ಖಿನ್ನತೆಯು (Depression) ಮನಸ್ಸಿನ ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ. ಇದು ವ್ಯಕ್ತಿಯಲ್ಲಿ ನಿರಂತರ ದುಃಖ, ನಿರಾಶೆ, ಶೂನ್ಯತೆಯ ಭಾವನೆ, ಏಕಾಂತ ಹಾಗೂ ಹಿಂದೆ ಆಸಕ್ತಿ ಹೊಂದಿದ್ದ ಚಟುವಟಿಕೆಗಳು ಅಥವಾ ಸಂಬಂಧಗಳ ಮೇಲಿನ ಆಸಕ್ತಿಯ ಕುಗ್ಗುವಿಕೆಯನ್ನು ಉಂಟುಮಾಡಬಹುದು.
ಖಿನ್ನತೆ ̧ ಮೌನವಾಗಿ ಕಾಡುವ ಮನಸ್ಸಿನ ನೋವು
ಬದುಕಿನಲ್ಲಿ ಎದುರಾಗುವ ಸೋಲುಗಳು, ನಿರಂತರ ದುಃಖದ ಘಟನೆಗಳು, ಅತಿಯಾದ ಚಿಂತೆ, ಆಪ್ತರ ನಿರ್ಲಕ್ಷ್ಯ, ಉದ್ಯೋಗ ಕಳೆದುಕೊಳ್ಳುವುದು, ಮುರಿದ ಸಂಬಂಧ, ಹಾಗೂ ಇತರ ಒತ್ತಡದ ಸಂದರ್ಭಗಳು ಖಿನ್ನತೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಖಿನ್ನತೆಗೆ ಒಳಗಾದ ವ್ಯಕ್ತಿಗಳು ತಮ್ಮ ನೋವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸದೆ ತಮ್ಮ ಮನಸ್ಸಿನೊಳಗೇ ಇಟ್ಟುಕೊಂಡು ಸಂಕಟ ಅನುಭವಿಸುತ್ತಾರೆ.
ಖಿನ್ನತೆಯನ್ನು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ. ಕೆಲವರು ಹೊರಗಿನಿಂದ ನೋಡಲು ಸಾಮಾನ್ಯರಂತೆ ಕಾಣಬಹುದು, ಇತರರೊಂದಿಗೆ ಸಂತೋಷದಿಂದ ಬೆರೆಯಬಹುದು. ಆದರೆ ಏಕಾಂತದಲ್ಲಿದ್ದಾಗ ಅವರು ಮತ್ತೆ ದುಃಖ ಮತ್ತು ಖಿನ್ನತೆಯ ಭಾವನೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ.
ಖಿನ್ನತೆಯು ದುರ್ಬಲತೆಯ ಸಂಕೇತವಲ್ಲ. ಇದು ವ್ಯಕ್ತಿಯ ಆಲೋಚನೆಗಳು, ಭಾವನೆಗಳು, ವರ್ತನೆ ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಒಂದು ಆರೋಗ್ಯ ಸಮಸ್ಯೆಯಾಗಿದೆ. ಸರಿಯಾದ ಸಮಯದಲ್ಲಿ ಕುಟುಂಬದ ಬೆಂಬಲ, ಸ್ನೇಹಿತರ ಪ್ರೋತ್ಸಾಹ ಹಾಗೂ ಅಗತ್ಯವಿದ್ದರೆ ತಜ್ಞರ ಸಲಹೆ ಪಡೆಯುವುದರಿಂದ ಖಿನ್ನತೆಯಿಂದ ಹೊರಬರಲು ಸಾಧ್ಯವಿದೆ.
ಬದುಕಿನ ಯಾವುದೋ ಒಂದು ಹಂತದಲ್ಲಿ, ಪ್ರತಿಯೊಬ್ಬರೂ ಖಿನ್ನತೆಯ ಅನುಭವವನ್ನು ಎದುರಿಸಬಹುದು. ಆದ್ದರಿಂದ ಖಿನ್ನತೆಯನ್ನು ನಿರ್ಲಕ್ಷಿಸದೆ, ಮುಕ್ತವಾಗಿ ಮಾತನಾಡುವುದು ಮತ್ತು ಅಗತ್ಯ ಸಹಾಯ ಪಡೆಯುವುದು ಬಹಳ ಮುಖ್ಯವಾಗಿದೆ.
