮಾರ್ಗಗಳಲ್ಲಿ ಅಡಚಣೆ ಉಂಟಾದರೆ ವಿಶ್ವದ ತೈಲ ಸರಬರಾಜು ಪ್ರಕ್ರಿಯೆ ವ್ಯತ್ಯಯಗೊಳ್ಳುತ್ತದೆ. ಇದರ ಪರಿಣಾಮವಾಗಿ ಕಚ್ಚಾ ತೈಲದ ದರಗಳು ಏರಿಕೆಯಾಗುತ್ತವೆ. ತೈಲದ ಬೆಲೆ ಏರಿದಾಗ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೂ ಒತ್ತಡ ಹೆಚ್ಚುತ್ತದೆ. ಸಾರಿಗೆ ವೆಚ್ಚ ಏರಿಕೆಯಿಂದ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ಈ ಹೆಚ್ಚಿದ ವೆಚ್ಚಗಳು ಕೊನೆಗೆ ಗ್ರಾಹಕರ ಮೇಲೆಯೇ ಬೀಳುತ್ತವೆ. ಆಹಾರ ವಸ್ತುಗಳಿಂದ ಹಿಡಿದು ಕೈಗಾರಿಕಾ ಉತ್ಪನ್ನಗಳವರೆಗೆ ಬೆಲೆ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಇದು ಹಣದುಬ್ಬರದ ಒತ್ತಡವನ್ನು ಹೆಚ್ಚಿಸುತ್ತದೆ.

ಭಾರತ ಸೇರಿದಂತೆ ಅನೇಕ ದೇಶಗಳು ಪಿಸ್ತಾ, ಬಾದಾಮಿ ಮತ್ತು ಅಂಜೂರದಂತಹ ಒಣಹಣ್ಣುಗಳ ಸರಬರಾಜಿಗೆ ಇರಾನ್‌ ಮೇಲೆ ಅವಲಂಬಿತವಾಗಿದೆ. ಸಾಗಣೆ ವ್ಯತ್ಯಯಗೊಂಡರೆ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿ ಬೆಲೆ ಏರಿಕೆ ಅನಿವಾರ್ಯವಾಗುತ್ತದೆ. ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಈ ನೇರ ಪರಿಣಾಮವ್ನು ಹೆಚ್ಚು ಸ್ಪಷ್ಟವಾಗಿ ಕಾಣಿಸಬಹುದು. ವ್ಯಾಪಾರಿಗಳು, ಜನಸಾಮಾನ್ಯರು ಸಂಕಷ್ಟ ಅನುಭವಿಸಬಹುದು.

ಭಾರತದಂತಹ ಆಮದು ಅವಲಂಬಿತ ದೇಶಗಳಿಗೆ ಈ ಪರಿಸ್ಥಿತಿ ಗಂಭೀರವಾಗಿದೆ. ಜಾಗತಿಕ ಬೆಲೆ ಏರಿಕೆಯಿಂದ ಆಮದು ವೆಚ್ಚ ಹೆಚ್ಚುತ್ತದೆ. ಇದರ ಪರಿಣಾಮವಾಗಿ ವ್ಯಾಪಾರದ ಕೊರತೆ ಹೆಚ್ಚಾಗಬಹುದು ಮತ್ತು ರೂಪಾಯಿ ಮೌಲ್ಯದ ಮೇಲೂ ಒತ್ತಡ ಬೀಳಬಹುದು. ಸರ್ಕಾರಗಳು ಪರ್ಯಾಯ ಪೂರೈಕೆ ಮೂಲಗಳ ಹುಡುಕಾಟ, ರಫ್ತು-ಆಮದು ಸಮತೋಲನವನ್ನು ಮತ್ತು ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

ತಾತ್ಕಾಲಿಕವಾಗಿ ತೈಲ ಕಂಪನಿಗಳು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ನಷ್ಟವನ್ನು ಭರಿಸಬಹುದಾದರೂ, ದೀರ್ಘಕಾಲ ಯುದ್ಧ ಮುಂದುವರೆದರೆ ಆರ್ಥಿಕ ಒತ್ತಡ ಹೆಚ್ಚಾಗಬಹುದು.

ಇಂದಿನ ಜಾಗತಿಕ ಆರ್ಥಿಕತೆಯಲ್ಲಿ ಯಾವುದೇ ದೇಶ ಪ್ರತ್ಯೇಕವಾಗಿಲ್ಲ. ಒಂದು ರಾಷ್ಟ್ರ ಇಂಧನ ಉತ್ಪಾದಿಸುತ್ತದೆ, ಮತ್ತೊಂದು ರಾಷ್ಟ್ರ ಅದನ್ನು ಸಂಸ್ಕರಿಸುತ್ತದೆ, ಇನ್ನೊಂದು ರಾಷ್ಟ್ರ ಅದರಿಂದ ಉತ್ಪನ್ನಗಳನ್ನು ತಯಾರಿಸುತ್ತದೆ. ಈ ಸರಪಳಿಯಲ್ಲಿ ಒಂದು ಕೊಂಡಿ ಮುರಿದರೆ ಇಡೀ ವ್ಯವಸ್ಥೆ ತತ್ತರಿಸುತ್ತದೆ. ಇರಾನ್ ಸಂಘರ್ಷವು ಈ ಪರಸ್ಪರ ಅವಲಂಬಿತ ವ್ಯವಸ್ಥೆಯ ದುರ್ಬಲತೆಯನ್ನು ಬಹಿರಂಗಪಡಿಸಿದೆ.

ಒಟ್ಟಿನಲ್ಲಿ, ಇರಾನ್ ರಫ್ತು ಮಾಡುವ ಇಂಧನ, ರಾಸಾಯನಿಕ ಮತ್ತು ಕೃಷಿ ಉತ್ಪನ್ನಗಳು ಅನೇಕ ರಾಷ್ಟ್ರಗಳ ಆರ್ಥಿಕತೆಗೆ ಅವಿಭಾಜ್ಯ. ಆ ದೇಶದಲ್ಲಿ ಉಂಟಾಗುವ ಯುದ್ಧವು ಜಾಗತಿಕ ಬೆಲೆ ಏರಿಕೆ, ಸರಕು ಕೊರತೆ ಮತ್ತು ಹಣದುಬ್ಬರದ ಅಲೆಗಳನ್ನು ಹುಟ್ಟಿಸುತ್ತದೆ. ಇಂದಿನ ಗ್ಲೋಬಲ್ ಯುಗದಲ್ಲಿ “ದೂರದ ಯುದ್ಧ” ಎನ್ನುವ ಮಾತೇ ಅಸ್ತಿತ್ವದಲ್ಲಿಲ್ಲ; ಪ್ರತಿಯೊಂದು ದೇಶವೂ ಇನ್ನೊಂದರೊಂದಿಗೆ ಆರ್ಥಿಕವಾಗಿ ಜೋಡಿಸಿಕೊಂಡಿದೆ. ಆದ್ದರಿಂದ ಪ್ರಾದೇಶಿಕ ಸಂಘರ್ಷವೂ ವಿಶ್ವದ ಆರ್ಥಿಕ ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.

Leave a Comment