ಖಿನ್ನತೆಯ ಸಾಮಾನ್ಯ ಲಕ್ಷಣಗಳು
ವ್ಯಕ್ತಿಯೊಬ್ಬರು ನಿರಂತರ ನಿರಾಶೆ, ದುಃಖ, ಬೇಸರ ಹಾಗೂ ನೋವಿನ ಭಾವನೆಯಲ್ಲಿ ಮುಳುಗಿದ್ದರೆ ಅವರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಮನಸ್ಸಿಗೆ ನೋವುಂಟು ಮಾಡುವ ಘಟನೆಗಳು ಅಥವಾ ಆಲೋಚನೆಗಳನ್ನು ಪದೇಪದೇ ಯೋಚಿಸುವುದರಿಂದ ಖಿನ್ನತೆಯ ಭಾವನೆ ಹೆಚ್ಚಾಗಬಹುದು. ಇಂತಹ ಸಂದರ್ಭದಲ್ಲಿ ವ್ಯಕ್ತಿಯು ತನ್ನ ಸುತ್ತಮುತ್ತ ನಡೆಯುವ ಸಂಗತಿಗಳ ಕಡೆ ಗಮನ ಹರಿಸಲು ಕಷ್ಟಪಡಬಹುದು. ಆದ್ದರಿಂದ ಮನಸ್ಸು ಖಿನ್ನತೆಗೆ ಜಾರುವ ಮುನ್ನವೇ ನಕಾರಾತ್ಮಕ ಚಿಂತನೆಗಳಿಂದ ಹೊರಬರಲು ಪ್ರಯತ್ನಿಸಿ, ಹೊಸ ಹವ್ಯಾಸಗಳು, ವ್ಯಾಯಾಮ ಅಥವಾ ಇತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಕೆಲವರಿಗೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅಳಬೇಕೆನ್ನಿಸುವುದು ಕಂಡುಬರುತ್ತದೆ. ಬದುಕಿನಲ್ಲಿ ನಿರಂತರ ನೋವು, ಹತಾಶೆ ಅಥವಾ ನಿರಾಶೆಯ ಅನುಭವಗಳು ಎದುರಾದಾಗ, ತಮ್ಮ ಮನಸ್ಸಿನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳದೆ ಮನದೊಳಗೆ ಇಟ್ಟುಕೊಳ್ಳುವುದರಿಂದ ಏಕಾಂಗಿತನ ಹೆಚ್ಚಾಗಬಹುದು. ಇಂತಹ ಸಂದರ್ಭಗಳಲ್ಲಿ ಆಪ್ತರು, ಸ್ನೇಹಿತರು ಅಥವಾ ನಂಬಿಕೆಯ ವ್ಯಕ್ತಿಗಳೊಂದಿಗೆ ಮನದ ಮಾತುಗಳನ್ನು ಹಂಚಿಕೊಳ್ಳುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಅಗತ್ಯವಿದ್ದರೆ ಅವರಿಂದ ಸೂಕ್ತ ಸಲಹೆ ಮತ್ತು ಬೆಂಬಲವನ್ನೂ ಪಡೆಯಬಹುದು.
ಕೆಲವೊಮ್ಮೆ ಎಲ್ಲ ವಿಷಯಗಳೂ ಕಿರಿಕಿರಿಯಾಗಿ ಕಾಣಬಹುದು. ಇತರರ ಮಾತುಗಳು, ವರ್ತನೆಗಳು ಅಥವಾ ಸಣ್ಣ ವಿಷಯಗಳೂ ಅಸಹನೀಯವೆನಿಸಬಹುದು. ಇದು ಖಿನ್ನತೆಯ ಒಂದು ಲಕ್ಷಣವಾಗಿರಬಹುದು. ಇಂತಹ ಸಂದರ್ಭದಲ್ಲಿ ಎಲ್ಲರೂ ನಮ್ಮ ನಿರೀಕ್ಷೆಯಂತೆ ವರ್ತಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಂಡು ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುವುದು ಮುಖ್ಯ.
ಖಿನ್ನತೆಯಲ್ಲಿರುವಾಗ ಸಂತೋಷದ ಕ್ಷಣಗಳನ್ನೂ ಅನುಭವಿಸಲು ಕಷ್ಟವಾಗಬಹುದು. ಆದರೆ ಬದುಕಿನಲ್ಲಿ ಎದುರಾಗುವ ಕಷ್ಟಗಳು ಮತ್ತು ಸವಾಲುಗಳು ಶಾಶ್ವತವಲ್ಲ ಎಂಬುದನ್ನು ನೆನಪಿಡಬೇಕು. ಹೇಗೆ ಸಂತೋಷ ಶಾಶ್ವತವಲ್ಲವೋ, ಹಾಗೆಯೇ ದುಃಖ ಮತ್ತು ಸಂಕಷ್ಟಗಳೂ ಶಾಶ್ವತವಲ್ಲ. ಸಮಯ, ಬೆಂಬಲ ಮತ್ತು ಸಕಾರಾತ್ಮಕ ಪ್ರಯತ್ನಗಳಿಂದ ಬದುಕು ಮತ್ತೆ ಹೊಸ ಭರವಸೆಯನ್ನು ನೀಡಬಹುದು.

ಗಮನಿಸಬೇಕಾದ ಕೆಲವು ಲಕ್ಷಣಗಳು
ಖಿನ್ನತೆಯನ್ನು ಅನುಭವಿಸುತ್ತಿರುವ ವ್ಯಕ್ತಿಗಳು ಸಾಮಾನ್ಯವಾಗಿ ನಿರಂತರ ಆಯಾಸ, ದಣಿವು ಮತ್ತು ಶಕ್ತಿಯ ಕೊರತೆಯನ್ನು ಅನುಭವಿಸುತ್ತಾರೆ. ನಕಾರಾತ್ಮಕ ಆಲೋಚನೆಗಳು ಹಾಗೂ ಅತಿಯಾದ ಚಿಂತನೆಗಳ ಕಾರಣದಿಂದ ಅವರು ತಮ್ಮ ಆರೋಗ್ಯದ ಕಡೆಗೆ ನಿರ್ಲಕ್ಷ ತೋರಬಹುದು. ಇದರ ಪರಿಣಾಮವಾಗಿ ಆಹಾರ ಸೇವನೆ ಕಡಿಮೆಯಾಗುವುದು ಅಥವಾ ಅಸಮರ್ಪಕವಾಗುವುದು ಕಂಡುಬರುತ್ತದೆ. ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳು ದೊರೆಯದಿದ್ದರೆ ಆಯಾಸ ಮತ್ತು ಶಕ್ತಿಯ ಕೊರತೆ ಮತ್ತಷ್ಟು ಹೆಚ್ಚಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.
ಅತಿಯಾದ ಚಿಂತನೆಗಳು ವ್ಯಕ್ತಿಯ ಆಹಾರ ಪದ್ಧತಿ, ನಿದ್ರೆ ಹಾಗೂ ದೈನಂದಿನ ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತವೆ. ಕೆಲವರಿಗೆ ಹಸಿವು ಕಡಿಮೆಯಾಗಬಹುದು, ಇನ್ನು ಕೆಲವರಿಗೆ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಅಭ್ಯಾಸ ಉಂಟಾಗಬಹುದು. ಅದೇ ರೀತಿ ನಿದ್ರಾಹೀನತೆ ಅಥವಾ ಅತಿಯಾದ ನಿದ್ರೆಯಂತಹ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ದೇಹದ ಆರೈಕೆಯ ಕಡೆಗೆ ನಿರ್ಲಕ್ಷ ತೋರಿಸುವುದರಿಂದ ದೈಹಿಕ ಆರೋಗ್ಯವೂ ಹದಗೆಡಬಹುದು.
- ಸ್ಪಷ್ಟ ಕಾರಣವಿಲ್ಲದ ದೇಹದ ನೋವುಗಳು
- ನಿರಂತರ ಆಯಾಸ ಮತ್ತು ಶಕ್ತಿಯ ಕೊರತೆ
- ಹಸಿವಿನಲ್ಲಿನ ಬದಲಾವಣೆಗಳು (ಕಡಿಮೆ ಅಥವಾ ಹೆಚ್ಚು ಹಸಿವು)
- ನಿದ್ರೆಯ ಸಮಸ್ಯೆ ಅಥವಾ ಅತಿಯಾದ ನಿದ್ರೆ
- ಏಕಾಗ್ರತೆಯ ಕೊರತೆ
- ದೇಹ ಮತ್ತು ಮನಸ್ಸಿನಲ್ಲಿ ಅಸಹಜ ದಣಿವು
ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಅಥವಾ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.
ಏಕಾಗ್ರತೆಯ ಕೊರತೆ ಮತ್ತು ಸಾಮಾಜಿಕ ದೂರಾವಸ್ಥೆ
ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಸಾಮಾನ್ಯವಾಗಿ ಏಕಾಗ್ರತೆಯ ಕೊರತೆಯನ್ನು ಅನುಭವಿಸುತ್ತಾರೆ. ಯಾವುದೇ ಕೆಲಸದಲ್ಲಿ ಗಮನ ಕೇಂದ್ರೀಕರಿಸಲು ಅವರಿಗೆ ಕಷ್ಟವಾಗಬಹುದು. ಹಿಂದೆ ಸಂತೋಷ ನೀಡುತ್ತಿದ್ದ ಚಟುವಟಿಕೆಗಳಲ್ಲಿಯೂ ಆಸಕ್ತಿ ಮತ್ತು ಉತ್ಸಾಹ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವರಿಗೆ ಸವಾಲಾಗಬಹುದು.
ಇಂತಹ ವ್ಯಕ್ತಿಗಳು ಇತರರಂತೆ ಚಟುವಟಿಕೆಯಿಂದ ಇರದೆ ತಮ್ಮದೇ ಆಲೋಚನೆಗಳ ಲೋಕದಲ್ಲಿ ಮುಳುಗಿರುವಂತೆ ಕಾಣಬಹುದು. ಅವರು ಕುಟುಂಬ, ಸ್ನೇಹಿತರು ಹಾಗೂ ಸಮಾಜದೊಂದಿಗೆ ಬೆರೆಯುವುದನ್ನು ಕಡಿಮೆ ಮಾಡಬಹುದು. ಕ್ರಮೇಣ ಸಾಮಾಜಿಕ ಚಟುವಟಿಕೆಗಳಿಂದ ದೂರ ಸರಿಯುವ ಸಾಧ್ಯತೆಯೂ ಇರುತ್ತದೆ.
ಖಿನ್ನತೆಯು ವ್ಯಕ್ತಿಯ ದೈನಂದಿನ ಜೀವನ, ಕೆಲಸ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ತಮ್ಮ ಜವಾಬ್ದಾರಿಗಳು ಹಾಗೂ ಸ್ವಂತ ಆರೈಕೆಯನ್ನೇ ನಿರ್ಲಕ್ಷಿಸಬಹುದು. ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ, ತಕ್ಷಣ ಆಪ್ತರ ಬೆಂಬಲ ಮತ್ತು ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಸೂಕ್ತ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸಲಹೆಗಳು
- ನಿಮ್ಮ ಭಾವನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳದೆ ಕುಟುಂಬದವರು, ಸ್ನೇಹಿತರು ಅಥವಾ ನಂಬಿಕೆಯ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಿ.
- ಪ್ರತಿದಿನ ಕನಿಷ್ಠ 20 ರಿಂದ 30 ನಿಮಿಷಗಳ ಕಾಲ ವಾಕಿಂಗ್, ಯೋಗ ಅಥವಾ ವ್ಯಾಯಾಮ ಮಾಡಿ.
- ನಿಯಮಿತವಾಗಿ ನಿದ್ರೆ ಮಾಡಿ ಮತ್ತು ಆರೋಗ್ಯಕರ ಆಹಾರ ಸೇವಿಸಿ.
- ಏಕಾಂತದಲ್ಲಿ ಹೆಚ್ಚು ಸಮಯ ಕಳೆಯದೆ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಿರಿ.
- ಪುಸ್ತಕ ಓದುವುದು, ಸಂಗೀತ ಕೇಳುವುದು, ತೋಟಗಾರಿಕೆ ಅಥವಾ ಇಷ್ಟದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.
- ಪ್ರಕೃತಿಯೊಂದಿಗೆ ಬೆರೆಯಿರಿ; ಉದ್ಯಾನವನ, ಬೆಟ್ಟ ಅಥವಾ ಶಾಂತ ಸ್ಥಳಗಳಿಗೆ ಭೇಟಿ ನೀಡಿ.
- ಅನಗತ್ಯ ಚಿಂತೆ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರಲು ಪ್ರಯತ್ನಿಸಿ.
- ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ.
- ಧ್ಯಾನ, ಪ್ರಾರ್ಥನೆ ಅಥವಾ ಮನಸ್ಸಿಗೆ ಶಾಂತಿ ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸಿ.
- ಖಿನ್ನತೆಯ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ಮಾನಸಿಕ ಆರೋಗ್ಯ ತಜ್ಞರು ಅಥವಾ ವೈದ್ಯರ ಸಲಹೆ ಪಡೆಯಿರಿ.
ಖಿನ್ನತೆಯಿಂದ ಹೊರಬರಲು ಸಾಧ್ಯವೇ?
ಹೌದು, ಖಿನ್ನತೆಯಿಂದ (Depression) ಹೊರಬರಲು ಸಾಧ್ಯ. ಆದರೆ ಅದು ಒಂದೇ ದಿನದಲ್ಲಿ ಸಂಭವಿಸುವುದಿಲ್ಲ. ಕೆಲವರಿಗೆ ಕೆಲವು ವಾರಗಳು, ಕೆಲವರಿಗೆ ತಿಂಗಳುಗಳು, ಇನ್ನೂ ಕೆಲವರಿಗೆ ಹೆಚ್ಚು ಸಮಯ ಬೇಕಾಗಬಹುದು. ಮುಖ್ಯವಾದುದು ಖಿನ್ನತೆಯನ್ನು ನಿರ್ಲಕ್ಷಿಸದೆ, ಅದನ್ನು ಅರ್ಥಮಾಡಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
ಖಿನ್ನತೆ ಎಂದರೆ ಕೇವಲ ದುಃಖ ಅಥವಾ ಸೋಮಾರಿತನವಲ್ಲ. ಇದು ವ್ಯಕ್ತಿಯ ಆಲೋಚನೆಗಳು, ಭಾವನೆಗಳು, ನಡವಳಿಕೆ ಹಾಗೂ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಆದ್ದರಿಂದ “ನಾನು ದುರ್ಬಲನಾಗಿದ್ದೇನೆ” ಅಥವಾ “ನನ್ನಿಂದ ಏನೂ ಸಾಧ್ಯವಿಲ್ಲ” ಎಂಬ ನಕಾರಾತ್ಮಕ ಭಾವನೆಗಳನ್ನು ಮನಸ್ಸಿನಲ್ಲಿ ಬೆಳೆಸಿಕೊಳ್ಳಬಾರದು.
ಖಿನ್ನತೆಯಿಂದ ಹೊರಬರಲು ಸಹಾಯ ಮಾಡುವ ಕೆಲವು ಮಾರ್ಗಗಳು
ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಮಾತನಾಡಿ
ಮನಸ್ಸಿನಲ್ಲಿರುವ ನೋವು, ಆತಂಕ ಅಥವಾ ಭಯವನ್ನು ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಿ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಳ್ಳುವುದರಿಂದ ಮನದ ಭಾರ ಕಡಿಮೆಯಾಗುತ್ತದೆ. ಕೆಲವೊಮ್ಮೆ ಒಂದು ಸಾಂತ್ವನದ ಮಾತು ಕೂಡ ನಮ್ಮ ಜೀವನದ ದೃಷ್ಟಿಕೋನವನ್ನು ಬದಲಾಯಿಸಬಹುದು.
ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ
ಉತ್ತಮ ಪುಸ್ತಕಗಳು ಹೊಸ ಆಲೋಚನೆಗಳು ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ನೀಡುತ್ತವೆ. ಜೀವನದ ಸವಾಲುಗಳನ್ನು ಜಯಿಸಿದ ವ್ಯಕ್ತಿಗಳ ಅನುಭವಗಳು ಪ್ರೇರಣೆಯಾಗುತ್ತವೆ. ಓದುವಿಕೆ ಮನಸ್ಸನ್ನು ಅನಗತ್ಯ ಚಿಂತನೆಗಳಿಂದ ದೂರವಿಡಲು ಸಹಕಾರಿ.
ಧ್ಯಾನ ಮತ್ತು ಯೋಗ ಅಭ್ಯಾಸ ಮಾಡಿ
ಧ್ಯಾನ (Meditation), ಯೋಗ ಹಾಗೂ ಉಸಿರಾಟದ ವ್ಯಾಯಾಮಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ಇವು ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ನಿಯಮಿತವಾಗಿ ನಡೆದಾಡಿ ಅಥವಾ ವ್ಯಾಯಾಮ ಮಾಡಿ
ಪ್ರತಿದಿನ 20 ರಿಂದ 30 ನಿಮಿಷಗಳ ಕಾಲ ವಾಕಿಂಗ್ ಅಥವಾ ವ್ಯಾಯಾಮ ಮಾಡುವುದರಿಂದ ದೇಹ ಮತ್ತು ಮನಸ್ಸು ಚುರುಕಾಗಿರುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಪ್ರವಾಸ ಮತ್ತು ಹೊಸ ಅನುಭವಗಳಿಗೆ ಅವಕಾಶ ನೀಡಿ
ಹೊಸ ಸ್ಥಳಗಳಿಗೆ ಭೇಟಿ ನೀಡುವುದು, ಹೊಸ ಜನರನ್ನು ಭೇಟಿಯಾಗುವುದು ಹಾಗೂ ಹೊಸ ಅನುಭವಗಳನ್ನು ಪಡೆಯುವುದು ಮನಸ್ಸಿಗೆ ಹೊಸತನ ನೀಡುತ್ತದೆ. ಇದು ದೈನಂದಿನ ಒತ್ತಡದಿಂದ ಹೊರಬರಲು ಸಹಕಾರಿಯಾಗುತ್ತದೆ.
ಪ್ರಕೃತಿಯೊಂದಿಗೆ ಸಮಯ ಕಳೆಯಿರಿ
ಉದ್ಯಾನವನಗಳು, ಬೆಟ್ಟಗಳು, ನದಿತೀರಗಳು ಅಥವಾ ಹಸಿರು ಪರಿಸರದಲ್ಲಿ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಪ್ರಕೃತಿಯ ಸಾನ್ನಿಧ್ಯವು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸುತ್ತದೆ.
ನೆನಪಿಡಿ
ಖಿನ್ನತೆಯು ದುರ್ಬಲತೆಯ ಸಂಕೇತವಲ್ಲ. ಇದು ಚಿಕಿತ್ಸೆ ಮತ್ತು ಬೆಂಬಲದ ಮೂಲಕ ಸುಧಾರಿಸಬಹುದಾದ ಒಂದು ಆರೋಗ್ಯ ಸಮಸ್ಯೆಯಾಗಿದೆ. ಅಗತ್ಯವಿದ್ದರೆ ಮಾನಸಿಕ ಆರೋಗ್ಯ ತಜ್ಞರು, ವೈದ್ಯರು ಅಥವಾ ಸಲಹೆಗಾರರ ನೆರವು ಪಡೆಯಲು ಹಿಂಜರಿಯಬೇಡಿ. ಸರಿಯಾದ ಸಹಾಯ, ಧೈರ್ಯ ಮತ್ತು ನಿರಂತರ ಪ್ರಯತ್ನಗಳಿಂದ ಖಿನ್ನತೆಯಿಂದ ಹೊರಬಂದು ಸಂತೋಷದ ಜೀವನ ನಡೆಸಲು ಸಾಧ್ಯವಿದೆ.

ಎಲ್ಲರೂ ನಮ್ಮನ್ನು ಇಷ್ಟಪಡಬೇಕೆನ್ನುವ ಮಾನವನ ತಪ್ಪು ಕಲ್ಪನೆ : ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ |
ಕೆಲಸಕ್ಕೆ ಸಂಬಂಧಿಸಿದ ನಿರಂತರ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನಲ್ಲಿಗೆ ಜಾಯಿನ್ ಆಗಿರಿ